ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಟೆನಿಸ್ ಹೆಜ್ಜೆಗುರುತು...

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರಿನ ಮಣ್ಣಗುಡ್ಡೆ ನಿವಾಸಿಯಾಗಿರುವ 78 ವರ್ಷದ ಎ.ಟಿ. ಶೆಣೈ ಎಂದೇ ಖ್ಯಾತರಾದ ಅನಂತರಾಯ ಟಿ.ಶೆಣೈ ಹಿಂದೆ ಕ್ರಿಕೆಟ್, ಟೆನಿಸ್ ಆಟದಲ್ಲಿ ಸಕ್ರಿಯರಾಗಿದ್ದವರು. ದೇಹ ಕೇಳದಿದ್ದರೂ, ಆರೇಳು ವರ್ಷ ಹಿಂದಿನವರೆಗೆ ತಪ್ಪದೇ ಟೆನಿಸ್ ಆಡುತ್ತಿದ್ದವರು, ಕಲಿಸುತ್ತಿದ್ದವರು ಅವರು.

ಮುಂಬೈನ ಮಾತುಂಗ ಜಿಮ್ಖಾನಾ, ಸಿಂಧಿ ಸೊಸೈಟಿ ಜಿಮ್ಖಾನಾದಲ್ಲಿ ಟೆನಿಸ್ ತರಬೇತುದಾರರಾಗಿದ್ದ ಅವರು, ಅಲ್ಲಿಯೇ ಏಸ್ ಟೆನಿಸ್ ಸೆಂಟರ್ ಆರಂಭಿಸಿ ಏಳು ವರ್ಷ ಎಳೆಯರಿಗೆ ತರಬೇತಿ ನೀಡಿದ್ದ ಸಾಹಸಿ. 2001ರಲ್ಲಿ ಮೂರು ದಶಕಗಳ ಮುಂಬೈ ಸಂಪರ್ಕ ಕಡಿದು ಮಂಗಳೂರಿಗೆ ಹಿಂತಿರುಗಿದರು.
 
ಉರ್ವ ಕೆನರಾ ಶಾಲೆ ಬಳಿಯ  ಕೆನರಾ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ನೀಡತೊಡಗಿದರು. 2005ರವರೆಗೆ ಈ ಕಾಯಕ ನಡೆಸಿದ ಉತ್ಸಾಹಿ. 1970ರ ದಶಕದಲ್ಲಿ ಗೋವಾ, ಮುಂಬೈ ಮೊದಲಾದ ಕಡೆ ನಡೆದ ಟೂರ್ನಿಗಳ ವೆಟರನ್ಸ್ ಸಿಂಗಲ್ಸ್, ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು ಈ ಟೆನಿಸ್ ಪ್ರೇಮಿ.

ಬೆಳೆಯದ ಆಟ:
`ಮಂಗಳೂರಿನಲ್ಲಿ ಹಿಂದೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರರು ಇರಲಿಲ್ಲ. ಈಗ ಸಾಕಷ್ಟು ಸೌಲಭ್ಯ, ಪ್ರೋತ್ಸಾಹಗಳಿದ್ದರೂ, ಪೋಷಕರು ಒತ್ತು ಇರುವುದು ಮಕ್ಕಳ ಕಲಿಕೆಗಷ್ಟೇ. ಶಾಲೆಯಲ್ಲಿ ಹೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರು ಉತ್ತೇಜನ ನೀಡುವುದಿಲ್ಲ. ಹೀಗಾಗಿ ಟೆನಿಸ್‌ನಂಥ ಆಟ ಇಲ್ಲಿ ಬೆಳೆಯಲಿಲ್ಲ~ ಎಂದು ವಿಷಾದಿಸುತ್ತಾರೆ ಅವರು.

ಈಗಿನ ವಿದ್ಯಾರ್ಥಿಗಳು ಶಾಲಾವಧಿ ನಂತರ ಕಲಿಕೆ, ಟಿ.ವಿ, ಮೊಬೈಲ್, ಇಂಟರ್‌ನೆಟ್‌ಗೆ ಸೀಮಿತಗೊಂಡು ಕ್ರೀಡಾಂಗಣದತ್ತ ಮುಖ ಮಾಡದಿರುವುದೂ ಟೆನಿಸ್‌ನ ಹಿನ್ನಡೆಗೆ ಕಾರಣವಾಗಿದೆ.

`ಬೆಂಗಳೂರು, ಮೈಸೂರಿಗೆ ಹೋಲಿಸಿದರೆ ಇಲ್ಲಿ ಟೆನಿಸ್ ಅಂಕಣಗಳು ಕಡಿಮೆ. ಲೈಟ್‌ಹೌಸ್ ಹಿಲ್ ರಸ್ತೆಯ ಲೋಬೊ ಪ್ರಭು ಕಾಂಪೌಂಡ್ ಬಳಿ 1950ರ ಆಸುಪಾಸಿನಲ್ಲಿ ಎರಡು ಟೆನಿಸ್ ಅಂಕಣಗಳಿದ್ದವು.
 
ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಎರಡು ಕೋರ್ಟ್‌ಗಳಿದ್ದವು. ನಂತರ ವಿಠೋಬ ದೇವಸ್ಥಾನ ಬಳಿಯ ಬಾಲಮಾರುತಿ ವ್ಯಾಯಾಮ ಶಾಲೆಯ ಎದುರು ಟೆನಿಸ್  ಕೋರ್ಟ್ ನಿರ್ಮಾಣವಾಯಿತು. ಡೊಂಗರಕೇರಿಯ ಬಸ್ತಿ ವಾಮನ ಶೆಣೈ ಆಸಕ್ತಿ ತೋರಿದ್ದರು. ಅದೂ ಬಹಳ ಪ್ರಸಿದ್ಧ ಪಡೆಯಿತು. ಲಾಲ್‌ಭಾಗ್ ಬಳಿಯ ಹ್ಯಾಟ್‌ಹಿಲ್‌ನಲ್ಲೂ ಟೆನಿಸ್ ಕೋರ್ಟ್ ಇದೆ~ ಎನ್ನುತ್ತಾರೆ ಅವರು.

1997ರಲ್ಲಿ ಕೇಪುಳ ದಿನೇಶ ನಾಯಕ್ ಅವರ ಆಸಕ್ತಿಯಿಂದ ಕೆನರಾ ಶಾಲೆ ಬಳಿಯೇ ಕೆನರಾ ಟೆನಿಸ್ ಅಕಾಡೆಮಿ ತಲೆಯೆತ್ತಿತು. ಇಲ್ಲಿ ಈಗಲೂ ತರಬೇತಿ ವ್ಯವಸ್ಥೆಯಿದೆ. ಸಮಸ್ಯೆ ಎಂದರೆ ಆಡಲು ಬರುವವರು ಕಡಿಮೆ.

ಕದ್ರಿ ಪದವಿನ ಈಡನ್ ಕ್ಲಬ್ ಎರಡು ಕಾಂಕ್ರೀಟ್ ಕೋರ್ಟ್ ಗಳನ್ನು ಹೊಂದಿದೆ. ಕದ್ರಿ ಶಿವಭಾಗ್‌ನಲ್ಲಿರುವ ರಾಮಕೃಷ್ಣ ಟೆನಿಸ್ ಅಕಾಡೆಮಿ ಕೂಡ ಸ್ವಂತ ಕೋರ್ಟ್ ಹೊಂದಿದೆ. ಆದರೆ ಇಲ್ಲಿ ಬೆಳಿಗ್ಗೆ ಮಾತ್ರ ಆಡುವ ಅವಕಾಶವಿದೆ. ಈ ಅಕಾಡೆಮಿ ಆರಂಭಕ್ಕೆ ಆಸಕ್ತಿ ತೋರಿದ್ದು ಉದ್ಯಮಿ ವೈ.ಮಹಮದ್ ಕುಂಞ ಅವರು. ಕಳೆದ ವರ್ಷ ಕುಂಟಿಕಾನದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕೂಡ ತನ್ನದೇ ಆದ ಸಿಮೆಂಟ್ ಮತ್ತು ಮಣ್ಣಿನ ಕೋರ್ಟ್‌ಗಳನ್ನು ಉದ್ಘಾಟಿಸಿತ್ತು.

ನೆನಪಲ್ಲುಳಿದ ಟೂರ್ನಿ: ಬಾಲಮಾರುತಿ ವ್ಯಾಯಾಮ ಶಾಲೆ ವತಿಯಿಂದ 1969ರಲ್ಲಿ ಹ್ಯಾಟ್‌ಹಿಲ್ ಕೋರ್ಟ್‌ನಲ್ಲಿ ನಡೆದ ಟೂರ್ನಿ ಆ ಕಾಲದಲ್ಲಿ ಈ ಭಾಗದಲ್ಲೇ ನಡೆದ ದೊಡ್ಡ ಟೂರ್ನಿಯಾಗಿತ್ತು. ದೇಶದ ಟೆನಿಸ್ ದಿಗ್ಗಜರಾದ ಜೈದೀಪ್ ಮುಖರ್ಜಿ, ರಾಮನಾಥನ್ ಕೃಷ್ಣನ್, ಪ್ರೇಮಜಿತ್ ಲಾಲ್ ಮೊದಲಾದವರು ಬಂದಿದ್ದರು. ನಾನೂ ಆ ಟೂರ್ನಿಯಲ್ಲಿ ಆಡಿದ್ದೆ ಎನ್ನುತ್ತಾರೆ ಎ.ಟಿ.ಶೆಣೈ.

ಇತ್ತೀಚಿನ ದಿನಗಳಲ್ಲಿ ಎಳೆಯ ಆಟಗಾರರಲ್ಲಿ ಬಿಜೈನ   ಲೂರ್ಡ್ಸ್ ಸೆಂಟ್ರಲ್ ಶಾಲೆಯ ಮ್ಾ ಖಾನ್ ಭರವಸೆ ಮೂಡಿಸಿದ್ದಾನೆ. ಈತ ಇದೇ ಉತ್ಸಾಹ ಇಟ್ಟುಕೊಂಡು ಆಡಿದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಏರಬಲ್ಲ ಎನ್ನುತ್ತಾರೆ.

ಬ್ರಹ್ಮಾವರದಲ್ಲಿ ಅಕಾಡೆಮಿ
ಮಣಿಪಾಲದಲ್ಲಿ ಮಣಿಪಾಲ ವಿ.ವಿ.ಯ ಅತ್ಯಾಧುನಿಕ ಕ್ರೀಡಾ ಕಾಂಪ್ಲೆಕ್ಸ್ ಎರಡು ಸಿಂಥೆಟಿಕ್ ಕೋರ್ಟ್‌ಗಳನ್ನು ಹೊಂದಿದೆ. ಮಣ್ಣಿನ ಎರಡು ಅಂಕಣವೂ ಇಲ್ಲಿದೆ. ಎರಡು ವರ್ಷಗಳ ಹಿಂದೆ ಮಣಿಪಾಲದಲ್ಲಿ ಐಟಿಎಫ್ ಟೂರ್ನಿ ನಡೆದಿತ್ತು. ಇಲ್ಲಿನ ವ್ಯವಸ್ಥೆ ಯಾವ ದೊಡ್ಡ ನಗರಗಳಿಗೂ ಕಡಿಮೆಯಿಲ್ಲ. ಕುಂದಾಪುರದ ಈಸ್ಟ್‌ವೆಸ್ಟ್ ಕ್ಲಬ್‌ನಲ್ಲಿ ಎರಡು ಅಂಕಣಗಳ ವ್ಯವಸ್ಥೆ ಇದೆ.

ಗ್ರಾಮೀಣ ಪ್ರದೇಶವಾದ ಬ್ರಹ್ಮಾವರದಲ್ಲಿ `ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್~ ವತಿಯ ಟೆನಿಸ್ ಅಕಾಡೆಮಿ ಮಾಡುವ ಕೆಲಸ ಮಾದರಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಟೆನಿಸ್ ಆಟವನ್ನು ಜನಪ್ರಿಯಗೊಳಿಸುತ್ತಿದ್ದು, ಪ್ರತಿಭಾವಂತ  ಆಟಗಾರರನ್ನು ರೂಪಿಸುತ್ತಿದೆ.

`ಇಲ್ಲಿ 8ರಿಂದ 14 ವರ್ಷ ವಯೋಮಿತಿಯ 34 ಮಂದಿ ಮಕ್ಕಳು ನಿಯಮಿತವಾಗಿ ತರಬೇತಿಗೆ ಬರುತ್ತಾರೆ. ಶನಿವಾರ- ಭಾನುವಾರ ನಿಯಮಿತ ತರಬೇತಿ ಜತೆಗೆ ರಜಾ ದಿನವೂ ತರಬೇತಿ ವ್ಯವಸ್ಥೆ ಮಾಡಲಾಗಿದೆ.
 
ಬೆಂಗಳೂರಿನ ಆಟಗಾರರನ್ನು ಕರೆಸಿ ತರಬೇತಿ ನೀಡುತ್ತಿರುತ್ತೇವೆ. ಮೂರು ಸಲ ನಾವು ರಾಷ್ಟ್ರೀಯ ಮಟ್ಟದ 14 ಮತ್ತು 16 ವರ್ಷದೊಳಗಿನವರ ಟೂರ್ನಿ ಸಂಘಟಿಸಿದ್ದೇವೆ~ ಎನ್ನುತ್ತಾರೆ ಉಡುಪಿ ಜಿಲ್ಲಾ ಟೆನಿಸ್ ಸಂಸ್ಥೆ ಕಾರ್ಯದರ್ಶಿ ಹಾಗೂ ಈ ಕ್ಲಬ್‌ನ ಸಂಚಾಲಕ ಚಂದ್ರಶೇಖರ ಹೆಗ್ಡೆ.

ಎಸ್‌ಎಂಎಸ್ ಕಾಲೇಜು ಮೈದಾನದಲ್ಲಿ ಅಕಾಡೆಮಿಯ ಅಂಕಣಗಳಿವೆ. ಮಂಗಳೂರು ವಿ.ವಿ. ಅಂತರ ಕಾಲೇಜು ಟೆನಿಸ್ ಟೂರ್ನಿಗೆ ಇಲ್ಲಿಯೇ ದಾಖಲೆ 9 ಬಾರಿ ಆತಿಥ್ಯ ವಹಿಸಲಾಗಿದೆ.

`ನಮ್ಮ ಅಕಾಡೆಮಿಯಿಂದ ತರಬೇತಾದವರು ವಿ.ವಿ.ಯನ್ನು ಪ್ರತಿನಿಧಿಸಿದ್ದಾರೆ. ಮುಂದೆ ಇಲ್ಲಿಂದ ಶ್ರೇಷ್ಠ ಆಟಗಾರರು ಬರುವುದರಲ್ಲಿ ಸಂಶಯವಿಲ್ಲ~ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT