ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗದ ಕಸದ ರಾಶಿಗೆ `ಶಕ್ತಿ ರೂಪ'

Last Updated 1 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಉತ್ಪಾದನೆಯಾಗುವ ಕಸವನ್ನು ಹೊರವಲಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಎಸೆದಾಕ್ಷಣ ಸಮಸ್ಯೆ ಬಗೆಹರಿದಂತೆಯೇ? ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ವಿಲೇವಾರಿಯಾಗದೇ ಉಳಿಯುವ ಕಸದಿಂದ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ?, ತ್ಯಾಜ್ಯ ಘಟಕದ ಸಾಮರ್ಥ್ಯ ಮುಗಿದ ಮೇಲೆ ಕಸವನ್ನು ಎಲ್ಲಿ ಹಾಕಬಹುದು? ಇಂತಹ ಹಲವು ಪ್ರಶ್ನೆಗಳಿಗೆ ಐ-ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನೂತನ ತಂತ್ರಜ್ಞಾನದ ಮೂಲಕ ಉತ್ತರ ಹುಡುಕಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ `ಕಸ'ದ ನಗರವೆಂದೇ ಗುರುತಿಸಿಕೊಳ್ಳುತ್ತಿರುವ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಟನ್‌ಗಟ್ಟಲೇ ಕಸವನ್ನು ಕರಗಿಸಿ, ಕರಗದ ಕಸದಿಂದ ಶಕ್ತಿ ಉತ್ಪಾದಿಸುವ ನೂತನ ಯೋಜನೆಯನ್ನು ಸಂಸ್ಥೆಯು ಸಿದ್ಧಪಡಿಸಿದೆ.

ಎಲ್ಲೆಂದರಲ್ಲಿ ಗುಡ್ಡೆ ಬಿದ್ದಿರುವ ತ್ಯಾಜ್ಯದ ರಾಶಿಗೆ ತಾತ್ಕಾಲಿಕ ಪರಿಹಾರವನ್ನಷ್ಟೇ ಚಿಂತಿಸುತ್ತಿರುವ ಬಿಬಿಎಂಪಿಯೂ ನೂತನ ತಂತ್ರಜ್ಞಾನದಿಂದ ರೂಪಿತಗೊಂಡ ಹಲವು ತ್ಯಾಜ್ಯ ನಿರ್ವಹಣಾ ಯೋಜನೆಗಳ ಬಗ್ಗೆ ಗಮನ ಹರಿಸಬೇಕೆಂಬುದೇನೋ ನಾಗರಿಕರ ಆಶಯ. ಇದಕ್ಕೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳು ತಮ್ಮದೇ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಹೊಸ ಬಗೆಯ ಮಾದರಿಗಳನ್ನು ನೀಡಿದ್ದು, ಅದರಲ್ಲಿ ಐ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಒಂದು.

ಯೋಜನೆಯೇನು?
ತ್ಯಾಜ್ಯ ಘಟಕದಲ್ಲಿ ಒಂದಿಷ್ಟು ಕಸ ಉಳಿಯದಂತೆ ವಿಲೇವಾರಿ ಮಾಡುವ ಜಪಾನ್ ಮಾದರಿಯ ತಂತ್ರಜ್ಞಾನವನ್ನು ಈ ಸಂಸ್ಥೆಯು ಅಳವಡಿಸಿಕೊಂಡಿದೆ. ಸುಮಾರು 20 ಏಕರೆ ಜಾಗದಲ್ಲಿ ತ್ಯಾಜ್ಯ ಸಂಗ್ರಹ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ 12 ಏಕರೆ ಪ್ರದೇಶವನ್ನು ತ್ಯಾಜ್ಯ ಸಂಸ್ಕರಣಾ ಘಟಕವನ್ನಾಗಿ ರೂಪಿಸಿದರೆ ಉಳಿದ ಜಮೀನನ್ನು ವಿಲೇವಾರಿಗೆ ಪೂರಕವಾಗುವಂತೆ ಬಳಸಿಕೊಳ್ಳಲಾಗುವುದು.

ಘಟಕವನ್ನು ಒಂದು ಕಾರ್ಖಾನೆಯಂತೆ ರೂಪಿಸಲಾಗುವುದು. ಮೂರರಿಂದ ಐದು ಮಹಡಿಯುಳ್ಳ ಸಂಕೀರ್ಣದಲ್ಲಿ ತ್ಯಾಜ್ಯ ಕರಗಿಸುವ ವಿಭಾಗ, ಕರಗದೇ ಉಳಿಯುವ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಭಾಗಗಳನ್ನು ತೆರೆಯಲಾಗುವುದು. ಹಸಿ ಮತ್ತು ಒಣ ತ್ಯಾಜ್ಯವನ್ನು ಯಂತ್ರಗಳ ಮೂಲಕ ಕರಗಿಸಲಾಗುತ್ತದೆ.

ಆಧುನಿಕ ತಂತ್ರಜ್ಞಾನ ಬಳಸಿ ಕರಗದೇ ಉಳಿಯುವ ತ್ಯಾಜ್ಯದಿಂದ ವಿದ್ಯುಚ್ಛಕ್ತಿಯನ್ನು ತಯಾರಿಸಲಾಗುತ್ತದೆ.
ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ಸಂಯೋಜಕ  ವಿಕ್ರಂ ಗುಲೇಚ, ` ಅಂರ್ತಜಲ, ಮಣ್ಣಿನ ಸಂರಕ್ಷಣೆ ಮತ್ತು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.

ಚೀನಾ, ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್ ಸೇರಿದಂತೆ ಸುಮಾರು 480 ರಾಷ್ಟ್ರಗಳಲ್ಲಿ ಈ ಯೋಜನೆಯೂ ಈಗಾಗಲೇ ಚಾಲ್ತಿಯಲ್ಲಿದ್ದು, ಬೆಂಗಳೂರು, ಹೈದರಾಬಾದ್, ಪುಣೆ  ಸೇರಿದಂತೆ ಹಲವು ಕಡೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸ್ಥಳೀಯ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ' ಎಂದು ತಿಳಿಸಿದರು.

`ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುವುದು. ನಗರದಲ್ಲಿ ದಿನವೊಂದಕ್ಕೆ 4 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರ ವಿಲೇವಾರಿಗಾಗಿ ಭಾರಿ ಪ್ರಮಾಣದಲ್ಲಿ ಹಣ ತೆರಲಾಗುತ್ತಿದೆ.

ಅಲ್ಲದೇ ನಗರದ ಹೊರ ವಲಯಕ್ಕೆ ಕಸ ಸಾಗಣೆ ವೆಚ್ಚವೂ ದುಬಾರಿಯಾಗಿದೆ. ಹಾಗಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಇಂತಹ ಮೂರು ಘಟಕಗಳ ಸ್ಥಾಪನೆಗೆ ಅವಕಾಶ ನೀಡಿದರೆ, ಯಂತ್ರಗಳ ಸಹಾಯದಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು' ಎಂದು ತಿಳಿಸಿದರು.

`ವರ್ಷಕ್ಕೆ ಐನೂರು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಬಿಬಿಎಂಪಿ ಕಸ ವಿಲೇವಾರಿಗಾಗಿ ವಿನಿಯೋಗಿಸುತ್ತಿದೆ. 400 ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ನೂರು ಎಕರೆ ವಿಸ್ತ್ರೀರ್ಣದ ಒಂದು ಜಮೀನಿಗಿಂತ, ನಗರದ ಮೂರು ಭಾಗಗಳಲ್ಲಿ 20 ಎಕರೆಯುಳ್ಳ ಜಮೀನು ನೀಡಿದರೆ ಈ ಯೋಜನೆಯನ್ನು ಜಾರಿಗೊಳಿಸಬಹುದಾಗಿದೆ' ಎಂದು ಹೇಳಿದರು.

ಯಂತ್ರಗಳು ಮಾತ್ರವಲ್ಲ, ಮನುಷ್ಯರು ಅಗತ್ಯ
`ಕೇವಲ ಯಂತ್ರಗಳಿಂದ ಮಾತ್ರ ಈ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಸಾಧ್ಯವಿಲ್ಲ.  ಪ್ರಮುಖವಾಗಿ ತ್ಯಾಜ್ಯ ವಿಂಗಡಣೆಯ ವಿಚಾರದಲ್ಲಿ ಚಿಂದಿ ಆಯುವವರ ಶ್ರಮವನ್ನು ಅಗತ್ಯವಾಗಿ ಬಳಸಿಕೊಳ್ಳಲಾಗುವುದು. ಚಿಂದಿ ಆಯುವ ಎಂದಿನ ಕ್ರಮವನ್ನು ಬಿಟ್ಟು, ಯೋಜನೆಯಲ್ಲಿ ಪೂರಕವಾಗಿ ತೊಡಗಿಸಿಕೊಳ್ಳಲಾಗುವುದು' ಎಂದು ಅವರು ಹೇಳಿದರು.

`ಈಗಾಗಲೇ ಬಿಬಿಎಂಪಿ ಆಯುಕ್ತರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ವಿಸ್ತ್ರೃತವಾಗಿ ತಿಳಿಸಲಾಗಿದೆ. ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ' ಎಂದು ವಿಕ್ರಂ ಗುಲೇಚ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT