ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿಷ್ಠೆ ಮೆರೆದು ವೃತ್ತಿ ಗೌರವ ಹೆಚ್ಚಿಸಿ

ಹೊಸದುರ್ಗ: ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
Last Updated 28 ಸೆಪ್ಟೆಂಬರ್ 2013, 5:33 IST
ಅಕ್ಷರ ಗಾತ್ರ

ಹೊಸದುರ್ಗ: ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪೂರೈಸಿದಲ್ಲಿ ಮಾತ್ರ ವೃತ್ತಿ ಗೌರವ ಹೆಚ್ಚಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಸೂಚನೆ ನೀಡಿದರು.

ಪಟ್ಟಣದ  ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಒಂದು ತಾಲ್ಲೂಕಿನ ಅಭಿವೃದ್ಧಿ ಕೆಲಸಗಳನ್ನು ಹೇಳಿಸಿಕೊಂಡು ಮಾಡಬೇಕೇ ? ಹಾಗಾದರೆ ನಿಮಗೆ ಸ್ವಂತ ಬುದ್ದಿ ಇಲ್ಲವೇ ? ವಿವಿಧ ಇಲಾಖೆಗಳಲ್ಲಿ ನನೆಗುದ್ದಿಗೆ ಬಿದ್ದಿರುವ ಹಾಗೂ ನಡೆದಿರುವ ಕಳಪೆ ಕಾಮಗಾರಿ ಮತ್ತು ಮಾಡಬೇಕಿರುವ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಹೇಳಿಸಿಕೊಳ್ಳಲು ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಕರ್ತವ್ಯವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಬೇಕೆಂಬ ಆಸಕ್ತಿ ಹಾಗೂ ಕಾಳಜಿ ವಿವಿಧ ಅಧಿಕಾರಿಗಳಿಗೆ ಇರಬೇಕು. ಅದಕ್ಕಾಗಿ ವಿವಿಧ ಇಲಾಖೆಗಳ ಮಧ್ಯೆ ಅನ್ಯೋನ್ಯವಾದ ಸಂಬಂಧ ಇರಬೇಕಿದೆ. ಅದನ್ನು ಬಿಟ್ಟು ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದ, ಇಂತಹ ಸಭೆ ಸಮಾರಂಭಗಳಲ್ಲಿ ತಪ್ಪು ಮಾಹಿತಿಯಿಂದ ಸರಿ ಉತ್ತರ ಕೊಡುವ ರೀತಿಯಲ್ಲಿ ನಾಟಕ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಇನ್ನೂ 3 ತಿಂಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿ ಪೂರ್ಣಗೊಳಿಸುವಲ್ಲಿ ಅರಣ್ಯ, ಕಂದಾಯ, ನೀರಾವರಿ ಇಲಾಖೆಗಳ ಸಮನ್ವಯತೆ ಅಗತ್ಯವಾಗಿರಬೇಕು. ಈ ಯೋಜನೆಗೆ ಹೊಸದುರ್ಗ ತಾಲ್ಲೂಕಿನ 345 ಹೆಕ್ಟೇರ್‌ ಭೂಸ್ವಾಧೀನ ವಾಗಲಿದೆ.ಇದರಲ್ಲಿ 171 ಹೆಕ್ಟೇರ್‌ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ ಎಂದರು.

ಜನತೆಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ಈ ಸಭೆಯಲ್ಲಿ ಚರ್ಚಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಿಗದಿತ ದಿನಾಂಕದೊಳಗಾಗಿ, ತಮ್ಮ ತಮ್ಮ ಇಲಾಖೆಯ ವಿವಿಧ ಕಾಮಗಾರಿಗಳನ್ನು ಗುಣಾತ್ಮಕವಾಗಿ ಪೂರ್ಣಗೊಳಿಸದಿದ್ದಲ್ಲಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಿಇಒ ನಾರಾಯಣಸ್ವಾಮಿ, ಎಸ್‌ಪಿ ಡಾ.ರವಿಕುಮಾರ್‌, ಶಾಸಕ ಬಿ.ಜಿ.ಗೋವಿಂದಪ್ಪ ಅವರು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಸುಮಾರು 60 ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಗಿತ್ತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ
ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT