ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಶತಮಾನೋತ್ಸವ: ಬಿಸಿನೆಸ್ 2010 ವಸ್ತು ಪ್ರದರ್ಶನ

Last Updated 26 ಡಿಸೆಂಬರ್ 2010, 10:25 IST
ಅಕ್ಷರ ಗಾತ್ರ

ಅಸ್ಥಿರತೆ ಪ್ರಗತಿಗೆ ಮಾರಕ:ಕೃಷ್ಣ ಆತಂಕ
ಬೆಂಗಳೂರು: ‘
ಇಡೀ ವಿಶ್ವ ಈಗ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ ಕೇವಲ ರಾಜ್ಯದ ಮೇಲಷ್ಟೇ ಅಲ್ಲ, ಇಡೀ ದೇಶದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹೇಳಿದರು.ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಶತಮಾನೋತ್ಸವ ಸಮಾರಂಭದ ಎರಡನೇ ದಿನವಾದ ಶನಿವಾರ ಅವರು ಮಾತನಾಡಿದರು.

‘ಹಿಂದಿನ ಸರ್ಕಾರಗಳನ್ನು ನಿಂದಿಸುವಲ್ಲಿ ಇವರು ನಿಸ್ಸೀಮರು. ಆದರೆ, ಆ ಸರ್ಕಾರಗಳು ಮಾಡಿರುವ ಸಾಧನೆ ಇವರ ಕಣ್ಣಿಗೆ ಏಕೆ ಕಾಣಿಸುವುದಿಲ್ಲ’ ಎಂದು ಅವರು ರಾಜ್ಯದ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ‘1999ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜನೆ ಈಗ ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪಿತವಾಗಿದೆ. ಇಂತಹ ಸಾಧನೆಗಳು ಇವರಿಗೆ ಕಾಣಿಸಲಿಲ್ಲವೇ?’ ಎಂದು ಅವರು ಪ್ರಶ್ನಿಸಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಇದ್ದ ಅಭಿಪ್ರಾಯ ಈಗ ಸಂಪೂರ್ಣ ಬದಲಾಗಿದೆ. ಈ ಮೊದಲು ದೇಶದ ನಾಯಕರು ಆರ್ಥಿಕ ನೆರವು ಪಡೆದುಕೊಳ್ಳಲು ವಿದೇಶಗಳಿಗೆ ಹೋಗುತ್ತಿದ್ದರು. ಆದರೆ, ಈಗ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಅಮೆರಿಕ, ಚೀನಾ ನಾಯಕರು ಇಲ್ಲಿಗೆ ಬಂದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತೆ ನೆರವು ಕೇಳುತ್ತಿದ್ದಾರೆ. ಆ ಮಟ್ಟಿಗೆ ಕಾಲ ಬದಲಾಗಿದೆ. ಇದರ ಸಂಪೂರ್ಣ ಲಾಭವನ್ನು ಎಲ್ಲ ಸಮುದಾಯದವರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಬಲಾಢ್ಯ ರಾಷ್ಟ್ರಗಳಾಗಿ ಭಾರತ ಹಾಗೂ ಚೀನಾ ರೂಪುಗೊಳ್ಳಲಿವೆ ಎಂದು ಮುಂದುವರಿದ ರಾಷ್ಟ್ರಗಳು ಹೇಳಿವೆ. ಇದಕ್ಕೆ ಹೇಗೆ ಸಿದ್ಧರಾಗಬೇಕು, ಯಾವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಬುದ್ಧಿಜೀವಿಗಳು ಯೋಚನೆ ಮಾಡಲಿ’ ಎಂದರು.

‘ಆರ್ಯವೈಶ್ಯ ಸಮುದಾಯವು ಬುದ್ಧಿವಂತರ ಸಮಾಜ, ದೂರದೃಷ್ಟಿಯುಳ್ಳವರ ಸಮಾಜ’ ಎಂದು ಅವರು ಪ್ರಶಂಸಿಸಿದರು.ಸಮಾರಂಭವನ್ನು ಉದ್ಘಾಟಿಸಿದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ ಮಾತನಾಡಿ, ‘ವೈಯಕ್ತಿಕ ಅಭಿವೃದ್ಧಿಗಿಂತ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಬೇಕು’ ಎಂದು ಕರೆ ನೀಡಿದರು.

‘ಕರ್ನಾಟಕದಲ್ಲಿ ಸುಮಾರು 5-6 ಲಕ್ಷದಷ್ಟು ಆರ್ಯವೈಶ್ಯ ಜನಾಂಗದವರು ಇರಬಹುದು. ಆದರೆ, ಅವರು ಮಾಡಿರುವ ಒಳ್ಳೆಯ ಕೆಲಸಗಳು ನಮಗೆ ಮಾದರಿ’ ಎಂದು ಅವರು ಹೇಳಿದರು.‘ಈಗ ವ್ಯಾಪಾರ ಕ್ಷೇತ್ರವು ಬಹಳ ಸ್ಪರ್ಧಾತ್ಮಕವಾಗಿದೆ. ಹಿಂದಿನ ಕಾಲದಂತೆ ಈಗ ಇಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಇವರೊಂದಿಗೆ ಸ್ಪರ್ಧಿಸಲು ನಾವು ಸಿದ್ಧರಾಗಬೇಕಾಗಿದೆ’ ಎಂದು ಅವರು ನುಡಿದರು.

ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ, ‘ರಾಜ್ಯದಲ್ಲಿ ಆರ್ಯವೈಶ್ಯ ಸಮಾಜದವರ ಸಂಖ್ಯೆ ಕಡಿಮೆ ಇದ್ದರೂ ಇವರ ಕೊಡುಗೆ ಅಪಾರವಾಗಿದೆ. ಅಲ್ಲಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಮಿಂಚುತ್ತಿದ್ದಾರೆ’ ಎಂದು ಹೇಳಿದರು.‘ಜನಸಂಖ್ಯೆ ಕಡಿಮೆ ಇದೆ ಎಂದು ಮೀಸಲಾತಿ ಕೇಳುವ ಅವಶ್ಯಕತೆ ಇಲ್ಲ. ನಾವು ಹಿಂದಿನ ಕಾಲದಿಂದಲೂ ಕೊಡುಗೈ ದಾನಿಗಳಾಗಿಯೇ ಬಂದಿದ್ದೇವೆ. ಹೀಗಾಗಿ ಮೀಸಲಾತಿ ಕೊಡಿ ಎಂದು ಕೇಳುವ ಅವಶ್ಯಕತೆ ಇಲ್ಲ’ ಎಂದು ಅವರು ನುಡಿದರು.ಇದೇ ಸಂದರ್ಭದಲ್ಲಿ ವೈದ್ಯಕೀಯ ನಿಧಿಯನ್ನು ಡಾ.ಬಿ.ಎಲ್.ಎಸ್. ಮೂರ್ತಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಜನಾಂಗದ ಕಡುಬಡವರ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಅವರಿಗೆ ಕನಿಷ್ಠ ರೂ 25 ಸಾವಿರ ನೆರವು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಂಬಂಧ ವಿಮಾ ಕಂಪೆನಿಗಳ ಜೊತೆ ಮಾತುಕತೆ ನಡೆದಿದ್ದು, ಶೀಘ್ರದಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿದರು.ಆರ್ಯವೈಶ್ಯ ಸಮಾಜದವರಾದ ಜಿಎಂಆರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಮಲ್ಲಿಕಾರ್ಜುನ ರಾವ್  ಮಾತನಾಡಿ, ‘ವ್ಯಾಪಾರ ಕ್ಷೇತ್ರದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ವಹಿಸಿದ್ದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಜಿ. ನಂದಕುಮಾರ್, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೆಂಡಕೂರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗಮನ ಸೆಳೆದ ಬೃಹತ್ ಪೆಂಡಾಲ್: ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿತ್ತು. ರಾಜ್ಯದ ವಿವಿಧ ನಗರಗಳಿಂದ ಹಾಗೂ ನೆರೆಯ ಆಂಧ್ರ ಪ್ರದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಬಿಸಿನೆಸ್ 2010’ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT