ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಹಿಂದೆ, ತಮಿಳುನಾಡು ಬಹಳ ಮುಂದೆ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬರ ಆಕಸ್ಮಿಕ ಸಾವು ಎಂಟು ಜನರಿಗೆ ಮರು ಹುಟ್ಟು ನೀಡಬಲ್ಲುದು!
ಅಪಘಾತ ಮತ್ತಿತರ ಯಾವುದೇ ಕಾರಣದಿಂದ ಒಬ್ಬ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡರೆ ಅಂತಹ ವ್ಯಕ್ತಿ ಮತ್ತೆ ಬದುಕುವುದು ಅಸಾಧ್ಯ.
 
ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವ ರಕ್ಷಕ ಸಾಧನಗಳಿಂದಷ್ಟೇ ಉಸಿರಾಡುತ್ತಿರುವ ಅಂತಹ ವ್ಯಕ್ತಿಯ ಅಂಗಾಂಗ ದಾನ ಮಾಡಲು ಸಮೀಪದ ಬಂಧುಗಳು ಒಪ್ಪಿಗೆ ನೀಡಿದರೆ, ಅಂಗಾಂಗ ವೈಫಲ್ಯದಿಂದ ಮರಣಮುಖಿಯಾಗಿರುವ ಎಂಟು ಮಂದಿಗೆ ಜೀವದಾನ ಮಾಡಿದಂತಾಗುತ್ತದೆ.

ಮೆದುಳು ಸಾವಿನ ಬಳಿಕ ಒಬ್ಬ ವ್ಯಕ್ತಿಯ ಹೃದಯ, ಪಿತ್ತಕೋಶ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಮೂತ್ರಕೋಶ, ಕಣ್ಣುಗಳನ್ನು ಅವುಗಳ ದಾನದ ನಿರೀಕ್ಷೆಯಲ್ಲಿರುವ ಎಂಟು ಮಂದಿಗೆ ಕಸಿ ಮಾಡಬಹುದು.

`ಕೆಡವರ್ ಆರ್ಗನ್ ಡೊನೇಷನ್~ ಎಂದು ಕರೆಯಲಾಗುವ ಈ ಅಂಗಾಂಗ ದಾನ ವ್ಯವಸ್ಥೆಯು ರಾಜ್ಯದಲ್ಲಿ 2007ರಿಂದಲೇ ಜಾರಿಯಲ್ಲಿದೆ. ರಾಜ್ಯದಲ್ಲಿ ಇದುವರೆಗೆ 32 ಮಂದಿಯ ಅಂಗಾಂಗ ದಾನ, ಅವರ ಮೆದುಳು ಸಾವಿನ ಬಳಿಕ ಆಗಿದೆ. ತಮಿಳುನಾಡಿನಲ್ಲಿ 223 ಮಂದಿಯ ಅಂಗಾಂಗ ದಾನ ಆಗಿದೆ.

ಕರ್ನಾಟಕದಲ್ಲಿ ಮರಣ ಶಯ್ಯೆಯಲ್ಲಿದ್ದ 32 ಮಂದಿಯಿಂದ 156 ವಿವಿಧ ಅಂಗಗಳು ಹಾಗೂ ತಮಿಳುನಾಡಿನಲ್ಲಿ 223 ಮಂದಿಯಿಂದ 1,276 ವಿವಿಧ ಅಂಗಗಳನ್ನು ತೆಗೆದು, ಅದರ ಅಗತ್ಯ ಇದ್ದವರಿಗೆ ಕಸಿ ಮಾಡಲಾಗಿದೆ.

ತಮಿಳುನಾಡಿನಲ್ಲಿ `ಕೆಡವರ್ ಆರ್ಗನ್ ಡೊನೇಷನ್~ ಬಗ್ಗೆ ಜನ ಜಾಗೃತಿ ಮೂಡಿಸಿರುವುದರಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ಸಾಧ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂಗಾಂಗ ದಾನಕ್ಕೆ ತೊಡಕಾಗಿದ್ದ  ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಅಪಘಾತದ ಆಘಾತಕ್ಕೆ ಒಳಗಾದ ಜನರಿಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡದೇ ಅವರನ್ನು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ರೀತಿಯಲ್ಲಿ ಆ ರಾಜ್ಯದಲ್ಲಿ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದೆ.

ಆದರೆ ಕರ್ನಾಟಕದಲ್ಲಿ ಈಗಲೂ ಹಳೇ ಕಾನೂನುಗಳೇ ಇವೆ. ಇದಕ್ಕೆ ಎರಡು ನಿಯಮಗಳನ್ನು ಇಲ್ಲಿ ಉದಾಹರಿಸಬಹುದು.

ನಿಯಮ ಒಂದು; ಅಂಗಾಂಗ ಕಸಿಗೆ ಅನುಮತಿ ಇಲ್ಲದ ಆಸ್ಪತ್ರೆಯಲ್ಲಿ ಅಂಗಾಂಗ ತೆಗೆಯಲು ಸಹ ಅನುಮತಿ ಇಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ  ಸಂಕಟದಲ್ಲಿರುವ ಜನರು ಅಂಗಾಂಗ ದಾನಕ್ಕೆ ಒಪ್ಪುವುದೇ ಕಷ್ಟ. ಒಪ್ಪಿದ ಮೇಲೆ ಅಂಗಾಂಗ ತೆಗೆಸಲು ಅದಕ್ಕೆ ಅನುಮತಿ ಇರುವ ಆಸ್ಪತ್ರೆಗೆ ಹೋಗುವುದು ಇನ್ನೂ ಕಷ್ಟ.

ನಿಯಮ ಎರಡು: ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆಯೋ ಅದೇ ಠಾಣೆಯ ಪೊಲೀಸರೇ ಶವ ಪರೀಕ್ಷೆಯ ನಂತರದ ವಿಧಿ ವಿಧಾನಗಳನ್ನು ನೆರವೇರಿಸಬೇಕು.

ಇದರ ಪ್ರಕಾರ ಒಂದು ಠಾಣೆಯ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗುವ ವ್ಯಕ್ತಿಗೆ ಮತ್ತೊಂದು ಠಾಣೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ದಾಖಲಿಸಿದ ಮೇಲೆ ಮೆದುಳು ಸಾವಾದರೆ, ಬಂಧುಗಳಿಗೆ ಶವ ನೀಡಲು ಅಪಘಾತ ನಡೆದ ಪ್ರದೇಶದ ಠಾಣೆ ವ್ಯಾಪ್ತಿಯ ಪೊಲೀಸರೇ ಬರಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಹಿಡಿಯುವುದರಿಂದ ಜನರು ಅಂಗಾಂಗ ದಾನದಿಂದ ಹಿಂದೆ ಸರಿಯುತ್ತಾರೆ.

ತಮಿಳುನಾಡಿನಲ್ಲಿ ಈ ಎರಡೂ ನಿಯಮಗಳನ್ನು ಸರಳಗೊಳಿಸಲಾಗಿದೆ; ಮೆದುಳು ಸಾವು ಘೋಷಣೆಯಾಗುವ ಆಸ್ಪತ್ರೆ ವ್ಯಾಪ್ತಿಯ ಪೊಲೀಸರೇ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವ ನೀಡಬಹುದಾಗಿದೆ, ಅಂಗಾಂಗ ಕಸಿಗೆ ಅನುಮತಿ ಇಲ್ಲದ ಆಸ್ಪತ್ರೆಯಲ್ಲಿ ಅಂಗಾಂಗ ತೆಗೆದು ಬೇರೆ ಆಸ್ಪತ್ರೆಗೆ ಕಳುಹಿಸಿಕೊಡಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ರಾಜ್ಯದಲ್ಲೂ ನಿಯಮಗಳನ್ನು ಸರಳಗೊಳಿಸಿದರೆ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು `ಅಂಗಾಂಗ ಕಸಿಗಾಗಿ ಕರ್ನಾಟಕ ವಲಯ ಸಮನ್ವಯ ಸಮಿತಿ~ಯ (ಜಡ್‌ಸಿಸಿಕೆ) ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ. ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವೂ ಇದೆ ಎಂದು ಅವರು ಹೇಳುತ್ತಾರೆ.

ಅಂಗಾಂಗ ದಾನದಿಂದ ಜೀವದಾನ: ಸಮಿತಿಯ ಸದಸ್ಯರೂ ಆಗಿರುವ `ನೆಫ್ರೋ- ಯೂರಾಲಜಿ ಸಂಸ್ಥೆ~ಯ ನಿರ್ದೇಶಕ ಡಾ.ಜಿ.ಕೆ.ವೆಂಕಟೇಶ್ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, `ರಾಜ್ಯದಲ್ಲಿ ಅಪಘಾತ ಅಥವಾ ಇತರ ಕಾರಣಗಳಿಂದಾಗುವ ಮೆದುಳು ರಕ್ತಸ್ರಾವದಿಂದ ಪ್ರತಿ ವರ್ಷ ಇಪ್ಪತ್ತು ಸಾವಿರ ಮಂದಿ ಮರಣ ಹೊಂದುತ್ತಿದ್ದಾರೆ. ಅವರಲ್ಲಿ ಕಡೇ ಪಕ್ಷ ಹತ್ತು ಸಾವಿರ ವ್ಯಕ್ತಿಗಳ ಅಂಗಾಂಗಗಳನ್ನು  ದಾನ ಮಾಡಲು, ಅವರ ಸಂಬಂಧಿಕರು ಒಪ್ಪಿದರೆ 80 ಸಾವಿರ ಮಂದಿಗೆ ಜೀವದಾನ ಮಾಡಿದಂತಾಗುತ್ತದೆ~ ಎಂದರು.

`ಅಂಗಾಂಗಗಳ ಪೈಕಿ ಮೂತ್ರಕೋಶ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ಎರಡೂ ಮೂತ್ರಕೋಶಗಳು ವಿಫಲಗೊಂಡ ರೋಗಿಗಳಿಗೆ ಡಯಾಲಿಸಿಸ್, ತಾತ್ಕಾಲಿಕವಾಗಿ ಅಲ್ಪಕಾಲೀನ ಪರಿಹಾರ ನೀಡುತ್ತದೆ.
 
ಆದರೆ ಮೂತ್ರಕೋಶ ಕಸಿ ಮಾಡಿಸಿಕೊಂಡ ರೋಗಿಯು ಕನಿಷ್ಠ 5ರಿಂದ ಅನೇಕ ವರ್ಷಗಳವರೆಗೆ ಸಾಮಾನ್ಯ ಜೀವನ ನಡೆಸಬಹುದು. ಹೀಗಾಗಿ ಎರಡು ಮೂತ್ರಕೋಶಗಳು ಸಂಪೂರ್ಣ ವಿಫಲಗೊಂಡ ರೋಗಿಗಳಿಗೆ ಬದಲಿ ಮೂತ್ರಕೋಶ ಕಸಿ ಮಾಡುವುದು ಉತ್ತಮ ಪರಿಹಾರವಾಗಿದೆ~.

`ಬದುಕಿರುವ ವ್ಯಕ್ತಿಗಳಿಂದ ಮೂತ್ರಕೋಶ ಪಡೆದು ಕಸಿ ಮಾಡಬಹುದು. ಆದರೆ ಇದಕ್ಕೆ ಅದರದ್ದೇ ಆದ ಮಿತಿಗಳಿವೆ. ಸಾಮಾಜಿಕ ಮತ್ತು ಕಾನೂನು ಸಮಸ್ಯೆಗಳಿವೆ.
 
ಆದರೆ ಮರಣ ಖಾತರಿಯಾಗಿರುವ, ಜೀವ ರಕ್ಷಕ ಸಾಧನಗಳಿಂದ ಮಾತ್ರ ಉಸಿರಾಡುತ್ತಿರುವ ವ್ಯಕ್ತಿಗಳ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುವುದಿಲ್ಲ. ಅಂತಹ ವ್ಯಕ್ತಿಯ ಸಂಬಂಧಿಕರು ದೊಡ್ಡ ಮನಸ್ಸು ಮಾಡಿ ಅಂಗಾಂಗ ದಾನಕ್ಕೆ ಸಮ್ಮತಿಸಿದರೆ, ಅದರಿಂದ ಹಲವು ಕುಟುಂಬಗಳನ್ನು ಬದುಕಿಸಿದಂತಾಗುತ್ತದೆ~.

`ಮೂತ್ರಕೋಶ, ಚರ್ಮ, ಪಿತ್ತಕೋಶಗಳನ್ನು ಜೀವಂತ ವ್ಯಕ್ತಿಗಳಿಂದಲೂ ಪಡೆಯಬಹುದು. ಆದರೆ ಉಳಿದ ಅಂಗಾಂಗಗಳನ್ನು ಕೊನೆಯುಸಿರು ಎಳೆಯುತ್ತಿರುವ ವ್ಯಕ್ತಿಗಳಿಂದ ಮಾತ್ರ ಪಡೆದುಕೊಳ್ಳಬಹುದು.
 
ಹೀಗಾಗಿ ಆಕಸ್ಮಿಕವಾಗಿ ಸಾವಿಗೀಡಾಗುವ ವ್ಯಕ್ತಿಗಳ ದೇಹಗಳನ್ನು ಮಣ್ಣು ಅಥವಾ ಬೆಂಕಿಯಲ್ಲಿ ನಾಶ ಮಾಡುವ ಬದಲು, ಅವರ ಅಂಗಾಂಗಗಳನ್ನು ದಾನ ಮಾಡಬೇಕು. ಅಂಗಾಂಗ ವೈಫಲ್ಯದಿಂದ ಬದುಕುವ ಭರವಸೆ ಕಳೆದುಕೊಂಡಿರುವ ಜನರ ಬಾಳು ಬೆಳಗಬೇಕು~ ಎಂದು ಅವರು ಮನವಿ ಮಾಡಿದರು.

ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಉಪ ನಿರ್ದೇಶಕ ಡಾ.ಕೆ

.ಎನ್.ಪ್ರಕಾಶ್, `ನಮ್ಮ ಆಸ್ಪತ್ರೆಯಲ್ಲಿ 2009ರಿಂದ ಇಲ್ಲಿಯವರೆಗೆ ಮೆದುಳು ಸಾವಿಗೀಡಾದ 9 ಮಂದಿಯ ಅಂಗಾಂಗ ದಾನ ಮಾಡಲಾಗಿದೆ. 9 ಮಂದಿಗೆ ಮೂತ್ರಕೋಶ ಮತ್ತು 11 ಮಂದಿಗೆ ಪಿತ್ತಕೋಶ ಕಸಿ ಮಾಡಿದ್ದೇವೆ.

ಇದರಲ್ಲಿ ಬೇರೆ ಎರಡು ಆಸ್ಪತ್ರೆಗಳಿಂದ ದಾನ ಪಡೆದ ಎರಡು ಪಿತ್ತಕೋಶಗಳು ಸೇರಿವೆ. ಆಕಸ್ಮಿಕ ಸಾವು ಸಂಭವಿಸಿದಾಗ ಅಂಗಾಂಗ ದಾನ ಮಾಡಿದರೆ, ಸಾವಿನ ನೋವಿನಲ್ಲೂ ಇತರರಿಗೆ ಜೀವದಾನ ಮಾಡಿದ ಸಮಾಧಾನ ಹೊಂದಬಹುದು~ ಎಂದು ಅಭಿಪ್ರಾಯಪಡುತ್ತಾರೆ.

ಅಂಗಾಂಗ ದಾನಕ್ಕೆ ಇಲ್ಲಿ ಸಂಪರ್ಕಿಸಿ

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ದಾನ ಪಡೆಯಲು ಮತ್ತು ಪಡೆದ ಅಂಗಾಂಗಗಳನ್ನು ಹಂಚಿಕೆ ಮಾಡಲು ರಾಜ್ಯ ಸರ್ಕಾರ ರಚಿಸಿರುವ `ಅಂಗಾಂಗ ಕಸಿಗಾಗಿ ಕರ್ನಾಟಕ ವಲಯ ಸಮನ್ವಯ ಸಮಿತಿ~ಯಲ್ಲಿ (ಜಡ್‌ಸಿಸಿಕೆ) ಹೆಸರು ನೋಂದಾಯಿಸಿಕೊಳ್ಳಬೇಕು. 

 ನಗರದ ಹೊಸೂರು ರಸ್ತೆಯಲ್ಲಿ ಇರುವ `ನಿಮ್ಹಾನ್ಸ್ ಆಸ್ಪತ್ರೆ~ಯ ಹೊರ ರೋಗಿಗಳ ವಿಭಾಗದ ಬಳಿ ಸಮಿತಿಯ ಮುಖ್ಯ ಕಚೇರಿ ಇದೆ. ದೂರವಾಣಿ ಸಂಖ್ಯೆ: 080- 26995716, 9845006768. ವೆಬ್‌ಸೈಟ್: www.zcck.in.

ಎರಡು ವೈದ್ಯರ ತಂಡಗಳು ದೃಢೀಕರಿಸಿದ ನಂತರ ಮೆದುಳು ಸಾವಿಗೀಡಾದ ವ್ಯಕ್ತಿಯಿಂದ ಅಂಗಾಂಗಗಳ ದಾನಕ್ಕೆ ಸಮೀಪದ ಬಂಧುಗಳು ಸಮ್ಮತಿಸಿದರೆ ಆ ಅಂಗಾಂಗಗಳನ್ನು `ಜಡ್‌ಸಿಸಿಕೆ~, ಅಂಗಾಂಗಗಳಿಗಾಗಿ ಕಾಯುತ್ತಿರುವ ರೋಗಿಗಳಿಗೆ ನೋಂದಣಿ ಜೇಷ್ಠತೆ ಆಧಾರದಲ್ಲಿ ಹಂಚಿಕೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT