ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲದಿಂದ ಕೈ ಹಿಡಿದ ಮಸ್ಕಿ ತಾಪಂ ಸದಸ್ಯ

Last Updated 6 ಅಕ್ಟೋಬರ್ 2012, 7:45 IST
ಅಕ್ಷರ ಗಾತ್ರ

ಮಸ್ಕಿ: ತೀವ್ರ ಕುತೂಹಲ ಕೆರಳಿಸಿರುವ ಲಿಂಗಸೂಗೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆ ಅಕ್ಟೋಬರ್ 8ರಂದು ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನುವಾಣೆಗಾಗಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿರುವ ಬೆನ್ನಲ್ಲಿಯೇ ಮಸ್ಕಿ ತಾಲ್ಲೂಕು ಪಂಚಾಯಿಯ ಮತಕ್ಷೇತ್ರ 1 ರಿಂದ ಆಯ್ಕೆಯಾಗಿರುವ ಭಾರತೀಯ ಜನತಾ ಪಾರ್ಟಿಯ ಹನುಮಂತಪ್ಪ ಮೋಚಿ ಇದೀಗ ಕಮಲದಿಂದ `ಕೈ~ ಕಡೆ ಹಾರಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಬುಧವಾರ ಸಂಜೆವರೆಗೂ ಬಿಜೆಪಿ ಸದಸ್ಯರೊಂದಿಗೆ ಪ್ರವಾಸಕ್ಕೆ ಹೋಗುವುದಾಗಿ ತಿಳಿಸಿದ್ದ ಮೋಚಿ ಇದೀಗ ಹಠಾತ್ ನಾಮಪತ್ತೆಯಾಗಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬೇಕಾಗುವ ಬಹಮತಕ್ಕೆ ಕಾಂಗ್ರೆಸ್‌ಗೆ ಒಂದು ಮತದ ಕೊರತೆ ಇದ್ದುದರಿಂದ ಕಾಂಗ್ರೆಸಿಗರು ಬಿಜೆಪಿ ಸದಸ್ಯರನ್ನು ಸೆಳೆದಿದ್ದಾರೆಂದು ಬಿಜೆಪಿ ಮುಖಂಡರು ಇದೀಗ ಸಂಶಯ ವ್ಯಕ್ತಪಡಿಸಿದ್ದಾರೆ.

ಸದಸ್ಯರಿಗೆ ವಿಪ್ ಜಾರಿ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿಯೇ ಆರು ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಹನುಮಂತಪ್ಪ ಮೋಚಿ ಸೇರಿದಂತೆ ಎಲ್ಲ ಆರು ಜನ ತಾಲ್ಲೂಕ ಪಂಚಾಯಿತಿ ಸದಸ್ಯರಿಗೆ ಬಿಜೆಪಿ ಅಭ್ಯರ್ಥಿ ಪರವಾಗಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮಸ್ಕಿ ಬ್ಲಾಕ್ ಬಿಜೆಪಿ ಅಧ್ಯಕ್ಷ ಮಲ್ಲಪ್ಪ ಅಂಕುಶದೊಡ್ಡಿ ಶುಕ್ರವಾರ `ವಿಪ್~ ಜಾರಿ ಮಾಡಿದ್ದಾರೆ.

ಲಿಂಗಸೂಗೂರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕೃತ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಬೇಕು ಎಂದು ಅವರು ಸದಸ್ಯರಿಗೆ ಜಾರಿ ಮಾಡಿರುವ `ವಿಪ್~ನಲ್ಲಿ ಸೂಚಿಸಿದ್ದಾರೆ. ಪಕ್ಷದ ವಿಪ್ ಉಲ್ಲಂಘನೆ ಮಾಡದಂತೆ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಅಂಕುಶದೊಡ್ಡಿ ತಾಲ್ಲೂಕು ಪಂಚಾಯಿತಿಯ ಸದಸ್ಯರಿಗೆ ತಿಳಿಸಿದ್ದಾರೆ.
 

ಈ ನಡುವೆ ಎರಡು ದಿನದಿಂದ ಕಾಣೆಯಾಗಿರುವ ಮಸ್ಕಿಯ ಬಿಜೆಪಿ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮೋಚಿ ಅವರ ಮನೆಯ ಬಾಗಿಲಿಗೆ ಶುಕ್ರವಾರ ವಿಪ್ ಪ್ರತಿ ಅಂಟಿಸಲಾಗಿದೆ. ಹಾಗೂ ಅವರ ಪತ್ನಿಗೂ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಶಿವುಕುಮಾರ ವಟಗಲ್ ಮೂಲಕ ಪಕ್ಷದ ವಿಪ್ ಪ್ರತಿಯನ್ನು ಅಧಿಕೃತವಾಗಿ ನೀಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT