ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯವನ್ನೇ ಮರೆತ ಶಾಸಕರು

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಕ್ಷೇತ್ರದ ಜನತೆಗಾಗಿ ನೀವು ಏನು ಮಾಡಿದ್ದೀರಿ' ಎಂದು ಶಾಸಕರನ್ನು ಕೇಳಿದರೆ ರಸ್ತೆ, ಚರಂಡಿ, ಸೇತುವೆಗಳನ್ನೆಲ್ಲ            ತೋರಿಸಿ  ತಾವು ಮಾಡಿರುವ `ಅಭಿವೃದ್ಧಿ'ಯ ಹನುಮಂತನ ಬಾಲದಂತಹ ಪಟ್ಟಿಯನ್ನೇ ಮುಂದಿಡುತ್ತಾರೆ. ಹೆಚ್ಚಿನ ಮಾಧ್ಯಮಗಳ ವರದಿಗಾರರು ಕೂಡಾ ಶಾಸಕರ ಸಾಧನೆಯ ಬಗ್ಗೆ ವರದಿ ಮಾಡುವಾಗ ಪ್ರಧಾನವಾಗಿ  ಅವರ ಕ್ಷೇತ್ರದ ಮೂಲ ಸೌಕರ್ಯಗಳ ಬಗ್ಗೆಯೇ ಗಮನ ಕೇಂದ್ರೀಕರಿಸುತ್ತಾರೆ.

ಆದರೆ ಊರಿನ ರಸ್ತೆ, ಚರಂಡಿ ನಿರ್ಮಿಸುವುದು ಶಾಸಕರಾದವರ ಕೆಲಸವೇ? ಹಾಗಿದ್ದರೆ ಸರ್ಕಾರದ ಅದಕ್ಕೆಂದೇ ಇರುವ ಇಲಾಖೆಗಳು, ಪಂಚಾಯತ್, ನಗರಸಭೆ ಇತ್ಯಾದಿಗಳ ಕೆಲಸವೇನು? ಶಾಸಕರು ಯಾವ ಪಕ್ಷಕ್ಕೇ ಸೇರಿರಲಿ, ಯಾವುದೇ ರೀತಿಯ ಭೇದ ಮಾಡದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಾದುದು ಚುನಾಯಿತ ಸರ್ಕಾರವೊಂದರ ಆದ್ಯ ಕರ್ತವ್ಯ.

ಸರ್ಕಾರವು ಅಸ್ತಿತ್ವದಲ್ಲಿಯೇ ಇರದಿದ್ದರೂ ಇದು ಸಾಗುತ್ತಲೇ ಇರಬೇಕು. ಅದೇ ಹೊತ್ತಿನಲ್ಲಿ ನಾಡಿನ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟವನ್ನು ಇರಿಸಿಕೊಂಡು ಅದಕ್ಕೆ ಪೂರಕವಾದ ಶಾಸನಗಳ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದುದು ಶಾಸಕರಾದವರ ಮೂಲ ಕರ್ತವ್ಯ. ಆದರೆ ನಮ್ಮ ಬಹುತೇಕ ಶಾಸಕರು ಈ ಮೂಲ ಕರ್ತವ್ಯವನ್ನು ಮರೆತು ರಸ್ತೆ, ಚರಂಡಿ ನಿರ್ಮಾಣವನ್ನೇ ತಮ್ಮ ಕರ್ತವ್ಯ ಎಂದು ಕೊಂಡುಬಿಟ್ಟಿದ್ದಾರೆ.

ಶಾಸನಗಳ ರಚನೆಯಾಗಲಿ, ಅದನ್ನು ಕುರಿತ ಚರ್ಚೆಗಳಲ್ಲಿ ಗಂಭೀರವಾಗಿ ತೊಡಗಿಕೊಳ್ಳುವುದಾಗಲಿ (ಇದಕ್ಕೆ ಬೇಕಾದ ಅರ್ಹತೆ ಈಗಿನ ಹೆಚ್ಚಿನ ಶಾಸಕರಲ್ಲಿ ಇಲ್ಲ ಬಿಡಿ) ತಮ್ಮ ಕೆಲಸವೇ ಅಲ್ಲ ಅಂದುಕೊಂಡುಬಿಟ್ಟಿದ್ದಾರೆ.

ತಮ್ಮ ಮೂಲ ಕರ್ತವ್ಯ ಏನು ಎನ್ನುವ ಅರಿವೇ ಇಲ್ಲದ ಇಂಥ ಶಾಸಕರು ಶಾಸನಸಭೆಯಲ್ಲಿ ಸಮಯ ಕಳೆಯಲು ನೀಲಿಚಿತ್ರ ನೋಡುವಂಥ ಗಂಭೀರ ಕೆಲಸದಲ್ಲಿ ತೊಡಗಿಕೊಳ್ಳದೆ ಇನ್ನು ಯಾವ ಕೆಲಸದಲ್ಲಿ ತಾನೇ ತೊಡಗಬೇಕೆಂದು ನಾವು ನಿರೀಕ್ಷಿಸಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT