ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿ ಹರಿಯುವ ಸಂಭ್ರಮಕ್ಕೆ ಮುಗಿಬಿದ್ದ ಜನ

Last Updated 16 ಜೂನ್ 2011, 10:10 IST
ಅಕ್ಷರ ಗಾತ್ರ

ಆಲಮೇಲ: ಆಲಮೇಲ ಪಟ್ಟಣದಲ್ಲಿ ಬುಧವಾರ ಸಂಜೆ ಕಾರ ಹುಣ್ಣಿಮೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು. ಇಲ್ಲಿನ ಪ್ರಮುಖ ಮನೆತನಗಳಾದ ದೇಶಮುಖ ಹಾಗೂ ದೇಶಪಾಂಡೆಯವರ ಎರಡು ಎತ್ತಿನ ಬಂಡಿಗಳನ್ನು ಓಡಿಸುವ ಮೂಲಕ ಈ ಬಾರಿಯೂ  ಕರಿ ಹರಿಯುವ ಪದ್ಧತಿಯ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಯಿತು.

ಕರಿ ಹರಿಯಲು ದೇಸಾಯಿ ಅವರ ಮನೆಯಿಂದ ಮುಂಜಾನೆ ಶ್ರೀ ಲಕ್ಷ್ಮೀ ದೇವಿ ಬಂಡಿಯನ್ನು  ಆಲಮೇಲದಲ್ಲಿ ಪೂರ್ವಕ್ಕಿರುವ ದೇವಣಗಾಂವ ರಸ್ತೆಗೆ ಹೊಂದಿರುವ ಅಗಸಿಯಿಂದ  ಓಡಿಸಲಾಯಿತು.

ಸಂಜೆ ದೇಶಮುಖರ ಬಂಡಿ ಹಾಗೂ ದೇಶಪಾಂಡೆಯವರ ಬಂಡಿಗಳು ಕರಿಹರಿಯುವ ಸಾಂಕೇತಿಕ ಕಾರ ಹುಣ್ಣಿಮೆಗೆ,  ಓಡಿಸುತ್ತಿದ್ದ ಬಂಡಿಗಳನ್ನು ಹಾಗೂ  ಬಲಿಷ್ಠವಾದ ಎತ್ತುಗಳನ್ನು ನೋಡುತ್ತಿದ್ದರೆ ಜನ ಅಲ್ಲಲ್ಲಿ ಕುಳಿತು, ನಿಂತು  ಕೇಕೆ ಹಾಕುತ್ತಿದ್ದರು. ಮೈನವಿರೇಳಿಸುವಂತಿದ್ದ ಆ ಎತ್ತುಗಳ ಓಟ- ಚಕ್ಕಡಿ ಓಡಿಸುವವರ ಆರ್ಭಟ ಕಂಡು ಆನಂದಿಸಿದರು.

ಪಾರಂಪರಿಕವಾಗಿ ನಡೆದು ಬಂದಂತಹ ಕಾರ ಹುಣ್ಣಿಮೆಯ ದೇಶಮುಖರ ಬಂಡೆಗೆ ಊರ ವಾಲೀಕಾರರು, ರೈತಾಪಿ ವರ್ಗ ಹಾಗೂ  ಯುವಕರ ಕೈಯಲ್ಲಿ ತಲವಾರ, ಬಡಿಗೆಗಳನ್ನು ಹಿಡಿದು ಬಂಡೆಗೆ ಕಾವಲಿದ್ದು ರಕ್ಷಣೆ ನೀಡಿದರು.

 ಸಂಜೆ ಗ್ರಾಮದೇವರಾದ ಪೀರ ಗಾಲಿಬ್‌ಸಾಹೇಬ್ ದರ್ಗಾದ ಎದುರಿಗಿನ ವಿಶಾಲ ಮೈದಾನದಲ್ಲಿ ಎರಡು ಬಂಡಿಗಳನ್ನು ವಾದ್ಯಗಳ ಸಮೇತ ಮೆರವಣಿಗೆ ಮುಖಾಂತರ ಕರೆತಂದು ಐದು ಸುತ್ತುಗಳನ್ನು ಓಡಿಸಲಾಯಿತು. ಈ ಸಂಭ್ರಮವನ್ನು ನೋಡಲು ಪಕ್ಕದ ಗ್ರಾಮಗಳಿಂದಲೂ ಸಹಸ್ರಾರು ಜನರು ಆಗಮಿಸಿದ್ದರು.

ಚಿಣ್ಣರ ದಂಡು: ಈ ಭಾರಿ ಹೊಸದಾಗಿ ಗೊತ್ತುಪಡಿಸಿದ ವಿಶಾಲ ಮೈದಾನದಲ್ಲಿ ಶೃಂಗರಿಸಿದ ಎತ್ತುಗಳ ಜೊತೆಗೆ ಓಡಾಡಿ ಸಂಭ್ರಮಿಸಿದರೆ ಹಿರಿಯರು ತಮ್ಮ ಮಕ್ಕಳನ್ನು ಕಾಯುವ ಕಾಯಕದಲ್ಲಿದ್ದರು.
ಸ್ಥಳೀಯ ಠಾಣೆಯ ಎಸ್‌ಐ ಜೆ.ಎಲ್.ಗೌಳಿ ಹಾಗೂ ಸಿಬ್ಬಂದಿ  ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಕರಿ ಎತ್ತು ಕಾಳಿಂಗ....
ಆಲಮಟ್ಟಿ: ~ಕರಿಎತ್ತ ಕಾಳಿಂಗ, ಬಿಳಿ ಎತ್ತ ಮಾಲಿಂಗ~ ಎಂಬ ಗ್ರಾಮೀಣ ಉದ್ಘೋಷ ಎಲ್ಲರಿಗೂ ಗೊತ್ತು. ರೈತರ ಬೆನ್ನೆಲುಬು ಎತ್ತುಗಳು. ಎಂಥ ಆಧುನಿಕ ಸಲಕರಣೆಗಳು ಬಂದರೂ ರೈತ ಮಾತ್ರ ಎತ್ತುಗಳಿಂದ ತನ್ನ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾನೆ.

ಅನೇಕ ಸಂಪ್ರದಾಯಗಳಿಗೆ ಉತ್ತರ ಕರ್ನಾಟಕ ಪ್ರಸಿದ್ಧಿಯಾದರೂ, ಕಾರಹುಣ್ಣಿಮೆ ಮಾತ್ರ ರೈತರ ಅದರಲ್ಲೂ ಎತ್ತುಗಳ ಹಬ್ಬ ಎಂದೇ ಖ್ಯಾತಿ.

ಬುಧವಾರ ಆಲಮಟ್ಟಿ, ನಿಡಗುಂದಿ, ಬೇನಾಳ ಮೊದಲಾದೆಡೆ ಎತ್ತುಗಳಿಗೆ ಬಣ್ಣ ಬಿಡಿದು, ನೂತನ ಪರಿಕರಗಳನ್ನು ಎತ್ತುಗಳಿಗೆ ತೊಡಿಸಿ, ಎತ್ತುಗಳನ್ನು ಓಡಿಸಿ ರೈತರು ಸಂಭ್ರಮ ಪಟ್ಟರು.

ಮುಂಗಾರು ಮಳೆ ಭರ್ಜರಿಯಾಗಿಯೇ ಈ ಭಾಗದಲ್ಲಿ ಪ್ರವೇಶಿಸಿದೆ. ಹೀಗಾಗಿ ರೈತರೆಲ್ಲ ಸಂತಸದಿಂದ ಇದ್ದು, ಕಾರ ಹುಣ್ಣಿಮೆಯ ಕರಿ ಹರಿಯುವ ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ಬುಧವಾರ ಸಂಜೆ ನಿಡಗುಂದಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಎತ್ತುಗಳನ್ನು ಓಡಿಸಲಾಯಿತು. ನೆರೆದ ಜನತೆ, ರೈತರು ಕೇ...ಕೇ.. ಹಾಕುತ್ತಾ ಸಂಭ್ರಮಿಸಿದರು.

ಜೋಡೆತ್ತುಗಳ ನಾ ಮುಂದೆ, ತಾ ಮುಂದೆ ಎಂದು ಓಡುತ್ತಿದ್ದಾಗ, ಸಂತಸದ ಕಳೆ ರೈತರಲ್ಲಿ ಮನೆ ಮಾಡಿತ್ತು.  ಈ ಓಟದ ಸ್ಪರ್ಧೆಯಲ್ಲಿ ಬಿಳಿ ಎತ್ತು, ಕಂದೆತ್ತು ಪ್ರಥಮ ಬಂದ ಆಧಾರದ ಮೇಲೆ ಬೆಳೆಗಳನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಬಿಳಿ ಎತ್ತು ಬಂದರೆ  ಹಿಂಗಾರು ಬೆಳೆ ಜೋಳ ಭರ್ಜರಿಯಾಗಿ, ಕಂದೆತ್ತು ಬಂದರೇ ಮುಂಗಾರು ಬೆಳೆ ಗೋಧಿ ಭರ್ಜರಿಯಾಗಿ ಬರುತ್ತದೆ ಎಂಬ ನಂಬಿಕೆ ರೈತರದ್ದು. ಈ ಬಾರಿ ನಿಡಗುಂದಿಯ ಚಿಂತಾಮಣಿ ಕುಟುಂಬದ ಬಿಳಿ ಎತ್ತು ಪ್ರಥಮ ಸ್ಥಾನ ಪಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT