ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಮೆಣಸು, ಏಲಕ್ಕಿಗೆ `ಸೊರಗು' ಭೀತಿ

Last Updated 28 ಜುಲೈ 2013, 11:12 IST
ಅಕ್ಷರ ಗಾತ್ರ

ಯಳಂದೂರು: ಅತಿಯಾದ ಶೀತ, ಸುರಿಯದ ವರ್ಷಧಾರೆಯಿಂದ ಸಾಂಬಾರು ಪದಾರ್ಥಗಳ ರಾಜ ಕರಿಮೆಣಸು ಹಾಗೂ ರಾಣಿ ಏಲಕ್ಕಿಗೆ ಈ ಭಾರಿ ಸೊರಗು ರೋಗದ ಭೀತಿ ಆವರಿಸಿದೆ.

ಈಗಾಗಲೇ ಏಲಕ್ಕಿ ಗಿಡಗಳು ಕೊಳೆಯಲು ಶುರು ಮಾಡಿವೆ. ಇವುಗಳ ಜತೆ ಮಿಶ್ರ ಬೆಳೆಗಳಾದ ಚಕ್ಕೋತ, ನೇರಲೆ, ಕಿತ್ತಳೆ, ನಿಂಬೆ, ಹಲಸುಗಳ ಇಳುವರಿಯೂ ಕುಸಿದಿದೆ. ಆದರೆ, ಇಲ್ಲಿನ ಮೋಡ ಮುಸುಕಿದ ಹವಾಮಾನ ಕಾಫಿ ಬೆಳೆಗೆ ವರವಾಗಿ ಪರಿಣಮಿಸಿದೆ. ಇತರೆ ತೋಟಗಾರಿಕಾ ಫಸಲಿನ ನಷ್ಟವನ್ನು ಕಾಫಿ ಬೆಳೆದು, ತುಂಬಿಕೊಳ್ಳುವ ಉದ್ದೇಶವನ್ನು ಬಿಳಗಿರಿರಂಗನ ಬೆಟ್ಟದ ಸಣ್ಣ ರೈತರು ಹೊಂದಿದ್ದಾರೆ.

ದಿಢೀರ್ ಕುಸಿದ ಉಷ್ಣತೆ, ಎರಡು ವರ್ಷಗಳಿಂದ ಕಾಣದ ಮಳೆ, ಅವೈಜ್ಞಾನಿಕ ಬೇಸಾಯ ಕ್ರಮಗಳಿಂದ ಏಲಕ್ಕಿ, ಮೆಣಸಿನ ಉತ್ಪಾದನೆ ಕುಸಿತ ಕಂಡಿದೆ. ನೆರಳು ಜಾಸ್ತಿ ಇರುವ ಕಾಫಿ ತೋಟಗಳಲ್ಲಿ ಕರಿಮುಂಡ ತಳಿಯನ್ನು ಹೆಚ್ಚಾಗಿ ಹಾಗೂ ಹೆಚ್ಚು ಇಳುವರಿ ಕೊಡುವ ಸಂಕರ ತಳಿ ಪನ್ನಿಯೂರ್ ಹೈಬ್ರಿಡ್-1ಯನ್ನು ಕಡಿಮೆ ನೆರಳು ಬೀಳುವ ಪ್ರದೆಶಗಳಲ್ಲಿ ಬೆಳೆಯುವವರು ಇಲ್ಲಿದ್ದಾರೆ.

ಈಗ ಕಾಣಿಸಿಕೊಂಡಿರುವ ನಿಧಾನ ಸೊರಗು ರೋಗಕ್ಕೆ ಇವುಗಳ ಹೂ ಉದುರ ತೊಡಗಿವೆ. ಇತ್ತೀಚೆಗೆ ವಾತಾವರಣದಲ್ಲಿ ಶೀತವೂ ಹೆಚ್ಚಾಗಿ ಕಾಣಿಸಿಕೊಂಡಿದೆ. ತುಂತುರು ಮಳೆಯೂ ಬೀಳುತ್ತಿರುವುದು ಏಲಕ್ಕಿ ಫಸಲನ್ನು ಕೊಳೆಯುವಂತೆ ಮಾಡಿದೆ. ಆದರೆ, ಕಾಫಿ ಮಾತ್ರ ಯಾವುದೇ ಭಾದೆಗೆ ಒಳಗಾಗಿಲ್ಲ ಎಂಬುದು ತುಸು ಸಮಾಧಾನ ತಂದಿದೆ ಎಂಬುದು ಕೃಷಿಕರ ನುಡಿ.

`ಸರಿಯಾಗಿ ಎರಡು ವರ್ಷಗಳಿಂದ ಮಳೆ ಆಗಿಲ್ಲ. ಈಗಾಗಲೇ 4 ಎಕರೆಯಲ್ಲಿ 600 ಮೆಣಸು ಸಸಿಗಳನ್ನು ಕಾಫಿ, ಏಲಕ್ಕಿ ನಡುವೆ ಬೆಳೆಸಿದ್ದೇವೆ. ಹಲವು ಮೆಣಸು ಮೊಗ್ಗು ಕಚ್ಚಿವೆ. ಇತ್ತೀಚಿಗೆ ಮೆಣಸು ಬಳ್ಳಿಯಲ್ಲಿ ಸೊರಗು ರೋಗ ಕಾಣಿಸಿಕೊಂಡಿದೆ. ಎಲೆಯ ನಡುವೆ ಕಪ್ಪಾದ ವೃತ್ತಗಳು ಕಾಣಿಸಿಕೊಂಡಿದೆ. ಇವುಗಳ ನಡುವೆ ಬೆಳೆಯುವ ಉದ್ದವಾದ ಗರೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತಿವೆ.

ಇದರಿಂದ ಇಳುವರಿ ಕುಸಿಯುತ್ತದೆ. ಸುಮಾರು 200 ಸಣ್ಣರೈತರು, ಕಾಫಿ ಮತ್ತು ಮೆಣಸು ಬೆಳೆಗಾರರು ಇಲ್ಲಿದ್ದಾರೆ. ಇವರು ಪ್ರತಿ ವರ್ಷ 10 ಟನ್ ಮೆಣಸು ಹಾಗೂ 40 ರಿಂದ 50 ಟನ್ ಕಾಫಿ ಬೆಳೆಯುತ್ತಾರೆ. ಈ ಭಾರಿ ಮೆಣಸು ಬಳ್ಳಿಯಲ್ಲಿ ಕಾಣಿಸಿಕೊಂಡ ರೋಗದಿಂದ ಇಳುವರಿ 5 ಟನ್‌ಗೆ ಕುಸಿಯುತ್ತದೆ. ಆದರೆ, ಕಾಫಿ ಬೆಳೆಯಲ್ಲಿ ಈ ಭಾರಿ ಉತ್ತಮ ಇಳುವರಿ ನಿರೀಕ್ಷಿಸಬಹುದು' ಎನ್ನುತ್ತಾರೆ ಕೃಷಿಕ ವಾದಿರಾಜ್.

ನಿಧಾನ ಸೊರಗು ಬಾಧೆ ನಿಯಂತ್ರಣಕ್ಕೆ ಮೆಣಸು ಬೆಳೆಯುವ ಭೂಮಿಗೆ 20 ಗ್ರಾಂ ಫ್ಯುರಡಾನ್ ಇಲ್ಲವೇ 10 ಗ್ರಾಂ ಥಿಮೇಟ್ ಹಾಗೂ ಶೇ 0.1ರ ಕಾರ್ಬೆಂಡಿಜಿಂನಿಂದ ಉಪಚರಿಸಬೇಕು. ಮುಂಗಾರಿಗೂ ಮುನ್ನ, ಮುಂಗಾರಿನ ಸಮಯ ಮತ್ತು ನಂತರ ಒಮ್ಮೆ ಶೇ 1ರ ಬೋರ್ಡೊ ದ್ರಾವಣ ಇಲ್ಲವೆ 2 ಗ್ರಾಂ ಪೆಕ್ಸಾಕೊನಜೋಲ್ ಪ್ರತಿ ಲೀಟರ್ ನೀರಲ್ಲಿ ಕರಗಿಸಿ ಬಳ್ಳಿಗಳಿಗೆ ಉಪಚರಿಸಬೇಕು. ಇದರಿಂದ ಕಾಯಿ ಗೊಂಚಲು ಕೊಳೆಯುವಿಕೆ ತಡೆಗಟ್ಟಬಹುದು.

`ಮೇ ಮತ್ತು ಜೂನ್ ಸಮಯದಲ್ಲಿ ಮೆಣಸಿನ ಬಳ್ಳಿಗಳ ಸುತ್ತಲೂ ಇರುವ ಕಳೆಗಳನ್ನು ತೆಗೆಯಬೇಕು. ನಂತರ 10 ಕಿಲೋ ಕೊಟ್ಟಿಗೆ ಗೊಬ್ಬರ ಇಲ್ಲವೇ ಕಾಂಪೋಸ್ಟ್ ಕೊಡಬೇಕು. ಶಿಪಾರಸು ಮಾಡಿದ 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟಾಷ್ ಪ್ರತಿ ಬಳ್ಳಿಗೆ ಕೊಡಬೇಕು. ರಸಾಯನಿಕ ಗೊಬ್ಬರವನ್ನು ಜೂನ್ ತಿಂಗಳಲ್ಲಿ ಕೊಡಬೇಕು' ಎಂದು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕ ತಜ್ಞ ಎ.ಬಿ. ಮೋಹನ್ ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT