ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿರ್ವಹಿಸಿದರೂ ಬಲಿಪಶು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದರೂ ಇಲಾಖೆಯ ಹಿರಿಯ ಅಧಿಕಾರಿಗಳು ವಿನಾ ಕಾರಣ ನನ್ನನ್ನು ಬಲಿಪಶು ಮಾಡಿರುವುದು ನೋವು ತಂದಿದೆ~ ಎಂದು ಅರುಣ್‌ಕುಮಾರ್ ಅಳಲು ತೋಡಿಕೊಂಡರು.

ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ ನಂತರ `ಪ್ರಜಾವಾಣಿ~ ಜತೆ ಮಾತನಾಡಿದ ಅರುಣ್‌ಕುಮಾರ್, `ನಗರದಲ್ಲಿ ಸರಗಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ (ಹಾಟ್ ಪಾಯಿಂಟ್ಸ್) ಕಾನೂನು ಸುವ್ಯವಸ್ಥೆ ಠಾಣೆಗಳ ಸಿಬ್ಬಂದಿಯೂ ವಾಹನ ಸವಾರರ ತಪಾಸಣೆ ನಡೆಸಬೇಕು ಎಂದು ಕಮಿಷನರ್ ಅವರೇ ಆದೇಶ ಹೊರಡಿಸಿದ್ದಾರೆ. ಅವರ ಆದೇಶದಂತೆಯೇ ಕರ್ತವ್ಯ ನಿರ್ವಹಿಸಿದ್ದೇನೆ~ ಎಂದರು.

`ಕಾನ್‌ಸ್ಟೇಬಲ್ ಲೋಕೇಶ್ ಮತ್ತು ನಾನು, ಜ.14ರಂದು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ತ್ಯಾಗರಾಜನಗರದ ಗಣೇಶ ಮಂದಿರ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದವು. ಆ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬೈಕ್‌ನಲ್ಲಿ ಬಂದ ವಕೀಲ ಬಾಲಕೃಷ್ಣ, ಅವರ ಸ್ನೇಹಿತರಾದ ರಾಘವೇಂದ್ರ ಮತ್ತು ಪ್ರೀತಮ್ ಅವರನ್ನು ತಡೆದು ತಪಾಸಣೆ ಮಾಡಲು ಮುಂದಾದೆ. ಇದಕ್ಕೆ ಪ್ರತಿರೋಧ ತೋರಿದ ಆ ಮೂರು ಮಂದಿ, ಕಾನೂನು ಸುವ್ಯವಸ್ಥೆ ಠಾಣೆಗಳ ಸಿಬ್ಬಂದಿಗೆ ವಾಹನ ಸವಾರರ ತಪಾಸಣೆ ಮಾಡುವ ಅಧಿಕಾರವಿಲ್ಲ ಎಂದು ವಾಗ್ವಾದ ನಡೆಸಿದರು. ಕಮಿಷನರ್ ಅವರ ಆದೇಶದಂತೆಯೇ ತಪಾಸಣೆ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರೂ ಕೇಳದ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು~ ಎಂದು ಹೇಳಿದರು.

`ಆದರೂ ಕರ್ತವ್ಯ ಪಾಲನೆಗೆ ಮುಂದಾದಾಗ ಬಾಲಕೃಷ್ಣ ಅವರು ನನ್ನ ಕೊರಳ ಪಟ್ಟಿ ಹಿಡಿದು ಎಳೆದಾಡಿದರು. ಅಲ್ಲದೇ ಸಮವಸ್ತ್ರವನ್ನು ಹರಿದು ಕೈನಿಂದ ಗುದ್ದಿ ಹಲ್ಲೆ ನಡೆಸಿದರು. ಈ ಘಟನೆ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಸಹ ಸ್ಥಳದಲ್ಲೇ ಇದ್ದರು. ಘಟನೆಯ ಬಗ್ಗೆ ವಾಕಿಟಾಕಿ ಮೂಲಕ ಠಾಣೆಗೆ ಮಾಹಿತಿ ನೀಡಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡೆ. ನಂತರ ಆ ಮೂವರನ್ನು ಠಾಣೆಗೆ ಕರೆದೊಯ್ಯಲಾಯಿತು. ಘಟನೆ ಬಗ್ಗೆ ಠಾಣೆಯ ಇನ್‌ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡಿ ದೂರು ಸಹ ದಾಖಲಿಸಿದೆ. ಆ ದೂರಿನ ಹಿನ್ನೆಲೆಯಲ್ಲಿ ಆ ಮೂರು ಮಂದಿಯನ್ನು ಬಂಧಿಸಿ ನಗರದ ಎಂಟನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು~ ಎಂದು ತಿಳಿಸಿದರು.

ಒತ್ತಡಕ್ಕೆ ಮಣಿದು ಅಮಾನತು:
`ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಾಲಕೃಷ್ಣ, ರಾಘವೇಂದ್ರ ಮತ್ತು ಪ್ರೀತಮ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 341ಮತ್ತು 353ರ ಅನ್ವಯ ದೂರು ದಾಖಲಿಸಿ ಬಂಧಿಸಲಾಗಿತ್ತು. ಅರುಣ್‌ಕುಮಾರ್ ಮೇಲೆ ಹಲ್ಲೆ ನಡೆದ ಬಗ್ಗೆ ವೈದ್ಯರು ನೀಡಿದ್ದ ವೈದ್ಯಕೀಯ ಪ್ರಮಾಣಪತ್ರ ಮತ್ತು ಘಟನೆ ನಡೆದ ಸಂದರ್ಭದಲ್ಲಿ ಅರುಣ್‌ಕುಮಾರ್ ಧರಿಸಿದ್ದ ಸಮವಸ್ತ್ರವನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಇಡೀ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕರ್ತವ್ಯ ನಿರ್ವಹಿಸಿದ್ದರೂ ಹಿರಿಯ ಅಧಿಕಾರಿಗಳು ವಕೀಲರ ಒತ್ತಡಕ್ಕೆ ಮಣಿದು ಸಹೋದ್ಯೋಗಿಯನ್ನು ಅಮಾನತು ಮಾಡಿರುವುದು ಸರಿಯಲ್ಲ~ ಎಂದು ತ್ಯಾಗರಾಜನಗರ ಠಾಣೆಯ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT