ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಹಿಡಿತ; 1.22 ಲಕ್ಷ ಕೋಟಿ ನಷ್ಟ

Last Updated 4 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎರಡು ದಿನಗಳ ಏರಿಕೆ ನಂತರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರದ ವಹಿವಾಟಿನಲ್ಲಿ ಮತ್ತೆ ಕುಸಿತ ದಾಖಲಿಸಿದ್ದು, 441 ಅಂಶಗಳಿಗೆ ಎರವಾಗಿದೆ.

ಕಳೆದ ಎರಡು ವಹಿವಾಟು ದಿನಗಳಲ್ಲಿ  427 ಅಂಶಗಳ ಗಳಿಕೆ ಕಂಡಿದ್ದ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ ತೀವ್ರ ಏರಿಳಿತ ಕಂಡು ಅಂತಿಮವಾಗಿ 18,008.15 ಅಂಶಗಳೊಂದಿಗೆ ದಿನದ ವಹಿವಾಟು ಕೊನೆಗೊಳಿಸಿತು. ಕಳೆದ ವರ್ಷದ ಆಗಸ್ಟ್ 31ರಂದು ಸೂಚ್ಯಂಕವು ಈ ಮಟ್ಟದಲ್ಲಿತ್ತು.

ರಿಯಾಲ್ಟಿ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ ತಯಾರಿಕಾ ಸಂಸ್ಥೆಗಳು, ಐ.ಟಿ, ಬ್ಯಾಂಕ್, ಭಾರಿ ಯಂತ್ರೋಪಕರಣ ಮತ್ತು ಆಟೊಮೊಬೈಲ್ ವಲಯದ ಷೇರುಗಳು ನಷ್ಟಕ್ಕೆ ಗುರಿಯಾದವು.

ಸಂಪತ್ತು ನಷ್ಟ: ಸೂಚ್ಯಂಕದ ಈ ಕುಸಿತವು  ಮಾರುಕಟ್ಟೆಯಲ್ಲಿ ರೂ ,22,000 ಕೋಟಿಗಳಷ್ಟು ಸಂಪತ್ತು ಕರಗಿಸಿದೆ. ಕಂಪೆನಿಗಳ ಪ್ರವರ್ತಕರು ಮತ್ತು ಸಾಮಾನ್ಯ ಹೂಡಿಕೆದಾರರು  ಈ ಭಾರಿ ಮೊತ್ತದ ನಷ್ಟಕ್ಕೆ ಗುರಿಯಾಗಿದ್ದಾರೆ.

ಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಉದ್ದಿಮೆ ಸಂಸ್ಥೆಗಳ ಒಟ್ಟಾರೆ ಷೇರುಗಳ ಮಾರುಕಟ್ಟೆ ಮೌಲ್ಯವು ಒಂದೇ ದಿನದಲ್ಲಿ ರೂ  1.22 ಲಕ್ಷ ಕೋಟಿಗಳಷ್ಟು ಕರಗಿದೆ. ದಿನದ ವಹಿವಾಟಿನ ಕೊನೆಯಲ್ಲಿ ಮಾರುಕಟ್ಟೆಯ ಒಟ್ಟಾರೆ ಸಂಪತ್ತು ರೂ  65,00,000 ಕೋಟಿಗಳಷ್ಟಾಗಿತ್ತು. 2010ರ ಜುಲೈ ತಿಂಗಳಲ್ಲಿ ಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಈ ಮಟ್ಟದಲ್ಲಿ ಇತ್ತು.

ಪ್ರತಿಕೂಲ ಪರಿಣಾಮ: ಹಣದುಬ್ಬರ ಮತ್ತು ಬ್ಯಾಂಕ್ ಬಡ್ಡಿ ದರಗಳು ಏರುಗತಿಯಲ್ಲಿ ಇರುವುದು ಹಾಗೂ ಈಜಿಪ್ಟ್‌ನಲ್ಲಿ ರಾಜಕೀಯ ಅರಾಜಕತೆ ತೀವ್ರಗೊಳ್ಳುತ್ತಿರುವುದು ಷೇರು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಈಜಿಪ್ಟ್‌ನಲ್ಲಿ ಭಾರತದ ಕೆಲ ಉದ್ದಿಮೆ ಸಂಸ್ಥೆಗಳೂ ಇವೆ. ಅಲ್ಲಿನ ಅಶಾಂತ ಪರಿಸ್ಥಿತಿಯು ಆ ಪ್ರದೇಶದಲ್ಲಿ ಇನ್ನಷ್ಟು ವ್ಯಾಪಿಸುವ  ಸಾಧ್ಯತೆಗಳು ಹೂಡಿಕೆದಾರರ ಆತಂಕ ಹೆಚ್ಚಿಸಿವೆ. ಇದೇ ಕಾರಣಕ್ಕೆ ವಿದೇಶಿ ಹೂಡಿಕೆದಾರರು ಹಣ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪೇಟೆಯಲ್ಲಿ  ಉತ್ಸಾಹ ಉಡುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT