ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕರಾವಳಿ ಪ್ರವಾಸೋದ್ಯಮ ಅಡ್ಡಿ ನಿವಾರಣೆ'

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ: `ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ'ಗೆ ಅಡ್ಡಿಯಾಗಿರುವ ನಿರ್ಬಂಧಗಳನ್ನು ಸಡಿಲಪಡಿಸಬೇಕೆಂಬ ಪ್ರಸ್ತಾವನೆ ಕುರಿತು ಪ್ರಧಾನಿ ಕಚೇರಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಜತೆ ಚರ್ಚಿಸುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಗುರುವಾರ ಭರವಸೆ ನೀಡಿದೆ.

ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ `ಕರಾವಳಿ ಪ್ರದೇಶದ ನಿರ್ಬಂಧ' (ಸಿಆರ್‌ಜೆಡ್) ಸಡಿಲಿಸುವ ಕುರಿತು ಪ್ರಧಾನಿ ಕಚೇರಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಜತೆ ಚರ್ಚಿಸುವುದಾಗಿ ಪ್ರವಾಸೋದ್ಯಮ ಸಚಿವ ಚಿರಂಜೀವಿ ಭರವಸೆ ನೀಡಿದ್ದಾರೆ ಎಂದರು.

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಿರುವ ಡಾ.ಸ್ವಾಮಿನಾಥನ್ ಸಮಿತಿ 7 ಮಾನದಂಡಗಳನ್ನು ನಿಗದಿಪಡಿಸಿ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರ `ಸಿಆರ್‌ಜೆಡ್' ನಿರ್ಬಂಧಗಳನ್ನು ಸಡಿಲಗೊಳಿಸಿದರೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಇದರಿಂದ ಎಲ್ಲ ರಾಜ್ಯಗಳಿಗೂ ಅನುಕೂಲವಾಗಲಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಇದೇ ತಿಂಗಳ 31ರೊಳಗೆ ಕೇಂದ್ರಕ್ಕೆ ಸಲ್ಲಿಸಲಿದೆ ಎಂದು ತಿಳಿಸಿದರು.

ನೆರವಿನ ಭರವಸೆ: ರಾಜ್ಯದ ಎರಡು `ವಿಶ್ವ ಪರಂಪರೆ ತಾಣ'ಗಳಾದ ಹಂಪಿ ಮತ್ತು ಪಟ್ಟದಕಲ್‌ಗೆ ಬರುವ ಪ್ರವಾಸಿಗರಿಗೆ `ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ಒದಗಿಸುವ ರಾಜ್ಯದ ಯೋಜನೆಗೆ ಹಣಕಾಸು ನೆರವು ನೀಡುವುದಾಗಿ ಚಿರಂಜೀವಿ ಭರವಸೆ ನೀಡಿದ್ದಾರೆ. ಹೋಟೆಲ್, ವಸತಿ ಗೃಹ, ಮಾಹಿತಿ ಕೇಂದ್ರ ಸೇರಿ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಪ್ರವಾಸಿಗರಿಗೆ ದೊರೆಯಲಿದೆ.

ರಾಜ್ಯದ ಬಜೆಟ್‌ನಲ್ಲಿ ಪ್ರಕಟಿಸಿರುವ ಯೋಜನೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸುವುದಾಗಿ ದೇಶಪಾಂಡೆ ಹೇಳಿದರು. ಕರ್ನಾಟಕದ ಪ್ರವಾಸಿ ತಾಣಗಳಿಗೆ ವಿಮಾನ ಸೇವೆ ಒದಗಿಸುವ ಸಂಬಂಧ ಮನವಿ ಮಾಡಲಾಗಿದೆ. ಮೈಸೂರು, ಬೆಳಗಾವಿ ಹಾಗೂ ತೋರಣಗಲ್‌ಗೆ ವಿಮಾನ ಸೇವೆ ಆರಂಭಿಸುವುದರಿಂದ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಾಗಲಿದೆ. ವಿಮಾನಯಾನ ಸಚಿವಾಲಯದ ಜತೆ ಚರ್ಚಿಸುವುದಾಗಿ ಪ್ರವಾಸೋದ್ಯಮ ಸಚಿವಾಲಯ ಆಶ್ವಾಸನೆ ನೀಡಿದೆ ಎಂದು ನುಡಿದರು.

ಪ್ರವಾಸಕ್ಕಾಗಿ ಬರುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ತಾಣಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸಲಹೆ ಮಾಡಿದೆ. ರಾಜ್ಯ ಸರ್ಕಾರ ಮಹಿಳಾ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT