ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು: ಬಾಕಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ದಿಗ್ಬಂಧನ

Last Updated 6 ಜನವರಿ 2011, 8:50 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಿರುವ ರೈತರಿಗೆ ಕಾರ್ಖಾನೆಯ ಆಡಳಿತ ಮಂಡಳಿ ಸಕಾಲಕ್ಕೆ ಹಣ ಪಾವತಿಸುತ್ತಿಲ್ಲ ಹಾಗೂ ಕಳೆದ ವರ್ಷದ ಬಾಕಿ ಹಣವನ್ನೂ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ರೈತರು ಪಿಎಸ್‌ಎಸ್‌ಕೆ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದ ಘಟನೆ ತಾಲ್ಲೂಕಿನ ನಗುವನಹಳ್ಳಿಯಲ್ಲಿ ಬುಧವಾರ ನಡೆದಿದೆ.

ಗ್ರಾಮದ ಪಿಎಸ್‌ಎಸ್‌ಕೆ ಕಚೇರಿಗೆ ಆಗಮಿಸಿದ ಕಬ್ಬು ಅಧೀಕ್ಷಕ ನಾರಾಯಣಸ್ವಾಮಿ, ಸಹಾಯಕ ಅಧೀಕ್ಷಕ ರಾಜಶೇಖರ್ ಅವರನ್ನು ಸುಮಾರು ಅರ್ಧತಾಸು ಕಚೇರಿಯಲ್ಲಿ ಕೂಡಿ ಹಾಕಿದರು. ಇದಕ್ಕೂ ಮುನ್ನ ಈ ಇಬ್ಬರ ವಿರುದ್ಧ ಹರಿಹಾಯ್ದ ರೈತರು, ಸರ್ಕಾರ ಹಾಗೂ ಪಿಎಸ್‌ಎಸ್‌ಕೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಇನ್ನು 20 ದಿನಗಳ ಒಳಗೆ ಕಳೆದ ವರ್ಷದ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಕಬ್ಬು ಸರಬರಾಜು ಮಾಡುತ್ತಿರುವ ರೈತರಿಗೆ ವಾರದೊಳಗೆ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

‘ಪಿಎಸ್‌ಎಸ್‌ಕೆಗೆ ವರ್ಷದ ಹಿಂದೆ ಕಬ್ಬು ಸರಬರಾಜು ಮಾಡಿರುವ ನಗುವನಹಳ್ಳಿ, ಚಂದಗಾಲು, ಮೇಳಾಪುರ, ಹೊಸೂರು ಇತರ ಗ್ರಾಮಗಳ ರೈತರಿಗೆ ಬಾಕಿ ಹಣ ಟನ್‌ಗೆ ರೂ.60 ನೀಡಿಲ್ಲ. ಈಗ ಕಬ್ಬು ಸರಬರಾಜು ಮಾಡುತ್ತಿರುವ ರೈತರಿಗೆ ಮೂರ್ನಾಲ್ಕು ತಿಂಗಳು ಕಳೆದರೂ ಹಣ ಪಾವತಿಸುತ್ತಿಲ್ಲ. ಕಬ್ಬು ಬೆಳೆಯಲು ಸಾಲ ಮಾಡಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
 
ಇತರ ಕಾರ್ಖಾಣೆಗಳಿಗೆ ಕಬ್ಬು ಸರಬರಾಜು ಮಾಡದಂತೆ ಮನವೊಲಿಸಿ ಈಗ ತೊಂದರೆ ನೀಡುತ್ತಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಪಿಎಸ್‌ಎಸ್‌ಕೆಗೆ ಕಬ್ಬು ಸರಬರಾಜು ಮಾಡುವುದಿಲ್ಲ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ಎನ್.ಶಿವಸ್ವಾಮಿ, ಭಾಸ್ಕರ್ ಎಚ್ಚರಿಸಿದರು. ಸುದರ್ಶನ್, ನಟರಾಜ್, ಸಿದ್ದರಾಜು, ರಾಮಚಂದ್ರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT