ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೋಕೆ ಎಂಬ ನಾದ ನಿಧಿ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಫಳ ಫಳ ಹೊಳೆಯುತ್ತಿದ್ದ ಕಂಗಳಲ್ಲಿ ಎಲ್ಲವನ್ನೂ ಹೇಳಿಕೊಳ್ಳುವ ತವಕ. ನಡೆಯಲ್ಲಿ ವಿಧೇಯತೆ. ಮಾತಿನ ತುಂಬಾ ಸಂಗೀತದ ಅಮಲು.
ಲಕ್ಷ್ಮಣ್ ಶ್ರೀರಾಮ್ ಅವರು ನಮ್ಮ ಮೊದಲ ನೋಟಕ್ಕೆ ದಕ್ಕುವುದು ಹೀಗೆ.  ಮೂರ್ನಾಲ್ಕು ವರ್ಷದಿಂದ `ಕರೋಕೆ ಟ್ರೀ' ಎಂಬ ಬ್ಯಾಂಡ್ ಕಟ್ಟಿಕೊಂಡ ಇವರದ್ದು ಸಂಗೀತದೊಂದಿಗಿನ ಗಾಢ ಸಂಬಂಧ. ತಮ್ಮ ಹುಟ್ಟುಹಬ್ಬದ ದಿನವೇ ಬ್ಯಾಂಡ್ ಕಟ್ಟಿದರು.

ಅಮೆರಿಕದಲ್ಲಿ ಸುಮಾರು 30 ವರ್ಷ ನೆಲೆಸಿದ್ದ ಅಲ್ಲಿಯ ಸೇನೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಸ್ಪೆಷಾಲಿಸ್ಟ್ ವೃತ್ತಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಇವರು ಅಲ್ಲಿಯೂ ಭಾರತೀಯ ಹಾಡುಗಳ ಕರೋಕೆ ಗಂಧವನ್ನು ಹರಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಮೊದಲೇ ರೆಕಾರ್ಡ್ ಆದ ಸಂಗೀತದ ಟ್ರ್ಯಾಕ್‌ಗೆ ತಕ್ಕಂತೆ ಹಾಡುವುದು ಕರೋಕೆ ಸಂಗೀತದ ವಿಶೇಷತೆ. 1995ರಿಂದಲೇ ಕರೋಕೆಗೆ ಮನಸೋತ ಶ್ರೀರಾಮ್ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

1995ರಲ್ಲಿ ಅಟ್ಲಾಂಟಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ಸಂದರ್ಭದಲ್ಲಿ ಕನ್ನಡ ಹಾಡನ್ನು ಹಾಡಿದರಂತೆ. `ಡಾ.ರಾಜ್‌ಕುಮಾರ್ ಅವರ `ಜೇನಿನ ಹೊಳೆಯೊ ಹಾಲಿನ ಮಳೆಯೊ...' ಹಾಡಿದೆ. ನಮ್ಮದಲ್ಲದ ನಾಡಿನಲ್ಲಿ ರಾಜಣ್ಣನ ಹಾಡು ಹಾಡುವಾಗ ಮನಸ್ಸು ಎಷ್ಟು ಪುಳಕಿತಗೊಂಡಿತ್ತು ಗೊತ್ತಾ? ಆ ತೃಪ್ತಿಯೇ ಬೇರೆ' ಎಂದು ಪುಳಕಿತರಾಗುತ್ತಾರೆ.

ಸಂಗೀತವೇ ಉಸಿರು
`ಹಲವು ವರ್ಷಗಳವರೆಗೆ ಆರು ತಿಂಗಳು ಅಮೆರಿಕ ಇನ್ನಾರು ತಿಂಗಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದವ ನಾನು. ದುಡಿದೆ, ಹಣ ಸಂಪಾದಿಸಿದೆ. ಈಗ ಅವುಗಳ ವ್ಯಾಮೋಹವಿಲ್ಲ. ತಾಯ್ನಾಡಿನ ಪ್ರೀತಿಗೆ ಹಾತೊರೆದು ಇಲ್ಲಿ ಬಂದುಬಿಟ್ಟೆ. ಮತ್ತೆ ಅಲ್ಲಿ ಹೋಗುವ ಮನಸ್ಸಾಗಲೇ ಇಲ್ಲ. ಹೆಂಡತಿ ಅಲ್ಲೇ ಗಣಿತ ಪ್ರಾಧ್ಯಾಪಕಿ. ನಿವೃತ್ತಿ ಆದಮೇಲೆ ಅವಳೂ ಇಲ್ಲಿಯೇ ಬರುತ್ತಾಳೆ. ನನಗೆ ಮೂವರು ಮಕ್ಕಳು. ಇಬ್ಬರು ಗಂಡುಮಕ್ಕಳು. ಒಬ್ಬಳು ದತ್ತು ಮಗಳು. ಅವರೆಲ್ಲಾ ಚೆನ್ನಾಗಿ ಓದಿದ್ದಾರೆ. ಅಮೆರಿಕದಲ್ಲೇ ಇದ್ದಾರೆ. ನಾನು ಮಲ್ಲೇಶ್ವರದಲ್ಲಿ ಉಳಿದುಕೊಂಡಿದ್ದೇನೆ. ಸಂಗೀತ ಸೇವೆ ಬಿಟ್ಟರೆ ನನಗೆ ಬೇರೆ ಪ್ರಪಂಚದ ಕಡೆ ಒಲವಿಲ್ಲ' ಎಂದು ದೃಢವಾಗಿ ಹೇಳುತ್ತಾರೆ ಶ್ರೀರಾಮ್.

ಇದುವರೆಗೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇವರ ನೆಚ್ಚಿನ ತಾಣವಂತೆ. `ವಯಸ್ಸಾದವರು, ಸಂಗೀತದ ಬಗ್ಗೆ ನಿಜವಾದ ಅಭಿರುಚಿ ಇರುವವರು ಅಲ್ಲಿ ಬರುತ್ತಾರೆ. ಟಿಕೆಟ್ ಇಟ್ಟು ಅವರ ಬಳಿ ಹಣ ವಸೂಲಿ ಮಾಡಲು ನನಗೇಕೋ ಮನಸ್ಸಿಲ್ಲ. ಕೆಲವೊಮ್ಮೆ ನನ್ನ ಕೈಯಿಂದಲೇ ಹಣ ಖರ್ಚಾಗಿರುತ್ತದೆ. ಅಮೆರಿಕದಲ್ಲಿ ದುಡಿದ ಹಣವನ್ನು ಇಲ್ಲಿ ಬಳಸುತ್ತಿದ್ದೇನೆ. ಇನ್ನು ಕೆಲವರು ಹಣ ನೀಡಿ ಕಾರ್ಯಕ್ರಮ ಏರ್ಪಡಿಸುತ್ತಾರೆ. ಕೆಲವು ಆಲ್ಬಂಗಳನ್ನೂ ಮಾಡಿದ್ದೇನೆ. ಅದರಿಂದ ಬಂದ ಹಣವನ್ನೆಲ್ಲಾ ಸೇರಿಸಿ ಸೆಪ್ಟೆಂಬರ್ ಕೊನೆಯ ವಾರ ಅನಾಥಾಶ್ರಮ ಇಲ್ಲವೇ ವೃದ್ಧಾಶ್ರಮಕ್ಕೆ ದಾನ ಮಾಡುತ್ತೇನೆ. ದೇವರು ಇಷ್ಟೆಲ್ಲಾ ಕೊಟ್ಟ. ನೀನೇನು ಮಾಡಿದೆ ಎಂದು ಕೇಳಿದರೆ, ಉತ್ತರಿಸಬೇಕಲ್ಲ?' ಎಂದು ನಗುತ್ತಾರೆ.

ಬ್ಯಾಂಡ್ ರೂಪ
ಸುಮಾರು 500ಕ್ಕೂ ಹೆಚ್ಚು ವಿವಿಧ ಭಾಷೆಯ ಹಾಡುಗಳನ್ನು ನೋಡದೇ ಹೇಳಬಲ್ಲ ಇವರು ಜನರ ಮನಸ್ಸಿನಿಂದ ಮರೆಯಾಗುತ್ತಿರುವ ಹಳೆಯ ಹಾಡುಗಳನ್ನು ಆಯ್ದುಕೊಂಡು ಕಾರ್ಯಕ್ರಮಗಳನ್ನು ನೀಡುತ್ತಾರೆ. 50ನೇ ವರ್ಷದಿಂದ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತವನ್ನು ರೋಹಿಣಿ ಪ್ರಭುನಂದನ್ ಅವರಿಂದ ಕಲಿಯುತ್ತಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ಇರುವ ರಾಗಗಳನ್ನು ಆಧರಿಸಿದ ಹಾಡುಗಳನ್ನು ಮಾತ್ರ ನಾನು ಹಾಡುತ್ತೇನೆ ಎನ್ನುವ ಇವರು `ಇಂಡಿಯನ್ ಫಿಲ್ಮ್ ಸಾಂಗ್ಸ್ ಅಂಡ್ ಕ್ಲಾಸಿಕಲ್ ಮ್ಯೂಸಿಕ್' ವಿಷಯ ಕುರಿತು ಸಂಶೋಧನೆಯನ್ನೂ ಕೈಗೊಂಡಿದ್ದಾರೆ. ಈಗಾಗಲೇ ಕೆಲವು ಸೀಡಿಗಳೂ ಬಿಡುಗಡೆಯಾಗಿವೆ. ಅದರಲ್ಲಿ ಅವರ ನೆಚ್ಚಿನ ಸೀಡಿ ಶಿವರಂಜಿನಿ ರಾಗದಲ್ಲಿರುವ ಐದು ಭಾಷೆಗಳ ಹಾಡಿನ ಸೀಡಿ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಸಂಸ್ಕೃತದಲ್ಲಿ ಹಾಡು ಹೇಳುವ ತಮ್ಮದು `ಮಲ್ಟಿ ಲಿಂಗ್ಯುವಲ್ ಕರೋಕೆ ಬ್ಯಾಂಡ್' ಎನ್ನುವುದು ಅವರ ವಾದ.

ಶ್ರೀರಾಮ್ ಅವರ ಬ್ಯಾಂಡ್‌ಗೆ ಬೆನ್ನೆಲುಬಾಗಿ ನಿಂತವರು ರೋಹಿಣಿ ಪ್ರಭುನಂದನ್. ಶ್ರೀರಾಮ್ ಅವರ ಶಾಸ್ತ್ರೀಯ ಸಂಗೀತ ಗುರು. `ಕರೋಕೆಯಲ್ಲಿ ಹಾಡುವುದು ಸುಲಭವಲ್ಲ. ಮೊದಲೇ ರೆಕಾರ್ಡ್ ಆಗಿರುವ ಆ ಟ್ರ್ಯಾಕ್‌ಗಳಲ್ಲಿ ಒಂದು ಸೆಕೆಂಡ್ ಹೆಚ್ಚು ಕಮ್ಮಿ ಆದರೂ ಹಾಡು ಹಾದಿ ತಪ್ಪುತ್ತದೆ. ಲಕ್ಷ್ಮಣ್ ಕರೋಕೆಯನ್ನು ಸಿದ್ಧಿಸಿಕೊಂಡವರು. ಕರ್ನಾಟಕಕ್ಕೆ ಮೊದಲಿಗೆ  ಕರೋಕೆಯನ್ನು ಪರಿಚಯಿಸಿದವರು ಇವರೇ ಎಂದರೆ ತಪ್ಪಾಗಲಾರದು.

ಇವರ ಸಂಗೀತ ಪ್ರೀತಿ ಅಪಾರವಾದುದು. ಸುಮಾರು 10 ವರ್ಷಗಳ ಹಿಂದಿನಿಂದ ಕಾರ್ಯಕ್ರಮವನ್ನು ನೀಡುತ್ತಿದ್ದೆವು. ಇದೀಗ ಕೆಲವು ವರ್ಷಗಳ ಹಿಂದಿನಿಂದ `ಕರೋಕೆ ಟ್ರೀ' ಎಂದು ಹೆಸರಿಡಲಾಗಿದೆ. ತಮ್ಮ ಹಣವನ್ನು ಖರ್ಚು ಮಾಡಿಕೊಂಡು ಸಂಗೀತ ಸೇವೆ ಮಾಡುವವರು ಅತಿ ವಿರಳ' ಎನ್ನುತ್ತಾರೆ ರೋಹಿಣಿ.

ಕಲೆಯೆಡೆಗೆ ಅಪಾರ ಪ್ರೀತಿ ಬೆಳೆಸಿಕೊಂಡು, ಹಾಡಿನ ಗೀಳಿನಲ್ಲೇ ಮೈಮರೆಯುವ ಶ್ರೀರಾಮ್ ಹೊಸ ಹಾಡಿನ ಬಗ್ಗೆ ನನಗೆ ಒಲವಿಲ್ಲ ಎನ್ನುತ್ತಾ ಸಂಗೀತದ ಪಯಣವನ್ನು ಮುಂದುವರಿಸುತ್ತಾರೆ. ಸಂಗೀತದ ಗೀಳು ಹತ್ತಿಸಿಕೊಂಡವರಿಗೆ, ಹಾಡುವ ಬಯಕೆಯಿರುವವರಿಗೆ ಇನ್ನು ಮುಂದೆಯೂ `ಕರೋಕೆ ಟ್ರೀ' ವೇದಿಕೆಯಲ್ಲಿ ಅವಕಾಶ ಇರುತ್ತದೆ ಎಂದು ಹೇಳಲು ಅವರು ಮರೆಯುವುದಿಲ್ಲ.

ಕರೋಕೆ ಎಂದರೆ...
ಹಾಡೊಂದು ಸ್ಟುಡಿಯೊದಲ್ಲಿ ಮೊದಲೇ ರೆಕಾರ್ಡ್ ಆಗಿರುತ್ತದೆ. ವಾದ್ಯಗಳ ನಾದವನ್ನು ಉಳಿಸಿಕೊಂಡು ಹಾಡುಗಾರರ ದನಿಯನ್ನು ಮ್ಯೂಟ್ ಮಾಡಲಾಗುತ್ತದೆ. ಅಂಥ ಕ್ಯಾಸೆಟ್‌ಗಳನ್ನು ಪ್ಲೇ ಮಾಡಿ ಸಂಗೀತದೊಂದಿಗೆ ದನಿ ಸೇರಿಸಿ ಹಾಡುವುದಕ್ಕೆ ಕರೋಕೆ ಗಾಯನ ಎಂದು ಕರೆಯಲಾಗುತ್ತದೆ. ಇದು ಮೊದಲಿಗೆ ಹುಟ್ಟಿಕೊಂಡಿದ್ದು ಜಪಾನ್‌ನಲ್ಲಿ. ಕಷ್ಟಕರವಾದ ಕರೋಕೆ ಗಾಯನವು, ಕೆಲವು ಹೆಸರಾಂತ ಗಾಯಕರು ರೆಕಾರ್ಡ್‌ನ ಟ್ರ್ಯಾಕ್‌ಗೆ ತಕ್ಕಂತೆ ತುಟಿಯನ್ನಷ್ಟೇ ಪಲುಕಿಸುವ `ಲಿಪ್ ಸಿಂಕಿಂಗ್'ಗಿಂತ ವಿಭಿನ್ನವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT