ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಪ್ರವಾಸೋದ್ಯಮ: ಸಿಎಂ ಚಿತ್ತ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಉಡುಪಿ: ಕರ್ನಾಟಕದ ಕರಾವಳಿಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ `ಗೋವಾ ಮಾದರಿ~ಯತ್ತ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಒಲವು ತೋರಿಸಿದರೆ, ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ಅಂತಹ `ಹಿಪ್ಪಿ ಸಂಸ್ಕೃತಿ~ ಬೇಡವೇ ಬೇಡ ಎಂದಿದ್ದಾರೆ.

ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಇತರೆ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಸ್ಪ್ರಿಂಗ್ ಝೂಕ್~ ಐಲ್ಯಾಂಡ್ ಫೆಸ್ಟ್ ಆಯೋಜನೆಯನ್ನು  ಸದಾನಂದ ಗೌಡರು, `ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿದೇಶಿಯರನ್ನು ಆಕರ್ಷಿಸಲು ಇಂತಹ ಉತ್ಸವ ಅನಿವಾರ್ಯ~ ಎಂದು ಇಲ್ಲಿ ಸಮರ್ಥಿಸಿಕೊಂಡಿದ್ದಾರೆ.

ವಿಶ್ವಕರ್ಮ ಒಕ್ಕೂಟ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿಗಳು ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದರು.

`ನೆರೆಯ ಗೋವಾ ಮತ್ತು ಕೇರಳದಲ್ಲಿ ಆಗಿರುವಂತೆ ನಮ್ಮ ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಹೀಗಾಗಿ  ಕರಾವಳಿ ಭಾಗದ 350 ಕಿ.ಮೀ. ಉದ್ದಕ್ಕೂ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಉದ್ಯೋಗ ಸೃಷ್ಟಿಸಿ, ಆದಾಯ ಗಳಿಸುವುದರೊಂದಿಗೆ ಕರಾವಳಿಯನ್ನು ಪ್ರವಾಸೋದ್ಯಮದ ಶೋಕೇಸ್ ಮಾಡಬೇಕು ಎನ್ನುವುದು ಸರ್ಕಾರದ ನಿಲುವು. ಆ ಹಿನ್ನೆಲೆಯಲ್ಲಿ ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಗೀತೋತ್ಸವ ಆಯೋಜಿಸಲಾಗಿದೆ.

ಯಾರೋ ಆಗದವರು ಸರ್ಕಾರದ ಇಂತಹ ಪ್ರಯತ್ನಗಳನ್ನು ಸಹಿಸದೇ ಅಭಿವೃದ್ಧಿಗೆ ಕಲ್ಲು ಹಾಕುವ ಯತ್ನ ಮಾಡುತ್ತಿದ್ದಾರೆ. ಅದನ್ನು ನಾವು ಸಹಿಸುವುದಿಲ್ಲ~ ಎಂದು ಎಚ್ಚರಿಸಿದರು.

`ಇಂಥದ್ದೊಂದು ಉತ್ಸವವನ್ನು ಮೊದಲ ಬಾರಿಗೆ ಇಲ್ಲಿ ಹಮ್ಮಿಕೊಂಡಿದ್ದರಿಂದ ಒಂದಷ್ಟು ತಪ್ಪುಗಳು ನಡೆದಿವೆ. ಸಣ್ಣಪುಟ್ಟ ಲೋಪಗಳಾಗಿವೆ. ಅದನ್ನು ಮುಂದೆ ಸರಿಪಡಿಸಿಕೊಳ್ಳುತ್ತೇವೆ. ಆದರೆ ಅದನ್ನೇ ಮಾಧ್ಯಮದವರು ದೊಡ್ಡ ಸಂಗತಿ, ಭಾರಿ ಅನಾಹುತ, ಅನೈತಿಕತೆ ನಡೆದಿದೆ ಎನ್ನುವಂತೆ ಹುಯಿಲೆಬ್ಬಿಸುವುದು ಸರಿಯಲ್ಲ. ಅಂತಹ ಯಾವುದೇ ಅನೈತಿಕತೆ ಇಲ್ಲಿ ನಡೆದಿಲ್ಲ, ಜಿಲ್ಲಾಡಳಿತ ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ~ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಭ್ಯತೆ ಮೀರಿ ಬೇಡ-ಮೊಯಿಲಿ: ಇದೇ ವೇಳೆ, ವಿಶ್ವಕರ್ಮ ಒಕ್ಕೂಟದ ಸಮಾರೋಪದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಅವರು ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರ ಜತೆ ಮಾತನಾಡಿ, `ಸಂಸ್ಕತಿ, ಕಾನೂನು ಮೀರಿ ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಬೇಡ. ವಿದೇಶಿ ಸಂಸ್ಕೃತಿಯನ್ನು, ದೇಶಿಯ ಪ್ರವಾಸೋದ್ಯಮದಲ್ಲಿ ತರುವುದು ಸರಿಯಲ್ಲ, ವಿದೇಶಿಯರ ಹಿಪ್ಪಿ ಸಂಸ್ಕೃತಿ ಇಲ್ಲಿಗೆ ಅಗತ್ಯವಿಲ್ಲ~ ಎಂದು ಅಭಿಪ್ರಾಯಪಟ್ಟರು.

`ಸಂಸ್ಕೃತಿ ವಿನಿಮಯದ ಹೆಸರಿನಲ್ಲಿ ಸೈಂಟ್ ಮೇರೀಸ್ ದ್ವೀಪದಲ್ಲಿ ವಿದೇಶಿಯರಿಂದ ಮಿತಿ ಮೀರಿದ ವರ್ತನೆಗಳು ನಡೆಯುತ್ತಿವೆ ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ ಕರಾವಳಿಯ ಪ್ರವಾಸೋದ್ಯಮ ಕೇರಳ ಹಾಗೂ ಗೋವಾದಲ್ಲಿ ಅಭಿವೃದ್ಧಿಯಾದಷ್ಟು ಇಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವುದು ನಿಜ~ ಎಂದರು.

ಹಿಪ್ಪಿ ಸಂಸ್ಕೃತಿ ತಡೆಯಬೇಕು ಎನ್ನುವುದು ಗೋವಾದಲ್ಲಿ ಕೂಡ ಚರ್ಚೆಯಾಗಿದೆ. ಭಾರತೀಯ ಸಂಸ್ಕೃತಿ ಉತ್ತೇಜಿಸಬೇಕು, ವಿದೇಶದಲ್ಲಿ ನಡೆಸುವುದನ್ನೇ ಇಲ್ಲಿ ನಡೆಸಿದರೆ ಅವರು ಇಲ್ಲಿಗೆ ಬರಬೇಕಾದ ಅಗತ್ಯ ಕೂಡ ಇಲ್ಲ. ಸಭ್ಯತೆ, ಕಾನೂನು ಮೇರೆ ಮೀರಿ ಪ್ರವಾಸೋದ್ಯಮ ಬೇಡ. ಸಭ್ಯತೆಯ ಎಲ್ಲೆ ಮೀರದಂತೆ, ನಮ್ಮ ಸಂಸ್ಕೃತಿಗೆ, ಕಾನೂನು ಕಟ್ಟಳೆ ಮೀರದಂತೆ ನೋಡಿಕೊಳ್ಳಬೇಕಾದ್ದು ಜಿಲ್ಲಾಡಳಿತ, ಪೊಲೀಸ್ ಕರ್ತವ್ಯ ಎಂದರು.

ಮಾಸ್ಟರ್‌ಪ್ಲ್ಯಾನ್ ಬೇಕು: ಕರ್ನಾಟಕದ ಕರಾವಳಿ ಮಂಗಳೂರು, ಉಡುಪಿ, ಕಾರವಾರದವರೆಗೆ ಯಾವ ರೀತಿ ಈ ಪ್ರವಾಸೋದ್ಯಮ ಬೆಳೆಸಬೇಕು ಎಂದು ನಾವು `ಮಾಸ್ಟರ್ ಪ್ಲ್ಯಾನ್~ ಮಾಡಬೇಕು ಎಂದು ಹೇಳಿದ ಮೊಯಿಲಿ, ಈ ಬಗ್ಗೆ  ಕೇಂದ್ರದ ಪ್ರವಾಸೋದ್ಯಮ ಸಚಿವರ ಬಳಿ  ತಾವು ಇತ್ತೀಚೆಗೆ ಮಾತನಾಡಿದ್ದಾಗಿ ಹೇಳಿದರು. ಹೀಗಾಗಿ ಕೇಂದ್ರದ ಪ್ರವಾಸೋದ್ಯಮ ಸಚಿವರು ಶೀಘ್ರವೇ ಮಂಗಳೂರು ಇಲ್ಲವೇ ಬೆಂಗಳೂರಿಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ ಎಂದರು.

`ನಮ್ಮ ರಾಜ್ಯಕ್ಕೆ ಕೂಡ ತನ್ನದೇ ಆದ ಪ್ರವಾಸೋದ್ಯಮ ನೀತಿ ಬೇಕು. ಅದು ನಮ್ಮ ಸಂಸ್ಕೃತಿಕೆಗೆ  ಮಾರಕವಾಗಬಾರದು. ನಮ್ಮ ಯುವಜನರಿಗೆ ಉತ್ತೇಜನ ನೀಡುವಂತಿರಬೇಕು~ ಎಂದು ಮೊಯಿಲಿ ಅಭಿಪ್ರಾಯಪಟ್ಟರು.
 
ವಿದೇಶಿಯರ ಹಿಪ್ಪಿ ಸಂಸ್ಕೃತಿ ಇಲ್ಲಿಗೆ ಅಗತ್ಯವಿಲ್ಲ
ಸಂಸ್ಕತಿ, ಕಾನೂನು ಮೀರಿ ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಬೇಡ. ವಿದೇಶಿ ಸಂಸ್ಕೃತಿಯನ್ನು, ದೇಶಿಯ ಪ್ರವಾಸೋದ್ಯಮದಲ್ಲಿ ತರುವುದು ಸರಿಯಲ್ಲ, ವಿದೇಶಿಯರ ಹಿಪ್ಪಿ ಸಂಸ್ಕೃತಿ ಇಲ್ಲಿಗೆ ಅಗತ್ಯವಿಲ್ಲ~ 
- ಎಂ.ವೀರಪ್ಪ ಮೊಯಿಲಿ, ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ
 

ಅನೈತಿಕತೆ
ಭಾರತೀಯ ಸಂಸ್ಕೃತಿ ಬಗ್ಗೆ ನೈತಿಕತೆಯ ಪಾಠ ಹೇಳುವ ಸಂಘಪರಿವಾರ ಕೃಪಾಪೋಷಿತ ಬಿಜೆಪಿ ಸರ್ಕಾರ ಅನೈತಿಕತೆಗೆ ಅವಕಾಶ ನೀಡುತ್ತಿದೆ. ಇದಕ್ಕೆ ಮಲ್ಪೆಯ ದ್ವೀಪದಲ್ಲಿ 2 ದಿನಗಳಿಂದ ನಡೆಯುತ್ತಿರುವ ರೇವ್ ಪಾರ್ಟಿಯೇ ಸಾಕ್ಷಿ~ 
  -ಎಚ್.ಡಿ.ಕುಮಾರ ಸ್ವಾಮಿ , ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT