ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಕೊಡಗಿನಲ್ಲಿ ದಿನವಿಡೀ ಧಾರಾಕಾರ ಮಳೆ

Last Updated 17 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಭಾನುವಾರ ಇನ್ನಷ್ಟು ಚುರುಕುಗೊಂಡು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡು ಕೊಡಗು ಜಿಲ್ಲೆಯಲ್ಲಿ ದಿನವಿಡೀ ಧಾರಾಕಾರ ಮಳೆ ಸುರಿದಿದೆ. ನೆರೆಯ ಕಾಸರಗೋಡು ಜಿಲ್ಲೆಯಲ್ಲೂ ಭಾರಿ ಮಳೆ ಆಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲ್ಲೂಕಿನಲ್ಲಿ ಅತ್ಯಧಿಕ 105.4 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ 68.7 ಮಿ.ಮೀ, ಪುತ್ತೂರಿನಲ್ಲಿ 57 ಮಿ.ಮೀ., ಬೆಳ್ತಂಗಡಿಯಲ್ಲಿ 45 ಮಿ.ಮೀ. ಹಾಗೂ ಸುಳ್ಯದಲ್ಲಿ 57 ಮಿ.ಮೀ. ಮಳೆಯಾಗಿದೆ.

ಭಾನುವಾರ ಸುರಿದ ಮಳೆಯಿಂದಾಗಿ ಮಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಗರದ ಕೊಡಿಯಾಲ್‌ಗುತ್ತು, ಜೆಪ್ಪಿನಮೊಗರು, ಕೂಳೂರು, ಎಕ್ಕೂರು ಪ್ರದೇಶದಲ್ಲಿ ಅನೇಕ ಮನೆಗಳು ಜಲಾವೃತವಾಗಿದ್ದವು. ಜೆಪ್ಪಿನಮೊಗರುವಿನಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದಿದ್ದರಿಂದ ವಾಹನ ಸವಾರರೂ ತೊಂದರೆ ಅನುಭವಿಸಿದರು. ಸಿಟಿ ಆಸ್ಪತ್ರೆ ಬಳಿ ಮರ ಉರುಳಿ ರಸ್ತೆ ಮೇಲೆ ಬಿದ್ದಿತ್ತು.

ಮಳೆಯ ಅಬ್ಬರ ಹೆಚ್ಚುತ್ತಿದ್ದಂತೆ ಕಡಲ್ಕೊರೆತ ಹಾವಳಿಯೂ ಹೆಚ್ಚಿದೆ. ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕೆಲವೆಡೆ ಭಾರಿ ಗಾತ್ರದ ಅಲೆಗಳು ಕೊರೆತ ತಡೆಗೆ ಹಾಕಿದ್ದ ಕಲ್ಲುಗಳನ್ನು ಎಳೆದಿವೆ. ಕಾಸರಗೋಡು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿತ್ತು.

ಉಡುಪಿ ವರದಿ:  ಬ್ರಹ್ಮಾವರ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಉಪ್ಪೂರು ಪರಿಸರದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಇದರಿಂದಾಗಿ ಉಪ್ಪೂರು ಕುದ್ರು ಪರಿಸರದಲ್ಲಿ  50ಕ್ಕೂ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಕುಂದಾಪುರ ತಾಲ್ಲೂಕಿನಾದ್ಯಂತ ಮಳೆ ತೀವ್ರವಾಗಿತ್ತು. ಬೆಳಿಗ್ಗೆಯಿಂದ ಸುರಿದ ಮಳೆ ಸಂಜೆ ವೇಳೆ ಬಿಡುವು ನೀಡಿತ್ತು. ಬೈಂದೂರು  ಪರಿಸರದಲ್ಲಿ  ಭಾನುವಾರ ಮಧ್ಯಾಹ್ನದ ವರೆಗೆ ನಿರಂತರ ಸುರಿದ ಮಳೆ ತಗ್ಗು ಪ್ರದೇಶಗಳನ್ನು ಜಲಾವೃತಗೊಳಿಸಿದ್ದಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿದವು.

ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗೊಮ್ಮೆ, ಇಗೊಮ್ಮೆ ಎನ್ನುವಂತೆ ಸುರಿಯುತ್ತಿದ್ದ ಮುಂಗಾರು ಮಳೆ ಇದೇ ಮೊದಲ ಬಾರಿಗೆ ಎನ್ನುವಂತೆ ಭಾನುವಾರ ದಿನವಿಡೀ ಸುರಿಯಿತು. ಬೆಳಗಿನ ಜಾವದಿಂದ ಆರಂಭವಾದ ಮಳೆಯಿಂದ ಯಾವುದೇ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ. ಕರಾವಳಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ-17ರ ಅಕ್ಕಪಕ್ಕದಲ್ಲಿರುವ ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿತ್ತು.

ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ಕಾರವಾರ ತಾಲ್ಲೂಕಿನಲ್ಲಿ ಭಾನುವಾರ ಮುಂಜಾನೆಯಿಂದ ಸಂಜೆಯವರೆಗೆ 27.9 ಮಿ.ಮೀ. ಮಳೆಯಾಗಿದೆ. ಘಟ್ಟದ ಮೇಲಿನ ಮತ್ತು ಅರೆಬಯಲುಸೀಮೆ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿರವ ಬಗ್ಗೆ ವರದಿಯಾಗಿದೆ.
ಹುಬ್ಬಳ್ಳಿ ವರದಿ: ಧಾರವಾಡ, ಹುಬ್ಬಳ್ಳಿ ಹಾಗೂ ವಿಜಾಪುರ ನಗರದಲ್ಲಿಯೂ ಮಳೆಯಾಗಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ವಿವಿಧ ಪ್ರದೇಶಗಳಲ್ಲಿ ಭಾನುವಾರ ದಿನವಿಡೀ ಮಳೆ ಸುರಿದಿದೆ. ಬತ್ತ ಬೆಳೆಯುವ ಪ್ರದೇಶಗಳಲ್ಲಿ ವಿಳಂಬವಾಗಿದ್ದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಜಿಲ್ಲೆಯಲ್ಲಿ ಭಾಗಮಂಡಲದಲ್ಲಿ  ಅತಿ ಹೆಚ್ಚು 61.2 ಮಿ.ಮೀ ಮಳೆಯಾಗಿದೆ. ಮಡಿಕೇರಿಯಲ್ಲಿ 28 ಮಿ.ಮೀ, ವಿರಾಜಪೇಟೆಯಲ್ಲಿ 30.4 ಮಿ.ಮೀ, ನಾಪೋಕ್ಲುನಲ್ಲಿ 25.2 ಮಿ.ಮೀ, ಮಳೆ ಸುರಿದಿದೆ. ಗೋಣಿಕೊಪ್ಪಲಿನಲ್ಲೂ ಉತ್ತಮ ಮಳೆಯಾಗಿದೆ.

ಮಳೆಯ ಜೊತೆ ಚಳಿ ಗಾಳಿಯೂ ಬೀಸುತ್ತಿದೆ. ಮಡಿಕೇರಿಯಲ್ಲಿ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆಗಸದಲ್ಲಿ ದಟ್ಟವಾಗಿ ಮೋಡಗಳು  ಕವಿದಿದ್ದು, ಮುಂಬರುವ ದಿನಗಳಲ್ಲಿ ಮಳೆ ಬಿರುಸಾಗಿ ಸುರಿಯುವ ಮುನ್ಸೂಚನೆ ಇದೆ. ಹಾರಂಗಿ ಜಲಾಶಯದ ಪ್ರದೇಶದಲ್ಲಿ 8.6 ಮಿ.ಮೀ ಮಳೆಯಾಗಿದೆ. ಜಲಾಶಯದ ಒಳಹರಿವು 111 ಕ್ಯೂಸೆಕ್ ಇದೆ.

ಗೋಣಿಕೊಪ್ಪಲು ಸುತ್ತಮುತ್ತ ಇಡೀ ದಿನ ಮಳೆ ಸುರಿಯಿತು. ಪಟ್ಟಣದಲ್ಲಿ ಭಾನುವಾರ ಸಂತೆ ದಿನವಾಗಿದ್ದು, ಇಲ್ಲಿ ಸುತ್ತಾಡುವ ಜನರ ಕೈಯಲ್ಲಿ ಛತ್ರಿಗಳು ಕಂಡುಬಂದವು. ಮಳೆಯ ನಡುವೆಯೇ ಸಂತೆ ನಡೆಯಿತು. ವಿರಾಜಪೇಟೆ, ಹಾತೂರು, ಪೊನ್ನಂಪೇಟೆ, ಕುಂದ, ಪಾಲಿಬೆಟ್ಟ ಮೊದಲಾದ ಭಾಗಗಳಿಗೆ ಉತ್ತಮ ಮಳೆಯಾಯಿತು. ಆದರೆ ಕೇರಳದ ಗಡಿಭಾಗದಲ್ಲಿರುವ ಕುಟ್ಟ, ಶ್ರೀಮಂಗಲದಲ್ಲಿ ಅಷ್ಟೇನೂ ಮಳೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT