ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಕೋಟೆಗೆ ಗುರಿಯಿಟ್ಟ ‘ಕೈ’

Last Updated 14 ಏಪ್ರಿಲ್ 2014, 15:55 IST
ಅಕ್ಷರ ಗಾತ್ರ

ಬೆಂಗಳೂರು: ದಶಕದಿಂದ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಈ ಬಾರಿ ‘ಕೈ’ವಶ ಮಾಡಿ­ಕೊಳ್ಳಲು ಕಾಂಗ್ರೆಸ್ ನಾಯಕರು ಬೆವರು ಸುರಿಸುತ್ತಿದ್ದರೆ, ಬಿಜೆಪಿ ಮುಖಂಡರು ಮೋದಿ ಅಲೆಯ ಲಾಭ ಪಡೆದು ಹ್ಯಾಟ್ರಿಕ್ ಗಳಿಸುವ ತವಕದಲ್ಲಿದ್ದಾರೆ.

ಕ್ಷೇತ್ರಗಳ ಪುನರ್‌ವಿಂಗಡಣೆ ನಂತರ ಈ ಕ್ಷೇತ್ರ ರಾಜಧಾನಿಯ ಅಪ್ಪಟ ನಗರ ಪ್ರದೇಶದ ಜೊತೆಗೆ ಹೊರ ವಲಯದ ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡಿದೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮತ್ತು ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸ್ಪರ್ಧಿಸಿದ್ದು, ಇವರಿಬ್ಬರ ನಡುವೆ ನೇರ ಹಣಾಹಣಿ ಇದೆ.

ಜೆಡಿಎಸ್‌ನಿಂದ ಅಬ್ದುಲ್ ಅಜೀಂ, ಆಮ್ಆದ್ಮಿ ಪಕ್ಷದಿಂದ ಬಾಬು ಮ್ಯಾಥ್ಯು, ಬಿಎಸ್‌ಪಿಯಿಂದ ವಿ.ವೇಲು, ಗರೀಬಿ ಆದ್ಮಿ ಪಕ್ಷದಿಂದ ಡಿ.ಜೈರಾಂ, ಆರ್‌ಪಿಐನಿಂದ ಎಂ.ಮುತ್ತುರಾಜ್‌, ಏಳು ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 14 ಮಂದಿ ಅಭ್ಯರ್ಥಿಗಳು  ಕಣದಲ್ಲಿದ್ದಾರೆ.

ಆಮ್ಆದ್ಮಿ ಪಕ್ಷದ ಪ್ರಭಾವ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಪಕ್ಷದ ಕಾರ್ಯಕರ್ತರು ಕೆಲವೆಡೆ ಪ್ರಚಾರದಲ್ಲಿ ತೊಡಗಿದ್ದಾರೆ.ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಯ ತಲಾ ಮೂವರು ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರು ಇದ್ದಾರೆ. ಸಚಿವ ಕೃಷ್ಣಬೈರೇಗೌಡರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ.

ಒಳಪೆಟ್ಟು:  ಸ್ಥಳೀಯ ನಾಯಕರ ವಿರೋಧದ ನಡುವೆಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ  ಸದಾನಂದಗೌಡ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮದೇ ಆದ ಬೆಂಬಲಿಗರ ಪಡೆಯೊಂದಿಗೆ ಎಲ್ಲ ಕಡೆ ಸುತ್ತುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿನ ಒಳಪೆಟ್ಟುಗಳು ಅವರ ಗೆಲುವಿಗೆ ಅಡ್ಡಗಾಲಾಗಿ ಪರಿಣಮಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕರಾವಳಿ ಮೂಲದ ಸದಾನಂದಗೌಡ ಗೆದ್ದರೆ, ‘ರಾಜಧಾನಿ­ಯಲ್ಲಿ ಪಕ್ಷದ ಮೇಲೆ  ಪ್ರಾಬಲ್ಯ ಸಾಧಿಸುತ್ತಾರೆ. ನಮ್ಮ ಪ್ರಭಾವ ಕಡಿಮೆಯಾಗಲಿದೆ’ ಎಂಬ ಆತಂಕ ಬೆಂಗಳೂರಿನ ಮಹತ್ವಾ­ಕಾಂಕ್ಷಿ ನಾಯಕರನ್ನು ಕಾಡುತ್ತಿದೆ. ಆ ನಾಯಕರು ಆಂತರಿಕವಾಗಿ ತಮ್ಮ ಕೈಚಳಕ ತೋರಿಸಬಹುದು ಎಂಬ ಗುಸು ಗುಸು ವ್ಯಾಪಕವಾಗಿ ಕೇಳಿಬರುತ್ತಿದೆ. 

1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ­ದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಹಿರಿಯ ಧುರೀಣ ಸಿ.ಕೆ.ಜಾಫರ್ ಷರೀಫ್ ಅವರನ್ನು ಮಣಿಸುವ ಮೂಲಕ ನಾರಾಯಣ ಸ್ವಾಮಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದರು. ಆದರೆ, ಕೇವಲ 18 ತಿಂಗಳಲ್ಲೇ ಲೋಕಸಭೆ ವಿಸರ್ಜನೆಯಾಯಿತು. ಆ ನಂತರ ಸ್ಪರ್ಧೆ ಮಾಡಿದ್ದ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದು, ಅನುಕಂಪದ ಅಲೆಯೂ ಇದೆ.  

ವ್ಯಕ್ತಿಗತವಾಗಿ ಒಳ್ಳೆಯ ಜನಸಂಪರ್ಕ ಹೊಂದಿರುವ ನಾರಾಯಣಸ್ವಾಮಿ  ವೈಯಕ್ತಿಕ ವರ್ಚಸ್ಸು ಹಾಗೂ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ ಅವರಿಗೆ ಬಿಸಿತುಪ್ಪವಾಗಬಹುದು.

ದಾಸರಹಳ್ಳಿ, ಮಲ್ಲೇಶ್ವರ, ಹೆಬ್ಬಾಳ ವಿಧಾನಸಭಾ ಕ್ಷೇತ್ರ­ಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಈ ಮೂರು ಕಡೆಯೂ ಮೋದಿ ಅಲೆಯ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಶಾಸಕರು ಇರುವ ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ.

ಆದರೆ, ‘ಒಮ್ಮೆ ಮೋದಿಗೂ ಅವಕಾಶ ನೀಡೋಣ’ ಎನ್ನುವವರೂ ಇದ್ದಾರೆ.ಪುಲಕೇಶಿನಗರ, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ­ಗಳಲ್ಲಿ ಜೆಡಿಎಸ್ ಶಾಸಕರು ಇರುವುದು ಅಜೀಂ ಅವರಿಗೆ ವರದಾನ­ವಾಗಿದೆ.

ಒಟ್ಟು 23,99,994 ಮತದಾರರನ್ನು ಹೊಂದಿರುವ ಇದು ರಾಜ್ಯದಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರ.  5 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಒಕ್ಕಲಿಗರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇದನ್ನು ಗಮನಿಸಿಯೇ ಕಾಂಗ್ರೆಸ್, ಬಿಜೆಪಿ ಒಕ್ಕಲಿಗರನ್ನೇ ಕಣಕ್ಕೆ ಇಳಿಸಿವೆ.

ಅಲ್ಪಸಂಖ್ಯಾತ ಹಾಗೂ ಇತರ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಹೋಗುವುದನ್ನು ತಡೆಯುವ ಉದ್ದೇಶದಿಂದಲೇ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಅಜೀಂ ಅವರನ್ನು ಕಣಕ್ಕೆ ಇಳಿಸಿದೆ. ಇದು ದೇವೇಗೌಡರ ರಾಜಕೀಯ ತಂತ್ರಗಾರಿಕೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಸಮಾಧಾನ: ‘ಹಿಂದೆ ಎರಡು ಬಾರಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಒಮ್ಮೆಯೂ ಬಡಾವಣೆಗೆ ಬಂದು ನಮ್ಮ ಕಷ್ಟಸುಖ ವಿಚಾರಿಸಲಿಲ್ಲ. ಯಾರು ಗೆದ್ದರೂ ಅಷ್ಟೆ. ಅವರು ಮಾತ್ರ ‘ವಿಲಾಸಿ ಜೀವನ’ ನಡೆಸುತ್ತಾರೆ. ಐದೇ ವರ್ಷದಲ್ಲಿ 3–4 ಪಟ್ಟು ಆಸ್ತಿ ಜಾಸ್ತಿ ಮಾಡಿಕೊಳ್ಳುತ್ತಾರೆ. ನಮ್ಮ ಕಷ್ಟ ಅಂತೂ ತಪ್ಪಿದ್ದಲ್ಲ’ ಎಂಬ ಅಸಮಾಧಾನ ಹೊಗೆಯಾಡುತ್ತಿದೆ.

2004ರಲ್ಲಿ ಎಚ್.ಟಿ.ಸಾಂಗ್ಲಿಯಾನ, 2009ರಲ್ಲಿ ಡಿ.ಬಿ.ಚಂದ್ರೇ­ಗೌಡ ಅವರನ್ನು ಗೆಲ್ಲಿಸಲಾಗಿತ್ತು. ಇಬ್ಬರೂ ಹೊರಗಿನವರು. ಗೆದ್ದ ನಂತರ ಭೇಟಿ ನೀಡಿಲ್ಲ. ‘ಇಂತಹ ಸಂಸದರು ನಮಗೆ ಬೇಕಾಗಿಲ್ಲ’ ಎಂಬ ಅಸಹನೆಯನ್ನು ಕೆಲವರು ಹೊರ ಹಾಕಿದರು.

‘ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಸದಾನಂದ­ಗೌಡ ಹೊರಗಿನವರು. ಸ್ಥಳೀಯರು ಆಯ್ಕೆಯಾದರೆ ಒಳ್ಳೆಯದು. ನಮ್ಮ ಕಷ್ಟ - ಸುಖಗಳನ್ನು ಹೇಳಿಕೊಳ್ಳಲು ಭೇಟಿಗೆ ಲಭ್ಯವಾಗುತ್ತಾರೆ. ಹೊರಗಿನವರಾದರೆ ಗೆದ್ದ ನಂತರ ತಿರುಗಿ ನೋಡುವುದಿಲ್ಲ’ ಎಂಬ ಆತಂಕವನ್ನು  ಅನೇಕ ಮತದಾರರು ನೇರವಾಗಿಯೇ ಹೇಳುತ್ತಿದ್ದಾರೆ.
ಈ ಅಂಶ ಬಿಜೆಪಿ ಹೊರತಾದ ಅನ್ಯರತ್ತ ನೋಡಲು ಮತದಾರರಿಗೆ ಕಾರಣ ಆಗಬಹುದು.

ಜಾತಿಯ ಒಳಸುಳಿ: ಕಳೆದ ಬಾರಿ ಚಿಕ್ಕಮಗಳೂರು – ಉಡುಪಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸದಾನಂದಗೌಡ ಅವರು, ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಆಯ್ಕೆ ಮಾಡಿ­ಕೊಳ್ಳಲು ಮುಖ್ಯ ಕಾರಣ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಾಗಿರುವುದು ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

ಕ್ಷೇತ್ರದಲ್ಲಿನ ಒಕ್ಕಲಿಗರು ಹೊಸದೇವರು, ಮರಸು, ಗಂಗಟಿಕಾರ  ಮೊದಲಾದ ಒಳಪಂಗಡಕ್ಕೆ ಸೇರಿದವರು. ಆದರೆ, ಸದಾ­ನಂದ­ಗೌಡ ಅರೆಭಾಷೆ ಗೌಡರು. ಇಲ್ಲಿನ ಒಕ್ಕಲಿಗರು ಅರೆಭಾಷೆ ಗೌಡರನ್ನು ಬೆಂಬಲಿಸುವುದಿಲ್ಲ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಈ ಬಾರಿ ಒಕ್ಕಲಿಗ ಮತಗಳನ್ನು ಹಿಡಿದಿಡುವುದು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸವಾಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಜಾಫರ್ ಷರೀಫ್ ಅವರನ್ನು ಕಣಕ್ಕೆ ಇಳಿಸಿದ ಕಾರಣ ಬಿಜೆಪಿಯ ಡಿ.ಬಿ.ಚಂದ್ರೇಗೌಡ ಸುಲಭವಾಗಿ ಜಯ ಗಳಿಸಿದರು. ಆದರೆ, ಈ ಬಾರಿ ಆ ರೀತಿ ಆಗುವುದಿಲ್ಲ. ಸೋಲಿನ ಅನುಕಂಪವುಳ್ಳ ನಾರಾಯಣಸ್ವಾಮಿ ಅವರನ್ನು ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿ ಬೆಂಬಲಿಸಲಿದ್ದಾರೆ ಎಂಬುದು ಆ ಪಕ್ಷದವರ ಅನಿಸಿಕೆ.

ಸುಮಾರು ನಾಲ್ಕು ಲಕ್ಷ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮತದಾರರಿದ್ದು, ಆ ಮತಗಳನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಹೊಂಚು ಹಾಕಿದ್ದಾರೆ.

ಜೆಡಿಎಸ್‌ನಿಂದ ಬಂದಿರುವ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವ ಅನಿವಾರ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇದೆ. ಶಾಸಕರು, ಮುಖಂಡರನ್ನು ಹುರಿದುಂಬಿಸುವ ಮೂಲಕ ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಲು ಪಣ­ತೊಟ್ಟಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಕಾಂಗ್ರೆಸ್‌ನ ಎಲ್ಲ ಸ್ಥಳೀಯ ನಾಯಕರು ಒಗ್ಗೂಡಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಯಾರೇ ಗೆದ್ದರೂ, ಗೆಲುವಿನ ಅಂತರ ತುಂಬಾ ಕಡಿಮೆ ಇರಲಿದೆ. ಜೆಡಿಎಸ್‌ನ ಅಬ್ದುಲ್‌ ಅಜೀಂ ಎಷ್ಟು ಮತಗಳನ್ನು ಪಡೆಯಲಿದ್ದಾರೆ ಎಂಬುದರ ಮೇಲೆ ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ.

ಮಹಿಳೆಯರು ಬದಲಾಗುವುದಿಲ್ಲ...
ಚುನಾವಣೆ ಹಿಂದಿನ ದಿನ ಪಕ್ಷಗಳ ಮುಖಂಡರು ಒಡ್ಡುವ ಆಮಿಷಗಳಿಗೆ ನಾವು (ಪುರುಷರು) ಬಲಿಯಾಗ­ಬಹುದು. ಆದರೆ, ಮಹಿಳೆಯರು ಆಗಲ್ಲ. ಒಂದು ರೂಪಾಯಿಗೆ ಒಂದು ಕೆ.ಜಿ. ಪ್ರಕಾರ 30 ಕೆ.ಜಿ. ಅಕ್ಕಿ ಕೊಡುತ್ತಿರುವ ಪಕ್ಷಕ್ಕೇ ಮತ ಹಾಕುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿರೇಕಟ್ಟಿಗೇನಹಳ್ಳಿಯ ಮುಖಂಡರೊಬ್ಬರು.

‘ಯಾರು ಎಷ್ಟು ದುಡ್ಡು ಕೊಡುತ್ತಾರೊ ನೋಡ್ತೀವಿ. ಎಲ್ಲವನ್ನೂ ಮತದಾರರಿಗೆ ಹಂಚುವುದಿಲ್ಲ. ನಾವೂ ಇಟ್ಟುಕೊಳ್ಳುತ್ತೇವೆ. ಮತದಾರರಿಗೂ ಸ್ವಲ್ಪ ಕೊಡುತ್ತೇವೆ’ ಎಂಬ ಸತ್ಯವನ್ನು ಬಾಯ್ಬಿಟ್ಟರು.

ಹಣ ಪಡೆದು ಮತ ಹಾಕುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರೆ, ‘ಅವರೇನು ಕಷ್ಟಪಟ್ಟು ದುಡಿದ ಹಣವನ್ನು ಕೊಡುತ್ತಾರಾ? ಕೋಟಿಗಟ್ಟಲೇ ಲೂಟಿ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಕೊಡುತ್ತಾರೆ. ಎಲ್ಲವನ್ನೂ ಅವರೇ ತಿನ್ನುವ ಬದಲು ನಮಗೂ ಸ್ವಲ್ಪ ಕೊಡುತ್ತಾರೆ ಅಷ್ಟೆ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT