ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಮಧ್ಯೆ ಕೊಬ್ಬಿದ ತರಕಾರಿ!

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಬು ಬೆಳೆದವರ ಸಂಕಷ್ಟ ಏನೆಂದು ತಿಳಿಯಬೇಕಾದರೆ ಬಾಗಲಕೋಟೆ, ಬೆಳಗಾವಿ ಕಡೆ ರೈತರನ್ನು ಕೇಳಬೇಕು. ವರ್ಷವಿಡೀ ಸಿಗದ ಘಟಪ್ರಭಾ ನದಿಯ ನೀರು. ಅತಿಯಾದ ನೀರು ಸಹಿಸದ ಎರಿ (ಕಪ್ಪು) ಮಣ್ಣು. ರಾಸಾಯನಿಕ ಗೊಬ್ಬರ ಸೋಕಿದರೆ ಸವಳಾಗುವ ಭೂಮಿ. ಭತ್ತ ಬೆಳೆಯೋರೇ ಇಲ್ಲ! ಕಬ್ಬು ಮಾರಿ ಬಂದ ದುಡ್ಡಲ್ಲಿ ಮನೆಗೆ ಅಕ್ಕಿ, ಅರಿವೆ, ಎಣ್ಣೆ, ತರಕಾರಿ ಎಲ್ಲವೂ ಬರಬೇಕು.

ವರ್ಷಕ್ಕೊಮ್ಮೆ ಕಟಾವಾಗುವ ಕಬ್ಬು ನಂಬಿ ಬದುಕುವುದು ಎಷ್ಟು ಕಷ್ಟ! ರೈತರು ಬೆಳೆದ ಕಬ್ಬಿನ ಬೆಲೆ ನಿಗದಿ ಮಾಡುವುದು ಸಕ್ಕರೆ ಕಾರ್ಖಾನೆ ಮಾಲೀಕರು! ಅವರಿಗೆ ಮನಸು ಬಂದಾಗ ರೈತರ ಕೈಗೆ ಹಣ. ಪರಿಸ್ಥಿತಿ ಹೀಗಿದ್ದಾಗ ಪ್ರತಿಭಟಿಸದೆ ಬೇರೆ ಏನು ದಾರಿ ಇದೆ ? ‘ದಾರಿ ಯಾಕಿಲ್ಲ?’ ಅನ್ನುತ್ತಾರೆ ಮುಧೋಳ ಪಕ್ಕದಲ್ಲಿರುವ ಉತ್ತೂರಿನ ಬಸವರಾಜ ಈರಯ್ಯ ಮಠಪತಿ. ಈ ಹುಡುಗನಿಗೆ ಇನ್ನೂ 21 ವರ್ಷ. ಸಹಪಾಠಿಗಳೆಲ್ಲ ಕಾಲೇಜು, ಪದವಿ, ನೌಕರಿ ಅಂತ ಅಲೆಯುತ್ತಿದ್ದರೆ ಈತ ಆಗಲೇ ದುಡ್ಡು ಮಾಡುವ ದಾರಿ ಕಂಡುಕೊಂಡಿದ್ದಾನೆ. ಅದೂ ಒಕ್ಕಲುತನದಿಂದ! ಎಲ್ಲರೂ ಕಬ್ಬು ಬೆಳೆದು ಸೋತರೆ ಇವನು ಮಾತ್ರ ಗೆದ್ದಿದ್ದಾನೆ. ಎಲ್ಲರಿಗೂ ಮಾದರಿಯಾಗಿದ್ದಾನೆ.

ಗೆಲುವಿನ ಗುಟ್ಟು
ಇವನಿಗೆ ಇರುವುದು ಹತ್ತು ಎಕರೆ ನೀರಾವರಿ ಭೂಮಿ. ನಾಲ್ಕು ಎಕರೆಗೆ ನದಿ ನೀರು, ಮೂರು ಎಕರೆಗೆ ಕೊಳವೆ ಬಾವಿ ಹಾಗೂ ಇನ್ನು ಮೂರು ಎಕರೆಗೆ ತೆರೆದ ಬಾವಿಯ ಆಸರೆ. ಪ್ರತೀ ವರ್ಷ ಒಂದು ಭಾಗ ಜಮೀನು ಗೋವಿನ ಜೋಳ, ಗೋಧಿ, ಶೇಂಗಾ ಮೊದಲಾದ ಆಹಾರ ಮತ್ತು ಮೇವಿನ ಬೆಳೆಗೆ ಮೀಸಲು.

ಇನ್ನೆರಡು ಭಾಗದ ಜಮೀನಿನಲ್ಲಿ ಕಬ್ಬು ಬೆಳೆಯುತ್ತಾರೆ. ಕಬ್ಬು ಮಾತ್ರ ಅಲ್ಲ. ಅದರ ಮಧ್ಯೆ ತರಕಾರಿ ಇದೆ. ಮನೆ ಪಕ್ಕದಲ್ಲಿರುವ ಮೂರು ಎಕರೆ ಭೂಮಿಯಲ್ಲಿ ಕಬ್ಬು ನಾಟಿ ಮಾಡಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ. ಅದರ ಜೊತೆ ಕೋಸು, ಹೂ ಕೋಸು, ಟೊಮೆಟೊ, ಬದನೆ, ಬೆಂಡೆ, ಚವುಳಿ ಕಾಯಿ, ಹುರುಳಿ ಕಾಯಿ, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಹೀಗೆ ಪ್ರತಿಯೊಂದೂ ಹತ್ತು ಗುಂಟೆಯಷ್ಟು ಜಾಗಕ್ಕೆ ಮಾತ್ರ ಮೀಸಲು. ಯಾವುದನ್ನೂ ಜಾಸ್ತಿ ಬೆಳೆದು ಕೈ ಸುಟ್ಟುಕೊಳ್ಳುವ ಪ್ರಮೇಯ ಇಲ್ಲ.

‘ಎಲ್ಲಾ ಕಾಯಿಪಲ್ಲೆಗೂ ರೇಟು ಹತ್ತಲ್ಲ. ಒಂದಕ್ಕೆ ರೇಟು ಕಮ್ಮಿ ಇದ್ರೂ ಇನ್ನೊಂದಕ್ಕೆ ಸಿಗ್ತದರ್ರಿ’ ಅನ್ನುವ ಸುಲಭ ತಂತ್ರವೇ ಈ ತರಕಾರಿ ಬೆಳೆಯ ಯಶಸ್ಸಿನ ಗುಟ್ಟು. ಮೂರು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದಂತೆಯೇ ಆರು ತಿಂಗಳಿನ ಒಳಗೆ ಎರಡು ಲಕ್ಷ ರೂಪಾಯಿ ತರಕಾರಿಯಿಂದಲೇ ಕೈ ಸೇರುತ್ತದೆ. ಇನ್ನುಳಿದ ಆರು ತಿಂಗಳಲ್ಲಿ ಈ ಕಬ್ಬು ಎತ್ತರ ಬೆಳೆಯುತ್ತದೆ. ಆಗ ಮತ್ತೊಂದು ಜಮೀನಿನಲ್ಲಿ ಕಬ್ಬು ನಾಟಿ ಶುರು. ಅಲ್ಲಿ ಮತ್ತೊಮ್ಮೆ ತರಕಾರಿ ಮೇಳ. ಹೀಗೆ ವರ್ಷ ಪೂರ್ತಿ ತರಕಾರಿ ಬೆಳೆ ಖಾಯಂ !

ಪ್ರತಿದಿನವೂ ಮಾರುಕಟ್ಟೆ
ಮನೆಯಿಂದ ಮುಧೋಳ ತಾಲ್ಲೂಕು ಕೇಂದ್ರಕ್ಕೆ ಇರುವುದು ಕೇವಲ ಹತ್ತು ಕಿ.ಮೀ ದೂರ. ‘ಮುಂಚಿನ ದಿನ ಸಾಯಂಕಾಲ ಎಲ್ಲಾ ತರಕಾರಿ ಹರವಿಕೊಂಡು ಪ್ಯಾಕ್ ಮಾಡ್ತಿವ್ರಿ. ಮುಂಜಾನೆ ಲಗೂನೆ ಮಾರ್ಕೆಟ್ಟಿಗೆ ಹೊಂಕಿನ್ರಿ’ ಅನ್ನುವ ಬಸವರಾಜನ ತರಕಾರಿ ಕಟ್ಟಿಕೊಂಡ ಬೈಕ್ ಬೆಳಿಗ್ಗೆ ಆರು ಗಂಟೆಗೆ ಮುಧೋಳ ಮರುಕಟ್ಟೆಯಲ್ಲಿ ಹಾಜರ್! ಪ್ರತಿದಿನವೂ ಕೈಗೆ ಕಡಿಮೆ ಅಂದ್ರೂ ಒಂದು ಸಾವಿರ ರೂಪಾಯಿ ಬಂದಿರುತ್ತೆ !

ನಮ್ಮದು ಕಡಿಮೆ ಖರ್ಚಿನ ಕೃಷಿ ಅಂತ ಬಸವರಾಜು ಹೇಳುವುದನ್ನು ಸಾಬೀತು ಪಡಿಸುತ್ತವೆ  ಡ್ರಿಪ್ ಫಿಲ್ಟರ್‌ಗೆ ಜೋಡಿಸಿದ ಜೀವಾಮೃತದ ಡ್ರಮ್. ಪಕ್ಕಾ ಸಾವಯವ ಕೃಷಿಗೆ ಸಾಥ್ ನೀಡಲು ನಾಟಿ ಆಕಳು ಮತ್ತು ಕರು ಅಲ್ಲದೇ ಮೂರು ಎಮ್ಮೆಗಳು. ತರಕಾರಿ ತ್ಯಾಜ್ಯಗಳೆಲ್ಲಾ ಕಬ್ಬಿನ ಬುಡಕ್ಕೇ ಮುಚ್ಚಿಗೆ. ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯೆ ಸೊಪ್ಪಿಗೆ ರೇಟು ಇದ್ದರೆ ಮಾರುಕಟ್ಟೆಗೆ ರವಾನೆ. ಇಲ್ಲದೇ ಹೋದರೆ ಕೊತ್ತಂಬರಿ ಬೀಜ ಮತ್ತು ಮೆಂತ್ಯೆ ಕಾಳು ಮಾಡಲು ಬಳಸುವ ಜಾಣ್ಮೆ. ಬೀಜ ಕಿತ್ತ ಕೊತ್ತಂಬರಿ ದಂಟು ಕೂಡಾ ಕಬ್ಬಿನ ಸಾಲಿಗೆ ಮುಚ್ಚಿಗೆಯಾಗುತ್ತದೆ. ಕೊಳೆತು ಗೊಬ್ಬರವಾಗುತ್ತದೆ. ಕಬ್ಬಿಗೆ ಹನಿ ನೀರಾವರಿಯಾದರೆ, ತರಕಾರಿಗೆ ಕಾಲುವೆಯಲ್ಲಿ ಕಟ್ಟುವ ನೀರು.

ಅಧಿಕ ಅಂತರ ಅಧಿಕ ಲಾಭ
ಕಬ್ಬಿನ ಮಧ್ಯೆ ಹೇಗೆ ಇಷ್ಟೆಲ್ಲಾ ತರಕಾರಿ ಬೆಳೆಯೋದು? ಅದರ ಯೋಜನೆ ಕಬ್ಬು ನಾಟಿ ಮಾಡುವಾಗಲೇ ಮಾಡಬೇಕು. ಎಲ್ಲರೂ ನಾಟಿ ಮಾಡುವುದು ನಾಲ್ಕು ಅಡಿ ಅಂತರದ ಸಾಲುಗಳಲ್ಲಿ. ಆದರೆ ಬಸವರಾಜು ಎಂಟು ಅಡಿಗೊಂದು ಸಾಲು ಮಾಡುತ್ತಾರೆ. ಅಂದರೆ ಬೇರೆಯವರಿಗಿಂತ ದುಪ್ಪಟ್ಟು ಅಂತರದಲ್ಲಿ.
  ಹೀಗೆ ಅಗಲ ಜಾಗ ಬಿಟ್ಟಾಗ ಅಲ್ಲಿ ಕಳೆ ಜಾಸ್ತಿ ಬರುವುದು ಸಹಜ.

ಅಲ್ಲಿ ತರಕಾರಿ ಬೆಳೆದರೆ ಕಳೆ ನಿಯಂತ್ರಣ ಮಾಡಲೇಬೇಕಲ್ಲ? ಈ ತರಕಾರಿ ಬೆಳೆಯ ಆದಾಯ ಮನೆ ಖರ್ಚಿಗೆ ಬರೋಬ್ಬರಿಯಾಗುತ್ತೆ ನೋಡ್ರಿ ಎಂದು ಪ್ರತಿಕ್ರಿಯಿಸುತ್ತಾರೆ ಬಸವರಾಜನ ತಂದೆ ಈರಯ್ಯನವರು. ಅವರಿಗೆ ಮನೆಗೆ ಬೇಕಾದ ಕಾಯಿಪಲ್ಲೆಯನ್ನು ಹೊರಗಿಂದ ದುಡ್ಡು ಕೊಟ್ಟು ತರುವ ಖರ್ಚು ಇಲ್ಲವೇ ಇಲ್ಲ. ವೈವಿಧ್ಯಮಯ ತರಕಾರಿ ತಮ್ಮ ತೋಟದ್ದೇ ಅಡುಗೆ ಮನೆಗೆ ಬರುತ್ತದೆ. ‘ಈ ಕಬ್ಬು ನೋಡ್ರಿ, ಇಪ್ಪತ್ತಾರು ಅಡಿ ಎತ್ತರ ಐತ್ರಿ. ಧಾರವಾಡ ಕೃಷಿ ಮೇಳದಾಗ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ರೂರಿ’ ಹೆಮ್ಮೆಯ ಮಾತು ಬಸವರಾಜನದ್ದು.

ಅಧಿಕ ಅಂತರ ಕೊಟ್ಟರೆ ಕಬ್ಬು ಕೂಡಾ ಬಂಪರ್
ಬೆಳೆ! ಎಕರೆಗೆ ಎಪ್ಪತ್ತು ಟನ್ ಇಳುವರಿ! ಕಬ್ಬಿನ ಧಾರಣೆ ಏನೂಂತ ಈಗ ಎಲ್ಲರಿಗೂ ಗೊತ್ತಿದೆ! ಎಲ್ಲರೂ ದಿನ ನಿತ್ಯ ಕೇಳುವ ಸುದ್ದಿ ಕಬ್ಬಿಂದೇ ತಾನೆ? ಆದರೆ ಬಸವರಾಜು ಮಾತ್ರ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ! ‘ನಂಗೆ ಅಬಕಾರಿ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ರಿ. ಆದ್ರೆ ಮನೇಲಿ ಹೋಗಾಕೆ ಬಿಡ್ಲಿಲ್ರಿ. ಈಗ ನಾನೂ ಯಾರಿಗೂ ಸೆಲ್ಯೂಟ್ ಹೊಡಿಯಂಗಿಲ್ರೀ. ಜನಾನೇ ನಂಗೆ ಸೆಲ್ಯೂಟ್ ಹೊಡೀತಾರ’ ಅನ್ನುವಾಗ ಒಕ್ಕಲುತನದ ಹಿರಿಮೆ ಈ ಯುವಕನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹೆಚ್ಚಿನ ಮಾಹಿತಿಗೆ  ೯೮೪೫೯೩೭೧೦೧.
–ಗಣಪತಿ ಭಟ್ ಹಾರೋಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT