ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಮಾಡಿ, ರೈಲಿನಲ್ಲೇ ಊಟ ಮಾಡಿ..!

Last Updated 6 ಡಿಸೆಂಬರ್ 2013, 19:31 IST
ಅಕ್ಷರ ಗಾತ್ರ

ದಾವಣಗೆರೆ: ರೈಲಿನಲ್ಲಿ ಪ್ರಯಾಣಿಸುವಾಗ ಹಸಿ-­ವಾ­ದರೆ ಆಹಾರದ ನಿರೀಕ್ಷೆ ಸಹಜ. ಮತ್ತೊಂದೆಡೆ  ಮುಂದಿನ ಸ್ಟೇಷನ್‌ನಲ್ಲಿ ಏನಾದರೂ ಖರೀದಿಗೆ ಸಮಯ ಸಿಗುತ್ತೋ ಇಲ್ಲವೋ ಎಂಬ ಆತಂಕವೂ ಕಾಡುತ್ತದೆ... ಇಂತಹ ಚಿಂತೆಗೆ ಇನ್ನು ಅವಕಾಶ ಇಲ್ಲ. ರಾಜ್ಯದ ಪ್ರಮುಖ ರೈಲು ರೈಲು ನಿಲ್ದಾಣಗಳಲ್ಲಿ 24 ಗಂಟೆಯೂ ತೆರೆದಿರುವ ಕ್ಯಾಂಟೀನ್‌ ‘ಖಾನಾವಳಿ’ ಆರಂಭವಾಗಿವೆ. ರೈಲಿನಲ್ಲಿ ಪ್ರಯಾಣಿಸುತ್ತಿರು­ವಾಗಲೇ ಒಂದು ಫೋನ್‌ ಕರೆ ಮಾಡಿದರೆ ಸಾಕು ನಿಮ­ಗಿಷ್ಟದ ಆಹಾರ ನೀವು ಕುಳಿತಿರುವೆಡೆಗೇ ತಲುಪಲಿದೆ!.

 ಖಾನಾವಳಿ ಎಲ್ಲಿದೆ?:ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌ ಮತ್ತು ಕೊಮಸಮ್‌ ಸಂಸ್ಥೆ ಜಂಟಿಯಾಗಿ ಆರಂಭಿಸಿರುವ ಈ ಸೇವೆ ಸದ್ಯಕ್ಕೆ ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯಲ್ಲಿ ಲಭ್ಯವಿದೆ. ಉಳಿದಂತೆ, ಮಹಾ­ರಾಷ್ಟ್ರದ ನಾಗಪುರ, ಆಂಧ್ರಪ್ರದೇಶದ ವಿಜಯ­ವಾಡ  ರೈಲು ನಿಲ್ದಾಣಗಳಲ್ಲೂ ಜಾರಿಯಲ್ಲಿದೆ.

ಮಾಡಬೇಕಾದ್ದೇನು?: ನೀವು ಪ್ರಯಾಣಿಸುತ್ತಿರುವ ರೈಲು ಮುಂದಿನ ರೈಲು ನಿಲ್ದಾಣಕ್ಕೆ ತಲುಪುವುದಕ್ಕೆ ಅರ್ಧ ಗಂಟೆ ಮೊದಲು 011 41 100 100 ಸಂಖ್ಯೆಗೆ ಕರೆ ಮಾಡಬೇಕು. ರೈಲಿನ ಸಂಖ್ಯೆ, ಬೋಗಿ ಸಂಖ್ಯೆ, ಆಸನ ಸಂಖ್ಯೆ ಹಾಗೂ ನಿಮಗೆ ಬೇಕಾದ ತಿನಿಸು ತಿಳಿಸಿದರೆ ಸಾಕು. ಕ್ಯಾಂಟೀನ್‌ ಕಾರ್ಯ­ನಿರ್ವಹಿಸುತ್ತಿರುವ ನಗರದ ರೈಲು ನಿಲ್ದಾಣದಲ್ಲಿ ನೀವು ಕುಳಿತಲ್ಲಿಗೇ ಕ್ಯಾಂಟೀನ್‌ ಸಿಬ್ಬಂದಿ ಆಹಾರ ಪೂರೈಸುತ್ತಾರೆ. ಆಗ, ಹಣ ಪಾವತಿಸಿದರೆ ಸಾಕು. ಈ ಸೌಲಭ್ಯ 24 ಗಂಟೆಗಳೂ ಲಭ್ಯ.

‘ಈ ಯೋಜನೆಯಿಂದ ಮಹಿಳೆ­ಯರಿಗೆ ಹಾಗೂ ವೃದ್ಧರಿಗೆ ತುಂಬ ಉಪಯೋಗವಾಗಲಿದೆ. ಊಟ ಮಾಡಲು ಹೋದರೆ ರೈಲು ಹೊರಟೀತು ಎಂಬ ಆತಂಕ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಪ್ರಮುಖ ನಿಲ್ದಾಣಗಳಲ್ಲೂ ಈ ಸೇವೆ ಆರಂಭಿಸಿದರೆ ಚೆನ್ನಾಗಿರುತ್ತದೆ’ ಎನ್ನುತ್ತಾರೆ ಪ್ರಯಾಣಿಕ ಸಂಗಮೇಶ್‌.

ಗುತ್ತಿಗೆ ಪ್ರಕ್ರಿಯೆ ಪ್ರಗತಿಯಲ್ಲಿ: ದಾವಣಗೆರೆಯಿಂದ ಬೆಳಿಗ್ಗೆ 8.30ಕ್ಕೆ ಬೆಂಗಳೂರಿಗೆ ತೆರಳುವ ಇಂಟರ್‌ಸಿಟಿ ರೈಲು ಪ್ರಯಾಣಿಕರಿಗೆ ಮೂರು ನಾಲ್ಕು ತಿಂಗಳಿನಿಂದ ರೈಲಿನಲ್ಲಿ ಉಪಾಹಾರ ಪೂರೈಕೆಯಾಗದೇ ತೊಂದರೆಯಾಗಿತ್ತು. ಇದರಿಂದ ಹಿರಿಯರು, ಮಕ್ಕಳು ಹಾಗೂ ರಕ್ತದೊತ್ತಡ, ಮಧುಮೇಹಿಗಳಿಗೆ ತೀವ್ರ ತೊಂದರೆಯಾಗಿತ್ತು.

ಈ ಮೊದಲು ಆಹಾರ ಪೂರೈಕೆಯ ಗುತ್ತಿಗೆಯನ್ನು ಅರಸೀಕೆರೆಯ ಗಜೇಂದ್ರ ಎಂಬುವವರು ಪಡೆದು­ಕೊಂಡಿದ್ದರು. ಅವರು ಮೃತಪಟ್ಟ ಕಾರಣ ಉಪಾಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಹೊಸದಾಗಿ ಗುತ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಸದ್ಯದಲ್ಲೇ ಈ ಸಮಸ್ಯೆಯೂ ಬಗೆಹರಿಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT