ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾ ಹಂಪನಾಗೆ ಚಾವುಂಡರಾಯ ಪ್ರಶಸ್ತಿ ಪ್ರದಾನ

Last Updated 8 ಫೆಬ್ರುವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಬದುಕು ಹಾಗೂ ಬರಹದ ನಡುವೆ ಅಂತರ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕಮಲಾ ಹಂಪನಾ ಬದುಕಿದಂತೆ ಬರೆದವರು, ಬರೆದಂತೆ ಬದುಕಿದವರು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಬಣ್ಣಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ನಡೆದ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರಿಗೆ `ಚಾವುಂಡರಾಯ ಪ್ರಶಸ್ತಿ~ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, `ಕಮಲಾ ಹಂಪನಾ ಅವರ ಬದುಕು ಹಾಗೂ ಬರಹದ ನಡುವೆ ಯಾವುದೇ ಅಂತರಗಳಿಲ್ಲ. ಅವರ ಬದುಕು ಮತ್ತು ಬರಹ ಎರಡೂ ಪ್ರಾಮಾಣಿಕವಾದಂಥವು. ಚಾವುಂಡರಾಯ ಪುರಾಣವನ್ನು ಸಂಪಾದಿಸಿದ ಅವರಿಗೆ ಚಾವುಂಡರಾಯನ ಹೆಸರಿನ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಸಮಾಜದ ಎಲ್ಲ ಅಡೆ ತಡೆಗಳನ್ನು ಮೀರಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಬದುಕಿದ ಅವರ ಜೀವನ ಮಾದರಿಯಾದಂಥದು~ ಎಂದರು.

`ಜೈನ ಧರ್ಮ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಪಂಪ, ರನ್ನರಂತಹ ಜೈನ ಕವಿಗಳಿಂದ ಹಾಗೂ ಅರಿಕೇಸರಿ, ಸತ್ಯಾಶ್ರಯರಂತಹ ಜೈನ ಅರಸರಿಂದ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕ ಶ್ರೀಮಂತಗೊಂಡಿದೆ. ಈ ಪರಂಪರೆಯಲ್ಲಿ ಚಾವುಂಡರಾಯನ ಹೆಸರು ಮುಖ್ಯವಾದುದು~ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಮಲಾ ಹಂಪನಾ, `ವಿಶ್ವ ವಿಖ್ಯಾತ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನು ನಿರ್ಮಿಸುವ ಮೂಲಕ ಚಾವುಂಡರಾಯ ಬಾಹುಬಲಿಯೊಂದಿಗೆ ತನ್ನ ಹೆಸರನ್ನೂ ಅಮರವಾಗಿಸಿದವನು.
 
ಸ್ವತಃ ಕವಿಯೂ, ಕಲಿಯೂ ಆಗಿದ್ದ ಅವನ ಚಾವುಂಡರಾಯ ಪುರಾಣವನ್ನು ಸಂಪಾದಿಸುವ ಅವಕಾಶ ನನಗೆ ಸಿಕ್ಕಿತ್ತು. ಈಗ ಅವನ ಹೆಸರಿನ ಪ್ರಶಸ್ತಿಯೂ ನನಗೆ ಸಂದಿರುವುದು ನಾನು ಮಾಡಿದ ಕೆಲಸಗಳಿಗೆ ಸಾರ್ಥಕ್ಯ ತಂದಿದೆ~ ಎಂದರು.

`ಸಂಶೋಧನೆ ಹಾಗೂ ಸೃಜನಶೀಲ ಪ್ರಕಾರಗಳು ನನ್ನ ಎರಡು ಕಣ್ಣುಗಳಿದ್ದಂತೆ. ಈವರೆಗೆ ನಾನು ಮಾಡಿದ ಕೆಲಸಕ್ಕಿಂತಲೂ ಮಾಡಬೇಕಾದ ಕೆಲಸ ಬಹಳಇದೆ. ನನ್ನ 77ರ ಈ ಇಳಿ ವಯಸ್ಸಿನಲ್ಲಿಯೂ ಪ್ರತಿದಿನವೂ ಮಾಡದೇ ಉಳಿದಿರುವ ಸಾಹಿತ್ಯಕ ಕೆಲಸಗಳು ನನ್ನನ್ನು ಕಾಡುತ್ತವೆ. ಪ್ರಶಸ್ತಿ ಸಿಕ್ಕಿರುವುದು ನನ್ನ ಕ್ರಿಯಾಶೀಲತೆಯನ್ನು ಉತ್ತೇಜಿಸಿದೆ. ಇದರಿಂದ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಬಹುದು~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಪದ್ಮಾಶೇಖರ್, `ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸೃಜನಶೀಲ ಸಾಹಿತ್ಯ ಸೃಷ್ಟಿ ಹೆಚ್ಚಾಗಿ ನಡೆಯುತ್ತಿದ್ದಾಗ ಅದಕ್ಕಿಂತಲೂ ಭಿನ್ನವಾದ ಮತ್ತು ಕಷ್ಟಕರವಾದ ಅಧ್ಯಯನ ಮತ್ತು ಸಂಶೋಧನೆಯ ಕ್ಷೇತ್ರವನ್ನು ಆರಿಸಿಕೊಂಡವರು ಕಮಲಾ ಹಂಪನಾ. ಪುರುಷರೇ ಹೆಚ್ಚಾಗಿ ತೊಡಗಿದ್ದ ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು ಸಾಹಿತ್ಯದಲ್ಲಿ ಯಾವ ಪಂಥಕ್ಕೂ ಸೇರದೇ ತಮ್ಮದೇ ಮಾರ್ಗವನ್ನು ರೂಪಿಸಿಕೊಂಡವರು~ ಎಂದು ನುಡಿದರು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ವಿದ್ವಾಂಸ ಡಾ.ಹಂಪ ನಾಗರಾಜಯ್ಯ, ಸಾಹಿತಿ ಡಾ.ಚಂದ್ರಶೇಖರ ಪಾಟೀಲ, ಕರ್ನಾಟಕ ಜೈನ್ ಅಸೋಸಿಯೇಷನ್‌ನ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT