ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿದ ಕಾರ್ಮೋಡ: ರಾಂಚಿಗೆ ರಾಜ್ಯ ತಂಡ

ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಕೂಟದಲ್ಲಿ ಕರ್ನಾಟಕದ ಸವಾಲು:
Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಂಚಿಯಲ್ಲಿ ಇದೇ ಶನಿವಾರ ಆರಂಭವಾಗಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿ­ಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುವುದಕ್ಕೆ ಉಂಟಾಗಿದ್ದ ಅಡ್ಡಿ ಆತಂಕಗಳೆಲ್ಲವೂ ದೂರವಾದವು. ಆ ಕೂಟಕ್ಕೆ ರಾಜ್ಯ ತಂಡವನ್ನು ಕಳುಹಿ­ಸುವ ಬಗ್ಗೆ ಎದ್ದಿದ್ದ ವಿವಾದಕ್ಕೆ ತೆರೆ ಬಿದ್ದಿದೆ.

ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ ಮತ್ತು ರಾಜ್ಯ ಕ್ರೀಡಾ ಇಲಾಖೆ ನಡುವಣ ‘ಹಗ್ಗ ಜಗ್ಗಾಟ’ ತಾತ್ಕಾಲಿಕವಾಗಿ ನಿಂತಿದೆ. ಬುಧವಾರ ಕ್ರೀಡಾ ಇಲಾಖೆಯ ನಿರ್ದೇಶಕ ವಿಕಾಸ್‌ ಕುಮಾರ್‌ ನೇತೃತ್ವ­ದಲ್ಲಿ ಸಭೆ ನಡೆದು ಅದರಲ್ಲಿ ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಸತ್ಯನಾರಾಯಣ, ಮುನಿಸಂಜೀವಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಕ್ರೀಡಾ ಇಲಾಖೆ ಭಾನುವಾರ ನಡೆಸಿದ್ದ ಆಯ್ಕೆಯ ಟ್ರಯಲ್ಸ್‌ನಲ್ಲಿ ಆಯ್ಕೆ­ಯಾ­ಗಿದ್ದ ಚೇತನ್‌, ಅರುಣ್‌ ಕುಮಾರ್‌, ಬೋಪಣ್ಣ, ಉಮಾ ಭಾಗ್ಯಲಕ್ಷ್ಮಿ, ಮಹಾಲಕ್ಷ್ಮಿ, ಅರ್ಪಿತಾ ಅವರಿದ್ದ ತಂಡ ಗುರುವಾರ ಇಲ್ಲಿಂದ ರಾಂಚಿಯತ್ತ ಪ್ರಯಾಣ ಬೆಳೆಸಿತು. ಈ ತಂಡಕ್ಕೆ ಆಯ್ಕೆಯಾಗಿದ್ದ ಸಮೀರ್‌ ಪಾಷಾ ಗಾಯದ ಸಮಸ್ಯೆಯಿಂದಾಗಿ ರಾಂಚಿಗೆ ಹೋಗಲಿಲ್ಲ. ಪ್ರಸಕ್ತ ಪಟಿಯಾಲದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿರುವ ಅಶ್ವಿನಿ ಅಕ್ಕುಂಜಿ ಮತ್ತು ಎಚ್.ಎಂ.ಜ್ಯೋತಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

‘ರಾಷ್ಟ್ರೀಯ ಕೂಟಕ್ಕೆ ಪ್ರವೇಶಪತ್ರ­ಗಳನ್ನು ಸ್ವೀಕರಿಸಲು ಕಡೆಯ ದಿನ ಮುಗಿದು ಹೋಗಿದ್ದರೂ, ಕರ್ನಾಟಕಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಳಂಬವಾಗಿ­ಯಾದರೂ ಪ್ರವೇಶಪತ್ರಗಳನ್ನು ಸ್ವೀಕರಿಸಲಾ­ಗುವುದು’ ಎಂದು ಭಾರತ ಅಥ್ಲೆಟಿಕ್‌ ಫೆಡರೇಷನ್‌ನ (ಎಎಫ್‌ಐ) ಮುಖ್ಯಸ್ಥ ಅದಿಲ್‌ ಸುಮರಿವಾಲಾ ಪತ್ರದ ಮೂಲಕ ತಿಳಿಸಿದ್ದಾರೆಂದು ರಾಜ್ಯ ಸಂಸ್ಥೆ ತಿಳಿಸಿದೆ.
ಕ್ರೀಡಾ ಇಲಾಖೆ ಆಯ್ಕೆ ನಡೆಸಿದ ಅಥ್ಲೀಟ್‌ಗಳ ಜತೆಗೆ ಮಂಜುಶ್ರೀ, ಪ್ರಶಾಂತ್‌ ಮತ್ತು ಎಸ್‌.ಬಾಬು ಎಂಬ ಮೂವರು ಅಥ್ಲೀಟ್‌ಗಳನ್ನೂ ಸೇಪರ್ಡೆ­ಗೊಳಿಸಲಾಗಿದೆ ಎಂದು ರಾಜ್ಯ ಸಂಸ್ಥೆಯ ಮೂಲಗಳು ತಿಳಿಸಿವೆ.

‘ರಾಜ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ನನಗೆ ತಿಳಿದು ಬಂದಿರುವುದ­ರಿಂದ, ಕ್ರೀಡಾಪಟುಗಳ ಒಳಿತಿನ ದೃಷ್ಟಿ­ಯಿಂದ ಕ್ರೀಡಾ ಇಲಾಖೆಯೇ ಆಯ್ಕೆ ಟ್ರಯಲ್ಸ್‌ ನಡೆಸಿ ತಂಡವನ್ನು ರಾಷ್ಟ್ರೀಯ ಕೂಟಕ್ಕೆ ಕಳುಹಿಸಿ­ಕೊಡುತ್ತಿದೆ’ ಎಂದು ಈಚೆಗೆ ಕ್ರೀಡಾ ಇಲಾಖೆ ನಿರ್ದೇಶಕ ವಿಕಾಸ್‌ ಕುಮಾರ್‌ ಹೇಳಿದ್ದರು. ಆದರೆ ಇದು ಎಎಫ್‌ಐ ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದು ಎಎಫ್‌ಐ ಉನ್ನತ ಮೂಲಗಳು ಪ್ರತಿಕ್ರಿಯಿಸಿದ್ದವು. ಹೀಗಾಗಿ ಕ್ರೀಡಾ ಇಲಾಖೆ ಮತ್ತು ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಕೆಲವು ಪದಾಧಿಕಾರಿಗಳು ಜಂಟಿ ಮಾತುಕತೆ ನಡೆಸಿ ಅಂತಿಮ ಕ್ಷಣದಲ್ಲಿ ತಂಡವನ್ನು ಕಳುಹಿಸಿಕೊಡುವಂತಾಯಿತು.

ಸದ್ಯದಲ್ಲೇ ಚುನಾವಣೆ: ಈ ಎಲ್ಲಾ ಬೆಳವಣಿಗೆಗಳ ನಡುವೆ ಎಎಫ್‌ಐ ಮುಖ್ಯಸ್ಥ ಅದಿಲ್‌ ಸುಮರಿವಾಲಾ ಅವರು ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆಗೆ ಶೀಘ್ರದಲ್ಲೇ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದ್ದಾರೆ.

ಅಥ್ಲೆಟಿಕ್‌ ಸಂಸ್ಥೆಯ ಕಾರ್ಯದರ್ಶಿ­ಯನ್ನು ಉದ್ದೇಶಿಸಿ ಅವರು ಬರೆದಿರುವ ಪತ್ರದಲ್ಲಿ ರಾಜ್ಯ ಸಂಸ್ಥೆಗೆ ಚುನಾವಣೆ ನಡೆಸಬೇಕೆಂದು ಹಿಂದೆಯೇ ಸೂಚನೆ ನೀಡಿದ್ದರೂ, ಆ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇನ್ನು ಏಳು ದಿನಗಳ ಒಳಗೆ ರಾಜ್ಯ ಸಂಸ್ಥೆಯ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಬೇಕೆಂದೂ, ಅದರೊಳಗೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಬೇಕೆಂದೂ ಆ ಪತ್ರದಲ್ಲಿ ಹೇಳಿದ್ದಾರೆ.

ಹೀಗಾಗಿ ಇದೇ ತಿಂಗಳ ಕೊನೆಯಲ್ಲಿ ರಾಜ್ಯ ಸಂಸ್ಥೆಗೆ ಚುನಾವಣೆ ನಡೆಯುವ ಸಾಧ್ಯತೆ ಬಗ್ಗೆ ಸಂಸ್ಥೆಯ ಉನ್ನತ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT