ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾ ನೆಹರು ಪಾರ್ಕ್

Last Updated 24 ಮಾರ್ಚ್ 2011, 9:15 IST
ಅಕ್ಷರ ಗಾತ್ರ

ಯಾದಗಿರಿ: ಬಿಸಿಲ ಬೇಗೆಯನ್ನು ಕಳೆಯಲು ತಣ್ಣನೆಯ ನೆರಳು ನೀಡುವ ಗಿಡಗಳು ಬೇಕು. ಹಾಯಾಗಿ ಒಂದಿಷ್ಟು ಕಾಲ ಕಳೆಯಲು ಒಳ್ಳೆಯ ಪಾರ್ಕ್ ಇರಬೇಕು ಎಂಬುದು ಎಲ್ಲರ ಆಶಯ. ಬೇಸಿಗೆಯ ರಜೆಯಲ್ಲಿ ನಲಿದಾಡಲು ಮಕ್ಕಳಿಗೂ ಉದ್ಯಾನಗಳು ಬೇಕೇ ಬೇಕು. ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯಲ್ಲಿ ಮಾತ್ರ ಈವರೆಗೂ ಹೇಳಿಕೊಳ್ಳುವಂತಹ ಒಂದೇ ಒಂದು ಉದ್ಯಾನ ನಿರ್ಮಾಣ ಆಗಿಲ್ಲ. ಅದಿರಲಿ, ಇರುವ ಉದ್ಯಾನಗಳೇ ಅವಸಾನದ ಅಂಚಿಗೆ ತಲುಪುತ್ತಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪತ್ನಿ ಕಮಲಾ ನೆಹರು ಅವರ ಹೆಸರಿನಲ್ಲಿರುವ ನಗರದ ಉದ್ಯಾನವೂ ನಗರದ ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಯಾದಗಿರಿಯ ಮುಕುಟವಾಗಿರುವ ಕೋಟೆಯ ತಪ್ಪಲಿನಲ್ಲಿಯೇ ನಿರ್ಮಿಸಲಾಗಿರುವ ಈ ಉದ್ಯಾನಕ್ಕೆ ಅದ್ಭುತವಾದ ನಿಸರ್ಗ ಸೌಂದರ್ಯ ಇತ್ತು. ಇದೀಗ ಈ ಉದ್ಯಾನದಲ್ಲಿ ಕಾಲಿಟ್ಟರೆ ಅವ್ಯವಸ್ಥೆ ಎದ್ದು ಕಾಣುತ್ತದೆ.ಹಸಿರಿನಿಂದ ನಳನಳಿಸಬೇಕಾಗಿದ್ದ ಗಿಡಗಳೆಲ್ಲವೂ ರೆಂಬೆಕೊಂಬೆಗಳನ್ನು ಕಳೆದುಕೊಂಡು ನಿಂತಿವೆ. ಹೂವು, ಸೌಂದರ್ಯದ ಗಿಡಗಳೆಲ್ಲವೂ ಮಾಯವಾಗಿವೆ. ಉದ್ಯಾನದಲ್ಲಿ ಹಾಕಿದ್ದ ಆಸನಗಳೂ ನಾಪತ್ತೆ ಆಗಿವೆ. ನಿರ್ವಹಣೆ ಇಲ್ಲದೇ ಕಮಲಾ ನೆಹರು ಉದ್ಯಾನ ಅಧೋಗತಿಗೆ ಇಳಿದಿದೆ.

1952ರಲ್ಲಿ ಯಾದಗಿರಿ ಪುರಸಭೆ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಅಂದಿನ ಪುರಸಭೆ ಅಧ್ಯಕ್ಷ ಚಟ್ನಳ್ಳಿ ವೀರನಗೌಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಮೊದಲಿಯಾರ್ ಸೇರಿಕೊಂಡು ಈ ಉದ್ಯಾನ ನಿರ್ಮಿಸಿದ್ದರು ಎಂದು ನಗರದ ಹಿರಿಯ ನಾಗರಿಕರು ನೆನಪಿಸಿಕೊಳ್ಳುತ್ತಾರೆ. 1985 ರವರೆಗೂ ಇಲ್ಲಿ ಕೂಡುವ ಆಸನಗಳು, ಮಕ್ಕಳ ಆಟಿಕೆ, ದೊಡ್ಡ ಮರಗಳು, ಹೂವಿನ ಗಿಡಗಳೆಲ್ಲವೂ ಇದ್ದವು. ಆದರೆ ನಂತರದ ದಿನಗಳಲ್ಲಿ ಇವೆಲ್ಲವೂ ಒಂದೊಂದಾಗಿ ಕಣ್ಮರೆ ಆಗಿವೆ. ಇದೀಗ ಕೇವಲ ಹೆಸರಿಗೆ ಮಾತ್ರ ಉದ್ಯಾನ ಎಂಬಂತಾಗಿದೆ.2008-09 ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಕಳೆದ ವರ್ಷ ಸ್ಥಳೀಯ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರು ಉದ್ಯಾನದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಆದರೆ ಈ ಅಭಿವೃದ್ಧಿ ಕಾರ್ಯ ಮಾತ್ರ ಇಂದಿಗೂ ಉದ್ಯಾನದಲ್ಲಿ ಕಾಣುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

ಕೊಳಚೆ ತಾಣ:ಉದ್ಯಾನದ ಸುತ್ತಲೂ ಎಲ್ಲಿ ನೋಡಿದಲ್ಲಿ ಕಲ್ಲು, ಮಣ್ಣು, ಕಸದ ರಾಶಿಯೇ ಕಾಣುತ್ತದೆ. ಬೇಕಾಬಿಟ್ಟಿ ಕಸವನ್ನು ಎಸೆಯಲಾಗುತ್ತಿದ್ದು, ಅದೆಲ್ಲವೂ ಉದ್ಯಾನದ ಒಳಗೆ ಸೇರುತ್ತಿದೆ. ಜೊತೆಗೆ ನೀರು ಹಾಕುವುದು ಸೇರಿದಂತೆ ನಿರ್ವಹಣೆ ಇಲ್ಲದಿರುವುದರಿಂದ ಇಲ್ಲಿನ ಗಿಡಗಳೆಲ್ಲವೂ ಒಣಗಿ ಹೋಗಿವೆ. ಹೀಗಾಗಿ ಈ ಉದ್ಯಾನವು ಕೇವಲ ನಾಮಫಲಕದಲ್ಲಿ ಮಾತ್ರ ಉದ್ಯಾನವಾಗಿ ಉಳಿದಿದೆ.

ನೆರಳು ಕೊಡುವ ಮರಗಳ ರೆಂಬೆಕೊಂಬೆಗಳನ್ನು ಕತ್ತರಿಸಿರುವುದರಿಂದ ಕೇವಲ ಒಣಗಿದ ಬೊಡ್ಡೆಗಳು ಮಾತ್ರ ಉದ್ಯಾನದಲ್ಲಿ ನಿಂತಿವೆ. ಹಿಂಭಾಗದಲ್ಲಿ ನೀರಿನ ಟ್ಯಾಂಕ್ ಇರುವುದರಿಂದ ಈ ಉದ್ಯಾನದ ದ್ವಾರ ಬಾಗಿಲಿಗೆ ಸದಾ ಕೀಲಿ ಹಾಕಲಾಗುತ್ತಿದ್ದು, ಅಪ್ಪಣೆ ಇಲ್ಲದೇ ಪ್ರವೇಶವಿಲ್ಲ ಎಂಬ ಬೋರ್ಡ್ ಅನ್ನು ಹಾಕಲಾಗಿದೆ. ಹಾಗಾಗಿ ಇತ್ತ ಯಾರೊಬ್ಬರೂ ಬರದಂತಾಗಿದೆ. ಆಗಾಗ ಆಟವಾಡಲು ಇಲ್ಲಿಗೆ ಬರುವ ಮಕ್ಕಳು, ಒಣಗಿದ ಗಿಡಗಳ ಮಧ್ಯೆಯೇ ಕೆಲ ಕಾಲ ಕಳೆಯುತ್ತಾರೆ. ಅಲ್ಲಲ್ಲಿ ಚಿಗುರಿದ ಸಣ್ಣ ಗಿಡಗಳಿಗೆ ನೀರನ್ನೂ ಹಾಕುತ್ತಾರೆ. ಹಾಗಾಗಿ ಒಂದೆರಡು ಹೂವಿನ ಗಿಡಗಳನ್ನು ಕಾಣಬಹುದಾಗಿದೆ.

“ನಮ್ಮ ಯಾದಗಿರಿ ಊರಾಗ ಒಂದೇ ಒಂದು ಪಾರ್ಕ್ ಸರಿ ಇಲ್ಲ ನೋಡ್ರಿ. ಜಿಲ್ಲಾ ಕೇಂದ್ರ ಆದ್ರೂ ಮಂದಿ ಕುತಕೊಳ್ಳುವಂಥಾ ಉದ್ಯಾನ ಇನ್ನೂ ನಿರ್ಮಾಣ ಆಗಿಲ್ಲ. ಕಮಲಾ ನೆಹರು ಪಾರ್ಕ್ ಅಷ್ಟ ಯಾಕ್ರಿ, ಮಹಾತ್ಮಾ ಗಾಂಧಿ ಪಾರ್ಕಿನ ಸ್ಥಿತಿನೂ ಹಿಂಗ. ಬರೇ ಉದ್ಯಾನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ರೆ ಆಗೋದಿಲ್ಲ. ಒಂದಾದ್ರು ಪಾರ್ಕ್ ನಿರ್ಮಾಣ ಮಾಡಬೇಕು” ಎನ್ನುತ್ತಾರೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ.

ಅಭಿವೃದ್ಧಿಗೆ ಕ್ರಮ: ಕಮಲಾ ನೆಹರು ಪಾರ್ಕಿನಲ್ಲಿ ಪ್ಲಾಂಟೇಶನ್ ಮಾಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆ ಪಡೆದವರು ಗಿಡಗಳನ್ನು ನೆಡುವ ಕೆಲಸ ಆರಂಭಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ ಹೇಳುತ್ತಾರೆ.

ಪಾರ್ಕಿನ ಬಗ್ಗೆ ಗಮನಿಸಿದ್ದು, ಪಾರ್ಕಿನಲ್ಲಿ ಎಲ್ಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ಒಂದು ಹಂತದ ಟೆಂಡರ್ ಮುಗಿದಿದ್ದು, ಅಲ್ಲಿ ಮಕ್ಕಳ ಆಟಿಕೆ, ಆಸನಗಳ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಹಳೆಯದಾದ ಈ ಉದ್ಯಾನದ ಪುನರುಜ್ಜೀವನಕ್ಕೆ ನಗರಸಭೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT