ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ 2010: ಚದುರಿದ ಚಿತ್ರಗಳು

Last Updated 3 ಜನವರಿ 2011, 8:50 IST
ಅಕ್ಷರ ಗಾತ್ರ

2010 ಮುಳುಗಿದೆ. ಹತ್ತರ ನಂತರ ಬರುವ ಹನ್ನೊಂದರತ್ತ ಎಲ್ಲರ ನಿರೀಕ್ಷೆ ತುಂಬಿಕೊಂಡಿದೆ. ಸಂದ ವರುಷದಲ್ಲಿ ರಾಜ್ಯವು ಎಲ್ಲ ರಂಗಗಳಲ್ಲೂ ಅನೇಕ ಏರಿಳಿತಗಳನ್ನು ಕಂಡಿದೆ. ವಿಕೃತಿ ಸಂವತ್ಸರದಲ್ಲಿ ರಾಜ್ಯವು ರಾಜಕೀಯವಾಗಿ ಬಹಳಷ್ಟು ವಿಕೃತಿಗಳಿಗೆ ಸಾಕ್ಷಿ ಆಗಬೇಕಾಯಿತು. ಆರ್ಥಿಕ ಹಿನ್ನಡೆ ಅಲ್ಲವೆಂದರೂ ಜನಸಾಮಾನ್ಯರು ಬೆಲೆ ಏರಿಕೆಯ ಕಾವನ್ನು ಅನುಭವಿಸುತ್ತಲೇ ಹೊಸ ವರ್ಷವನ್ನು ಸ್ವಾಗತಿಸಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ.

ರಾಜ್ಯ ರಾಜಕೀಯವು ಪರಸ್ಪರ ಆರೋಪ- ಪತ್ಯಾರೋಪ, ವಾದ-ವಿವಾದ, ಭಿನ್ನಮತ, ಬಂಡಾಯ, ಹಗರಣಗಳಲ್ಲೇ ಕಳೆದ ವರ್ಷ ಇದು. ಗಣಿ ಮತ್ತು ಭೂಹಗರಣಗಳು ರಾಜ್ಯವನ್ನು ಪೆಡಂಭೂತದಂತೆ ಕಾಡಿವೆ. ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಸಚಿವ ಎಚ್.ಹಾಲಪ್ಪ ರಾಜೀನಾಮೆ ನೀಡಿದ್ದು, ಗೃಹ ಮಂಡಳಿಗೆ ಭೂಮಿ ಮಂಜೂರು ಮಾಡುವಲ್ಲಿ ನಡೆದ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ, ಹಾಸನ ಮತ್ತು ಮೈಸೂರಿನ ವೈದ್ಯಕೀಯ ವಿಶ್ವವಿದ್ಯಾನಿಲಯಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಸಚಿವ ರಾಮಚಂದ್ರೇಗೌಡರ ರಾಜೀನಾಮೆ ಹಾಗೂ ಕೆಐಎಡಿಬಿ ಹಗರಣಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರು ಎಫ್‌ಐಆರ್ ದಾಖಲಿಸಿದಾಗ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜೀನಾಮೆ ನೀಡಿದ್ದು ಸರ್ಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆಡಳಿತ ಪಕ್ಷದೊಳಗಿನ ಬಂಡಾಯ ಮತ್ತು ಭಿನ್ನಮತವೇ ಸರ್ಕಾರಕ್ಕೆ ಇರಿಸು-ಮುರಿಸು ಉಂಟುಮಾಡಿದೆ. ಸರ್ಕಾರ ಅಭದ್ರತೆಯಲ್ಲೇ ದಿನಗಳನ್ನು ದೂಡಿದೆ. ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ, ಪತ್ರ ಸಮರ ರೇಜಿಗೆ ಹುಟ್ಟಿಸಿದೆ. ಉತ್ತರ ಕರ್ನಾಟಕದ ಆರೇಳು ಜಿಲ್ಲೆಗಳಲ್ಲಿ ಹಿಂದಿನ ವರ್ಷ ಪ್ರವಾಹದಿಂದ ಮನೆ-ಮಠ ಕಳೆದುಕೊಂಡಿದ್ದ ಸಾವಿರಾರು ಕುಟುಂಬಗಳಿಗೆ 2010ರಲ್ಲೂ ‘ಆಸರೆ’ ಎಂಬುದು ಮರೀಚಿಕೆಯಾಗಿದೆ.

ರಾಜ್ಯದ ರಾಜಕೀಯ ಘಟನೆಗಳು ಬೇಸರ ತಂದರೆ, ನ್ಯಾಯಾಂಗವು ಕ್ರಿಯಾಶೀಲವಾಗಿತ್ತು. ಗುಲ್ಬರ್ಗ ಮತ್ತು ಧಾರವಾಡದ ಹೈಕೋರ್ಟ್ ಪೀಠಗಳನ್ನು ಕಾಯಂ ಮಾಡಲು ಒಪ್ಪಿಗೆ ಸಿಕ್ಕಿತು. ಹೊಸ ಜಿಲ್ಲೆ ಯಾದಗಿರಿಗೆ ಚಾಲನೆ ಸಿಕ್ಕಿತು. ಕ್ರೀಡಾ ರಂಗವು ಚೇತೋಹಾರಿಯಾಗಿದೆ. ಬಹಳ ವರ್ಷಗಳ ಬಳಿಕ ರಣಜಿ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ ನಿಂತಿದೆ. ರಾಜ್ಯದ ಅಥ್ಲೀಟ್‌ಗಳೂ ಭರವಸೆ ಮೂಡಿಸಿದ ವರ್ಷ ಇದು. ಕಾಮನ್‌ವೆಲ್ತ್ ಗೇಮ್ಸ್‌ನ ರಿಲೇಯಲ್ಲಿ ಅಶ್ವಿನಿ ಅಕ್ಕುಂಜೆ ಚಿನ್ನ ಗೆದ್ದರೆ, ಏಷ್ಯನ್ ಗೇಮ್ಸ್‌ನಲ್ಲಿ ರಿಲೇ ಜೊತೆಗೆ 400 ಮೀಟರ್ ಹರ್ಡಲ್ಸ್‌ನಲ್ಲೂ ಚಿನ್ನ ಗೆದ್ದು ಮಿಂಚಿದರು. ಮಮತಾ ಪೂಜಾರಿ ಕಬಡ್ಡಿಯಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು.
ಅಪಘಾತಗಳ ಸರಮಾಲೆ ಪ್ರತಿವರ್ಷದಂತೆ ಈ ಸಾಲಿನಲ್ಲೂ ಘಟಿಸಿವೆ. ಸಾವು-ನೋವು ತಂದಿವೆ. ಮಂಗಳೂರಿನ ಬಜಪೆ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದ ಕರಿನೆರಳು ಇನ್ನೂ ಮಾಯವಾಗಿಲ್ಲ. ರಾಸಲೀಲೆಯ ಆರೋಪಕ್ಕೆ ಸಿಕ್ಕ ನಿತ್ಯಾನಂದ ಸ್ವಾಮಿಯನ್ನು ಹಿಮಾಲಯದಲ್ಲಿ ಬಂಧಿಸಲಾಯಿತು.

ಸಾಂಸ್ಕೃತಿಕ ರಂಗದಲ್ಲಿ ಕೆಲವೊಂದು ಭರವಸೆಯ ಹೊಂಗಿರಣಗಳು ಸೂಸಿವೆ. ಅಖಿಲ ಭಾರತ 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ವರ್ಷಾಂತ್ಯದಲ್ಲೇ ನಡೆಯಬೇಕಿದ್ದರೂ ಹೊಸ ವರ್ಷಕ್ಕೆ ಚಾಚಿಕೊಂಡಿದೆ. ನಿಘಂಟು ತಜ್ಞರಾದ ಡಾ.ಜಿ.ವೆಂಕಟಸುಬ್ಬಯ್ಯ ಅವರು ಸಮ್ಮೇಳನ ಅಧ್ಯಕ್ಷರಾಗಿ ಈಗಾಗಲೇ (ನ. 10ರಂದು) ಆಯ್ಕೆ ಆಗಿದ್ದಾರೆ. ಬಿ.ಜಯಶ್ರೀ ಅವರು ರಾಜ್ಯಸಭೆಗೆ ನೇಮಕ ಆಗುವ ಮೂಲಕ ರಂಗಭೂಮಿಗೊಂದು ಹೆಮ್ಮೆಯ ಕೋಡು ಮೂಡಿದೆ. ಸಾಹಿತಿ ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ವರ್ಷದ ಕೊನೆಯಲ್ಲಿ ಕನ್ನಡಿಗರಿಗೆ ಸಂದ ಉಡುಗೊರೆ. ಸಿನಿಮಾ ರಂಗದಲ್ಲೂ ರಾಜ್ಯಕ್ಕೆ 2010 ಸಂತಸದ ವರುಷ.
ವಿವಿಧ ಕ್ಷೇತ್ರಗಳ ಅನೇಕ ಹಿರಿಯರನ್ನು ಸಂದ ವರ್ಷದಲ್ಲಿ ನಾವು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದ ಅಶ್ವಥ್, ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ, ರಂಗ ನಿರ್ದೇಶಕ ಆರ್.ನಾಗೇಶ್, ಹಿಂದೂಸ್ತಾನಿ-ಕರ್ನಾಟಕ ಸಂಗೀತದ ಮೂಲಕ ಬಾಳು ಬೆಳಕಾಗಿಸಿದ ಪಂಡಿತ ಪುಟ್ಟರಾಜ ಗವಾಯಿ, ವಿಮರ್ಶಕ ಕಿ.ರಂ.ನಾಗರಾಜ, ರಾಜಕಾರಣಿಗಳಾದ ರಾಜಶೇಖರ ಮೂರ್ತಿ, ಕೆ.ಎಂ. ಕೃಷ್ಣಮೂರ್ತಿ ಕಡೂರು, ಚಂದ್ರಶೇಖರ ಪಾಟೀಲ ರೇವೂರ (ಗುಲ್ಬರ್ಗ), ಚಿತ್ರನಟರಾದ ಮುರಳಿ, ನವೀನ್ ಮಯೂರ ಹೀಗೆ ಹಲವಾರು ಗಣ್ಯರನ್ನು ಕಳೆದುಕೊಂಡಿದ್ದೇವೆ.

2010ರ ಪ್ರಮುಖ ಘಟನೆಗಳತ್ತ ಒಂದು ನೋಟ ಕೆಳಗಿನಂತಿದೆ:
ಜನವರಿ 31- ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ಕೆ.ಎಸ್.ಈಶ್ವರಪ್ಪ ಅಧಿಕಾರ ವಹಿಸಿಕೊಂಡರು. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಪಕ್ಷದ ಅಧ್ಯಕ್ಷರಾಗಿದ್ದು ವಿಶೇಷ.
ಫೆ. 1- ಚರ್ಚ್‌ಗಳ ಮೇಲೆ ನಡೆದಿದ್ದ ದಾಳಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋಮಶೇಖರ ಆಯೋಗವು ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅದರಲ್ಲಿ ಕೆಲವು ಹಿಂದು ಸಂಘಟನೆಗಳ ಕೈವಾಡದ ಬಗ್ಗೆ ಉಲ್ಲೇಖಿಸಲಾಯಿತು.
ಫೆ. 4- ಕೋಲಾರ ಜಿಲ್ಲೆ ಅಮ್ಮಗಾರಿಪೇಟೆಯಲ್ಲಿ ಕಳ್ಳಬಟ್ಟಿ ದುರಂತ- 5 ಸಾವು
ಫೆ. 25- ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭ.
ಮಾ. 1- ಶಿವಮೊಗ್ಗದಲ್ಲಿ ಕೋಮು ಘರ್ಷಣೆ- 3 ಬಲಿ
ಮಾ. 5- ರಾಜ್ಯದ 2010-11ನೇ ಸಾಲಿನ ಬಜೆಟ್ ಮಂಡನೆ.
ಮಾ. 28- ಬಿಬಿಎಂಪಿ ಚುನಾವಣೆ
ಏ. 21- ರಾಸಲೀಲೆ ಪ್ರಕರಣ- ಹಿಮಾಲಯದಲ್ಲಿ ನಿತ್ಯಾನಂದ ಸ್ವಾಮಿ ಬಂಧನ
ಮೇ 2- ಲೈಂಗಿಕ ಹಗರಣ- ಸಚಿವ ಎಚ್.ಹಾಲಪ್ಪ ರಾಜೀನಾಮೆ
ಮೇ 7 ಮತ್ತು 12- ಗ್ರಾಮ ಪಂಚಾಯಿತಿ ಚುನಾವಣೆ
ಮೇ 10- ತುಮಕೂರು ಬಳಿ ರಸ್ತೆ ಅಪಘಾತ- ಒಂದೇ ಕುಟುಂಬದ 8 ಮಂದಿ ಬಲಿ
ಮೇ 22- ಮಂಗಳೂರಿನ ಬಜಪೆ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ. 158 ಸಾವು.
ಮೇ 30- ಚಳ್ಳಕೆರೆ ಬಳಿ ಬಸ್ ದುರಂತ- 30 ಮಂದಿ ಸಜೀವ ದಹನ
ಜೂನ್ 3- ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭ.
ಜೂನ್ 23- ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಾಜೀನಾಮೆ
ಜುಲೈ 4- ಸಂತೋಷ್ ಹೆಗ್ಡೆ ರಾಜೀನಾಮೆ ವಾಪಸ್
ಜುಲೈ 19- ಉಪ ಲೋಕಾಯುಕ್ತರಾಗಿ ನ್ಯಾ. ಎಸ್.ಬಿ.ಮಜಿಗೆ ನೇಮಕ
ಜುಲೈ 9- ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಸಮರ
ಜುಲೈ 12- ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರಿಂದ ಅಹೋರಾತ್ರಿ ಧರಣಿ (5 ದಿನಗಳ ಕಾಲ ಧರಣಿ)
ಜುಲೈ 25- ಬಳ್ಳಾರಿಗೆ ಕಾಂಗ್ರೆಸ್ ಪಾದಯಾತ್ರೆ ಆರಂಭ
ಜುಲೈ 20- ಸವಣೂರು ಪುರಸಭೆಯಲ್ಲಿ ಭಂಗಿಗಳಿಂದ ತಲೆಗೆ ಮಲ ಸುರಿದುಕೊಂಡು ಪ್ರತಿಭಟನೆ
ಆ. 6- ರಾಜ್ಯದ 8ನೇ ಮಹಾನಗರ ಪಾಲಿಕೆಯಾಗಿ ತುಮಕೂರು ಅಸ್ತಿತ್ವಕ್ಕೆ
ಆ. 18- ಬೆಂಗಳೂರಿನ ಭಿಕ್ಷುಕರ ಪುನರ್‌ವಸತಿ ಕೇಂದ್ರದಲ್ಲಿ ಸಾವಿನ ನೆರಳು. 31 ಭಿಕ್ಷುಕರ ಸಾವು.
ಸೆ. 10- ತುಮಕೂರಿನಲ್ಲಿ ಪಾಲಿಕೆ ಸದಸ್ಯ ಆಂಜನಪ್ಪ ಹತ್ಯೆ
ಸೆ. 11- ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳಿಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಹಿನ್ನೆಲೆಯಲ್ಲಿ ವೈದ್ಯಕೀಯ ಸಚಿವರಾಗಿದ್ದ ರಾಮಚಂದ್ರೇಗೌಡರ ರಾಜೀನಾಮೆ
ಸೆ. 28- ಕೆಐಎಡಿಬಿ ಹಗರಣ- ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಬಂಧನ
ಅ. 2- ಚಿಕ್ಕಬಳ್ಳಾಪುರದಲ್ಲಿ ಗ್ರಾಮ ನ್ಯಾಯಾಲಯಕ್ಕೆ ಚಾಲನೆ
ಅ. 11- ರಾಜ್ಯ ಸರ್ಕಾರ ಧ್ವನಿಮತದಿಂದ ವಿಶ್ವಾಸಮತ ಯಾಚನೆ. ಕೋಲಾಹಲ. 11 ಮಂದಿ ಬಿಜೆಪಿ ಶಾಸಕರು ಮತ್ತು ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶ. (ಈ ವಿವಾದ ಇನ್ನೂ ಕೋರ್ಟಿನಲ್ಲಿದೆ.)
ಅ. 14- ರಾಜ್ಯಪಾಲರ ಸೂಚನೆಯಂತೆ ವಿಧಾನಸಭೆಯಲ್ಲಿ ಮತ್ತೊಮ್ಮೆ ಸರ್ಕಾರದಿಂದ ವಿಶ್ವಾಸಮತ ಸಾಬೀತು
ಅ. 27- ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ.ಪರಮೇಶ್ವರ ಆಯ್ಕೆ
ನ. 19- ಅದಿರು ರಫ್ತು ನಿಷೇಧಿಸಿ ಹೈಕೋರ್ಟ್ ಆದೇಶ
ಡಿ. 3- ಕೆಐಎಡಿಬಿ ಹಗರಣ- ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜೀನಾಮೆ
ಡಿ.14- ನಂಜನಗೂಡು ಉಂಡುಬತ್ತಿ ಕೆರೆ ದುರಂತ- 31 ಸಾವು
ಡಿ. 26 ಮತ್ತು 31- ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ
ಡಿ. 27- ಬೈಯಪ್ಪನಹಳ್ಳಿ- ಮೆಟ್ರೊ ರೈಲು ಪ್ರಾಯೋಗಿಕ ಸಂಚಾರ ಆರಂಭ      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT