ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬ್ಯಾಟಿಂಗ್‌ಗೆ ಪವನ ಶಕ್ತಿ!

Last Updated 6 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರಿನ ಓವಲ್ ಕ್ರೀಡಾಂಗಣದಲ್ಲಿ ಆಡಿ ಬೆಳೆದ ಹುಡುಗ ಕೆ.ಬಿ.ಪವನ್. ಅಲ್ಲಿಯ ಸರಸ್ವತಿಪುರಂ ಕ್ಲಬ್, ಈ ಹುಡುಗನಿಗೆ ಕ್ರಿಕೆಟ್ `ಅ, ಆ, ಇ, ಈ~ ಪಾಠವನ್ನು ಕಲಿಸಿಕೊಟ್ಟಿದೆ.
 
ಬ್ಯಾಟ್ ಹಿಡಿದು ಆಡಲು ಹೋಗುವಾಗಲೆಲ್ಲ ಕುಕ್ಕರಹಳ್ಳಿ ಕೆರೆ ದಂಡೆ ಮೇಲೆಯೇ ಓಡಾಡುತ್ತಿದ್ದ ಪವನ್, ಬೆಳ್ಳಂಬೆಳಿಗ್ಗೆ ಕೊಕ್ಕರೆಗಳು `ಆಹುತಿ~ಗಾಗಿ ಧ್ಯಾನಸ್ಥವಾಗಿ ಕುಳಿತಿರುವುದನ್ನು ನಿತ್ಯ ನೋಡಿ, ನೋಡಿ ತಾಳ್ಮೆಯ ಪಾಠವನ್ನು ಕಲಿತಿದ್ದಾರೆ. ಆ ತಾಳ್ಮೆಯೇ ಅವರನ್ನು ವಿಭಿನ್ನ ಆರಂಭಿಕ ಆಟಗಾರನನ್ನಾಗಿ ರೂಪಿಸಿದೆ.

ನಾಲ್ಕು ವರ್ಷಗಳ ಹಿಂದೆ ಪಶ್ಚಿಮ ಬಂಗಾಲದ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾದಲ್ಲಿ (2007ರ ಋತು) ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಹುಡುಗ, ಆರಂಭಿಕ ಆಟಗಾರನಾಗಿ ತಂಡಕ್ಕೆ ಅಮೂಲ್ಯವಾದ ಕಾಣಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ತಂಡ ಅಪಾಯದ ಸ್ಥಿತಿಯಲ್ಲಿದ್ದಾಗ ನೆರವಿಗೆ ಧಾವಿಸುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

ಹಾಗೆ ನೋಡಿದರೆ ರಾಬಿನ್ ಉತ್ತಪ್ಪ ಹಾಗೂ ಪವನ್ ಅವರ ಆರಂಭಿಕ ಜೋಡಿ ರಾಜ್ಯ ತಂಡಕ್ಕೆ ಹೇಳಿ ಮಾಡಿಸಿದಂತಿದೆ. `ರೂಬಿ~ ಹೊಡಿ-ಬಡಿ ಆಟದಿಂದ ಎದುರಾಳಿಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿದ್ದರೆ, ಬಂಡೆಗಲ್ಲಿನಂತೆ ನಿಲ್ಲುವ ಬಾಬಾ (ಪವನ್) ಬೌಲರ್‌ಗಳ ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಗೋಳು ಹೊಯ್ದುಕೊಳ್ಳುತ್ತಾರೆ.

`ಮುಟ್ಟಿದರೆ ಮುನಿ~ ಎನ್ನುವಂತೆ ಮಾತನಾಡಿದರೆ ಮುದುಡಿಕೊಳ್ಳುವ ಅವರು, ಬ್ಯಾಟ್ ಹಿಡಿದು ನಿಂತರೆ ಬೇರೆಯ ವ್ಯಕ್ತಿಯಾಗಿ ಕಾಣುತ್ತಾರೆ. ಇದುವರೆಗೆ ಐದು ಪ್ರಥಮ ದರ್ಜೆ ಶತಕಗಳನ್ನು ತಮ್ಮ ಜೇಬಿಗಿಳಿಸಿರುವ ಅವರು, ಕಳೆದ ರಣಜಿ ಋತುವಿನಲ್ಲಿ ಮಾತ್ರ ಅಷ್ಟೊಂದು ತೃಪ್ತಿಕರವಾದ ರನ್ ಫಸಲನ್ನು ಪಡೆದಿರಲಿಲ್ಲ. ಎಂಟು ಪಂದ್ಯಗಳಿಂದ ಕೇವಲ 23.6ರ ಸರಾಸರಿಯಲ್ಲಿ 355 ರನ್‌ಗಳನ್ನು ಅವರು ಪೇರಿಸಿದ್ದರು. ಮೂರು ಅರ್ಧಶತಕಗಳನ್ನಷ್ಟೇ ಗಳಿಸಲು ಅವರಿಗೆ ಸಾಧ್ಯವಾಗಿತ್ತು. ಅಷ್ಟೇ ಸಲ ಅವರ ಬ್ಯಾಟ್ ಶೂನ್ಯ ಸಂಪಾದನೆಯನ್ನು ಸಹ ಮಾಡಿತ್ತು.

`ಹೌದು, ಕಳೆದ ಋತು ಎಲ್ಲ ದೃಷ್ಟಿಯಿಂದಲೂ ನನ್ನ ಪಾಲಿಗೆ ಅಷ್ಟೊಂದು ಫಲಕಾರಿ ಆಗಿರಲಿಲ್ಲ. ನಮ್ಮ ತಂಡ ಫೈನಲ್ ತಲುಪದ ನೋವು ನನ್ನನ್ನು ಹೆಚ್ಚಾಗಿ ಕಾಡಿದರೆ, ಶತಕ ಗಳಿಸಲಾಗದ ನಿರಾಸೆಯೂ ಮನದ ಮೂಲೆಯಲ್ಲಿ ಕೊರೆಯುತ್ತಿತ್ತು. ಆದ್ದರಿಂದಲೇ ಈ ಸಲ ಮನೋಭಾವ (ಮೈಂಡ್ ಸೆಟ್) ಬದಲಾಯಿಸಿಕೊಂಡು ಆಡಲಿಳಿದೆ. ಮೊದಲ ಯತ್ನದಲ್ಲೇ ಈ ಪ್ರಯೋಗ ಫಲ ನೀಡಿದೆ~ ಎನ್ನುತ್ತಾರೆ ಪವನ್.

ರಾಜಸ್ತಾನ ವಿರುದ್ಧದ ಪ್ರಸಕ್ತ ಸಾಲಿನ ಮೊದಲ ರಣಜಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭರ್ಜರಿ ದ್ವಿಶತಕ ದಾಖಲಿಸಿದ ಅವರು (ಇದು ಅವರ ಚೊಚ್ಚಲು ದ್ವಿಶತಕ ಕೂಡ), ಹಳೆಯ ಎಲ್ಲ ನಿರಾಸೆಗಳ ಮಡುವಿನಿಂದ ಹೊರಬಂದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಅತ್ಯಧಿಕ ಮೊತ್ತವನ್ನೂ ಅವರು ಈ ಪಂದ್ಯದಲ್ಲಿ ದಾಖಲಿಸಿದ್ದಾರೆ. `ಮೊದಲ ಪಂದ್ಯದಲ್ಲೇ ಯಶಸ್ಸು ದೊರೆತಿದ್ದು, ಮುಂದಿನ ಸಾಧನೆಗೆ ಪ್ರೇರಣೆ ಆಗಲಿದೆ~ ಎಂಬ ವಿಶ್ವಾಸದಲ್ಲೂ ಅವರಿದ್ದಾರೆ.

ಪವನ್ ಎಂತಹ ತಾಳ್ಮೆಯ ಆಟಗಾರ ಎಂದರೆ ಜೊತೆ ಆಟಗಾರ ಸ್ಟುವರ್ಟ್ ಬಿನ್ನಿ 150 ರನ್ ಗಳಿಸಿದರೆ, ಈ ಆರಂಭಿಕ ಬ್ಯಾಟ್ಸ್‌ಮನ್ ಕೇವಲ 80 ರನ್ ಗಳಿಸಿದ್ದರು. ಹಾಗೆಯೇ ತಡವಾಗಿ ಕ್ರೀಸ್‌ಗೆ ಬಂದಿದ್ದ ಮನೀಷ್ ಪಾಂಡೆ ಪಟಪಟನೆ ಅರ್ಧಶತಕ ಬಾರಿಸಿದರೆ, ಪವನ್ ನಿಧಾನವೇ ಪ್ರಧಾನ ಎಂಬ ಮಂತ್ರಕ್ಕೆ ಅಂಟಿಕೊಂಡಿದ್ದರು.

`ಪವನ್ ಕ್ರಿಕೆಟ್ ಕಡೆಗೆ ಒಲಿದಾಗ ಆಗಲೇ ತಡವಾಗಿತ್ತು. ನನಗೆ ಚೆನ್ನಾಗಿ ನೆನಪಿದೆ. ಅದಿನ್ನೂ 1998ನೇ ಇಸ್ವಿ. ಈ ಹುಡುಗ ಬ್ಯಾಟ್ ಹಿಡಿದು ನನ್ನ ಬಳಿ ಬಂದ. ಆತನ ಪರಿಶ್ರಮ ಹೇಗಿತ್ತೆಂದರೆ ಸ್ವಲ್ಪೇ ಸಮಯದಲ್ಲಿ ಆತ ಒಬ್ಬ ಪರಿಪೂರ್ಣ ಆಟಗಾರನಾಗಿ ಹೊರಹೊಮ್ಮಿದ. ಬಹುತೇಕರಿಗೆ ಗೊತ್ತಿಲ್ಲ.

ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಆತ ಚೆನ್ನಾಗಿ ನಿಭಾಯಿಸಬಲ್ಲ~ ಎಂದು ಖುಷಿಯಿಂದ ಹೇಳುತ್ತಾರೆ, ಪವನ್ ಅವರ ಮೊದಲ ಕ್ರಿಕೆಟ್ ಗುರು ಮೈಸೂರಿನ ರಮೇಶ್.`ರಾಹುಲ್ ದ್ರಾವಿಡ್ ಜೊತೆ ಆಡಲು ಇಳಿದಿದ್ದು ಪವನ್ ಪಾಲಿಗೆ ಒಂದು ಸುವರ್ಣಾವಕಾಶ. ತನ್ನ ನಾಯಕನ ಕಲಾತ್ಮಕ ಆಟವನ್ನು ವಿಕೆಟ್ ಇನ್ನೊಂದು ತುದಿಯಿಂದ ನೋಡುತ್ತಾ, ತನ್ನ ಬ್ಯಾಟಿಂಗ್ ಶೈಲಿಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾ ನಮ್ಮ ಈ ಹುಡುಗ ಹೆಮ್ಮೆಪಡುವಂತೆ ಬೆಳೆದಿದ್ದಾನೆ~ ಎಂದು ಅವರು ಹೇಳುತ್ತಾರೆ.

ರಣಜಿಗೆ ಪದಾರ್ಪಣೆ ಮಾಡುವ ಮೊದಲು ಈ ಆರಂಭಿಕ ಬ್ಯಾಟ್ಸ್‌ಮನ್, ರಾಜ್ಯ 15ರಿಂದ 22 ವರ್ಷದೊಳಗಿನ  ವಿವಿಧ ವಯೋಮಾನದ ತಂಡಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 17 ವರ್ಷದೊಳಗಿನ ತಂಡದಲ್ಲಿ ತಮಿಳುನಾಡಿನ ವಿರುದ್ಧ ಹಾಗೂ 19 ವರ್ಷದೊಳಗಿನ ತಂಡದಲ್ಲಿ ಆಂಧ್ರಪ್ರದೇಶ ಮತ್ತು ಹೈದರಾಬಾದ್ ಎದುರು ಅವರು ಶತಕದ ಸಾಧನೆ ಮಾಡಿದ್ದರು.

`ಬ್ಯಾಟ್ ಹಿಡಿದು ಆಡಲು ಇಳಿಯುವಾಗ ನನಗೆ ಸಾಧ್ಯವಾದಷ್ಟು ಹೊತ್ತು ಕ್ರೀಸ್‌ನಲ್ಲಿ ಇರುವ ಉದ್ದೇಶವೊಂದೇ ಇರುತ್ತದೆ. ಬೇರೆ ಯಾವುದನ್ನೂ ನಾನು ತಲೆಗೆ ಹಾಕಿಕೊಳ್ಳುವುದಿಲ್ಲ. ಎಸೆತದಿಂದ ಎಸೆತಕ್ಕೆ ಇನಿಂಗ್ಸ್ ಬೆಳೆಸುತ್ತಾ ಹೋಗಬೇಕು. ಒಂದೊಮ್ಮೆ ವಿಕೆಟ್‌ಗೆ ಅಂಟಿಕೊಂಡು ನಿಂತರೆ ರನ್‌ಗಳು ತಾನೇ ತಾನಾಗಿ ಹರಿದುಬರುತ್ತವೆ ಎಂಬ ವಿಶ್ವಾಸ ನನಗಿದೆ~ ಎಂದು ಅವರು ವಿವರಿಸುತ್ತಾರೆ.

`ಹಿಂದಿನ ಎರಡು ಬಾರಿ ನಾವು ಪ್ರಶಸ್ತಿ ಹತ್ತಿರಕ್ಕೆ ಬಂದು ದೂರವಾಗಿದ್ದೇವೆ. ಈ ಸಲವಾದರೂ ನಾವು ಟ್ರೋಫಿ ಗೆಲ್ಲುವಂತಾದರೆ ಅದಕ್ಕಿಂತ ಖುಷಿ ಸಮಾಚಾರ ಮತ್ತೊಂದಿಲ್ಲ~ ಎಂದು ಅವರು ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT