ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಾಂಡೊ ಪಡೆ ಸಜ್ಜು: ಇನ್ನಿಲ್ಲ ಭಯ

Last Updated 31 ಡಿಸೆಂಬರ್ 2010, 11:05 IST
ಅಕ್ಷರ ಗಾತ್ರ

ಬೆಂಗಳೂರು: ಉಗ್ರರ ದಾಳಿಗಳನ್ನು ಎದುರಿಸಲು ಬೆಂಗಳೂರು ನಗರ ಪೊಲೀಸ್ ಪಡೆಯ ಇನ್ನೂರು ಸಿಬ್ಬಂದಿಯನ್ನು ಒಳಗೊಂಡ ಕಮಾಂಡೊ ಪಡೆ ಕಾರ್ಯನಿರ್ವಹಣೆಗೆ ಸಂಪೂರ್ಣ ಸಜ್ಜಾಗಿದೆ. ಆರು ತಿಂಗಳಿಂದ ಸಿಬ್ಬಂದಿಗೆ ವಿವಿಧ ರೀತಿಯ ತರಬೇತಿ ನೀಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿಯನ್ನು ಬಳಸಲು ತೀರ್ಮಾನಿಸಲಾಗಿದೆ.

ನಗರಕ್ಕೆ ಪ್ರತ್ಯೇಕ ಭಯೋತ್ಪಾದನಾ ನಿಗ್ರಹ ಘಟಕ (ಎಟಿಸಿ) ಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) 200 ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿತ್ತು. ಕಾನ್‌ಸ್ಟೆಬಲ್ ಮತ್ತು ಎಸ್‌ಐ ದರ್ಜೆಯ 35 ವರ್ಷದೊಳಗಿನ ಯುವ ಸಿಬ್ಬಂದಿಯನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಆಯ್ಕೆಯಾದವರಿಗೆ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರ, ರಾಜ್ಯ ಮೀಸಲು ಪೊಲೀಸ್ ಕೇಂದ್ರದಲ್ಲಿ ಪ್ರಾಥಮಿಕ ಹಂತದಲ್ಲಿ ತರಬೇತಿ ನೀಡಲಾಗಿತ್ತು. ಒಟ್ಟು ಸಿಬ್ಬಂದಿಯಲ್ಲಿ ಸಾಮರ್ಥ್ಯದ ಮೇಲೆ ಕೆಲವರನ್ನು ಆಯ್ಕೆ ಮಾಡಿ ಹರಿಯಾಣದಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಹ ತರಬೇತಿ ಪೂರ್ಣಗೊಳಿಸಿರುವ ಸಿಬ್ಬಂದಿ ಕಾರ್ಯಾಚರಣೆಗೆ ಎಲ್ಲ ರೀತಿಯಿಂದಲೂ ಸಜ್ಜಾಗಿದ್ದಾರೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಎ.ಕೆ 47, ಎಸ್‌ಎಲ್‌ಆರ್ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಲು ಸಿಬ್ಬಂದಿ ಸಮರ್ಥರಾಗಿದ್ದಾರೆ. ಸ್ಫೋಟಕ ವಸ್ತುಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಎಲ್ಲರಿಗೂ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಚಾಲನಾ ತರಬೇತಿ ನೀಡಲಾಗಿದೆ.ಯಾವುದಾದರೂ ದಾಳಿ ನಡೆದರೆ ಇಡೀ ತಂಡ ರಕ್ಷಣಾ ಕಾರ್ಯಕ್ಕೆ ಬರಲಿದೆ. ವಾಹನ ಚಾಲನೆಯಲ್ಲೇ ನಿಪುಣತೆ ಪಡೆದವರು ವಾಹನಗಳನ್ನು ಚಾಲನೆ ಮಾಡಲಿದ್ದಾರೆ. ಮೂಲ ರಕ್ಷಣಾ ಕಾರ್ಯದ ಉದ್ದೇಶಕ್ಕಾಗಿ ಕೆಲವರನ್ನು ಸಿದ್ಧಗೊಳಿಸಲಾಗಿದೆ.

ರಕ್ಷಣಾ ಕಾರ್ಯಕ್ಕೆ ಬಳಸಲೆಂದೇ ಗುಂಡು ನಿರೋಧಕ ವಾಹನ ಮತ್ತು ಜಾಕೆಟ್‌ಗಳನ್ನು ಈಗಾಗಲೇ ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಸರಣಿ ಬಾಂಬ್ ಸ್ಫೋಟ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಗಳ ನಂತರ ವಿಶೇಷ ಕಮಾಂಡೊ ಪಡೆಯನ್ನು ರಚಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಕಮಾಂಡೊ ಪಡೆ ಸಿದ್ಧವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಎಆರ್ ಕೇಂದ್ರದಲ್ಲಿ ಕಮಾಂಡೊ ಪಡೆಯನ್ನು ನೆಲೆಗೊಳಿಸಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಈ ಪಡೆಯನ್ನು ಬಳಸಲಾಗುತ್ತದೆ. ಅವರಿಗೆ ಅಗತ್ಯಕ್ಕೆ ತಕ್ಕಂತೆ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ’ ಎಂದು ಅವರು ಹೇಳಿದರು.ಮುಂಬೈ ಮತ್ತು ದೆಹಲಿಯಲ್ಲಿರುವ ಭಯೋತ್ಪಾದನಾ ನಿಗ್ರಹ ಘಟಕದ ಮಾದರಿಯಲ್ಲಿ ಸಮರ್ಥವಾಗಿ ರಕ್ಷಣಾ ಕಾರ್ಯ ನಿರ್ವಹಿಸುವಂತಹ ಪ್ರತ್ಯೇಕ ಭಯೋತ್ಪಾದನಾ ನಿಗ್ರಹ ಘಟಕ ನಗರಕ್ಕೆ ಬೇಕು ಎಂಬ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಆಂತರಿಕ ಭದ್ರತಾ ವಿಭಾಗವನ್ನು ಆರಂಭಿಸಿತ್ತು. ಕರಾವಳಿ ಕಾವಲು ಪಡೆ, ನಕ್ಸಲ್ ನಿಗ್ರಹ ಘಟಕ ಮತ್ತು ಭಯೋತ್ಪಾದನಾ ನಿಗ್ರಹ ಘಟಕಗಳನ್ನು ಆಂತರಿಕ ಭದ್ರತಾ ವಿಭಾಗ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT