ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಹಬ್ಬದ ಶುಭಾರಂಭ

ಚೆಲ್ಲಿದರು ಮಲ್ಲಿಗೆಯ ಭಾಗ -2
Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಸಂತ ಋತುವಿನಲ್ಲಿ ಆಚರಿಸುವ ಕರಗದ ಹಬ್ಬ ಬಹುತೇಕ ನಡೆಯುವುದು ಚಂದಿರನ ಬೆಳಕಲ್ಲಿ. ಬೇಸಿಗೆಯ ಬಿರು ಬಿಸಿಲು `ಕರಗ'ವನ್ನು ಬಾಧಿಸದಿರಲು ಈ ವ್ಯವಸ್ಥೆ ಇರಬೇಕೆಂದುಕೊಂಡರೆ ಅದನ್ನು ಹುಸಿ ಮಾಡುವಂತೆ `ವಸಂತೋತ್ಸವ'ವನ್ನು ಸೂರ್ಯನ ಉಪಸ್ಥಿತಿಯಲ್ಲಿ ಏರ್ಪಡಿಸಲಾಗುತ್ತದೆ.

ಈ ವರ್ಷ ಬೆಂಗಳೂರು ಕರಗದ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳುವುದು ಮಂಗಳವಾರ ರಾತ್ರಿ 10ಕ್ಕೆ (ಏಪ್ರಿಲ್ 16), ಅದೂ ಧ್ವಜಾರೋಹಣದ ಮೂಲಕ. ಈ ಕಾರ್ಯಕ್ರಮ ನಡೆಯುವುದು ಬೆಳಗಿನ ಜಾವ 4 ಗಂಟೆಗಾದರೂ ಸಿದ್ಧತೆಗಳು ರಾತ್ರಿ ಹತ್ತಕ್ಕೆ ಶುರುವಾಗುತ್ತವೆ.

ಕರಗದ ಆಚರಣೆ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಅದರಲ್ಲೊಂದು ಕರಗ ಕಾರ್ಯಕ್ರಮಗಳಿಗೆ ಅಂಕುರಾರ್ಪಣೆ ಮಾಡುವ ಧ್ವಜಾರೋಹಣ.

ಧ್ವಜಕ್ಕೆ ಉಪಯೋಗಿಸುವುದು ಬಿದಿರಿನ ಕಂಬವನ್ನು. ಬೆಂಗಳೂರು ಬನಶಂಕರಿ ಗುಡಿ ಸಮೀಪದ ಸಾರಕ್ಕಿ ಅಡವಿಯಲ್ಲಿ ಬಿದಿರು ಮರವನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಅಲ್ಲಿ ಕಾಡಿಲ್ಲ. ತಿಗಳ ಬಂಧುಗಳು ಸಾರಕ್ಕಿ ಬಿಟ್ಟು ಬಿದಿರು ಮೆಳೆಗಳನ್ನು ಗುರುತಿಸಲು ಆರಂಭಿಸಿದ್ದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ.

ಹಿಂದಿನಿಂದಲೂ (108) ನೂರೆಂಟು ಗೆಣ್ಣುಗಳಿರುವ ಒಂದೇ ಬಿದಿರು ಕಂಬವನ್ನೇ ಕರಗ ಧ್ವಜಾರೋಹಣಕ್ಕೆ ಉಪಯೋಗಿಸಲಾಗುತ್ತಿತ್ತು. ಅದು ಅಲಭ್ಯವಾದಾಗ ಆ ಅಂಕಿಗಳನ್ನು ಪೂರೈಸಲು ಬೇರೊಂದು ಕಂಬವನ್ನು ಜೋಡಿಸುವುದು ರೂಢಿಗೆ ಬಂತು. ಈಗ ಕನಿಷ್ಠ 43 ಗೆಣ್ಣುಗಳಿರುವ ಬಿದಿರು ಕಂಬವನ್ನು ಬಳಸುತ್ತಾರೆ.

ಬಿದಿರು ಕಂಬವನ್ನು ದೇವಾಲಯಕ್ಕೆ ತಂದೊಪ್ಪಿಸುವ ಹೊಣೆಗಾರಿಕೆಯನ್ನು ಜರಗನಹಳ್ಳಿಯ ವಹ್ನಿ ಕುಲಸ್ಥರೇ ಹೊತ್ತುಕೊಂಡಿದ್ದು, ಅನೂಚಾನವಾಗಿ ಈ ಕರ್ತವ್ಯವನ್ನು ಮಾಡುತ್ತ ಬಂದಿದ್ದಾರೆ.

ಧ್ವಜಾರೋಹಣಕ್ಕೆ ಮೊದಲು ಕರಗ ಉತ್ಸವದಲ್ಲಿ ಪಾಲ್ಗೊಳ್ಳುವ ಕುಲ ಮುಖಂಡರನ್ನು ಅವರ ಮನೆಗೆ ಹೋಗಿ ಆಹ್ವಾನಿಸಿ ಕರೆತರುವುದು ರೂಢಿ. ಈ ಸಂಪ್ರದಾಯದಂತೆ ಗಣಾಚಾರಿ, ಘಂಟೆ ಪೂಜಾರಿ, ಕರಗಕರ್ತ ಎಲ್ಲರನ್ನೂ ಕುಲದ ಗೌಡರು, ಯಜಮಾನರು ದೇವಾಲಯಕ್ಕೆ ಕರೆತರುತ್ತಾರೆ.

ದೇವಾಲಯ, ಧ್ವಜಸ್ತಂಭದ ಶುದ್ಧಿಯ ಬಳಿಕ ಆವರಣದಲ್ಲಿ ಮೆರವಣಿಗೆ ಆರಂಭ. ದ್ರೌಪದಿ ಹಾಗೂ ಅರ್ಜುನರ ಉತ್ಸವ ಮೂರ್ತಿಗಳನ್ನು ಚಿಕ್ಕ ತೇರಿನಲ್ಲಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯಲ್ಲಿ ಬಿದಿರ ಧ್ವಜವೂ ಇರುತ್ತದೆ. ಇಲ್ಲೊಂದು ಹಳದಿ ಧರ್ಮಧ್ವಜವಿದ್ದು, ಇದನ್ನು ಸಿದ್ಧಪಡಿಸಿ ತರುವವರು ಪೋತರಾಜನ ಮನೆಯವರು. ಕರಗದ ಹಬ್ಬದಲ್ಲಿ ಭಾಗವಹಿಸುವ ವೀರಕುಮಾರರು ದೀಕ್ಷೆ ತೆಗೆದುಕೊಳ್ಳುವ ದಿನ ಅದು. ಅವರೆಲ್ಲ ಈ ದಿನದಿಂದ ವೃತ್ತದಲ್ಲಿ ಸೇರುತ್ತಾರೆ. ಅಂದು ಅರಿಶಿನ ಕೊಂಬನ್ನು ಕಟ್ಟಿದ ದಾರದಿಂದ ಕಂಕಣ ಕಟ್ಟುತ್ತಾರೆ. ದೀಕ್ಷೆಯ ರೂಪವಾಗಿ ಜನಿವಾರವನ್ನು ತೊಡುವ ಅವರಲ್ಲಿ ಆಯ್ದ ಕೆಲವು ವೀರಕುಮಾರರು ಮಾತ್ರ ಅಲಗು ಸೇವೆ ಮಾಡುತ್ತಾರೆ.

ಉತ್ಸವದುದ್ದಕ್ಕೂ ಗುಡಿಯಲ್ಲಿಯೇ ಉಳಿಯಬೇಕಾದ ಇವರಲ್ಲಿ ವಹ್ನಿ ಕುಲಸ್ಥರೇ ಅಲ್ಲದೆ ಹರಕೆ ತೀರಸಲು ದೇವಾಂಗ, ಪಟ್ಟೇಗಾರರ ಜನಂಗದವರೂ ವೀರಕುಮಾರರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳುತ್ತಾರೆ ಕರಗ ಅಧ್ಯಯನಕಾರ ಕೆ. ಲಕ್ಷ್ಮಣ್. ಮುಂಜಾನೆ ಬಿದಿರು ಕಂಬವನ್ನು ಗುಡಿ ಮುಂದೆ ನಿಲ್ಲಿಸಿ ಅರಿಶಿನ ಬಟ್ಟೆಯನ್ನು ಧ್ವಜದಂತೆ ಕಟ್ಟುತ್ತಾರೆ. ಇಲ್ಲಿಂದ ಕರಗ ಉತ್ಸವದ ಎಲ್ಲಾ ಚಟುವಟಿಕೆಗಳೂ ಆರಂಭವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT