ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಗರಿಗೆದರಿದ ಧರ್ಮಾಧಾರಿತ ರಾಜಕಾರಣ

Last Updated 5 ಮೇ 2014, 7:50 IST
ಅಕ್ಷರ ಗಾತ್ರ

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿ ನಾಯಕ ಎಲ್‌ಕೆ.ಅಡ್ವಾಣಿ ಅವರು ಹಮ್ಮಿಕೊಂಡ ರಥಯಾತ್ರೆಗೆ ದೇಶದಾದ್ಯಂತ ದಿನೇ ದಿನೇ ವ್ಯಾಪಕ ಜನಬೆಂಬಲ ಪಡೆಯುತ್ತಿದ್ದಾಗ ನಡೆದ ಚುನಾವಣೆ ಇದು. ಈ ಚುನಾವಣೆಯಲ್ಲಿ ದೇಶದಾದ್ಯಂತ ಧರ್ಮ ರಾಜಕಾರಣ ಗರಿಗೆದರಿತ್ತು. ಕರಾವಳಿ­ಯಲ್ಲೂ ಪರಿಸ್ಥಿತಿ ಇದಕ್ಕೆ ಹೊರತಾಗಿರಲಿಲ್ಲ.

ಇಂದಿರಾ ಗಾಂಧಿ ಅಗಲುವಿಕೆಯ ನಂತರ ರಾಜೀವ್‌ ಗಾಂಧಿ ಅವರಿಗೂ ಹತ್ತಿರವಾದ ಸಂಸದ ಜನಾರ್ದನ ಪೂಜಾರಿ ಅವರು ಆಗ ರಾಜಕೀಯ ಜೀವನದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದರು. ಹಣಕಾಸು ಸಹಾಯಕ ಸಚಿವರಾಗಿದ್ದ ಪೂಜಾರಿ ಅವರಿಗೆ 1987ರಲ್ಲಿ ಗ್ರಾಮಿಣಾಭಿವೃದ್ಧಿ ಖಾತೆಯನ್ನು ರಾಜೀವ್‌ ಗಾಂಧಿ ವಹಿಸಿದ್ದರು. 1989ರ ಚುನಾವಣೆಯಲ್ಲೂ ಜನಾರ್ದನ ಪೂಜಾರಿ ಅವರೇ ಮಂಗಳೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ.

ಅಯೋಧ್ಯೆ ವಿಚಾರ ಮುಂದಿಟ್ಟುಕೊಂಡು ಕರಾವಳಿಯಲ್ಲಿ ನೆಲೆಯನ್ನು ಬಲಪಡಿಸಲು ಯತ್ನಿಸುತ್ತಿದ್ದ ಬಿಜೆಪಿ ಪೂಜಾರಿ ಅವರ ವಿರುದ್ಧ

ಸಮರ್ಥ ಅಭ್ಯರ್ಥಿಗಾಗಿ ಹುಡುಕುತ್ತಿತ್ತು. ವಕೀಲರಾಗಿ ಹೆಸರು ಗಳಿಸಿದ್ದ ವಿ.ಧನಂಜಯಕುಮಾರ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿತು.
‘ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಧನಂಜಯಕುಮಾರ್‌ 1983ರ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದವರು. 1985ರ ಚುನಾವಣೆಯಲ್ಲಿ ಅವರು ಬ್ಲೇಸಿಯಸ್‌ ಡಿಸೋಜ ವಿರುದ್ಧ ಅಲ್ಪ ಅಂತರದಲ್ಲಿ (1,870 ಮತ) ಸೋತಿದ್ದರು. ಅವರು ಪಕ್ಷದ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು. ಹಾಗಾಗಿ ಪಕ್ಷವು ಅವರಿಗೆ ಟಿಕೆಟ್‌ ನೀಡಿತು’ ಎಂದು ಸ್ಮರಿಸುತ್ತಾರೆ ಬಿಜೆಪಿಯ ಮಾಜಿ ಶಾಸಕ ಎನ್‌.ಯೋಗೀಶ್‌ ಭಟ್.

1989ರ ಹೊತ್ತಿಗೆ ಕರಾವಳಿಯಲ್ಲೂ ರಾಮ ಮಂದಿರ ನಿರ್ಮಾಣ ವಿಚಾರದ  ಚರ್ಚೆ ತೀವ್ರಗೊಂಡಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್‌ನ ಧೋರಣೆ ಬಗ್ಗೆ ಅಸಮಾಧಾನ ಹೊಂದಿದ್ದ ಮುಸ್ಲಿಮರು  ಜನತಾದಳದತ್ತ ವಾಲಿದ್ದರು. ಕಾಂಗ್ರೆಸ್‌ ವಿರೋಧಿ ಮತಗಳನ್ನು ಸೆಳೆಯಲು ಜನತಾದಳವೂ ಮುಸ್ಲಿಂ ಅಭ್ಯರ್ಥಿ ಎಂ.ಮೊಹಮ್ಮದ್‌ ಹುಸೇನ್‌ರನ್ನು ಕಣಕ್ಕಿಳಿಸಿತ್ತು. ಜನತಾ ಪಕ್ಷ (ಜೆ.ಪಿ) ದಿಂದ ಪಿ.ಡಿ,ಸುಬ್ಬಯ್ಯ ಅವರು ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಕಮ್ಯುನಿಸ್ಟ್‌ ಪಕ್ಷಗಳು ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ಪ್ರಸ್ತುತ ಎಐಸಿಸಿ ಸದಸ್ಯರಾಗಿರುವ ಪಿ.ವಿ.ಮೋಹನ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಗಟ್ಟಿ ಸುವರ್ಣ, ಫ್ಲೋಸಿ ವಿ.ಪಿರೇರ, ಮಲ್ವಿಲ್‌ ಪಿಂಟೊ, ಪಿ.ವಾಸುದೇವ ಅವರೂ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಒಂಬತ್ತು ಮಂದಿಯ ಸ್ಪರ್ಧೆಯಿಂದ ಈ ಮಹಾ ಚುನಾವಣೆ ರಂಗು ಪಡೆದಿತ್ತು.

‘ಜನಾರ್ದನ ಪೂಜಾರಿ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ, ಅವರ ವರ್ಚಸ್ಸು 1989ರ ವೇಳೆಗೆ ಕಡಿಮೆಯಾಗಿತ್ತು. ಸಾಲಮೇಳಗಳ ಜನಪ್ರಿಯತೆಯೂ ಕುಗ್ಗಿತ್ತು.  ಧರ್ಮಾಧಾರಿತ ರಾಜಕಾರಣದಿಂದ ಹಿಂದೂ ಮತಗಳನ್ನು ವಿಭಜಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತ್ತು’ ಎಂದು ಮೆಲುಕು ಹಾಕುತ್ತಾರೆ ಪಿ.ವಿ.ಮೋಹನ್‌.

‘ಆಗ ಮುಸ್ಲಿಮರು ಕಾಂಗ್ರೆಸ್‌ಗಿಂತ ಜನತಾದಳದ ಬಗ್ಗೆ ಹೆಚ್ಚು ನಂಬಿಕೆ ಇಟ್ಟಿದ್ದರು. ಆಗ ರಾಜ್ಯದಲ್ಲಿ ಜನತಾದಳ ಸರ್ಕಾರವಿತ್ತು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ನಜೀರ್‌ ಸಾಬ್‌ ಅವರ ವರ್ಚಸ್ಸೂ ಮುಸ್ಲಿಮರನ್ನು ಆ ಪಕ್ಷದತ್ತ ಸೆಳೆದಿತ್ತು. ಎಂ.ಮೊಹಮ್ಮದ್‌ ಹುಸೇನ್‌ ಅಭ್ಯರ್ಥಿಯಾಗಿದ್ದರಿಂದ ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಹೆಚ್ಚಿತ್ತು. ಹಾಗಾಗಿ ಜನಾರ್ದನ ಪೂಜಾರಿ ಅವರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿ ನಾವಿದ್ದೆವು’ ಎಂದು ಸ್ಮರಿಸುತ್ತಾರೆ ಪ್ರಸ್ತುತ ಜೆಡಿಎಸ್‌ನ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸದಾಶಿವ.

‘ದೇಶದಾದ್ಯಂತ ಕಾಂಗ್ರೆಸ್‌ ಮೇಲಿನ ಪ್ರೀತಿ ಕ್ಷೀಣಿಸುತ್ತಿದ್ದ ಕಾಲಘಟ್ಟವದು. ಅಡ್ವಾಣಿ ಅವರ ರಥಯಾತ್ರೆಗೆ ದೇಶದಾದ್ಯಂತ ವ್ಯಾಪಕ ಬೆಂಬಲ ಸಿಕ್ಕಿತ್ತು. ರಾಮಮಂದಿರ ನಿರ್ಮಾಣದ ಬಗ್ಗೆ ಜನಾಭಿಪ್ರಾಯ ರೂಪಿಸುವ ಕಾರ್ಯವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕರಾವಳಿಯಲ್ಲೂ ವ್ಯವಸ್ಥಿತವಾಗಿ ಮಾಡುತ್ತಿದ್ದವು. ಅಡ್ವಾಣಿ ರಥಯಾತ್ರೆ ಆಗ ಮಂಗಳೂರಿಗೆ ಬಂದಿರಲಿಲ್ಲ. ಆದರೆ, ಇಲ್ಲಿ ಶಿಲಾಪೂಜನದಂತಹ ಕಾರ್ಯಕ್ರಮಕ್ಕೆ ಉತ್ತಮ ಜನಬೆಂಬಲ ಸಿಕ್ಕಿತ್ತು. 1984ರ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕೆ.ರಾಮ ಭಟ್‌ ಉರಿಮಜಲು ಅವರೂ ಸಾಕಷ್ಟು (1.80 ಲಕ್ಷ) ಮತಗಳನ್ನು ಗಳಿಸಿದ್ದರು. ಜನಾರ್ದನ ಪೂಜಾರಿ  ಅವರಿಗಿದ್ದಂತೆ ನಮಗೆ ಜಾತಿಯ ಬೆಂಬಲವಿರಲಿಲ್ಲ. ಆದರೆ, ಯುವ ಅಭ್ಯರ್ಥಿ ಕಣದಲ್ಲಿದ್ದುದು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿತ್ತು’ ಎನ್ನುತ್ತಾರೆ ಬಿಜೆಪಿ ಹಿರಿಯ ಮುಖಂಡರಾದ ಪದ್ಮನಾಭ ಕೊಟ್ಟಾರಿ.

1989ರ ನ. 24ರಂದು ನಡೆದ ಚುನಾವಣೆಯಲ್ಲಿ 9,23,749 ಮಂದಿ ಮತದಾರರಿದ್ದರು, 6,46,156 (ಶೇ 69.85) ಮಂದಿ ಹಕ್ಕು ಚಲಾಯಿಸಿದರು. 21,190 ಮತಗಳು ತಿರಸ್ಕೃತಗೊಂಡವು.

ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದ ಈ ಚುನಾವಣೆಯಲ್ಲೂ ಪೂಜಾರಿ ಅವರ ಗೆಲುವಿನ ಅಭಿಯಾನ ಮುಂದುವರಿಯಿತು. 2,75,672 ಮತಗಳನ್ನು ಪಡೆದ  ಅವರು ಬಿಜೆಪಿಯ ವಿ.ಧನಂಜಯ ಕುಮಾರ್‌ ( 1,84,575 ಮತ) ಅವರನ್ನು 91,097 ಮತಗಳಿಂದ ಸೋಲಿಸಿದರು. ಜನತಾ ದಳದ ಎಂ.ಮೊಹಮ್ಮದ್‌ ಅವರು 1.33,533 ಮತಗಳನ್ನು, ಜನತಾ ಪಕ್ಷ (ಜೆ.ಪಿ) ಅಭ್ಯರ್ಥಿ ಪಿ.ಡಿ.ಸುಬ್ಬಯ್ಯ ಅವರು 20,182 ಮತಗಳನ್ನು ಪಡೆದರು.

‘ಬಿಜೆಪಿ ಹಾಗೂ ಜನತಾದಳ ಪಕ್ಷಗಳ ಬೆಳವಣಿಗೆಯಿಂದ ಕಾಂಗ್ರೆಸ್‌ ಧೃತಿಗೆಡಲಿಲ್ಲ. ಬಿಜೆಪಿ ಧರ್ಮಾಧಾರಿತ ರಾಜಕಾರಣವನ್ನು, ಬಿ.ಜನಾರ್ದನ ಪೂಜಾರಿ ಅವರು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಡ್ವಾಣಿ ಅವರ ರಥಯಾತ್ರೆಯನ್ನು ಸಂಸತ್ತಿನಲ್ಲಿ ಉಗ್ರವಾಗಿ ಟೀಕಿಸಿದ್ದರು. ಜನಪರ ಚಿಂತನೆಗಳೇ ಪೂಜಾರಿ ಅವರಿಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾದವು’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ಕಳ್ಳಿಗೆ ತಾರಾನಾಥ ಶೆಟ್ಟಿ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ದೇಶದಾದ್ಯಂತ ಹಿನ್ನಡೆ ಅನುಭವಿಸಿತ್ತು. ಆಗ ಕಾಂಗ್ರೆಸ್‌ಗೆ ದಕ್ಕಿದ್ದು 197 ಸೀಟುಗಳು ಮಾತ್ರ. ಜನತಾದಳ 143 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಡ್ವಾಣಿ ಅವರ ರಥಯಾತ್ರೆ ಬಿಜೆಪಿಗೆ 85 ಸ್ಥಾನಗಳನ್ನು ದೊರಕಿಸಿಕೊಟ್ಟಿತು. ಆದರೆ,  ರಾಜ್ಯದಲ್ಲಿ ಒಟ್ಟು 175 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಿತ್ತು. ಈ ಚುನಾವಣೆಯಲ್ಲಿ ಕರಾವಳಿಯಲ್ಲಿ (ಈಗಿನ ದಕ್ಷಿಣ ಕನ್ನಡ ಜಿಲ್ಲೆ) ಕಾಂಗ್ರೆಸ್‌ನ ಕೆ.ಕುಶಲ (ಸುಳ್ಯ), ವಿನಯಕುಮಾರ್‌ ಸೊರಕೆ (ಪುತ್ತೂರು), ಕೆ.ಗಂಗಾಧರ ಗೌಡ (ಬೆಳ್ತಂಗಡಿ), ರಮಾನಾಥ ರೈ (ಬಂಟ್ವಾಳ), ಬ್ಲೇಸಿಯಸ್‌ ಎಂ. ಡಿಸೋಜ (ಮಂಗಳೂರು), ಬಿ.ಎಂ.ಇದಿನಬ್ಬ (ಉಳ್ಳಾಲ). ವಿಜಯಕುಮಾರ್‌ ಶೆಟ್ಟಿ (ಸುರತ್ಕಲ್‌), ಕೆ.ಸೋಮಪ್ಪ ಸುವರ್ಣ (ಮೂಡುಬಿದಿರೆ) ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT