ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವನಿತೆಯರ ಹಾಕಿ: ಕಾಣಬೇಕಿದೆ ಮತ್ತಷ್ಟು ಪ್ರಗತಿ

Last Updated 27 ಜನವರಿ 2013, 19:59 IST
ಅಕ್ಷರ ಗಾತ್ರ

“ಉತ್ತರ ಭಾರತದ ಮಹಿಳಾ ಹಾಕಿ ತಂಡಗಳ ಹಲವು ಆಟಗಾರ್ತಿಯರು ಮಗುವಿಗೆ ಜನ್ಮ ನೀಡಿದ ಮೂರ‌್ನಾಲ್ಕು ತಿಂಗಳಲ್ಲಿಯೇ ಮೈದಾನಕ್ಕೆ ಬರುತ್ತಾರೆ. ಪ್ರಮುಖ ಟೂರ್ನಿಗಳಲ್ಲಿ ಆಡಲು ಆರಂಭಿಸುತ್ತಾರೆ. ಫಿಟ್‌ನೆಸ್ ಮತ್ತು ಆಟದ ಕೌಶಲ್ಯಗಳನ್ನು ಮೊದಲಿನಂತೆಯೇ ಕಾಪಾಡಿಕೊಳ್ಳುವ ಅವರ ಬದ್ಧತೆ ನಮ್ಮ ಕರ್ನಾಟಕದಲ್ಲಿ ಇಲ್ಲ. ಆಸ್ಟ್ರೋಟರ್ಫ್ ಸೌಲಭ್ಯ ಮತ್ತು ಒಳ್ಳೆಯ ತರಬೇತಿಯ ಕೊರತೆಯೇ ಇದಕ್ಕೆ ಕಾರಣ”

1990ರ ಬೀಜಿಂಗ್ ಏಷ್ಯನ್ ಗೇಮ್ಸನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯಾಗಿದ್ದ ಮೈಸೂರಿನ ಬಿ.ಜಿ. ಹೇಮಲತಾ ಅವರ ನೇರನುಡಿ ಇದು. ಅವರ ಮಾತುಗಳಿಗೆ ಹಲವು ಹಿರಿಯ ಹಾಕಿ ಪಟುಗಳೂ ಸಹಮತ ವ್ಯಕ್ತಪಡಿಸುತ್ತಾರೆ. ಮೈಸೂರಿನಲ್ಲಿ ಜನವರಿ 21ರಿಂದ 26ರವರೆಗೆ ನಡೆದ ಮೇಜರ್ ಧ್ಯಾನಚಂದ್ ರಾಷ್ಟ್ರಮಟ್ಟದ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭಾಗವಹಿಸಿದ್ದ ಉತ್ತರ ಭಾರತದ ತಂಡಗಳು ಮತ್ತು ಕರ್ನಾಟಕದ ಡಿವೈಎಸ್‌ಎಸ್ (ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ) ಮತ್ತು ಕೂಡಿಗೆ ತಂಡಗಳ ಆಟಗಾರ್ತಿಯರ ಪ್ರದರ್ಶನದ ನಡುವೆ ಇದ್ದ ವ್ಯತ್ಯಾಸವೇ `ಕರ್ನಾಟಕ ಮಹಿಳಾ ಹಾಕಿ' ಭವಿಷ್ಯದ  ಕುರಿತ ಚರ್ಚೆಗೆ ಗ್ರಾಸವಾಗಿತ್ತು.

ಬೆಂಗಳೂರು ಮತ್ತು ಕೊಡಗು ಹೊರತುಪಡಿಸಿದರೆ ಕರ್ನಾಟಕದಲ್ಲಿ ಹಾಕಿ ಆಟಕ್ಕಾಗಿ ಆಸ್ಟ್ರೋ ಟರ್ಫ್ ಸೌಲಭ್ಯ ಇಲ್ಲ. ರೈಲ್ವೆ ಇಲಾಖೆ ಹೊರತುಪಡಿಸಿದರೆ ಬೇರೆ ಸಾರ್ವಜನಿಕ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳಿಲ್ಲ. ತರಬೇತಿ ಮತ್ತು ತರಬೇತುದಾರರ ಕೊರತೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲಿ ಮಹಿಳಾ ಹಾಕಿ ಬೆಳೆದಿಲ್ಲ .

ಆದರೆ ಇಷ್ಟೆಲ್ಲ ಕೊರತೆಗಳ ನಡುವೆಯೂ ಕರ್ನಾಟಕದ ವನಿತೆಯರ ಸಾಧನೆಯ ಸಂತಸವೂ ಇದೆ. ದಕ್ಷಿಣ ಭಾರತ ಮಟ್ಟದಲ್ಲಿ ಕರ್ನಾಟಕದ ಸಬ್‌ಜೂನಿಯರ್, ಜೂನಿಯರ್, ಸೀನಿಯರ್ ಮಹಿಳಾ ತಂಡಗಳು ಕಳೆದ ಐದು ವರ್ಷಗಳಿಂದ ಅಗ್ರಸ್ಥಾನ ಕಾಪಾಡಿಕೊಂಡಿರುವುದು ಸಮಾಧಾನದ ಸಂಗತಿ. ಆದರೆ, ರಾಷ್ಟ್ರಮಟ್ಟದಲ್ಲಿ ಇನ್ನೂ ಪದಕ ವಿಜೇತರಾಗುವ ಮಟ್ಟಕ್ಕೆ ಬೆಳೆದಿಲ್ಲ. ಸದ್ಯ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರ್ತಿ ಪೊನ್ನಮ್ಮ ಸ್ಥಾನ ಪಡೆದಿದ್ದಾರೆ. ಮೈಸೂರಿನ ಡಿವೈಎಸ್‌ಎಸ್ ತಂಡದ ಕಾವ್ಯಶ್ರೀ, ಪಿ.ಜಿ. ಮುತ್ತಮ್ಮ  ಭಾರತ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾದವರು.
`ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸೂಕ್ತ ಸೌಲಭ್ಯ ನೀಡಬೇಕು.

ಇದೇ ಟೂರ್ನಿಯಲ್ಲಿ ಆಡುತ್ತಿರುವ ಲಖನೌ ಮತ್ತು ಭೋಪಾಲ್ ತಂಡದ ಹುಡುಗಿಯರನ್ನು ನೋಡಿ. ಅಲ್ಲಿ ಅವರು ಆಸ್ಟ್ರೋ ಟರ್ಫ್‌ನಲ್ಲಿ ಆಡುವುದರಿಂದ ಅವರ ದೈಹಿಕ ಸಾಮರ್ಥ್ಯ ಚೆನ್ನಾಗಿದೆ. ಏಕೆಂದರೆ ಮಣ್ಣಿನಂಕಣದಲ್ಲಿ ಆಡುವಾಗ ವಿನಿಯೋಗಿಸುವ  ಶಕ್ತಿ ಮತ್ತು ಕೌಶಲ್ಯದ ದುಪ್ಪಟ್ಟು ಪ್ರಮಾಣದ ಅವಶ್ಯಕತೆ ಟರ್ಫ್‌ನಲ್ಲಿ ಇರುತ್ತದೆ. ಆದ್ದರಿಂದ ಅವರಿಗೆ ಈ ಮಣ್ಣಿನಂಕಣದಲ್ಲಿ ಆಡುವುದು ಸುಲಭ. ಜಿಲ್ಲೆಗೆ ಒಂದು ಆಸ್ಟ್ರೋ ಟರ್ಫ್ ಬೇಕೆ ಬೇಕು' ಎಂದು ಹೇಮಲತಾ ಅಭಿಪ್ರಾಯಪಡುತ್ತಾರೆ.

ಮೈಸೂರಿನಲ್ಲಿ ಕಳೆದ ಒಂದು ದಶಕದ ಆಗ್ರಹದ ನಂತರ ಇದೀಗ ಚಾಮುಂಡಿ ವಿಹಾರದ ಹಾಕಿ ಕ್ರೀಡಾಂಗಣದಲ್ಲಿ ಆಸ್ಟ್ರೋ ಟರ್ಫ್ ಹಾಕುವ ಕಾಮಗಾರಿ ಆರಂಭವಾಗಿದೆ. ಆದರೂ ಇಲ್ಲಿಯ ಡಿವೈಎಸ್‌ಎಸ್ ತಂಡವು ನಿರಂತರವಾಗಿ ಅಂತರರಾಜ್ಯ ಮತ್ತು ರಾಜ್ಯಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡು ಬರುತ್ತಿದೆ. ಹಾವೇರಿ, ಗದಗ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಆಟಗಾರ್ತಿಯರೂ ಇಲ್ಲಿದ್ದಾರೆ.

`ನಮ್ಮ ತಂಡ ಇನ್ನೂ ಪೆನಾಲ್ಟಿ ಕಾರ್ನರ್, ಪೆನಾಲ್ಟಿಗಳಲ್ಲಿ ಪರಿಣತಿ ಗಳಿಸಬೇಕು. ಆಸ್ಟ್ರೋ ಟರ್ಫ್ ಕೊರತೆಯ ಕಾರಣದಿಂದ ಹಾಕಿಯಲ್ಲಿ ಪ್ರಮುಖವಾಗಿರುವ ಈ ಕೌಶಲ್ಯಗಳ ತರಬೇತಿ ಮತ್ತು ಕಲಿಕೆಗಳಿಗೆ ಹಿನ್ನಡೆಯಾಗಿದೆ' ಎಂದು ಡಿವೈಎಸ್‌ಎಸ್ ಕೋಚ್ ವಿಜಯಕೃಷ್ಣ ಹೇಳುತ್ತಾರೆ.

ಉದ್ಯೋಗಾವಕಾಶಗಳಿಲ್ಲ
ರೈಲ್ವೆ ಇಲಾಖೆ ಹೊರತುಪಡಿಸಿದರೆ ಬೇರೆ ಇಲಾಖೆಗಳಲ್ಲಿ ಮಹಿಳಾ ಹಾಕಿ ಆಟಗಾರ್ತಿಯರಿಗೆ ಉದ್ಯೋಗಾವಕಾಶಗಳು ಕಡಿಮೆ. ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಮಧ್ಯಪ್ರದೇಶದಲ್ಲಿ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿಯು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ ಅಲ್ಲಿ ಹಲವು ಇಲಾಖೆಗಳಿಗೆ ಹಾಕಿ ತಂಡಗಳೂ ಇವೆ. ಆದರೆ ಕರ್ನಾಟಕದಲ್ಲಿ ಈ ಸೌಲಭ್ಯ ಸಿಗುತ್ತಿಲ್ಲ. ದೊಡ್ಡ ಕಾರ್ಪೋರೆಟ್ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಹಾಕಿ ಕರ್ನಾಟಕ ಕಳೆದ ಒಂದು ವರ್ಷದಿಂದ ಪ್ರಯತ್ನಿಸಿದರೂ ಫಲ ಸಿಕ್ಕಿಲ್ಲ.

`ಕೆಎಸ್‌ಆರ್‌ಪಿ, ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ರೈಲ್ವೆ ಇಲಾಖೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಕ್ಕೆ ಪ್ರಯತ್ನ ನಡೆಸಿದ್ದೇವೆ.  ಪ್ರಸ್ತಾವ ಸಲ್ಲಿಸುತ್ತಲೇ ಇದ್ದೇವೆ. ರಾಜ್ಯದಲ್ಲಿ ಹಾಕಿ ಬೆಳವಣಿಗೆಗೆ ಶಾಲೆಗಳ ಮಟ್ಟದಲ್ಲಿಯೂ ವಾರಾಂತ್ಯದ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ರಾಜ್ಯ ತಂಡಗಳಿಗೆ ಸುದೀರ್ಘ ಅವಧಿಯ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ರಾಜ್ಯದ ಮಾಜಿ ಆಟಗಾರ್ತಿಯರಾಗಿದ್ದ ಲೋರೆಟಾ, ಜಮುನಾ, ಸೌಮ್ಯ ಅವರು ಮಹಿಳಾ ಆಟಗಾರ್ತಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಆಟಗಾರ್ತಿಯರು ಕಡಿಮೆ, ಆದರೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳು ಬರುತ್ತಿವೆ' ಎಂದು ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಹೇಳುತ್ತಾರೆ.

ಒಂದು ಸಮಯದಲ್ಲಿ ಕರ್ನಾಟಕದಿಂದ ಭಾರತ ತಂಡದ ಕದ ತಟ್ಟುತ್ತಿದ್ದ ಆಟಗಾರ್ತಿಯರು ಬಹಳಷ್ಟು ಸಂಖ್ಯೆಯಲ್ಲಿದ್ದರು. ಬಿ.ಜಿ. ಹೇಮಲತಾ, ಜಮುನಾ, ರೇಖಾ, ತಾರಾ, ಲೊರೆಟಾ, ದೇವರಾಜಮ್ಮ ಹೀಗೆ ಆಟಗಾರ್ತಿಯರ ಪಟ್ಟಿಯೇ ಬೆಳೆಯುತ್ತದೆ. ಈಗಲೂ ಪ್ರತಿಭೆಗಳಿಗೆ ಕೊರತೆಯಿಲ್ಲ; ಉತ್ತರ ಭಾರತದ ಮಾದರಿಯನ್ನು ಅನುಸರಿಸಿದರೆ ರಾಷ್ಟ್ರಮಟ್ಟದಲ್ಲಿಯೂ ಎತ್ತರಕ್ಕೆ ಏರಲು ಸಾಧ್ಯವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT