ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

Last Updated 14 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ನಡೆಸಲಾಗುತ್ತಿರುವ ವಸತಿನಿಲಯಗಳ ಉತ್ತಮ ನಿರ್ವಹಣೆಗೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡಿವೆಪ್ಪ ಮನಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿನಿಲಯಗಳ ಮೇಲ್ವಿಚಾರಕರು ವಿದ್ಯಾರ್ಥಿಗಳ ಉಪಹಾರ, ಊಟ ಹಾಗೂ ವಸತಿ ಸೌಲಭ್ಯಗಳ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಓಲೇಕಾರ ಪ್ರಗತಿ ವಿವರಿಸಿ, ಧಾರವಾಡ, ಹುಬ್ಬಳ್ಳಿ, ತಿರುವಲಕೊಪ್ಪ, ಕಲಘಟಗಿ, ಕುಂದ ಗೋಳ, ಗುಡಗೇರಿ, ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ವಸತಿನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನದ ಅವಶ್ಯಕತೆ ಇದೆ ಎಂದು ಸಭೆಯ ಗಮನಕ್ಕೆ ತಂದರು.

ಡಾ. ಅಂಬೇಡ್ಕರ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಕೊಳವೆ ಬಾವಿಗಳ ನಿರ್ಮಾಣ ಕುರಿತು ಪರಿಶೀಲಿಸಿದ ಅಧ್ಯಕ್ಷರು, ಫಲಾನುಭವಿ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.`ಈವರೆಗೆ ಜಿಲ್ಲೆಯಲ್ಲಿ 68.36 ಕೋಟಿ ರೂ. ಅಲ್ಪಾವಧಿ ಹಾಗೂ 8.11 ಕೋಟಿ ರೂ. ದೀರ್ಘಾವಧಿ ಸಾಲವನ್ನು ರೈತರಿಗೆ ಸಹಕಾರಿ ಸಂಘಗಳ ಮೂಲಕ ವಿತರಿಸಲಾಗಿದೆ~ ಎಂದು ಸಹಕಾರ ಸಂಘಗಳ ಉಪನಿಬಂಧಕ ಯಳಲ್ಲಿ ಸಭೆಗೆ ತಿಳಿಸಿದರು.

ಕೃಷಿ ಇಲಾಖೆಯ ಹಿಂಗಾರು ಹಂಗಾಮಿನ ಚುವಟಿಕೆಗಳು, ಅನುದಾನ ಬಳಕೆ, ರಸಗೊಬ್ಬರ ಹಾಗೂ ಪ್ರಮಾಣಿತ ಬೀಜಗಳ ವಿತರಣೆ ಕುರಿತು ಅಧ್ಯಕ್ಷರು ಪರಿಶೀಲನೆ ನಡೆಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ ಮಾತನಾಡಿ, ಬೇಸಿಗೆ ಹಾಗೂ ಮುಂಗಾರು ಹಂಗಾಮಿಗಾಗಿ 20 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಭೂಚೇತನ ಯೋಜನೆ ಮುಂದಿನ ವರ್ಷಕ್ಕೂ ಜಾರಿಗೊಳಿಸಲಾಗುತ್ತಿದೆ ಎಂದರು.

ಮುಂದಿನ ಮುಂಗಾರು ಹಂಗಾಮಿಗಾಗಿ 1.20 ಲಕ್ಷ ಹೆಕ್ಟೇರ್ ಕ್ಷೇತ್ರ ಯೋಜನೆ ಅನುಷ್ಠಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು. ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ ಶಂಕರ ಮಿರ್ಜಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಸಾಧಿಸಲಾದ ಪ್ರಗತಿಯನ್ನು ವಿವರಿಸಿದರು.
 
ಆರೋಗ್ಯ ಇಲಾಖೆ ಪ್ರಗತಿಯನ್ನು ಡಾ. ಎನ್. ಎಂ.ಅಂಗಡಿ ಸಭೆಗೆ ತಿಳಿಸಿದರು. ಫೆ. 19 ಹಾಗೂ ಏ. 1 ರಂದು ನಡೆಯಲಿರುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮನಮಿ, ಈ ವರ್ಷಕ್ಕೆ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಮಮತಾಜಬಿ ನದಾಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ಕರಡಿಕೊಪ್ಪ, ಪ್ರೇಮಾ ಕೊಮಾರ ದೇಸಾಯಿ, ರತ್ನವ್ವ ಕಳ್ಳಿಮನಿ, ಜಿಪಂ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ, ಮುಖ್ಯ ಯೋಜನಾಧಿ ಕಾರಿ ಎಂ.ಡಿ.ಪವಾರ, ಮುಖ್ಯ ಲೆಕ್ಕಾಧಿಕಾರಿ ಎಲ್.ಜಿ.ಹೊಸಮನಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT