ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ದರ: ಕಾರ್ಖಾನೆ ಮಾಲೀಕರ ಜತೆ ಮಾತುಕತೆ ವಿಫಲ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಟನ್‌ ಕಬ್ಬಿಗೆ ನಿಗದಿಪಡಿಸಿರುವ ₨ 2500 ದರವನ್ನು ರೈತರಿಗೆ ಕೊಡಿಸುವ ಸಂಬಂಧ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಗೃಹಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಸಚಿವ ಪ್ರಕಾಶ್‌ ಹುಕ್ಕೇರಿ, ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಪಾಲ್ಗೊಂಡಿದ್ದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ನಿಗದಿಪಡಿಸಿರುವ ದರ ವಿರೋಧಿಸಿ ಹೈಕೋರ್ಟ್‌ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಅರ್ಜಿ ಸಲ್ಲಿಸಿದ್ದರು. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಈ ಚರ್ಚೆ ಅಪೂರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಮತ್ತೊಂದು ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಬೇಡಿಕೆಗಳ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಎಥೆನಾಲ್‌ ಬಳಕೆಯನ್ನು ಶೇಕಡಾ 7ರಿಂದ 10ಕ್ಕೆ ಹೆಚ್ಚಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಪ್ರಸ್ತುತ ಸಕ್ಕರೆ ಆಮದು ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾದರೆ ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಇದೇ ರೀತಿ ಸಕ್ಕರೆ ಕಾರ್ಖಾನೆಗಳ ಸಾಲ ಮರುಹೊಂದಾಣಿಕೆ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಜತೆ ಮಾತುಕತೆ ನಡೆಸುವುದಾಗಿ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ ಎಂದು ವಿವರಿಸಿದರು.

ದೇಶದಲ್ಲಿನ ಸಕ್ಕರೆ ಉದ್ಯಮಕ್ಕೆ ಬಡ್ಡಿರಹಿತ ಸಾಲ ನೀಡಲು ₨ 7,260 ಕೋಟಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ರಾಜ್ಯಕ್ಕೆ ₨1,000 ಕೋಟಿ ದೊರೆಯಲಿದೆ. ಇದು ಬಡ್ಡಿರಹಿತ ಸಾಲವಾಗಿದೆ. ಸುಮಾರು ₨ 3,263 ಕೋಟಿ ಬಡ್ಡಿ ಮನ್ನಾ ಮಾಡಿದಂತಾಗುತ್ತದೆ. ಒಟ್ಟು ಐದು ವರ್ಷಗಳಲ್ಲಿ ಆರಂಭದ ಎರಡು ವರ್ಷ ಸಾಲ ಪಾವತಿಸಬೇಕಾಗಿಲ್ಲ.

ಉಳಿದ ಮೂರು ವರ್ಷಗಳಲ್ಲಿ ಸಾಲ ಪಾವತಿಸಬೇಕು ಎಂದು ವಿವರಿಸಿದರು. ದರ ನಿಗದಿ ಸಂಬಂಧ ಮಾತುಕತೆಗಳು ನಡೆಯುತ್ತಿದ್ದರೂ ಕಬ್ಬು ಅರೆಯುವುದು ಮುಂದುವರಿದಿದೆ. ರಾಜ್ಯದಲ್ಲಿನ ಸುಮಾರು 300 ಲಕ್ಷ ಟನ್‌ ಪೈಕಿ ಈಗಾಗಲೇ 86 ಲಕ್ಷ ಟನ್‌ ಕಬ್ಬು ಅರೆಯಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT