ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ: ಮುಂಗಾರು ತೀವ್ರ

Last Updated 7 ಜೂನ್ 2011, 10:20 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ತೀವ್ರಗೊಂಡಿದ್ದು, ಸೋಮವಾರ ದಿನವಿಡೀ ಬಿರುಸಿನ ಮಳೆಯಾಗಿದೆ. ಕೆಲವೆಡೆ ಮರಬಿದ್ದು, ಹಾನಿ ಸಂಭವಿಸಿದೆ. ಮಂಗಳೂರು ನಗರದ ತಗ್ಗು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ಜನತೆ ಸಂಕಷ್ಟ ಅನುಭವಿಸಿದರು.

ಸೋಮವಾರ ಬೆಳಿಗ್ಗೆವರೆಗೆ, 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ ಮಳೆ (208.3 ಮಿ.ಮೀ) ಮಳೆಯಾಗಿದ್ದು, ಸುಳ್ಯ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ (62 ಮಿ.ಮೀ) ಇದೆ. ಉಳಿದಂತೆ ಬಂಟ್ವಾಳ ತಾಲ್ಲೂಕಿನಲ್ಲಿ 186.8 ಮಿ.ಮೀ, ಬೆಳ್ತಂಗಡಿ ತಾಲ್ಲೂಕಿನಲ್ಲಿ 99.2 ಮಿ.ಮೀ ಹಾಗೂ ಪುತ್ತೂರು ತಾಲ್ಲೂಕಿನಲ್ಲಿ 69.2 ಮಿ.ಮೀ ಮಳೆ ಸುರಿದಿದೆ.

ಜೋಕಟ್ಟೆ ಆವರಣ ಗೋಡೆ ಕುಸಿತ: ಜೋಕಟ್ಟೆಯಲ್ಲಿ ಎಂಎಸ್‌ಇಜೆಡ್‌ಗಾಗಿ ಭೂಸ್ವಾಧೀನ ನಡೆಯದ ಪ್ರದೇಶದಲ್ಲಿರುವ ಮನೆ ನಿವಾಸಿಗಳು ಮಳೆಯಿಂದ ತೊಂದರೆ ಅನುಭವಿಸಿದರು.

`ಈ ಪ್ರದೇಶದಲ್ಲಿ 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ರಮೇಶ ಆಚಾರ್ಯ ಹಾಗೂ ಹರೀಶ ಬಂಗೇರ ಅವರ ಮನೆಯ ಆವರಣ ಗೋಡೆ ಕುಸಿದಿದೆ~ ಎಂದು ಸ್ಥಳೀಯ ನಿವಾಸಿ ಗಿರೀಶ್ `ಪ್ರಜಾವಾಣಿ~ಗೆ ತಿಳಿಸಿದರು.
`ಈ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಮರ್ಪಕ ತೋಡಿನ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ~ ಎಂದು ಅವರು ದೂರಿದರು.

ಉರುಳಿದ ಮರ: ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ಇನ್ನೊಂದು ಕಂಬ  ವಾಲಿಕೊಂಡು ನಿಂತಿದೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮನೆಯೊಳಗೆ ನೀರು: ನಗರದ ಕೊಟ್ಟಾರಚೌಕಿ, ಕೊಡಿಯಾಲ್‌ಬೈಲ್, ಕದ್ರಿ, ಅರೆಕ್ಕೆರೆಬೈಲ್ ಪರಿಶಿಷ್ಟರ ಕಾಲೊನಿ, ಮಣ್ಣಗುಡ್ಡೆ, ಪ್ರಭಾತ್ ಟಾಕೀಸ್ ಪರಿಸರ ಹಾಗೂ ಅತ್ತಾವರದ ತಗ್ಗು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗಿದ್ದು, ಈ ಮಳೆಗಾಲದಲ್ಲೂ ನಗರ ನಿವಾಸಿಗಳ ಗೋಳು ಮುಂದುವರಿದಿದೆ.

ಬೆಳ್ತಂಗಡಿ: ಜಿಟಿಜಿಟಿ ಮಳೆ
ಬೆಳ್ತಂಗಡಿ:
ಸೋಮವಾರ ತಾಲ್ಲೂಕಿನಾದ್ಯಂತ ಜಿಟಿ ಜಿಟಿ ಮಳೆಯಾಗಿದೆ. ಧರ್ಮಸ್ಥಳದಲ್ಲಿ ಯಾತ್ರಿಕರ ಸಂಖ್ಯೆ ಅಧಿಕವಾಗಿದ್ದು ಬೆಂಗಳೂರು, ಮೈಸೂರು ಕಡೆಯಿಂದ ಬಂದ ಭಕ್ತರು ಕೊಡೆ ಇಲ್ಲದೆ ಜಿಲ್ಲೆಯ ಸೊಗಡನ್ನು ಅನಿವಾರ್ಯವಾಗಿ ಅನುಭವಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT