ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಲ್ಲಿ ಸಾಧಾರಣ ಮಳೆ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾನುವಾರ ಸಾಧಾರಣವಾಗಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಹಾನಿ ಸಂಭವಿಸಿದೆ.

ಕೊಡಗು ಜಿಲ್ಲೆಯಾದ್ಯಂತ ದಿನವಿಡೀ ಮಳೆ ಸುರಿಯಿತು.  ಸರಾಸರಿ 35.1 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 33.85 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 62.92 ಮಿ.ಮೀ ಹಾಗೂ ಸೋಮವಾರ ಪೇಟೆ ತಾಲ್ಲೂಕಿನಲ್ಲಿ 8.42 ಮಿ.ಮೀ ಮಳೆಯಾಗಿದೆ.

ಮೂಡಿಗೆರೆ ಪಟ್ಟಣದಲ್ಲಿ ಭಾನುವಾರ ಬಿದ್ದ ಭಾರಿ ಮಳೆಗೆ ಛತ್ರ ಮೈದಾನ ನಿವಾಸಿ ನಾಗಮ್ಮ ಎಂಬುವವರ ಮನೆ ಕುಸಿದು ನಷ್ಟ ಸಂಭವಿಸಿದೆ. ಶನಿವಾರ ರಾತ್ರಿ ಬಿದ್ದ ಭಾರೀ ಮಳೆಗೆ ಬಿಳಗುಳ ನಿವಾಸಿ ಭವಾನಿಯಮ್ಮ ಅವರ ಮನೆ ಸಂಪೂರ್ಣ ಕುಸಿದಿದೆ.

ಆಲ್ದೂರು ಸಮೀಪ ರಸ್ತೆ ಬದಿಯಿದ್ದ ಬೃಹತ್ ಮರವೊಂದು ನಿಂತ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡು ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಾಳೆಹೊನ್ನೂರು ಸುತ್ತಮುತ್ತ ಹಾಗೂ ಶೃಂಗೇರಿ ತಾಲ್ಲೂಕಿನಲ್ಲೂ ಮಳೆಯಾಗಿದೆ.

ದ.ಕ.ಜಿಲ್ಲೆಯಲ್ಲಿ ಯಥಾ ಸ್ಥಿತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಂತೆ ಭಾನುವಾರವೂ ಆಗಾಗ್ಗೆ ತುಂತುರು ಮಳೆಯಾಗಿದೆ. ಉಡುಪಿಯಲ್ಲೂ ಮಳೆಯ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.

ಉತ್ತರ ಕರ್ನಾಟಕದ ಧಾರವಾಡ, ಗದಗ, ಬೆಳಗಾವಿ, ವಿಜಾಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಎಲ್ಲ ಕರಾವಳಿ ತಾಲ್ಲೂಕುಗಳಲ್ಲಿ ಮಳೆ ಮುಂದುವರಿದಿದೆ. ಘಟ್ಟ ಪ್ರದೇಶಗಳಾದ ಶಿರಸಿ, ಸಿದ್ದಾಪುರದಲ್ಲಿಯೂ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ. ಆದರೆ ಶನಿವಾರದ ಮಳೆಗೆ ಲಿಂಗನಮಕ್ಕಿ ಜಲಾಶಯದ ಒಳಹರಿವು 5,624 ಕ್ಯೂಸೆಕ್‌ಗೆ ಏರಿದೆ. ಹಾಗೆಯೇ, ಭದ್ರಾ ಜಲಾಶಯದ ಒಳಹರಿವು 8,006 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ಮೋಡ ಕವಿದ ವಾತಾವರಣವಿತ್ತು. ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ತುಂತುರು ಮಳೆಯಾಯಿತು. ಹಾಸನ ನಗರ ಮತ್ತು ಜಿಲ್ಲೆಯ ವಿವಿಧೆಡೆ ಸಾಧಾರಣವಾಗಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT