ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮದಾಳ: ಸಂಭ್ರಮದ ದನಗಳ ಜಾತ್ರೆ

Last Updated 9 ಏಪ್ರಿಲ್ 2013, 6:51 IST
ಅಕ್ಷರ ಗಾತ್ರ

ಆಲಮಟ್ಟಿ: ಕಮದಾಳ ಪುನರ್ವಸತಿ ಕೇಂದ್ರದಲ್ಲಿ ಜರುಗುತ್ತಿರುವ ಮುದ್ದೇಶ ಪ್ರಭುವಿನ ಜಾತ್ರೆಯ ಅಂಗವಾಗಿ ದನಗಳ ಜಾತ್ರೆ ಕಳೆದ ಮೂರು ದಿನಗಳಿಂದ  ನಡೆಯುತ್ತಿದೆ.

ಎಲ್ಲಿ ನೋಡಿದರಲ್ಲಿ ಉತ್ತಮ ರಾಸುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕೆಲವೆಡೆ  ರೈತಾಪಿ ಜನರು ತಾವು ಸಾಕಿದ ಉತ್ತಮ ದನ ಗಳನ್ನು ತಂದು ಇಲ್ಲಿ ಪ್ರದರ್ಶನ ಕ್ಕಿಟ್ಟಿದ್ದಾರೆ. ಈ ವರ್ಷ ಅವಳಿ ಜಿಲ್ಲೆಯ ನಾನಾ ಗ್ರಾಮಗಳಿಂದ 500 ಕ್ಕೂ ಅಧಿಕ ದನಗಳು ಮಾರಾಟಕ್ಕೆ ಇಲ್ಲಿ ಆಗಮಿಸಿವೆ. 

ಜಾತ್ರಾ ಸಮಿತಿಯವರು 20 ಎಕರೆ ವಿಶಾಲ ಪ್ರದೇಶದಲ್ಲಿ ದನಗಳ ಜಾತ್ರೆಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ. ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂದು ರೈತ ಹಾಗೂ ಎಪಿಎಂಸಿ ಸದಸ್ಯ ಎಸ್.ಟಿ. ಗೌಡರ ಹೇಳಿದರು. 
ಜಾನುವಾರು ಖರೀದಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ರಾಸುಗಳನ್ನು ಚೌಕಾಶಿ ಮಾಡುವ ದೃಶ್ಯ ಸಾಮಾನ್ಯವಾಗಿದೆ.  ವಿವಿಧ ತಳಿಯ ರಾಸುಗಳು ಇಲ್ಲಿ ಮಾರಾಟಕ್ಕೆ ಬಂದಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಅತಿ ಹೆಚ್ಚು ರಾಸುಗಳು ಬಂದಿವೆ ಎನ್ನುತ್ತಾರೆ ಜಾತ್ರಾ ಕಮೀಟಿಯ ಮುದ್ದಪ್ಪ ಯಳ್ಳಿಗುತ್ತಿ ಮತ್ತು ಸಂಗಪ್ಪ ವಂದಾಲ.

ರೂ. 40 ಸಾವಿರ ರೂಗಳಿಂದ ಹಿಡಿದು 1 ಲಕ್ಷ ರೂವರೆಗಿನ ಮೌಲ್ಯದ ರಾಸುಗಳು ಬಂದಿವ್ದೆ. ವ್ಯಾಪಾರ ಕುದುರಿಸುವ ದಲ್ಲಾಳಿಗಳು ಅಲ್ಲಲ್ಲಿ ವ್ಯಾಪಾರ ಮಾಡಿ ಸುವ ಕಾಯಕದಲ್ಲಿ ತೊಡಗಿದ್ದರು. ಎರಡು ಹಲ್ಲು ಹೊಂದಿರುವ ಹೋರಿಗೆ ಹೆಚ್ಚು ಬೆಲೆಯಲ್ಲಿ ಅಂದರೆ 50 ಸಾವಿರ ದಿಂದ ರೂ.1 ಲಕ್ಷ ರೂಪಾಯಿ ವರೆಗೆ ಮಾರಾಟ ವಾಗುತ್ತದೆ ಎನ್ನುತ್ತಾರೆ ಸುಳಿಕಲ್‌ನ ವಿಠ್ಠಲ ದಟ್ಟಿ, ವಡವಡಗಿಯ ಬಸವರಾಜ ಹೂಗಾರ, ಪ್ರಗತಿಪರ ರೈತ ಸಿದ್ದಪ್ಪ ಮೇಟಿ.

ಹಲ್ಲು ಮೂಡುವಕ್ಕಿಂತ ಮುಂಚಿನ ಕರುವಿಗೂ ಹೆಚ್ಚು ಕಿಮ್ಮತ್ತು. ಹಲ್ಲು ಬೆಳೆದಂತೆ ಅಂದರೆ ನಾಲ್ಕು, ಆರು, ಎಂಟು ಹಲ್ಲು ಮೂಡಿದ ಹಾಗೇ ಹೋರಿ ಎತ್ತಾಗುತ್ತದೆ. ಅಂದರೆ ಜಾನುವಾರಿಗೆ ವಯಸ್ಸು ಆದಂತೆ ಬೆಲೆಯೂ ಕಡಿಮೆ.

ಬಾರ, ಮಗಡ, ಸರಪಣಿ, ಬಾರು ಕೋಲು,  ಮೂಗದಾಣಿ ಮುಂತಾದ ಪರಿಕರಗಳ ಮಾರಾಟ ಭರದಿಂದ ನಡೆದಿದೆ.
ಕಳೆದ 10 ವರ್ಷಗಳಿಂದ ಜಾತ್ರೆಗೆ ದನಗಳ ಪರಿಕರ ಮಾಡಲು ಆಗಮಿ ಸುತ್ತೇನೆ, ವರ್ಷದಿಂದ ವರ್ಷಕ್ಕೆ ವ್ಯಾಪಾರ ಹೆಚ್ಚು ಆಗಿದೆ ಎನ್ನುತ್ತಾರೆ ಪರಿಕರಗಳ ವ್ಯಾಪಾರಿ ಮಹಮ್ಮದ್ ರಫೀಕ್ ಕಲಾದಗಿ.

ನಾನು ಇಲ್ಲಿಯೇ ರೈತರ ಬಳಿ ಚೌಕಾಶಿ ಮಾಡಿ ದನ ಖರಿದಿಸಿ ಮತ್ತೇ ಇಲ್ಲಿಯೇ ಹೆಚ್ಚಿನ ಬೆಲೆಗೆ ಮಾರುತ್ತೇನೆ, ನಿನ್ನೆಯಿಂದ ನಾನೊಬ್ಬನೇ 40 ದನಗಳನ್ನು ಮಾರಿದ್ದೇನೆ ಎನ್ನುತ್ತಾರೆ ನಿಡಗುಂದಿಯ ಜಾಕೀರ್ ಬೇಪಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT