ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಲೆ ಕುಸಿತ: ರೈತನ ಮೊಗದಲ್ಲಿ ನಿರಾಶೆ

Last Updated 18 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಹಳೇಬೀಡು: ಬೆಲೆ ಕುಸಿತದಿಂದಾಗಿ ಕಬ್ಬು ಕೇಳುವವರಿಲ್ಲದೆ ಹಳೇಬೀಡು ಭಾಗದಲ್ಲಿ ಕಟಾವಿಗೆ ಬಂದಿರುವ ಹೊಲದಲ್ಲಿಯೇ ಒಣಗುತ್ತಿದ್ದು ಕಬ್ಬಿನ ಜಲ್ಲೆ ಹಿಡಿದು ಕನಸಿನ ಸೌಧ ಕಟ್ಟುತ್ತಿದ್ದ ರೈತನ ಮುಂದೆ ನಿರಾಶಸೌಧ ಮೂಡಿ ಕಂಗಾಲಾಗಿದ್ದಾನೆ. ಈ ವರ್ಷ ಮಳೆ ವ್ಯಾಪಕವಾಗಿ ಸುರಿದ ಪರಿಣಾಮ ಅಂತರ್ಜಲ ವೃದ್ಧಿಯಾಗಿ, ಸೂಕ್ತ ಸಮಯಕ್ಕೆ ಪಂಪ್‌ಸೆಟ್ ಮೂಲಕ ಬೆಳೆಗೆ ನೀರುಣಿಸಿದ್ದರಿಂದ ಕಬ್ಬು ಸೊಂಪಾಗಿ ಬೆಳೆದಿದೆ. ಆದರೆ ಕಟಾವು ಸಮಯಕ್ಕೆ ಸರಿಯಾಗಿ ಕಬ್ಬಿನ ಧಾರಣೆ ಕುಸಿದಿರುವುದರಿಂದ ಸಿಹಿ ಕಬ್ಬು ಬೆಳೆದ ರೈತ ಬೆಲೆಯ ಕಹಿಯಿಂದಾಗಿ ಜರ್ಝರಿತನಾಗಿದ್ದಾನೆ.

ಜನವರಿವರೆಗೂ ಟನ್ನಿಗೆ ರೂ.1200ರವರೆಗೂ ಮಾರಾಟವಾಗುತ್ತಿದ್ದ ಕಬ್ಬು ದರ ಕ್ರಮೇಣ 800ಕ್ಕೆ ಇಳಿಯಿತು. ಕಬ್ಬು ಕತ್ತರಿಸುವ ಕಾರ್ಮಿಕರು ತೆನೆ ಕಬ್ಬು ಮಾತ್ರ ಕತ್ತರಿಸಲು ಆಸಕ್ತಿ ತೋರಿಸಿದರು. ಹೀಗಾಗಿ ತೆನೆ ಕಬ್ಬು ಭಾಗಶಃ ಮಾರಾಟವಾಯಿತು. ಹಲವು ವರ್ಷದ ಹಿಂದೆ ಬಿತ್ತನೆ ಮಾಡಿದ ಕೂಳೆ ಕಬ್ಬು ಹೊಲದಲ್ಲಿಯೇ ಹೊರೆಯಾಗಿ ಉಳಿದಿದೆ. ಬಿಸಿಲಿನ ಧಗೆ ಹೆಚ್ಚಾಗಿರುವುದರಿಂದ ಒಣಗಿ ರಸ ಇಲ್ಲದಂತಾಗುತ್ತಿದೆ.

ಹಳೇಬೀಡು ಸುತ್ತಮುತ್ತ ಬೆಲ್ಲ ತಯಾರಿಕೆಗೆ ಹೇಳಿ ಮಾಡಿಸಿದ ಹೊನ್ನಾವರ ಕಬ್ಬು ಹೇರಳವಾಗಿ ಬೆಳೆಯುತ್ತಾರೆ. ಹಿಂದೆ ರೈತರ ಜಮೀನಿನಲ್ಲಿಯೇ ಗಾಣ ಹೂಡಿಸಿ ಬೆಲ್ಲ ತಯಾರಿಸುತ್ತಿದ್ದರು. ಉತ್ತಮ ಧಾರಣೆ ಸಿಕ್ಕಿದಾಗ ಕಪ್ಪು ಬೆಲ್ಲವನ್ನು ಮಾರಾಟ ಮಾಡುತ್ತಿದ್ದರು. ಫಿಲ್ಟರ್ ಬೆಲ್ಲ ತಯಾರಿಸಿದವರು ಹೆಚ್ಚು ದಿನ ಸಂಗ್ರಹಿಸಲು ಕಷ್ಟವಾದ್ದರಿಂದ ಬೇಗ ಮಾರುತ್ತಿದ್ದರು. ಈಗ ಆಲೆಮನೆ ಕೆಲಸ ಮಾಡುವವರು ರೈತರ ಹತ್ತಿರ ಸುಳಿಯುತ್ತಿಲ್ಲ. ಒಂದು ವೇಳೆ ಬಂದರೂ ಖರ್ಚು ನಿಬಾಯಿಸುವುದು ಸುಲಭವಲ್ಲ.

ಉಂಡೆ ಬೆಲ್ಲ ತಯಾರಿಕೆಗೆ ಭದ್ರಾವತಿಗೆ ಕಬ್ಬು ಹೇರಳವಾಗಿ ರವಾನೆಯಾಗುತ್ತಿತ್ತು. ಭದ್ರಾವತಿ ಕ್ರಷರ್‌ನವರು ಕಬ್ಬು ಖರೀದಿಸಲು ಹಿಂದೆ ಸರಿದಿದ್ದಾರೆ. ಹಾಸನ ಜಿಲ್ಲೆಯ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಕಬ್ಬು ಅರೆಯುವ ಸಾಮರ್ಥ್ಯ ಇಲ್ಲ. ಜಿಲ್ಲೆಯ ಏಕೈಕ ಕಾರ್ಖಾನೆ ಗಡಿಭಾಗದಲ್ಲಿರುವುದರಿಂದ ಬೇಲೂರು, ಅರಸೀಕೆರೆ ತಾಲ್ಲೂಕಿನ ರೈತರಿಗೆ ದೂರವಾಗಿದೆ. ಮಂಡ್ಯ ಜಿಲ್ಲೆಯ ಖಾಸಗಿ ಕಾರ್ಖಾನೆಯವರು ಇಲ್ಲಿಯ ಕಬ್ಬು ಖರೀದಿಸಲು ಮನಸ್ಸು ಮಾಡಿದ್ದರು.

ಹೇಮಾವತಿ ಕಾರ್ಖಾನೆ ಬೇರೆ ಜಿಲ್ಲೆ ಕಬ್ಬು ಕಳುಹಿಸಲು ಅಡ್ಡಗಾಲು ಹಾಕಿದೆ ಎಂಬುದು ರೈತರ ಅಳಲು. ‘ಕಬ್ಬು ಒಣಗಿ ಕಟ್ಟಿಗೆಯಂತಾದರೆ ಜಾನುವಾರು ಸಹ ತಿನ್ನುವುದಿಲ್ಲ. ಬೆಂಕಿ ಹೊತ್ತಿಸಿ ಜಮೀನು ಖಾಲಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ರೈತರು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದರು ರೈತರಿಗೆ ನೆಮ್ಮದಿ ಎಂಬುದು ರಾಜನಶಿರಿಯೂರು ಕಬ್ಬು ಬೆಳೆಗಾರರು ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT