ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಮುಡಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

Last Updated 1 ಜೂನ್ 2013, 10:35 IST
ಅಕ್ಷರ ಗಾತ್ರ

ಕೊಪ್ಪಳ:  ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಜೂ. 8 ಹಾಗೂ 9ರಂದು ನಡೆಯಲಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲಾಗುವ ಡಾ.ಸಿದ್ದಯ್ಯ ಪುರಾಣಿಕ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಎಚ್.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಈ ನುಡಿ ಉತ್ಸವ ನೆರವೇರಲಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ, 8ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ.ವಿರೂಪಾಕ್ಷಪ್ಪ ಕೋರಗಲ್ ಸಮ್ಮೇಳನವನ್ನು ಉದ್ಘಾಟಿಸುವರು ಎಂದರು.

ಇದಕ್ಕೂ ಮುನ್ನ ಬೆಳಿಗ್ಗೆ 7.30 ಗಂಟೆಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸುವರು ಎಂದು ವಿವರಿಸಿದರು.

ನಂತರ 8 ಗಂಟೆಗೆ ಭುವವೇಶ್ವರಿ ಮೆರವಣಿಗೆ ನಡೆಯಲಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಶರಣಪ್ಪ ಕುರಿ ಉದ್ಘಾಟಿಸುವರು. ಉಪಾಧ್ಯಕ್ಷೆ ಎಲ್ಲಮ್ಮ ಪೂಜಾರ ಹಾಗೂ ಎಲ್ಲ ಸದಸ್ಯರು ಮುಖ್ಯ ಅತಿಥಿಯಾಗಿ ಪಾ ಲ್ಗೊಳ್ಳುವರು. ಹುಚ್ಚೀರೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಮೆರವಣಿಗೆ ಕರವೀರಭದ್ರೇಶ್ವರ ದೇವಸ್ಥಾನದ ಮೂಲಕ ಹಾಯ್ದು ಸಮ್ಮೇಳನ ನಡೆಯುವ ಮುಖ್ಯ ವೇದಿಕೆಗೆ ಆಗಮಿಸಲಿದೆ ಎಂದರು.

10 ಗಂಟೆಗೆ ಸಮ್ಮೇಳನ ಉದ್ಘಾಟನೆಗೊಂಡ ನಂತರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮಾಜಿ ಶಾಸಕ ಸಂಗಣ್ಣ ಕರಡಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಕಲಾ ಪ್ರದರ್ಶನಕ್ಕೆ, ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಜಿಲ್ಲೆಯ ವಿವಿಧ ಲೇಖಕರ ಕೃತಿಗಳನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು.

ಮಧ್ಯಾಹ್ನ 12 ಗಂಟೆಗೆ `ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸವಾಲುಗಳು' ಎಂಬ ವಿಷಯ ಕುರಿತು ಗೋಷ್ಠಿ ನಡೆಯುವುದು. ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಈ ಗೋಷ್ಠಿಯನ್ನು ಉದ್ಘಾಟಿಸುವರು. ನಂತರ ಮಧ್ಯಾಹ್ನ 2 ಗಂಟೆಗೆ `ಕೊಪ್ಪಳ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಪೂರಕ- ಪರಿಹಾರ ಮಾರ್ಗಗಳು' ಎಂಬ ವಿಷಯ ಕುರಿತು 2ನೇ ಗೋಷ್ಠಿ ನಡೆಯಲಿದೆ ಎಂದರು.

ಸಂಜೆ 4 ಗಂಟೆಗೆ ನಡೆಯುವ 3ನೇ ಗೋಷ್ಠಿಯಲ್ಲಿ `ಕಲಂ 371 ಜಾರಿ ಹಾಗೂ ಅಭಿವೃದ್ಧಿಯ ಮುನ್ನೋಟ' ಎಂಬ ವಿಷಯ ಕುರಿತು ವಿಷಯ ಮಂಡನೆ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಾನಪದ ಕಲಾವಿದ ಮಾರೆಪ್ಪ ಮಾರೆಪ್ಪ ದಾಸರ ಚಾಲನೆ  ನೀಡುವರು ಎಂದು ವಿವರಿಸಿದರು.

ಜೂ. 9ರಂದು ಬೆಳಿಗ್ಗೆ 9 ಗಂಟೆಗೆ ಕವಿ ಗೋಷ್ಠಿ, ಮಧ್ಯಾಹ್ನ 12 ಗಂಟೆಗೆ `ಜಾನಪದ ಮತ್ತು ರಂಗಭೂಮಿ' ಎಂಬ ವಿಷಯ ಕುರಿತು 5ನೇ ಗೋಷ್ಠಿ ನಡೆಯಲಿದ್ದರೆ, ಮಧ್ಯಾಹ್ನ  3 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆಗೆ ಸನ್ಮಾನ ಸಮಾರಂಭ ಜರುಗಲಿದೆ. ಸಂಜೆ 5 ಗಂಟೆಗೆ ಬಹಿರಂಗ ಸಮಾವೇಶ ನಡೆಯಲಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸಾಹಿತಿ ಡಾ.ಕೆ.ಬಿ.ಬ್ಯಾಳಿ, ಪರಿಷತ್ತಿನ ಗೌರವ ಕಾರ್ಯದರ್ಶಿ ಅಕ್ಬರ್ ಸಿ.ಕಾಲಿಮಿರ್ಚಿ, ಶಿವಾನಂದ ಮೇಟಿ, ಗೌರವ ಕೋಶಾಧ್ಯಕ್ಷ ಆರ್.ಎಸ್.ಸರಗಣಾಚಾರ, ಗಂಗಾವತಿ ಘಟಕದ ಅಧ್ಯಕ್ಷ ಅಜಮೀರ್ ನಂದಾಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT