ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಹಿಂಗಾರು ಬೆಳೆ: ಕಂಗಾಲಾದ ರೈತರು

Last Updated 28 ಡಿಸೆಂಬರ್ 2012, 7:10 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನಲ್ಲಿ ಹಿಂಗಾರು ಮಳೆ ಕೈಕೊಟ್ಟದ್ದರಿಂದ ಹಿಂಗಾರು ಕ್ಷೇತ್ರದಲ್ಲಿ ಬಿತ್ತನೆಯಾದ ಎಲ್ಲ ಹಿಂಗಾರು ಬೆಳೆಗಳೆಲ್ಲ ಕಮರಿ ಹೋಗಿ ರೈತರು ಕಣ್ಣೀರು ಸುರಿಸುವಂತಾಗಿದೆ.

ಮುಂಗಾರು ಮಳೆಯ ಕೊರತೆ ಯಿಂದ ಈ ಬಾರಿ ಕಪ್ಪು ಮಣ್ಣಿನ ಭೂಮಿಯಲ್ಲಿ ರೈತರು ಮುಂಗಾರಿ ಬೆಳೆಯಾದ ಹೆಸರು ಬಿತ್ತನೆ ಮಾಡಲಿಲ್ಲ.

ಹಿಂಗಾರು ಅಲ್ಪ ಮಳೆಗೆ ಬಿತ್ತಿದ ಬಿಳಿಜೋಳ, ಕಡಲೆ, ಗೋದಿ,ಅಗಸೆ, ಸೂರ್ಯಕಾಂತಿ, ಕುಸುಬೆ, ಹುರುಳಿ ಬೆಳೆಗಳು ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಸಂಪೂರ್ಣವಾಗಿ ಒಣಗಿವೆ. ರೈತರು ಭವಿಷ್ಯದ ಅನ್ನದ ಬಗ್ಗೆ ಮತ್ತು ಜಾನುವಾರುಗಳ ರಕ್ಷಣೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಬಿತ್ತನೆಯಾದ ಒಂದು ತಿಂಗಳ ವರೆಗೆ ಹಸಿರಾಗಿದ್ದ  ಹಿಂಗಾರು ಬೆಳೆಯಿಂದ ರೈತರು ಖುಷಿಯಾಗಿದ್ದರು. ಎರಡು ಮೂರು ಅಡಿ ಬೆಳೆದು ಜೋಳದ ಬೆಳೆ ಬಾಡಿದವು.

ಕಡಲೆ, ಕುಸುಬಿ, ಸೂರ್ಯಕಾಂತಿ, ಗೋದಿ, ಹುರುಳಿ ಬೆಳೆಗಳು ಮೊದಲೇ ಬಾಡಿ ನೆಲಕಚ್ಚಿದವು. ಭೂಮ್ಯಾಗ ಹಾಕಿದ್ದ ಬೀಜ, ಗೊಬ್ಬರ ಹಾಳಾಗಿ ಹೋತ್ರಿ ಎಂದು ರೈತರು ನೊಂದು ನುಡಿದರು.

ಬೆಳಿ ಎಲ್ಲಾ ಒಣಗಿ ರೈತರು ಎಲ್ಲಾ ಸಾಯಾಕಹತ್ತೀವಿ. ಹೊಲಕ ಹೋಗಿ ಒಣಗಿದ ಬೆಳಿ ನೋಡಿದ್ರ ನಮ್ಮ ಹೊಟ್ಯಾಗ ಸಂಗಟ ಆಗತ್ರಿ. ಆದರ ಏನ ಮಾಡೂದು ಮಳಿಯಪ್ಪ ಈ ವರ್ಸ ನಮ್ಮನ್ನ ಕೈ ಹಿಡಿಲಿಲ್ಲ. ವರ್ಸಾ ಹೊಟ್ಟಿಗೆ ಬಟ್ಟಿಗೆ ಆಗುವಷ್ಟು ಕಾಳು ಬರುತ್ತಿದ್ದುವು.

ದನಕರುಗಳಿಗೆ ಮೇವು ಬರುತ್ತಿತ್ತು. ಈ ವರ್ಸ ಒಂದ ಸೇರ ಜ್ವಾಳ ಬರಂಗಿಲ್ರಿ. ದನಕ್ಕ ಮೇವು ಆಗುದಿಲ್ಲ. ರೈತರ ತ್ರಾಸ ಕೇಳುವವ್ರ ಯಾರು ಇಲ್ರಿ.

ಆದರ ನಮ್ಮನ್ನ ಆಳೂ ಮುಖಂಡರು ಮುಧೋಳದಾಗ ಕುಣಿಯಾಕ ಹಾಡಾಕ ಹಚ್ಯಾರ. ಬರಗಾಲದಾಗ ಈ ಹಾಡ ಯಾರಿಗೆ ಬೇಕಾಗಿತ್ತು. ರೈತರ ಕಷ್ಟ ಏನ ಅಂಬೂದ ಇವರಿಗೆ ಗೊತ್ತಿದ್ದಂಗಿಲ್ಲ. ಈ ರೀತಿ ಬರ ಹಿಂದೆಂದೂ ಬಂದಿಲ್ಲ ಎಂದು ಮಧೋಳದಲ್ಲಿ ನಡೆದ ರನ್ನ ಉತ್ಸವ ಕುರಿತು `ಸತ್ತ ಮನ್ಯಾಗ ಬಂದ ನಕ್ಕಂಗ ಆಗತ್ತರಿ' ಎಂದು  ತಾಲ್ಲೂಕಿನ ಹಲಕುರ್ಕಿ ಗ್ರಾಮದ ರೈತ ಶಿವಪ್ಪ ಉಂಡಿ ರೈತರ ಪ್ರತಿನಿಧಿಯಾಗಿ ನೋವನ್ನು ವ್ಯಕ್ತಪಡಿಸಿದರು.

ಹೋದ ವರ್ಷದ್ದು ಬೆಳೆ ವಿಮಾ ಪರಿಹಾರ ಇನ್ನೂತನಕ ಬಂದಿಲ್ಲ. ಸರ್ಕಾರದವರು ರೈತರಿಗೆ ಬೆಳಿ ಪರಿಹಾರ ಧನ, ಆಹಾರ ಧಾನ್ಯ ವಿತರಣೆ ಮತ್ತು ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಮಳಿ ಆಗಲಾರದಕ್ಕ ಬೋರನ್ಯಾಗ ನೀರ ಕಡಿಮಿ ಆಗ್ಯಾವ ಜನರಿಗೆ ಕುಡಿಯಾಕ ನೀರಿನ ವ್ಯವಸ್ಥೆ ಅವಶ್ಯ ಎಂದು ಶಿವಪ್ಪ ಹೇಳಿದರು.

ಕಟಗೇರಿ, ಕೆಲವಡಿ, ಕೆರೂರ, ಪಟ್ಟದಕಲ್ಲು, ಬೇಲೂರು, ಹೆಬ್ಬಳ್ಳಿ, ಗೋವನಕೊಪ್ಪ ಗ್ರಾಮಗಳ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತನೆಯಾದ ಹಿಂಗಾರು ಬೆಳೆ ಸಂಪೂರ್ಣವಾಗಿ ಬಾಡಿವೆ.

ಕೃಷಿ ಇಲಾಖೆಯ ವರದಿಯಂತೆ ಒಟ್ಟು 48000 ಹೆಕ್ಟೇರ್ ಹಿಂಗಾರು ಕ್ಷೇತ್ರದ ಪೈಕಿ 39520 ಹೆಕ್ಟೇರ್ ಕ್ಷೇತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಹಿಂಗಾರು ಬೆಳೆಗಳು  ಶೇ.80ರಷ್ಟು ಬಾಡಿ ಹೋಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಎಚ್.ನರಹಟ್ಟಿ ಪ್ರಜಾವಾಣಿಗೆ ಹೇಳಿದರು. ರೈತ ಸಮುದಾಯದ ನೋವಿಗೆ ಸರ್ಕಾರ ತೀವ್ರವಾಗಿ ಸ್ಪಂದಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT