ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗೆ ‘ಸುಪಾರಿ’ಯ ಕರಿನೆರಳು...

ಪತ್ತೆಯಾಗದ ಹತ್ಯೆ ಪ್ರಕರಣಗಳು– ಪೊಲೀಸ್‌ ವೈಫಲ್ಯ ಟೀಕೆ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳ ಮೇಲೆ ಭೂಗತ ಪಾತಕಿಗಳ ಕರಿನೆರಳು ಬಿದ್ದಿದ್ದು, ಗುಂಡಿನ ದಾಳಿಗೆ ಅಂತ್ಯವೇ ಇಲ್ಲ­ದಂತಾಗಿದೆ. ಇದರಿಂದಾಗಿ ಸಾರ್ವ­ಜನಿಕ ಬದುಕಿನಲ್ಲಿ ತೊಡಗಿಸಿ ಕೊಂಡಿ­ರುವವರಲ್ಲಿ ಭಯ ಮೂಡಿದೆ.

ಶುಕ್ರವಾರ ಅಂಕೋಲಾದಲ್ಲಿ ನಡೆದ ಉದ್ಯಮಿ ಆರ್‌.ಎನ್‌. ನಾಯಕ ಹತ್ಯೆಯು ಉದ್ಯಮಿಗಳಲ್ಲಿ ನಡುಕ ಹುಟ್ಟಿಸಿದೆ. ಜಿಲ್ಲೆಯಲ್ಲಿ ನಡೆದಿರುವ ಸುಪಾರಿ ಹತ್ಯೆಗಳ ಸರಣಿ ನೋಡಿದರೆ ಎಲ್ಲವೂ ರಾಜಕೀಯ ಹಾಗೂ ಹಣಕ್ಕಾಗಿಯೇ ನಡೆದಿರುವುದು ಸತ್ಯ. ಈ ಎಲ್ಲ ಹತ್ಯೆಗಳಲ್ಲಿ ಮುಂಬೈನ ಭೂಗತ ಪಾತಕಿಗಳ ಕೈವಾಡ ಇರು­ವುದನ್ನು ಅಲ್ಲಗಳೆಯು ವಂತಿಲ್ಲ. 90ರ ದಶಕದ ಉತ್ತರಾರ್ಧ­ದಿಂದ ಪಾತಕಿಗಳ ಅಟ್ಟಹಾಸಕ್ಕೆ ಜಿಲ್ಲೆ ವೇದಿಕೆ­ಯಾಗು­ತ್ತಲೇ ಬಂದಿದೆ.

ಆಗ ಅದಿರು ರಫ್ತು ವಹಿವಾಟು ಜೋರಾಗಿದ್ದ ಕಾಲ. ಅದಿರು ವಹಿವಾಟಿಗೆ ಕೈಹಾಕಿದ­ವರೆಲ್ಲ ದಿಢೀರ್‌ ಶ್ರೀಮಂತರಾದರು. ಈ ಅಧಿಕೃತ ಹಾಗೂ ಅನಧಿಕೃತ ವಹಿ­ವಾಟು ಹಾಗೂ ಹಣದ ಮೇಲೆ ಭೂಗತ ಪಾತಕಿಗಳ ಕಣ್ಣು ಬೀಳಲು ಹೆಚ್ಚು ದಿನ ಬೇಕಾಗಲಿಲ್ಲ. ಪಾತಕಿಗಳು ಹಫ್ತಾ ನೀಡುವಂತೆ ಉದ್ಯಮಿಗಳಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಲು ಆರಂ­ಭಿಸಿ­ದರು. ಇದರಲ್ಲಿ ಅಂಕೋಲಾದ ಆರ್‌. ಎನ್‌. ನಾಯಕ ಸಹ ಒಬ್ಬರು.

ಕಾಂಗ್ರೆಸ್‌ನೊಂದಿಗೆ ಇದ್ದ ಯುವ ನಾಯಕ ಆನಂದ್ ಅಸ್ನೋಟಿಕರ ಮೂರು ವರ್ಷಗಳ ಹಿಂದೆ ಬಿಜೆಪಿಗೆ ಜಿಗಿದರು. ಅಂಕೋಲಾ ಹಾಗೂ ಕಾರವಾರ ಬಂದರಿನ ಮೂಲಕ ಅದಿರು ಸಾಗಿಸುವ ಕಾಯಕದಲ್ಲಿ ಮುಂಚೂಣಿ­ಯಲ್ಲಿದ್ದ ನಾಯಕರಿಗೆ ಅದುವೇ ಮುಳುವಾಗಿದೆ ಎನ್ನುತ್ತಾರೆ ಅಂಕೋಲಾದ ಜನತೆ.

ಈ ಸುಪಾರಿ ನೀಡುವ ಪ್ರಕ್ರಿಯೆ ಮಲೆನಾಡು ಭಾಗವಾದ ಯಲ್ಲಾ­ಪುರಕ್ಕೂ ವ್ಯಾಪಿಸಿತ್ತು. ಈಗ ಶಾಸಕ­ರಾಗಿರುವ ಶಿವರಾಂ ಹೆಬ್ಬಾರ್‌ ಮೇಲೆ ಮೂರು ವರ್ಷಗಳ ಹಿಂದೆ ದುಷ್ಕರ್ಮಿ­ಗಳು ಗುಂಡಿನ ದಾಳಿ ನಡೆಸಿದ್ದರು. ನಂತರ ಅದು ಅಲ್ಲಿಗೇ ನಿಂತಿತು. ಜಿಲ್ಲೆಯ ಕರಾವಳಿ ತಾಲ್ಲೂಕು­ಗಳಲ್ಲಿ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಗುಂಡೇಟಿಗೆ ಬಲಿಯಾದ ಪಟ್ಟಿಯೇ ದೊಡ್ಡದಿದೆ.

ಭಟ್ಕಳದ (ಬಿಜೆಪಿ) ಶಾಸಕ ಡಾ.ಯು. ಚಿತ್ತರಂಜನ್‌ ಅವರು 1996ರ ಏಪ್ರಿಲ್‌ 10ರಂದು  ದುಷ್ಕರ್ಮಿಗಳ ಗುಂಡೇಟಿಗೆ ಬಲಿ­ಯಾದರು.  2000ರ ಫೆಬ್ರುವರಿ 19­ರಂದು ಶಾಸಕ ವಸಂತ ಅಸ್ನೋಟಿಕರ ಅವರನ್ನು ಕಾರವಾರದಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆ ಪ್ರಕರಣದ ಶಂಕಿತ ಆರೋಪಿ ಉದ್ಯಮಿ ದಿಲೀಪ್‌ ನಾಯ್ಕನನ್ನೂ ಕೂಡ 2004ರಲ್ಲಿ ಕಾರವಾರದಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಯಿತು. ಇದರ ಮಧ್ಯೆ 2006ರಲ್ಲಿ ಭಟ್ಕಳದ ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಹತ್ಯೆಯಾಗಿತ್ತು.

ಸಿಬಿಐ ಬಂಧನದಲ್ಲಿರುವ ಅಂಕೋಲಾ –­ ­ಕಾರವಾರ ಕ್ಷೇತ್ರದ ಶಾಸಕ ಸತೀಶ್‌ ಸೈಲ್‌ ಅವರಿಗೂ ಕೂಡ ಜೀವ ಬೆದರಿಕೆಗಳಿವೆ. ಒಂದು ವರ್ಷದ ಹಿಂದೆ ಸತೀಶ ಸೈಲ್‌ ಅವರ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬೆದರಿಕೆ ಹಾಕಿದ್ದರು. ಈ ದಾಳಿಯ ಹಿಂದೆ ಬನ್ನಂಜೆ ರಾಜಾನ ಸಹಚರರ ಕೈವಾಡವಿರುವ ಬಗ್ಗೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕಾರವಾರದಲ್ಲಿ ಕಳೆದ ತಿಂಗಳು ಉದ್ಯಮಿ ಉಲ್ಲಾಸ್‌ ನೇತಲ್‌ಕರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯೂ ನಡೆದಿತ್ತು.

ಪೊಲೀಸ್‌ ನಿಷ್ಕ್ರಿಯತೆ
ಜಿಲ್ಲೆಯಲ್ಲಿ ಈವರೆಗೆ ಹತ್ಯೆ­ಯಾದವರಲ್ಲಿ ಶಾಸಕ ಡಾ. ಯು. ಚಿತ್ತರಂಜನ್‌ ಹಾಗೂ ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಪ್ರಕರಣದಲ್ಲಿ ಹಂತಕರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹಿಂದೆ ನಡೆದ ಗುಂಡಿನ ದಾಳಿಯ ಅನೇಕ ಪ್ರಕರಣಗಳಲ್ಲಿ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT