ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ನಗರಾಭಿವೃದ್ಧಿಗೆ ಕುಡ್ಸೆಂಪ್-2: ಸೊರಕೆ

Last Updated 4 ಸೆಪ್ಟೆಂಬರ್ 2013, 7:58 IST
ಅಕ್ಷರ ಗಾತ್ರ

ಮಂಗಳೂರು: `ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ'ಯ (ಕುಡ್ಸೆಂಪ್) ಎರಡನೇ ಹಂತದಲ್ಲಿ ಮಂಗಳೂರು, ಉಡುಪಿ ಮತ್ತು ಕುಂದಾಪುರ ನಗರಗಳ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ತಿಳಿಸಿದ್ದಾರೆ.

ಪಾಲಿಕೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
`ಕರಾವಳಿಯ ಕೆಲವು ನಗರ ಹಾಗೂ ಪಟ್ಟಣಗಳಲ್ಲಿ ಕುಡ್ಸೆಂಪ್ ಮೊದಲ ಹಂತದಲ್ಲಿ ಕೈಗೊಂಡ ಒಳಚರಂಡಿ ಅಭಿವೃದ್ಧಿ ಹಾಗೂ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಪೂರ್ಣಗೊಂಡಿರಲಿಲ್ಲ. ಎರಡನೇ ಹಂತದಲ್ಲಿ ಈ ನಗರಗಳು ಸಮಗ್ರವಾಗಿ ಅಭಿವೃದ್ಧಿ ಆಗಲಿವೆ.' ಎಂದರು.

`ನಗರಾಭಿವೃದ್ಧಿಗೆ ಕೇಂದ್ರ ಸರ್ಕಾರ, ವಿಶ್ವಬ್ಯಾಂಕ್ ಹಾಗೂ ಹುಡ್ಕೊ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ. ಕೇಂದ್ರ ನಗರಾಭಿವೃದ್ಧಿ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ಆಗಿರುವ, ರಾಜ್ಯದವರೇ ಆದ ಸುಧೀರ್‌ಕೃಷ್ಣ ಅವರಿಂದ ಸಲಹೆ ಪಡೆದು ಪ್ರಸ್ತಾವ ಸಲ್ಲಿಸಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ರೂ 10 ಸಾವಿರ ಕೋಟಿ ಅನುದಾನ ಮಂಜೂರಾಗಲಿದೆ. 2040ರ ಪರಿಸ್ಥಿತಿಯನ್ನು ಮಾನದಂಡವನ್ನಾಗಿ ಇಟ್ಟುಕೊಂಡು ನಗರ ಮಹಾ ಯೋಜನೆಗಳನ್ನು ಮರು ರೂಪಿಸಲಾಗುವುದು' ಎಂದರು.

`ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಅಭಿಯಾನ (ಜೆಎನ್‌ನರ್ಮ್) ಜಾರಿಗೆ ಈಗ ನಗರದ ಜನಸಂಖ್ಯೆ ಮಾನದಂಡವಲ್ಲ. ಹಾಗಾಗಿ, ಈ ಯೋಜನೆಯಡಿ ಮಂಗಳೂರು ಪಾಲಿಕೆಯನ್ನೂ ಸೇರಿಸಿ, ಇಲ್ಲಿನ ಖಾಸಗಿ ಬಸ್‌ನಿಲ್ದಾಣ ಅಭಿವೃದ್ಧಿಗೂ ಅನುದಾನ ಒದಗಿಸಲಾಗುವುದು. ಮಂಗಳೂರಿಗೆ ಮತ್ತೆ 100 ಕೋಟಿ ರೂಪಾಯಿಯ ವಿಶೇಷ ಅನುದಾನ ನೀಡಲಾಗುವುದು. ಹೊಂಡ ಮುಚ್ಚುವುದಕ್ಕೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದರು.

`ನಗರಾಭಿವೃದ್ಧಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮಂಗಳೂರು ಪಾಲಿಕೆಯಲ್ಲೇ 1,041 ಹುದ್ದೆಗಳು ಖಾಲಿ ಇವೆ. ಹುದ್ದೆಗಳಿಗೆ ಎರವಲು ಸೇವೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ. ಪೌರ ಕಾರ್ಮಿಕರು ಸಹಿತ ಇತರ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸುತ್ತೇವೆ' ಎಂದರು.

ಸಾಮರ್ಥ್ಯ ವೃದ್ಧಿ:
`ಅಧಿಕಾರಿಗಳ ಸಾಮರ್ಥ್ಯ ವೃದ್ಧಿವಾಗಿ ಮಂಗಳೂರು ಪಾಲಿಕೆ ಮತ್ತು ಉಡುಪಿ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಾಲ್ಕು ವರ್ಷ ಕಾಲ ವಿವಿಧ ಹಂತದಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿ ನೀಡಲಾಗುವುದು. ಮೈಸೂರಿನಂತೆ ರಾಜ್ಯದ ಎಲ್ಲಾ ಪಾಲಿಕೆಗಳಲ್ಲೂ ವಾರ್ಡ್ ಸಮಿತಿ, ಸ್ಥಳೀಯ ನಾಗರಿಕರ ಸಮಿತಿ ಹಾಗೂ ಸಲಹಾ ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ' ಎಂದರು.

ಭ್ರಷ್ಟಾಚಾರಕ್ಕೆ ಕಡಿವಾಣ:
`ನಗರ ಪ್ರದೇಶದಲ್ಲಿ ಡಿನೋಟಿಫಿಕೇಷನ್ ಅನ್ನು ಸರ್ಕಾರ ಸಂಪೂರ್ಣ ನಿಲ್ಲಿಸಿದೆ. 7 ಮಂದಿ ಸಮರ್ಥ ಐಎಎಸ್ ಅಧಿಕಾರಿಗಳನ್ನು ಇಲಾಖೆಗೆ ನೇಮಿಸ್ದ್ದಿದು, ಭ್ರಷ್ಟಾಚಾರಕ್ಕೆ ಹಂತ ಹಂತವಾಗಿ ಕಡಿವಾಣ ಹಾಕಲಾಗುವುದು' ಎಂದರು.
ಪಾಲಿಕೆ ಆಯುಕ್ತ ಎಸ್.ಅಜಿತ್ ಕುಮಾರ್ ಹೆಗ್ಡೆ ಮತ್ತಿತರ ಅಧಿಕಾರಿಗಳು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT