ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಕಬ್ಬು: ರೈತರ ಭಾಗ್ಯಲಕ್ಷ್ಮೀ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ಸಂಕ್ರಾಂತಿ ಹಬ್ಬ ಸಮೀಪಿಸಿತು ಎಂದರೆ ಕರಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕರ ಆಯ್ಕೆ ಕರಿ ಕಬ್ಬು. ಆದರೆ ಈ ರೀತಿಯ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತಿ ವಿರಳ.

ಆದರೆ, ಬೊಂಬೆ ನಗರ ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ `ಪಟ್ಲು~ ಗ್ರಾಮದ ಜನತೆ ಮಾತ್ರ ನಂಬಿಕೊಂಡಿರುವುದು ಈ ಕರಿ ಕಬ್ಬಿನ ಬೇಸಾಯವನ್ನೇ. ಇಡೀ ರಾಮನಗರ ಜಿಲ್ಲೆಯಲ್ಲಿ ಕರಿ ಕಬ್ಬನ್ನು ಬೆಳೆಯುವ ಏಕೈಕ ಗ್ರಾಮ ಎಂಬ ಹಿರಿಮೆಯನ್ನು ಈ ಗ್ರಾಮ ಹೊಂದಿದೆ.

ಪಟ್ಲು ಗ್ರಾಮದ ಈ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ನಗರ ಪಟ್ಟಣಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈ ಕಬ್ಬಿನ ಬೇಡಿಕೆ ರಾಜ್ಯವನ್ನೂ ದಾಟಿದೆ. ನೆರೆಯ ಕೇರಳ, ತಮಿಳುನಾಡು, ಗೋವಾ, ಬಿಹಾರ, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ.

ಈ ಪುಟ್ಟ ಗ್ರಾಮದ ಬಹುತೇಕ ಜನತೆ ಕರಿ ಕಬ್ಬಿನ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು 60 ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಈ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಗ್ರಾಮಸ್ಥರು ಬೆಳೆಯುತ್ತಿದ್ದಾರೆ. ಎಕರೆ ಪ್ರದೇಶದಲ್ಲಿ ಸುಮಾರು 3 ಲಾರಿಗಳಷ್ಟು ಈ ಕಬ್ಬು ಬೆಳೆಯಲಾಗುತ್ತಿದೆ. ಪಟ್ಲು ಗ್ರಾಮದಿಂದಲೇ 250 ರಿಂದ 300 ಲಾರಿಗಳಷ್ಟು ಕಬ್ಬಿನ ಕಟ್ಟು ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಸುಮಾರು ಎರಡರಿಂದ ಎರಡೂವರೆ ಕೋಟಿ ರೂಪಾಯಿಗಳಷ್ಟು ವಹಿವಾಟು ಈ ಗ್ರಾಮದ ಜನತೆ ನಡೆಸುತ್ತಾರೆ ಎನ್ನುವ ಅಂದಾಜು ಇದೆ.

ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು ್ಙ 50 ರಿಂದ ್ಙ60 ಸಾವಿರ  ಖರ್ಚಾದರೆ, ರೂ 1 ಲಕ್ಷಗಳಿಗೂ ಹೆಚ್ಚು ಲಾಭ ದೊರೆಯುತ್ತದೆ ಎಂದು ಗ್ರಾಮದ ಕಬ್ಬು ಬೆಳೆಗಾರರು ಮಾಹಿತಿ ನೀಡುತ್ತಾರೆ.

`ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಹುತೇಕರ ಮನೆಯ ಅತಿಥಿಯಾಗುವ ಕರಿ ಕಬ್ಬನ್ನು ಬೆಳೆಯಲು ಸಂತಸವಾಗುತ್ತದೆ. ಈ ಕಬ್ಬನ್ನು ಗ್ರಾಮದಲ್ಲಿ 40ರಿಂದ 50 ವರ್ಷಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ.

ಇದರಲ್ಲಿ ನಷ್ಟವನ್ನು ನಾವೆಂದು ಅನುಭವಿಸಿಲ್ಲ. ವರ್ಷದಿಂದ ವರ್ಷಕ್ಕೆ ಆರ್ಥಿಕ ಮಟ್ಟ ವೃದ್ಧಿಸುತ್ತಿದೆ~ ಎಂದು ಗ್ರಾಮದ ಕಬ್ಬು ಬೆಳಗಾರ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯಿಸುತ್ತಾರೆ.

ರೋಗ ನಿರೋಧಕ ಶಕ್ತಿ: `ಕಪ್ಪು ಕಬ್ಬು ತಿನ್ನಲು ಬಹಳ ಸಿಹಿಯಾಗಿದ್ದು, ಇದರಲ್ಲಿ ರೋಗ ನಿರೋಧಕ ಅಂಶಗಳೂ ಇವೆ. ಕಾಮಾಲೆ, ಅಜೀರ್ಣ, ಮಲಬದ್ಧತೆ ಹಾಗೂ ಇನ್ನಿತರೇ ಕಾಯಿಲೆಗಳಿಗೆ ಈ ಕಬ್ಬು ರಾಮಬಾಣ. ಆದರೆ ಸಂಕ್ರಾಂತಿ ಸಮಯದಲ್ಲಿ ಮಾತ್ರ ಈ ಕಬ್ಬು ಚೆನ್ನಾಗಿ ಬರುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಒಂದು ಗೇಣು ಕರಿ ಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಜನರಲ್ಲಿ ಮನೆ ಮಾಡಿದೆ. ಹಾಗಾಗಿ ಸಂಕ್ರಾಂತಿ ಸಮಯದಲ್ಲಿ ನಮ್ಮೂರಿನ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ~ ಎಂದು ಮತ್ತೊಬ್ಬ ಕಬ್ಬು ಬೆಳೆಗಾರ ಕುಮಾರಸ್ವಾಮಿ ಹೇಳುತ್ತಾರೆ.

`ರಾಜ್ಯದಾದ್ಯಂತ ಬಿಳಿಕಬ್ಬನ್ನು ಹೆಚ್ಚಾಗಿ ವಾಣಿಜ್ಯ ಬೆಳೆಯಾಗಿ ರೈತರು ಬೆಳೆಯುತ್ತಾರೆ. ಆದರೆ, ಈ ಕರಿ ಕಬ್ಬನ್ನು ರಾಜ್ಯದ ಕೆಲವು ಕಡೆ ಮಾತ್ರ ಬೆಳೆಯಲಾಗುತ್ತದೆ. ಅದರಲ್ಲೂ ರಾಮನಗರ ಜಿಲ್ಲೆಯಲ್ಲಿ ಇದೊಂದೇ ಗ್ರಾಮದಲ್ಲಿ ಮಾತ್ರ ಈ ಕಬ್ಬನ್ನು ಬೆಳೆಯಲಾಗುತ್ತಿದೆ. ಹಲವಾರು ದಶಕಗಳಿಂದ ಗ್ರಾಮಸ್ಥರು ಕರಿಕಬ್ಬಿನ ಬೇಸಾಯವೇ ಜೀವನಾಧಾರವಾಗಿದೆ~ ಎಂದು ಅವರು ತಿಳಿಸುತ್ತಾರೆ.

`ವರ್ಷಕ್ಕೊಮ್ಮೆ ವಿಶೇಷವಾಗಿ ಬೆಳೆಯುವ ಈ ಕಬ್ಬನ್ನು ಮನೆ ಮಂದಿಯೆಲ್ಲಾ ಬಹಳ ಮುತುವರ್ಜಿಯಿಂದ ಬೆಳೆಸುತ್ತೇವೆ. ವರ್ಷಾನುಗಟ್ಟಲೇ ಕಷ್ಟಪಟ್ಟು ಬೆಳೆಯುವ ಕರಿ ಕಬ್ಬನ್ನು ಹೊರ ರಾಜ್ಯಗಳಿಂದ ಬರುವ ದಲ್ಲಾಳಿಗಳು ಅಥವಾ ವ್ಯಾಪಾರಸ್ಥರು ಹಬ್ಬಕ್ಕೂ ಒಂದು ವಾರ ಮುನ್ನವೇ ಬಂದು ವ್ಯಾಪಾರ ಮಾಡುತ್ತಾರೆ. ಹೀಗಾಗಿ ನಮಗೆ ಸಾಗಾಣಿಕೆಯ ಬಗ್ಗೆ ಚಿಂತೆ ಇಲ್ಲ~ ಎಂದು ವಿವರಿಸುತ್ತಾರೆ.`ಕರಿಕಬ್ಬು ನಮ್ಮ ಪಾಲಿನ ಭಾಗ್ಯಲಕ್ಷ್ಮಿ. ಇದರ ಬಣ್ಣ ಕಪ್ಪಾಗಿದ್ದರೂ ಇದು ನಮ್ಮ ಬಾಳನ್ನು ಬೆಳಗಿಸುತ್ತಿರುವ ಜ್ಯೋತಿಯಾಗಿದೆ~ ಎಂದು ರೈತ ಪುಟ್ಟಸ್ವಾಮಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT