ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಳೆಗಾರರ ಪ್ರತಿಭಟನೆ

ಬಾಕಿ ಹಣ ಪಾವತಿಗೆ ಆಗ್ರಹ
Last Updated 3 ಜುಲೈ 2013, 8:35 IST
ಅಕ್ಷರ ಗಾತ್ರ

ಮುಧೋಳ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 2012-13ನೇ ಸಾಲಿನ ಕಬ್ಬು ಅರಿಯುವ ಹಂಗಾಮನ್ನು ನಿಲ್ಲಿಸಿ 5 ತಿಂಗಳಾದರೂ ಕಬ್ಬು ಪೂರೈಕೆದಾರರಿಗೆ ಮೊದಲನೇ ಕಂತಿನ ಹಣ ಪಾವತಿಸಿಲ್ಲ. ರೂ 300 ಕೋಟಿ ರೈತರ ಹಣವನ್ನು ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ತಹಶೀಲ್ದಾರ್ ಕಚೇರಿಯ ಮುಂದೆ ಸಾಂಕೇತಿಕವಾಗಿ ದಿಢೀರ್ ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ಮುತ್ತಣ್ಣ ಕೋಮಾರ ಮಾತನಾಡಿ ರೈತರ ಮತಗಳನ್ನು ಪಡೆದು ಆಯ್ಕೆಯಾಗಿರುವ ಉತ್ತರ ಕರ್ನಾಟಕದ ಶಾಸಕರು, ಸಚಿವರು ಇದ್ದಾರೆ. ಆದರೆ ಇವರು ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಪರ ಧ್ವನಿ ಎತ್ತುತ್ತಿಲ್ಲ. ದಕ್ಷಿಣ ಕನ್ನಡದ ಶಾಸಕರು ಪಕ್ಷಾತೀತವಾಗಿ ವಿಧಾನ ಸೌಧದಲ್ಲಿ ಹೋರಾಟಮಾಡಿ ಕೊಬ್ಬರಿಗೆ ಬೆಂಬಲ ಬೆಲೆ ಪಡೆದಿದ್ದಾರೆ ಎಂದರು.

ಕಾರ್ಖಾನೆಗಳು ರೈತರಿಗೆ ನೀಡಿದ ಚೆಕ್‌ಗಳು ಬ್ಯಾಂಕ್‌ನಲ್ಲಿ ನಗದಾಗುತ್ತಿಲ್ಲ. ಸರಕಾರ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಸರ್ಕಾರ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದು ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಧೋಳದ ಎಲ್ಲ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಹಾಗೂ ಟೇಲರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಛತ್ರಪತಿ ಶಿವಾಜಿ ವೃತ್ತ, ರಮೇಶ ಗಡದಣ್ಣವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ತಹಶೀಲ್ದಾರ್ ಆರ್.ಎಂ.ತುರಕನಗೇರಿ ಅವರಿಗೆ ಮನವಿ ಸಲ್ಲಿಸಿದರು.

ಡಾ.ರವಿ ಲಕ್ಕಣ್ಣವರ, ಮುದ್ದೇಶ ಗಾಯಕವಾಡ, ಹಣಮಂತ ನವಾಬ, ಮಹಾದೇವ ಸಂಕ್ರಟ್ಟಿ, ನಾಗೇಶ ಪುಜೇರಿ, ತುಳಜಪ್ಪ ವಾಲಿಮರದ, ಈರಪ್ಪ ಹಂಚಿನಾಳ, ಬಸಪ್ಪ ಹನಗಂಡಿ, ಬಸವರಾಜ ಯರನಾಳ, ಸದಾಶಿವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT