ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಜಾನಪದ ವಿವಿ ಮಸೂದೆಗೆ ಅಸ್ತು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಜಾರಿಯಾಗಿದ್ದ `ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮಸೂದೆ-2011~ ಅನ್ನು ರಾಜ್ಯ ವಿಧಾನಸಭೆ ಶುಕ್ರವಾರ ಅಂಗೀಕರಿಸಿತು. ಜೆಡಿಎಸ್ ಸದಸ್ಯರ ಧರಣಿ ಮತ್ತು ಸಭಾತ್ಯಾಗದ ನಡುವೆ `ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (2ನೇ ತಿದ್ದುಪಡಿ) ಮಸೂದೆ-2011~ಕ್ಕೂ ವಿಧಾನಸಭೆ ಒಪ್ಪಿಗೆ ಸೂಚಿಸಿತು.

ಧರ್ಮಾದಾಯ ದತ್ತಿಗಳ ಮಸೂದೆಯನ್ನು ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಮತಕ್ಕೆ ಹಾಕಿದಾಗ ಒಂದು ಮತದಿಂದ ತಿರಸ್ಕೃತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನು ಪುನಃ ಶುಕ್ರವಾರ ಮಂಡಿಸಲಾಯಿತು.

ಮಸೂದೆ ಕುರಿತು ವಿವರ ನೀಡಿದ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ `ಈ ತಿದ್ದುಪಡಿಯಿಂದ ದೊಡ್ಡ ಬದಲಾವಣೆಗಳೇನೂ ಆಗುವುದಿಲ್ಲ. ಆದರೆ, ಶ್ರೀಮಂತ ದೇವಸ್ಥಾನಗಳ ಆದಾಯದಲ್ಲಿ ಶೇ 5ರಷ್ಟು ಹಣವನ್ನು ಗೋಶಾಲೆ ಸ್ಥಾಪನೆ ಮತ್ತು ಸಣ್ಣ ಮಟ್ಟದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ~ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಮಾತನಾಡಿ, `ಈ ಮಸೂದೆಯ ಪ್ರತಿಗಳು ಈಗಷ್ಟೆ ನಮ್ಮ ಕೈಸೇರಿದ್ದು, ಅದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಹೀಗಾಗಿ ಈ ಮಸೂದೆ ಕುರಿತ ಚರ್ಚೆಯನ್ನು ಸೋಮವಾರಕ್ಕೆ ಮುಂದೂಡಿ~ ಎಂದು ಮನವಿ ಮಾಡಿದರು.

ಬಿಜೆಪಿಯ ಶಂಕರಲಿಂಗೇಗೌಡ ಕೂಡ ಇದೇ ಮಾತನ್ನು ಹೇಳಿದರು. `ನಾನು ಕೂಡ ಸರ್ಕಾರದ ಒಂದು ಭಾಗ. ಹೀಗಾಗಿ ಈ ಮಸೂದೆ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಹೀಗಾಗಿ ಅದನ್ನು ಮುಂದೂಡಿ~ ಎಂದು ಆಗ್ರಹಪಡಿಸಿದರು.

ಇದನ್ನು ಪ್ರತಿಪಕ್ಷ ಸದಸ್ಯರು ಸ್ವಾಗತಿಸಿದರು. ಆಡಳಿತ ಪಕ್ಷದ ಡಿ.ಎನ್.ಜೀವರಾಜ್ ಸೇರಿದಂತೆ ಇತರರು ಶಂಕರಲಿಂಗೇಗೌಡರ ಬಳಿ ತೆರಳಿ ಅವರನ್ನು ಸಮಾಧಾನಪಡಿಸಿದರು.

ಜಾನಪದ ವಿ.ವಿ ಸ್ಥಾಪನೆ ಕುರಿತ ಮಸೂದೆಯನ್ನು ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT