ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಕಡಿಯುವ ಕಾರ್ಮಿಕರ ಗೋಳು

Last Updated 3 ಡಿಸೆಂಬರ್ 2013, 8:58 IST
ಅಕ್ಷರ ಗಾತ್ರ

ಮುಂಡರಗಿ:  ಬೆಳಗಾವಿಯ ಸುವರ್ಣ ಸೌಧ­ದಲ್ಲಿ ಜರುಗಿದ ಅಧಿವೇಶನಲ್ಲಿ ಕಬ್ಬಿನ ಬೆಲೆ ನಿರ್ಣಯ ಕುರಿತಂತೆ ರೈತನ ಆತ್ಮಹತ್ಯೆ ಸೇರಿದಂತೆ ಹಲವಾರು ರೈತರ ಹೋರಾಟ ನಡೆದು ಕಬ್ಬು ಬೆಳೆಗಾರರು, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜಗಳದ ನಡುವೆ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಸಾಗಿಸುವ ಕೂಲಿ ಕಾರ್ಮಿಕರ ಗೋಳನ್ನು ಕೇಳುವವರು ಇಲ್ಲದಂತಾಗಿದೆ.


ತಾಲ್ಲೂಕಿನ ಗಂಗಾಪುರ ಗ್ರಾಮದ ಬಳಿ ಖಾಸಗಿ ಸಕ್ಕರೆ ಕಾರ್ಖಾನೆಯೊಂದು ಮೂರು ವರ್ಷಗಳಿಂದ ಕಬ್ಬು ಅರೆಯಲು ಪ್ರಾರಂಭಿಸಿದ್ದು, ಪ್ರತಿ ಹಂಗಾಮಿನಲ್ಲಿ ಕಬ್ಬು ಕಟಾವು ಮಾಡಲು ಸಕ್ಕರೆ ಕಾರ್ಖಾನೆಯವರು  ಮಹಾರಾಷ್ಟ್ರದ ವಿವಿಧ ಗ್ರಾಮಗಳಿಂದ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರನ್ನು ಕರೆತರುತ್ತಾರೆ. ಕಬ್ಬು ಕಟಾವು ಮಾಡುವ ಪ್ರತಿಯೊಂದು ತಂಡಕ್ಕೆ (ಕನಿಷ್ಟ 16 ಹಾಗೂ ಗರಿಷ್ಟ 20ಕೂಲಿ ಕಾರ್ಮಿಕ­ರುಳ್ಳ ಒಂದು ತಂಡಕ್ಕೆ ಒಂದು ಗ್ಯಾಂಗ್ ಎಂದು ಕರೆಯುತ್ತಾರೆ) ಸಕ್ಕರೆ ಕಾರ್ಖಾನೆ­ಯವರು ಮುಂಗಡ ಹಣ ನೀಡಿರುತ್ತಾರೆ ಎಂದು ಹೇಳಲಾ­ಗುತ್ತಿದ್ದು, ಕಟಾವಿನ ಹಂಗಾಮ ಮುಗಿಯು­ವವರೆಗೂ ಅವರು ಇಲ್ಲಿಯೆ ಕೆಲಸ ಮಾಡಬೇಕಾಗುತ್ತದೆ. ಒಮ್ಮೆ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದಿಂದ ಇಲ್ಲಿಗೆ ಬಂದರೆ ಸುಮಾರು ನಾಲ್ಕೈದು ತಿಂಗಳು  ಕೂಲಿ ಕಾರ್ಮಿಕರು ಅಲ್ಲಿಯೇ ಇದ್ದು ನಿರಂತರವಾಗಿ ಕಬ್ಬು ಕಟಾವು ಮಾಡಬೇಕಾಗುತ್ತದೆ. ಸಕ್ಕರೆ ಕಾರ್ಖಾನೆಯವರು ಕೂಲಿ ಕಾರ್ಮಿಕರು ಕಟಾವು ಮಾಡುವ ಒಂದು ಟನ್‌ ಕಬ್ಬಿಗೆ ` 290   ನೀಡುತ್ತಾರೆ ಎಂದು ಹೇಳಲಾಗುತ್ತಿದ್ದು, 16ರಿಂದ 20ಜನರಿರುವ ಒಂದು ಗ್ಯಾಂಗ್‌ ಒಂದು ದಿನದಲ್ಲಿ 12ರಿಂದ 15ಟನ್‌ ಕಬ್ಬು ಕಟಾವು ಮಾಡಬಹುದಾಗಿದೆ.

ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಬದುಕು ಹಲವಾರು ಸಂಕಟಗಳಿಂದ ಕೂಡಿದ್ದು, ದೊರೆಯುವ ಅಲ್ಪ ಸ್ವಲ್ಪ ಕೂಲಿ ಹಣದಲ್ಲಿ ಜೀವನ ನಿರ್ವಹಿಸಬೇಕಾಗುತ್ತದೆ. ಕಳೆದ ತಿಂಗಳಿಂದ ಕಬ್ಬು ಕಟಾವು ಭರದಿಂದ ಸಾಗಿದ್ದು, ಕೂಲಿ ಕಾರ್ಮಿಕರಿಗೆ ಬಿಡುವಿಲ್ಲದಂತಾಗಿದೆ.
ಕಬ್ಬು ಕಟಾವು ಮಾಡಲು ಕಾರ್ಮಿಕರು ಗ್ರಾಮದಿಂದ ಗ್ರಾಮಕ್ಕೆ, ಗದ್ದೆಯಿಂದ ಗದ್ದೆಗೆ ಸದಾ ಅಲೆಯಬೇಕಾಗಿದ್ದು, ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳಬೇಕಾಗಿದೆ.

ಗದ್ದೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಳ್ಳುವ ಪ್ಲಾಸ್ಟಿಕ್‌ ಟೆಂಟ್‌(ಗುಡಿಸಲು)ನಲ್ಲಿ ಮಕ್ಕಳು ಮಹಿಳೆಯರು ಮೈನಡುಗಿಸುವ ಚಳಿಯಲ್ಲಿ ರಾತ್ರಿ ಕಳೆಯ­ಬೇಕಾಗುತ್ತದೆ. ಬೆಳಕು, ನೀರು, ಔಷಧೋಪ­ಚಾರ ಮೊದಲಾದ ಯಾವ ಮೂಲ ಸೌಲಭ್ಯ­ಗಳು ಕೂಲಿ ಕಾರ್ಮಿಕರಿಗೆ ದೊರೆಯದೆ ಇರುವು­ದರಿಂದ ಅವರೆಲ್ಲ ತೀವ್ರ ತೊಂದರೆ ಅನುಭವಿ­ಸಬೇಕಾಗಿದೆ. ಗಂಡ ಹೆಂಡತಿಯ­ರಿಬ್ಬರೂ ಕಬ್ಬು ಕಟಾವಿಗೆ ತೆರಳಿದರೆ 2–3ವರ್ಷದ ಮಕ್ಕಳು ಅವರ ಹಿಂದೆಯೆ ತೆರಳ­ಬೇಕಾಗುತ್ತದೆ. ಶಿಶು-­ವಿಹಾರ ಅಥವಾ ಅಂಗನ­ವಾಡಿ­ಗಳಲ್ಲಿ ಅಕ್ಷರಾ­ಭ್ಯಾಸ ಮಾಡ­ಬೇಕಾಗಿರುವ ಮಕ್ಕಳು ಅಪ್ಪ ಅಮ್ಮಂದಿರ ಕೂಲಿ ಕೆಲಸದ ಕಾರಣದಿಂದ ಶಿಕ್ಷಣ­ದಿಂದ ಸಂಪೂರ್ಣವಾಗಿ ವಂಚಿತರಾಗಬೇಕಾಗಿದೆ.

‘ರೊಕ್ಕ ಹೊಟ್ಟೆಗೆ ಬಟ್ಟೆಗೆ ಮಾತ್ರ ಸಾಕಾಗುತ್ತದೆ. ಜಡ್ಡು, ಜಾಪತ್ರೆಗಳಿಗೆ, ಹಬ್ಬ ಹರಿದಿನಗಳಿಗೆ, ಮನೆಯಲ್ಲಿ ಜರುಗುವ ಸಮಾರಂಭಗಳಿಗೆ ಸಾಕಾಗುವುದಿಲ್ಲ. ಅಲ್ಲಿ ದುಡಿದರೂ ಅಷ್ಟೆ ಇಲ್ಲಿ ದುಡಿದರೂ ಅಷ್ಟೆ. ಕಟಾವು ಮಾಡುವವರ ಕಷ್ಟ ಕೇಳುವವರು ಯಾರೂ ಇಲ್ಲ.’  ಎಂದು ಕಬ್ಬು ಕಟಾವು ಮಾಡುವ ಚಾಂಭವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT