ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣಾ ವಿರುದ್ಧ ಕ್ರಮ: ರಾಜ್ಯಪಾಲರಿಗೆ ಮನವಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಚೆನ್ನೈ: 2 ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ನೋಟಿಸ್ ನೀಡಿರುವ ಬೆನ್ನಲ್ಲೇ, ಕರುಣಾನಿಧಿ ಅವರನ್ನು ಮನೆ, ಫ್ಲ್ಯಾಟ್ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ವಿಚಾರಣೆಗೊಳಪಡಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಸ್ವಾಮಿ ರಾಜ್ಯಪಾಲರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ನಾಟಕೀಯ ಬೆಳವಣಿಗೆಯಲ್ಲಿ ರಾಜಭವನಕ್ಕೆ ತೆರಳಿದ ಸುಬ್ರಮಣಿಯನ್ ಸ್ವಾಮಿ, ಸಿಎಂ ಅವರನ್ನು ತಮಿಳುನಾಡು ಗೃಹ ಮಂಡಳಿಯ ಫ್ಲ್ಯಾಟ್ ಮತ್ತು ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು.

ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲಾ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಾಮಿ ರಾಜ್ಯಪಾಲರ ಕಚೇರಿಗೆ ಅರ್ಜಿ ಸಲ್ಲಿಸಿದರು.

‘ಕರುಣಾನಿಧಿ ತಮ್ಮ ಆಪ್ತರಿಗೆ ಮನೆ, ಫ್ಲ್ಯಾಟ್ ಹಂಚಿಕೆ ಮಾಡುವ ಮೂಲಕ ಎಲ್ಲಾ ನಿಯಮಾವಳಿಗಳನ್ನೂ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಪುರಾವೆಗಳು ನನ್ನ ಬಳಿ ಇವೆ. ದಾಖಲೆಗಳಿಲ್ಲದೆ ನಾನು ಯಾವ ಆರೋಪವನ್ನೂ ಮಾಡುವುದಿಲ್ಲ’ ಎಂದು ಸ್ವಾಮಿ ಅರ್ಜಿ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

 ‘ತಮಿಳುನಾಡು ಗೃಹ ಮಂಡಳಿ ಸ್ವಾಮ್ಯದಲ್ಲಿದ್ದ  ಶೇ.15ರಷ್ಟು ಮನೆ, ಫ್ಲ್ಯಾಟ್‌ಗಳನ್ನು ಮುಖ್ಯಮಂತ್ರಿ ವಿವೇಚನಾ ಕೋಟಾಕ್ಕೆ ಮೀಸಲಿಡಲಾಗಿತ್ತು.  ನಿಯಮಾವಳಿಗಳನ್ನು ಉಲ್ಲಂಘಿಸಿ ಕರುಣಾನಿಧಿ ಅವರಿಗೆ ಆಪ್ತರಾಗಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರುಗಳು, ಪೊಲೀಸ್ ಅಧಿಕಾರಿಳು ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳಿಗೆ ಮನೆ, ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದ್ದರಿಂದ ಕರುಣಾನಿಧಿ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯ 11 ಮತ್ತು 13ನೇ ವಿಧಿಗಳ ಅನ್ವಯ ವಿಚಾರಣೆಗೆ ಒಳಪಡಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಿರುವುದಾಗಿ ಸ್ವಾಮಿ ತಿಳಿಸಿದರು. ಆದರೆ ಫಲಾನುಭವಿಗಳ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

 ಕರುಣಾನಿಧಿ ವಿರುದ್ಧ ನನ್ನ ಬಳಿ 23 ವಿವಿಧ ಭ್ರಷ್ಟಾಚಾರದ ಪ್ರಕರಣಗಳ ಮಾಹಿತಿ ಇವೆ. ಪ್ರತಿಯೊಂದರ ವಿಚಾರಣೆಗೂ ರಾಜ್ಯಪಾಲರ ಅನುಮತಿ ಪಡೆಯುವ ಅಗತ್ಯವಿದೆ. ಭ್ರಷ್ಟ ಚಟುವಟಿಕೆಗಳನ್ನು ನಡೆಸಲು ಕಚೇರಿಯನ್ನು ಕರುಣಾನಿಧಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಸ್ವಾಮಿ ಆರೋಪಿಸಿದರು.

2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನೀಡಿರುವ ದೂರಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಕರುಣಾನಿಧಿ ಮತ್ತು ಎ.ರಾಜಾ ಹಾಗೂ ವಿವಿಧ ಖಾಸಗಿ ಕಂಪೆನಿಗಳ ನಡುವಿನ ಒಪ್ಪಂದವಾಗಿದೆ. ಆದ್ದರಿಂದ ಅವರ ವಿಚಾರಣೆಗೆ ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ತೀಕ್ಷ್ಣವಾಗಿ ಹೇಳಿದರು.

ನೋಟಿಸ್ ತಲುಪಿಲ್ಲ: 2 ಜಿ ತರಂಗಾಂತರ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಮ್ಮ ಆರೋಪಿಸಿದ್ದಕ್ಕೆ ಕರುಣಾನಿಧಿ ಭಾನುವಾರ ಕಳುಹಿಸಿದ್ದಾರೆ ಎನ್ನಲಾದ ನೋಟಿಸ್ ತಮಗೆ ಇನ್ನೂ ತಲುಪಿಲ್ಲ ಎಂದು ಸ್ವಾಮಿ ಹೇಳಿದರು.

‘ಕರುಣಾನಿಧಿ ನೀಡಿರುವ ನೋಟಿಸ್ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ಅವರು ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿ. ತಾವು ನೀಡಿರುವ ಖಾಸಗಿ ದೂರು ಸಿಬಿಐನ ಎಫ್‌ಐಆರ್ ಅಥವಾ ಪ್ರತ್ಯಾರೋಪದೊಂದಿಗೆ ಸೇರಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಫೆ.22ರಂದು ನಡೆಯಲಿರುವ ವಿಚಾರಣೆಯಲ್ಲಿ ಸ್ಪಷ್ಟವಾಗುತ್ತದೆ. ನಂತರ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಸ್ವಾಮಿಗೆ ಜಯಾ ಬೆಂಬಲ: ಈ ಮಧ್ಯೆ, 2 ಜಿ ಹಗರಣದಲ್ಲಿ ಸಹ ಆರೋಪಿಯಾಗಿ ಕರುಣಾನಿಧಿ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ದೆಹಲಿ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಸ್ವಾಮಿ ಕ್ರಮಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಹಗರಣದ ಪ್ರಮುಖ ಫಲಾನುಭವಿಗಳು ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಹಿಂದಿರುವ ಡಿಎಂಕೆ ಕುಟುಂಬದ ಸದಸ್ಯರಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಈ ಹಗರಣದಲ್ಲಿ ರಾಜಾ ಕೇವಲ ಕೈಗೊಂಬೆಯಷ್ಟೆ. ಅವರ ಹಿಂದಿರುವ ಸೂತ್ರಧಾರರನ್ನು ಬಯಲಿಗೆಳೆಯುವ ಕಾರ್ಯ ನಡೆಬೇಕಿದೆ. ನಮ್ಮ ದೇಶದ ಹಿತಾಸಕ್ತಿಗೆ ವೈರಿಗಳಾಗಿರುವ ಚೀನಾ ಮತ್ತು ಪಾಕಿಸ್ತಾನದಂತಹ ಹಲವಾರು ವಿದೇಶಿಯರಿಗೆ’ ದೂರಸಂಪರ್ಕ ಕ್ಷೇತ್ರದಲ್ಲಿ ಭಾರತವನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ’ ಎಂದು ಜಯಾ ಕಿಡಿಕಾರಿದರು.

‘ಇದು ಭಾರತದ ಭದ್ರತೆಯ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ಕಾಂಗ್ರೆಸ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ವಹಿಸಲು ಒಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT