ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬೇನೂರು ಶೂಟೌಟ್: 7 ಜನರ ಬಂಧನ

Last Updated 19 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ಧಾರವಾಡ:  ಗ್ರಾಮದ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನಡೆದ ಜಗಳದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದ ಘಟನೆ ತಾಲ್ಲೂಕಿನ ಕಬ್ಬೇನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಸೇರಿ ಒಟ್ಟು ಏಳು ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಹುಬ್ಬಳ್ಳಿ ಕೇಶ್ವಾಪುರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಗಂಗನಗೌಡ ವೀರನಗೌಡರ, ಸಹೋದರರಾದ ಅಮೃತಗೌಡ ವೀರನಗೌಡರ, ಸಿದ್ಧನಗೌಡ ವೀರನಗೌಡರ ಹಾಗೂ ಸಹಚರರಾದ ಚನ್ನಪ್ಪಗೌಡ ಪಾಟೀಲ, ಹುಬ್ಬಳ್ಳಿಯ ಅಲ್ಬರ್ಟ್ ಹ್ಯಾರಿ, ರೋನಾಲ್ಡೊ ಮೋಜಸ್ ಮತ್ತು ಎಡ್ಡೀನ್ ಜೋಸೆಫ್ ಎಂಬುವವರೇ ಬಂಧಿತರು. ಎರಡು ದೇಸಿ ಬಂದೂಕು, ಆರು ಸಜೀವ ಗುಂಡುಗಳು, ಒಂದು ತಲ್ವಾರ್, ಎರಡು ಲಾಂಗು ಸೇರಿದಂತೆ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ನಡೆದದ್ದಿಷ್ಟು: ತಾಲ್ಲೂಕಿನ ಕಬ್ಬೇನೂರು ಹಾಗೂ ಕರೀಕಟ್ಟಿ ಗ್ರಾಮದ ಮಧ್ಯೆ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಲು ್ಙ 2.20 ಕೋಟಿ ರೂಪಾಯಿ ಅನುದಾನ ಮಂಜೂರಾಗಿತ್ತು. ಆದರೆ, ರಸ್ತೆ ಕಾಮಗಾರಿ ಆರಂಭಿಸಲು ಗ್ರಾಮದ ರೈತರು ಜಮೀನು ಕೊಡಬೇಕಿತ್ತು. ಈ ಕುರಿತಂತೆ ಗ್ರಾಮದ ರೈತರೆಲ್ಲರು ರಸ್ತೆ ನಿರ್ಮಾಣಕ್ಕಾಗಿ ಜಮೀನು ಬಿಟ್ಟು ಕೊಡಲು ತೀರ್ಮಾನಿಸಿ ಕೆಲ ದಿನಗಳ ಹಿಂದೆ ಸಹಿ ಮಾಡಿದ್ದರು. ಆದರೆ, ಅದೇ ಗ್ರಾಮದವರಾದ ಪೊಲೀಸ್ ಪೇದೆ ಗಂಗನಗೌಡ ಅವರ ತಂದೆ ಶಿವನಗೌಡ ವೀರನಗೌಡರ ಅವರು ಈ ಕೆಲಸಕ್ಕೆ ಸಹಿ ಮಾಡದೇ ತಾವು ಜಮೀನು ಬಿಟ್ಟು ಕೊಡುವುದಿಲ್ಲ ಎಂದು ತಗಾದೆ ತೆಗೆದಿದ್ದರು. ಈ ವಿಷಯವಾಗಿ ಶಿವನಗೌಡ ಹಾಗೂ ಕಬ್ಬೇನೂರು ಗ್ರಾಮದ ಗ್ರಾಮಸ್ಥರ ಜೊತೆಗೆ ಜಗಳವೂ ಸಂಭವಿಸಿತ್ತು ಎನ್ನಲಾಗಿದೆ.

ಇದೇ ವಿಷಯವನ್ನು ಮುಂದಿಟ್ಟುಕೊಂಡ ಗಂಗನಗೌಡ ಹಾಗೂ ಅವರ ಉಳಿದ ಆರು ಜನ ಸಹಚರರು, ತಮ್ಮ ತಂದೆಯ ಜೊತೆಗೆ ಜಗಳ ಮಾಡಿಕೊಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ರಾತ್ರಿ 10.30ರ ಸುಮಾರಿಗೆ ಕುಡಿದ ಅಮಲಿನಲ್ಲೇ ಊರು ನುಗ್ಗಿ ಗ್ರಾಮದಲ್ಲಿ ಕೂಗಾಡುತ್ತಾ ಭಯದ ವಾತಾವರಣವನ್ನು ನಿರ್ಮಿಸಿದರು. ಅವರ ವರ್ತನೆಯನ್ನು ಕಂಡ ಗ್ರಾಮದ ಕೆಲವು ಜನರು ಇದನ್ನು ವಿರೋಧಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ಗಂಗನಗೌಡ ಹಾಗೂ ಆತನ ಸಹಚರರು ತಮ್ಮ ಬಳಿ ಇದ್ದ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದಾಗಿ ತೀವ್ರವಾಗಿ ಭಯಭೀತರಾದ ಗ್ರಾಮದ ಜನತೆ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಡಿಎಸ್‌ಪಿ ರಾಜು ಬನಹಟ್ಟಿ ಹಾಗೂ ಸಿಪಿಐ ರಾಮನಗೌಡ ಹಟ್ಟಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT