ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಚಿನ್ನದ ಚಿಗರೆ- ಅಶ್ವಿನಿ

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


‘ಆ ದಿನಕ್ಕಾಗಿ ನಾವು ಕಾತರದಿಂದ ಕಾಯುತ್ತಿದ್ದೆವು. ಆ ದಿನ ಆಕೆಗಿಂತ ಹೆಚ್ಚು ಉದ್ವೇಗಕ್ಕೆ ಒಳಗಾಗಿದ್ದು, ಮನೆಯವರೇ. ನಿಜ ಹೇಳಬೇಕೆಂದರೆ ಆಕೆಯೇ ಮನೆಯವರಿಗೆಲ್ಲ ಧೈರ್ಯ ಹೇಳುತ್ತಿದ್ದಳು. ಆಕೆಗೆ ಯಾವುದಾದರೂ ಒಂದು ಪದಕ ಲಭಿಸಬಹುದು ಎಂಬುದಷ್ಟೇ ನಮ್ಮ ನಿರೀಕ್ಷೆಯಾಗಿತ್ತು. ಆದರೆ ಆಕೆಯೆ ಕೈಗೆ ಬೇಟನ್ ಸಿಕ್ಕ ಬಳಿಕ ನಡೆದದ್ದೇ ಬೇರೆ....

-ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ 4x400 ಮೀ. ರಿಲೇ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯದ ಕ್ರೀಡಾ ತಾರೆ, ಅಪ್ಪಟ ಹಳ್ಳಿಯ ಪ್ರತಿಭೆ ಅಶ್ವಿನಿಯ ಹೆತ್ತವರು ಎಲ್ಲರ ನಿರೀಕ್ಷೆಯನ್ನೂ ಮೀರಿ ಮಗಳು ‘ಚಿನ್ನದ ಪದಕ’ಕ್ಕೆ ಮುತ್ತಿಕ್ಕಿದ ಕ್ಷಣದ ಸಂಭ್ರಮ ಹಂಚಿಕೊಂಡಿದ್ದು ಹೀಗೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಕಳೆದ 50 ವರ್ಷದಲ್ಲಿ ಭಾರತದ ಯಾವ ಅಥ್ಲೀಟ್‌ಗಳಿಂದಲೂ ಆಗದಿದ್ದ ಸವಾಲನ್ನು ಮಗಳು ಸಾಧಿಸಿದ್ದನ್ನು ಹೇಳಿಕೊಂಡಷ್ಟೂ ಸಂತೋಷ ಆಕೆಯ ಕುಟುಂಬಕ್ಕೆ. ‘ಮಗಳು ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದನ್ನು ಮುಂಚಿತವಾಗಿಯೇ ತಿಳಿಸಿದ್ದಳು. ಹಾಗಾಗಿ ಅಂದು ಮನೆ ಮಂದಿಯೆಲ್ಲಾ ಟಿವಿ ಎದುರು ಕಣ್ಣೆವೆ ಇಕ್ಕದೆ ಕೂತಿದ್ದೆವು. ಆಸು ಪಾಸಿನ ಮನೆಯವರೂ ನಮ್ಮ ಮನೆಯಲ್ಲಿ ನೆರೆದಿದ್ದರು.

ಆಕೆಯ ಕೈಗೆ ಬೇಟನ್ ಸಿಕ್ಕ ಬಳಿಕದ ದೃಶ್ಯ ನೆನೆಸಿಕೊಂಡಾಗ ಮೈ ಜುಮ್ಮೆನ್ನುತ್ತದೆ. ತನಗಿಂತ 10ಮೀ.ಗೂ ಹೆಚ್ಚು ಮುಂದಿದ್ದ ಎದುರಾಳಿಯನ್ನು ಹಿಂದಿಕ್ಕಿದ ಶರವೇಗದ ಓಟ ಈಗಲೂ ಕಣ್ಣಿಗೆ ಕಟ್ಟಿದಂತಿದೆ’ ಎಂದು ಪುಳಕಗೊಳ್ಳುತ್ತಾರೆ ಅಶ್ವಿನಿ ತಂದೆ ಚಿದಾನಂದ ಶೆಟ್ಟಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಜನ್ಸಾಲೆ ಗ್ರಾಮದ ಅಶ್ವಿನಿ ಮನೆಯಲ್ಲೆಗ ಹಬ್ಬದ ಸಂಭ್ರಮ. ತಾಯಿ ಯಶೋದಾ ಶೆಟ್ಟಿ ಅವರಿಗಂತೂ ಅಪರಿಮಿತ ಖುಷಿ. ‘ದಿನಕ್ಕೆ ಏನಿಲ್ಲ ಎಂದರೂ ನೂರಿನ್ನೂರು ಕರೆಗಳು ಬರುತ್ತಿವೆ. ಸ್ನೇಹಿತರು, ನೆಂಟರು ಎಲ್ಲಕ್ಕಿಂತ ಮಾಧ್ಯಮದವರು  ಮಗಳ ಸಾಧನೆಗೆ ಮೆಚ್ಚುಗೆ ಸೂಚಿಸುವಾಗ ತುಂಬಾ ಹೆಮ್ಮೆ ಎನಿಸುತ್ತದೆ’ ಎನ್ನುತ್ತಾರೆ  ಚಿದಾನಂದ ಶೆಟ್ಟಿ.

ಬಾಲ್ಯದಲ್ಲೇ ಗಮನಿಸಿದ್ದೆ: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ಸಾಲೆ ಎಂಬ ಹಳ್ಳಿಯಲ್ಲಿ ಹುಟ್ಟಿದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳೆಯುವಲ್ಲಿ ಕುಟುಂಬದ ಪ್ರೋತ್ಸಾಹ, ತ್ಯಾಗ ಮಹತ್ವದ್ದು. ರಿಲೆಯಲ್ಲಿ ಭಾರತಕ್ಕೆ ದಕ್ಕಿದ ಚಿನ್ನದ ಪದಕ ಮಗಳ ಕಠಿಣ ಪರಿಶ್ರಮಕ್ಕೆ ಸಂದ ಉಡುಗೊರೆ  ಎನ್ನುತ್ತಾರೆ ತಂದೆ.

‘ಆಕೆ ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಚುರುಕಿನ ಓಟದಿಂದ ಗಮನ ಸೆಳೆದಿದ್ದಳು. ಗದ್ದೆ ಬೈಲು, ಹಳ್ಳಿಯ ಅಂಕುಡೊಂಕಿನ ಹಾದಿಯಲ್ಲಿ ಅವಳದು ಚಿಗರೆಯ ಓಟ. ಎಳವೆಯಲ್ಲೇ ಆಕೆ ಒಂದೇ ಕಾಲಿನಲ್ಲಿ ಕುಳಿತು ಏಳುವುದನ್ನು ಗಮನಿಸಿದ್ದೆ. ಆಗಲೇ ಆಕೆಯ ಓಟದ ಪ್ರತಿಭೆಗೆ ಪ್ರೋತ್ಸಾಹ ನೀಡಲು ಮುಂದಾದೆ. ಪೂರಕವಾಗಿ ಓಟದಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಆಕೆ ಸದಾ ಮುಂಚೂಣಿಯಲ್ಲಿದ್ದಳು. ಸ್ಥಳೀಯ ಹೊಸಂಗಡಿಯ ಕೆಪಿಸಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಆಕೆ, 7ನೇ ತರಗತಿಯಿಂದ 10ನೇ ತರಗತಿವರೆಗೆ ಬೆಂಗಳೂರಿನ ವಿದ್ಯಾನಗರದ ಕ್ರೀಡಾಶಾಲೆಗೆ ಸೇರಿ ತರಬೇತಿ ಪಡೆದಳು. ಒಂದು ವರ್ಷ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಳು. ಸಾಮರ್ಥ್ಯ ಹಾಗೂ ಪ್ರತಿಭೆ ಗುರುತಿಸಿ ಜಾರ್ಖಂಡ್‌ನ ಜೆಮ್‌ಶೆಡ್‌ಪುರ್ ಟಾಟಾ ಅಥ್ಲೆಟಿಕ್ ಅಕಾಡೆಮಿ ತರಬೇತಿಗಾಗಿ ಆಕೆಯನ್ನು ಆಯ್ಕೆ ಮಾಡಿದೆ. ಈ ಸಾಧನೆಯ ಹಿಂದೆ ಬಾಲ್ಯದಿಂದಲೇ ಆಕೆ ಪಟ್ಟ ಪರಿಶ್ರಮ ಅಡಗಿದೆ’  ಎಂದು ಅವರು ತಿಳಿಸಿದರು.  

ವರ್ಷದಿಂದ ಧ್ವನಿಯ ನಂಟು ಮಾತ್ರ: ಅಶ್ವಿನಿಗೆ ಕುಟುಂಬದವರೆಂದರೆ ಅತೀವ ಅಕ್ಕರೆ. ಚಿನ್ನ ಗೆದ್ದ 10 ನಿಮಿಷದಲ್ಲೇ ಮನೆಗೆ ಫೋನಾಯಿಸಿ ಹೆತ್ತವರು ಹಾಗೂ ಸಹೋದರಿ ದೀಪ್ತಿ ಜತೆ ಮಾತನಾಡಿ ಸಂಭ್ರಮ ಹಂಚಿಕೊಂಡಿದ್ದಾಳೆ. ಕುಟುಂಬವನ್ನು ಇಷ್ಟೊಂದು ಹಚ್ಚಿಕೊಂಡಿದ್ದರೂ ಆಕೆಗೆ ಕಳೆದ ಒಂದು ವರ್ಷದಿಂದ ಮನೆಗೆ ಆಗಮಿಸಲು ಸಾಧ್ಯವಾಗಿಲ್ಲ. ನಿರಂತರ ಕ್ರೀಡಾ ತರಬೇತಿಯಿಂದಾಗಿ ಕಳೆದ 15 ವರ್ಷಗಳಿಂದ ಆಕೆ ಕುಟುಂಬದಿಂದ ದೂರ ಉಳಿದಿದ್ದಾರೆ.

ಕಾಮನ್ವೆಲ್ತ್ ಕ್ರೀಡಾಕೂಟದ ಬಳಿಕ ಚೀನಾದಲ್ಲಿ ನಡೆಯಲಿರುವ ಮುಂದಿನ ಏಷ್ಯನ್ ಗೇಮ್ಸ್‌ಗೆ ತಯಾರಿ ನಡೆಸಬೇಕಿದೆ. ಹಾಗಾಗಿ ಚಿನ್ನದ ಪದಕ ತಂದುಕೊಟ್ಟ ಪುಳಕವನ್ನು ಮನೆಯವರ ಜತೆ ಖುದ್ದಾಗಿ ಹಂಚಿಕೊಳ್ಳಲು ಆಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕು. ಗುರುವ ಮರೆತಿಲ್ಲ: ‘ನನ್ನ ಈ ಸಾಧನೆಗೆ ಕೋಚ್ ಗುರುಮೂರ್ತಿ ಹಾಗೂ ಮಂಜುನಾಥ್ ಮತ್ತು ಮನೆಯವರ ಸಂಪೂರ್ಣ ಸಹಕಾರ ಕಾರಣ’ ಎಂದು ಅಶ್ವಿನಿ ಅತ್ಯಂತ ಹೆಮ್ಮೆಯಿಂದ ಹೇಳುತ್ತಾಳೆ. ‘ನೀನು ದೇಶಕ್ಕೆ ಕೀರ್ತಿ ತರುತ್ತೀ’ ಎಂದು ವಿದ್ಯಾನಗರದಲ್ಲಿ ಕೋಚ್ ಹತ್ತು ವರ್ಷಗಳ ಹಿಂದೆಯೇ ಹೇಳಿದ್ದ ಮಾತನ್ನು ಅಶ್ವಿನಿ ಈಗಲೂ ಮರೆತಿಲ್ಲ ಎಂದು ಮೆಲುಕು ಹಾಕುತ್ತಾರೆ ಅಶ್ವಿನಿ ಸೋದರಿ ದಿಪ್ತಿ.

‘ಹುಡುಗರ ಜತೆ ಓಡಿ ಫಸ್ಟ್ ಬಂದಿದ್ದಳು’
‘ಒಮ್ಮೆ ಅಶ್ವಿನಿಯ ಓಟವನ್ನು ನೋಡಿ ಗುರುಗಳು ಹುಡುಗರ ಜತೆ ಆಕೆಯನ್ನು ಓಡಿಸಿದ್ದರು. ಆಗಲೂ ಆಕೆಯೇ ಫಸ್ಟ್ ಬಂದಿದ್ದಳು.  ಅಲ್ಲಿಂದ ಆಕೆ ಹಿಂದೆ ನೋಡಿದ್ದೇ ಇಲ್ಲ ಎಂದು ಸ್ಮರಿಸುತ್ತಾರೆ’ ಅಶ್ವಿನಿಯ ಹಿರಿಯ ಸಹೋದರಿ ದೀಪ್ತಿ.ಅಶ್ವಿನಿ ಕುಟುಂಬದ ‘ಪ್ರಜಾವಾಣಿ’ ನಂಟು: ಅಶ್ವಿನಿ ತಂದೆ  ಚಿದಾನಂದ ಶೆಟ್ಟಿ ಹಾಗೂ ‘ಪ್ರಜಾವಾಣಿ’ಗೂ ಹಳೆಯ ನಂಟು.  15 ವರ್ಷದ ಹಿಂದೆ ಕೊಡಗಿನ ಕುಶಾಲನಗರದಲ್ಲಿ ‘ಪ್ರಜಾವಾಣಿ’ ಏಜೆಂಟರಾಗಿ ಸೇವೆಸಲ್ಲಿಸಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈಗಲೂ ಅವರು ನಿರಂತರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ಹೆರಾಲ್ಡ್’ ಓದುಗರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT