ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ದರ ನಿಗದಿ: ಎಚ್ಚರವಿರಲಿ!

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜ್ಯದ ಕಬ್ಬು ಬೆಳೆಗಾರ ತಾನು ಬೆಳೆದ ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸಿ ಎಂದು ರೈತ ಸಂಘದ ವಿವಿಧ ಬಣಗಳ ನೇತೃತ್ವದಲ್ಲಿ ಕೆಲ ದಿನಗಳಿಂದ ಹೋರಾಟ ನಡೆಸಿರುವುದು ಸರಿಯಷ್ಟೇ. ಕಾಕತಾ­ಳೀಯ ಎಂಬಂತೆ ರಾಜ್ಯ  ವಿಧಾನಸಭೆ ಚಳಿಗಾಲದ ಅಧಿವೇಶನ ರಾಜ್ಯದ ಕಬ್ಬು ಉತ್ಪನ್ನದ ಬಹುದೊಡ್ಡ ಪಾಲುದಾರ ಜಿಲ್ಲೆಯಾದ ಬೆಳಗಾವಿಯಲ್ಲಿ ನಡೆದಿದೆ.

ಇದರಿಂದ  ಹೋರಾಟಕ್ಕೆ ಹೊಸ ಆಯಾಮ ಸಿಕ್ಕಂತೆ ಆಗಿದೆ. ರೈತರ ಹೋರಾಟದಲ್ಲಿ ಬೆಳಗಾವಿಯ ಚಳಿ ಕಾಯಿಸಿಕೊಳ್ಳುವ ಧಾವಂತ­ದಲ್ಲಿ ವಿರೋಧ ಪಕ್ಷಗಳು ಅದರಲ್ಲೂ ಬಿಜೆಪಿ, ಕೆಜೆಪಿ ಹುಯಿಲಿಡುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೂ ರಾಜನೀತಿಯ ಎಲ್ಲಾ ಘನತೆ ಗೌರವಗಳನ್ನು ಗಾಳಿಗೆ ತೂರಿ ಜನರ ದೃಷ್ಟಿಯಲ್ಲಿ ಜುಗುಪ್ಸೆಗೆ ಒಳಗಾಗಿದ್ದಾರೆ. ಇದ್ದು­ದರಲ್ಲಿ ಜೆಡಿಎಸ್‌, ಸದನದ ಕಲಾಪದ ಬಗ್ಗೆ ಆಸಕ್ತಿ ಹೊಂದಿರುವುದು ಸಮಾಧಾನಕರ.

ಸರ್ಕಾರದ ದುರುದೃಷ್ಟವೋ ಅಥವಾ ಪ್ರತಿಪಕ್ಷಗಳ ಸದವ­ಕಾಶವೋ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿ­ರುವುದು ರೈತರ ಹೋರಾಟಕ್ಕೆ ಮತ್ತು ರಾಜಕಾರಣಿಗಳ ಅವಕಾಶವಾದಿತನಕ್ಕೆ ಹೊಸ ದಿಕ್ಕು ಸೃಷ್ಟಿಯಾದಂತಿದೆ. ಒಂದು ಟನ್‌ ಕಬ್ಬು ಬೆಳೆಯಲು ತಗಲುವ ಖರ್ಚು, ಹಾಗೆಯೇ ಒಂದು ಕ್ವಿಂಟಲ್‌ ಸಕ್ಕರೆ ಉತ್ಪಾದಿಸಲು ಆಗುವ ವೆಚ್ಚದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕಿದೆ.

ಅದರ ಆಧಾರದ ಮೇಲೆ ಬೆಲೆ ನಿಗದಿಗೊಳಿಸುವುದು ಉತ್ತಮ, ಆತುರಕ್ಕೆ ಬಿದ್ದು ಅತಿಯಾದ ಬೆಲೆಯನ್ನು ಗೊತ್ತುಪಡಿಸಿದಲ್ಲಿ ಕಡೆಗೆ ಅದು ರೈತನಿಗೆ ತೊಂದರೆ ಆಗುವ ಸಂಭವವಿರುತ್ತದೆ. ಅಂದರೆ ಹೆಚ್ಚಿನ ದರವನ್ನು ಕೊಡುವ ಚೈತನ್ಯ ಸಕ್ಕರೆ ಕಾರ್ಖಾನೆಗಳಿಗೆ ಇಲ್ಲದೇ ಹೋದಾಗ ಅವುಗಳು ಬಾಗಿಲು ಎಳೆದುಕೊಂಡು ಕೈತೊಳೆದುಕೊಳ್ಳುತ್ತವೆ. ಆಗ ಬೆಳೆದ ಕಬ್ಬನ್ನು ಏನು ಮಾಡಬೇಕು? ಇಂತಹ ಅನುಭವ ಈಗಾಗಲೇ ಸಾಕಷ್ಟು ಆಗಿದೆ.

ಆದ್ದರಿಂದ ಸರ್ಕಾರ, ವಿರೋಧ ಪಕ್ಷಗಳು ಹಾಗೂ ರೈತರು ಒಟ್ಟಿಗೆ ಸೇರಿ ವೈಜ್ಞಾನಿಕ ತಳಹದಿಯಲ್ಲಿ ಬೆಲೆ ನಿಗದಿಪಡಿಸಿದಾಗ ಮಾತ್ರ ಸಮಸ್ಯೆ ಪರಿಹಾರ ಕಾಣಬಹುದೇನೋ! ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ.
–ಎಸ್‌. ಶಿವಲಿಂಗೇಗೌಡ, ಸೊಳ್ಳೇಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT