ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರವಳ್ಳಿಯಲ್ಲಿ ಕಾಡಾನೆ ದಾಳಿ

Last Updated 4 ನವೆಂಬರ್ 2011, 6:35 IST
ಅಕ್ಷರ ಗಾತ್ರ

ಮುಂಡಗೋಡ: ಕಾಡಿನಿಂದ ನಾಡಿನತ್ತ ಕಾಡಾನೆಗಳ ಹಿಂಡು ಮುಖ ಮಾಡಿದ್ದು, ಕೈಗೆ ಬಂದ ಬೆಳೆಯನ್ನು ಹಾಳು ಮಾಡಿ ಹೋದ ಘಟನೆ ತಾಲ್ಲೂಕಿನ ಚೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕರವಳ್ಳಿಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಸುಮಾರು ಏಳೆಂಟು ಆನೆಗಳ ಹಿಂಡು ಕರವಳ್ಳಿ ಗ್ರಾಮಕ್ಕೆ ಆಗಮಿಸಿ ಮನೆಯ ಸನಿಹದ ಬಾಳೆ ತೋಟ, ಭತ್ತದ ಗದ್ದೆಯನ್ನು ಹಾಳು ಮಾಡಿವೆ. ಗ್ರಾಮದ ಸನಿಹದ ಸುಮಾರು 10-15 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದಲ್ಲಿ ಕಾಡಾನೆಗಳ ಹಿಂಡು ಅಡ್ಡಾಡಿ ಬೆಳೆ ಹಾಳು ಮಾಡಿವೆ. ಮನೆಯ ಹಿತ್ತಲಲ್ಲಿನ ಬಾಳೆಯ ತೋಟಕ್ಕೂ ದಾಳಿ ನಡೆಸಿರುವ ಕಾಡಾನೆಗಳು ಬಾಳೆಯನ್ನು ಹಾನಿ ಮಾಡಿವೆ.

ಬೆಳಗಿನ ಜಾವ 4.30ರ ಸುಮಾರಿಗೆ ಏಳೆಂಟು ಆನೆಗಳ ಹಿಂಡು ಗ್ರಾಮಕ್ಕೆ ಪ್ರವೇಶ ಮಾಡಿ ಮನೆಯ ಸನಿಹವೇ ಅಡ್ಡಾಡಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಲ್ಲಿ ಒಂದು ಮರಿಯಾನೆ ಇರುವುದನ್ನು ಗುರುತಿಸಲಾಗಿದೆ.

ಥಾಮಸ್ ವರ್ಗಿಸ್, ಅಬ್ರಹಾಂ ವರ್ಗಿಸ್, ಅಶೋಕ ಸಿದ್ದಪ್ಪ ಮೇಲಿನಮನಿ, ಮಾರುತಿ ಕೋಣನ್ನವರ, ಎಲಿಯಮ ವರ್ಗಿಸ್, ನಿಂಗಪ್ಪ ವಾಲ್ಮೀಕಿ ಎನ್ನುವರರ ಭತ್ತದ  ಗದ್ದೆಗಳು ಹಾನಿಗೀಡಾವೆ. ಮನೆಯ ಸುತ್ತಲಿನ ಬೇಲಿಯನ್ನು ನಾಶಪಡಿಸಿರುವ ಕಾಡಾನೆಗಳು ಅಂಗನವಾಡಿ ಕೇಂದ್ರದತ್ತ ಮುಖ ಮಾಡಿ ಅರಣ್ಯಕ್ಕೆ ತೆರಳಿವೆ. ಆನೆಗಳ ಅವಾಂತರದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಈಗಾಗಲೇ ಹೊಲಗದ್ದೆಗಳಲ್ಲಿನ ಬೆಳೆಯನ್ನು ಕೊಯ್ಲು ಮಾಡಿ ಬಣವೆ ಹಾಕಿರುವ ರೈತರು, ಅದನ್ನು ರಕ್ಷಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಗ್ರಾಮದ ಸನಿಹವೇ ಅರಣ್ಯಪ್ರದೇಶವಿದ್ದು ಕಾಡಾನೆಗಳು ಅಲ್ಲಿ ಬೀಡುಬಿಟ್ಟಿರುವ ಬಗ್ಗೆ ಸ್ಥಳಿಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿವರ್ಷವೂ ಕಾಡಾನೆಗಳು ಬೆಳೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಕಿರವತ್ತಿ ಮಾರ್ಗವಾಗಿ ತಾಲ್ಲೂಕಿನ ಗುಂಜಾವತಿ, ಮೈನಳ್ಳಿ, ಚವಡಳ್ಳಿ, ಸುಳ್ಳಳ್ಳಿ, ಕಲಕೇರಿ, ಕ್ಯಾತ್ನಳ್ಳಿ, ಹನುಮಾಪುರ ಮಾರ್ಗವಾಗಿ ಕೊಳಗಿ, ಗೊಟಗೋಡಿಕೊಪ್ಪ, ಮಳಗಿ, ಕೂರ್ಲಿ ಕಡೆ ನಡೆದು ಬನವಾಸಿವರೆಗೆ ಹೋಗಿ ಮರಳಿ ದಾಂಡೇಲಿ ಅಭಯಾರಣ್ಯದತ್ತ ತೆರಳುತ್ತವೆ. ತಿಂಗಳಲ್ಲಿ ಕಾಡಾನೆಗಳ ಎರಡಮೂರು ಗುಂಪುಗಳಾಗಿ  ರೈತರ ಬೆಳೆ ಹಾಳು ಮಾಡುವುದು ಸಾಮಾನ್ಯವಾಗಿದೆ.

ಗ್ರಾಮಸ್ಥರಿಗೆ ಮನವಿ: ಕಾಡಾನೆ ಹಿಂಡು ಕಂಡ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿರುವ ಎಸಿಎಫ್ ವಿ.ಆರ್. ಬಸನಗೌಡರ, ಆನೆಗಳನ್ನು ಚದುರಿಸಲು ಗ್ರಾಮಸ್ಥರು ಕಲ್ಲು ಹೊಡೆಯುವುದು, ಪಟಾಕಿ ಹಾರಿಸುವುದನ್ನು ಮಾಡಬಾರದು; ಇದರಿಂದ ಆನೆಗಳು ರೊಚ್ಚಿಗೇಳುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT