ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲದ ಕಮಲದ ಮುಂದೆ ಆಡದ ಕೈಮುಂದೆ ಆಡದ ಕೈ

Last Updated 5 ಜನವರಿ 2011, 9:35 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ಬಾರಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ‘ಕಮಲ’ದ ಬಿರುಗಾಳಿಗೆ ತತ್ತರಿಸಿವೆ. ಗ್ರಾಮೀಣ ಪ್ರದೇಶದಲ್ಲೂ ‘ಕಮಲ’ ಅರಳಿದ್ದರಿಂದ ‘ಕೈ’ ಹಾಗೂ ‘ತೆನೆ ಹೊತ್ತ ಮಹಿಳೆ’ ನಲುಗಿ ಹೋಗಿದ್ದಾರೆ. ಅಲ್ಲಲ್ಲಿ ‘ಕೈ’ ಕಂಡರೂ, ‘ತೆನೆ ಹೊತ್ತ ಮಹಿಳೆ’ ಮಾತ್ರ ಶೋಚನೀಯ ಸ್ಥಿತಿ ತಲುಪಿದ್ದಾಳೆ.

ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ತವರು ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಕೇಸರಿ ಬಾವುಟ ಹಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಎಂದೇ ಬಿಂಬಿತರಾಗಿದ್ದ ಶಾಸಕ ಸಂತೋಷ ಲಾಡ್ ತಮ್ಮ ಕ್ಷೇತ್ರದಲ್ಲಿ ಕಮಲದ ಗಾಳಿಗೆ ತತ್ತರಿಸಿ ಹೋಗಿದ್ದಾರೆ.
ಸತತ ಆರು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ನ ಈ ಭಾಗದ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿದ್ದ ಬಸವರಾಜ ಹೊರಟ್ಟಿ ಪ್ರಭಾವ ಎಲ್ಲಿಯೂ ಕೆಲಸ ಮಾಡಿಲ್ಲ ಎಂಬುದನ್ನು ಈ ಚುನಾವಣೆಯಿಂದ ಗೊತ್ತಾಗುತ್ತದೆ.

ಜಿಲ್ಲೆಯ 22 ಜಿಪಂ ಸ್ಥಾನಗಳಲ್ಲಿ ಬಿಜೆಪಿ 15 ಸ್ಥಾನಗಳನ್ನು ಪಡೆಯುವುದರ ಮೂಲಕ ಜಯಭೇರಿ ಬಾರಿಸಿದೆ. ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ಅವರು ತಮ್ಮ ಸ್ವಂತ ವರ್ಚಿಸ್ಸಿನಿಂದಲೇ ಆಯ್ಕೆಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮೊದಲಿನಿಂದಲೂ ಗರಗ ಕ್ಷೇತ್ರದಲ್ಲಿ ದೇಸಾಯಿ ಕುಟುಂಬ ಮೇಲುಗೈ ಸಾಧಿಸುತ್ತಲೇ ಬಂದಿರುವುದು ಇದಕ್ಕೆ ಸಾಕ್ಷಿ. ನವಲಗುಂದ ತಾಲ್ಲೂಕಿನಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆಯಬಹುದು ಎಂಬ ಹೊರಟ್ಟಿ ಹಾಗೂ ಎನ್.ಎಚ್. ಕೋನರಡ್ಡಿ ಲೆಕ್ಕಾಚಾರ ಬುಡಮೇಲಾಗಿದೆ.

ಕಳೆದ ಬಾರಿ ಜಿಪಂನಲ್ಲಿ ಕೇವಲ ಮೂರು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಅಧಿಕಾರದ ಗದ್ದುಗೆ ಏರಿದೆ. 9 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಕೇವಲ 6 ಸ್ಥಾನ ಪಡೆದಿದೆ. ಕಳೆದ ಬಾರಿ 6 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ಒಂದು ಸ್ಥಾನ ಪಡೆಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ಹುಬ್ಬಳ್ಳಿ, ನವಲಗುಂದ, ಕುಂದಗೋಳ, ಕಲಘಟಗಿ ತಾಲ್ಲೂಕಿನಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲೂ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಿರುವುದನ್ನು ಸಾಬೀತುಪಡಿಸಿದೆ. ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುಗ್ಗರಿಸಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆಯಲು ಬಿಜೆಪಿ ಸಶಕ್ತವಾಗಿದೆ.

ಧಾರವಾಡ ಕ್ಷೇತ್ರದ ಶಾಸಕಿ ಸೀಮಾ ಮಸೂತಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐದು ಜಿಪಂ ಕ್ಷೇತ್ರಗಳ ಪೈಕಿ ನರೇಂದ್ರದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಬಿಜೆಪಿಯ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರೂ ಮತದಾರ ಮಾತ್ರ ಇವರನ್ನು ತಿರಸ್ಕರಿಸಿದ್ದಾನೆ. ಕಲಘಟಗಿ ತಾಲ್ಲೂಕಿನಲ್ಲಿನಲ್ಲಿ ಬಿಜೆಪಿ ಶಾಸಕರಿರದಿದ್ದರೂ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ, ಆದರೆ ಧಾರವಾಡದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ, ಗಣಿಧಣಿ ಸಂತೋಷ ಲಾಡ್ ಅವರ ಕ್ಷೇತ್ರ ಕಲಘಟಗಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಲಾಡ್ ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಐದು ಕ್ಷೇತ್ರಗಳಲ್ಲಿ ಕೇವಲ ಎರಡು ಸ್ಥಾನಗಳು ಮಾತ್ರ ಕಾಂಗ್ರೆಸ್ ಪಾಲಾಗಿವೆ. ನವಲಗುಂದ, ಕಲಘಟಗಿ, ಕುಂದಗೋಳ ತಾಲ್ಲೂಕು ಪಂಚಾಯತಿಗಳು ಸಹ ಕಮಲದ ಪಾಳಯಕ್ಕೆ ಬಿದ್ದಿವೆ. ಹುಬ್ಬಳ್ಳಿ ಹಾಗೂ ಧಾರವಾಡದ ತಾಪಂಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT