ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ಪುಳಕ

ರಣಜಿ ಕ್ರಿಕೆಟ್‌: ಆತಂಕ ಮೂಡಿಸಿದ್ದ ಆರನೇ ವಿಕೆಟ್‌ ಜೊತೆಯಾಟ, ಅಗ್ರಸ್ಥಾನಕ್ಕೇರಿದ ಆತಿಥೇಯರು
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಂಜಾಬ್ ಇನಿಂಗ್ಸ್‌ನ 99ನೇ ಓವರ್‌ನ ಕೊನೆಯ ಎಸೆತ; ಕ್ರೀಸ್‌ನಲ್ಲಿದ್ದ ಹನ್ನೊಂದನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ವಿ.ಎಂ.ಚೌಧರಿ ರಕ್ಷಣಾತ್ಮಕವಾಗಿ ಆಡಿದರು. ಹ್ಯಾಟ್ರಿಕ್‌ ವಿಕೆಟ್‌ ಗುರಿ ಇಟ್ಟಿದ್ದ ‘ಮಂಡ್ಯ ಎಕ್ಸ್‌ಪ್ರೆಸ್‌’ಗೆ ಇದರಿಂದ ಒಂದಿಷ್ಟೂ ನಿರಾಸೆಯಾಗಲಿಲ್ಲ. ಯಾಕೆಂದರೆ ಈ ರಣಜಿ  ಋತುವಿನಲ್ಲಿ ಕರ್ನಾಟಕದ ಹ್ಯಾಟ್ರಿಕ್‌ ಜಯಕ್ಕೆ ಆಗ ಕ್ಷಣಗಣನೆ ಆರಂಭವಾಗಿತ್ತು.

ಮುಂದಿನ ಓವರ್‌ನಲ್ಲಿ ಸ್ಟುವರ್ಟ್‌ ಬಿನ್ನಿ ಹೆಣೆದ ಬಲೆಯಿಂದ ತಪ್ಪಿಸಿಕೊಳ್ಳಲು ಪಂಜಾಬ್‌ ವೇಗಿ ವಿ.ಆರ್‌.ವಿ. ಸಿಂಗ್‌ಗೆ ಸಾಧ್ಯವಾಗಲಿಲ್ಲ. ಮೊಣಕಾಲೆತ್ತರದಲ್ಲಿ ನುಗ್ಗಿ ಬಂದ ಚೆಂಡನ್ನು ಮಿಡ್‌ಆನ್‌ ಮೇಲಿಂದ ಎತ್ತಿ ಬಾರಿಸಲು ನಡೆಸಿದ ಶ್ರಮ ವಿಫಲವಾಯಿತು. ಚೆಂಡು ನೇರವಾಗಿ ನಾಯಕ ವಿನಯ್‌ ಕುಮಾರ್ ಕೈಸೇರಿತು, ಕರ್ನಾಟಕ ತಂಡದಲ್ಲಿ ಸಂಭ್ರಮದ ಅಲೆ ಎದ್ದಿತು; ಮತ್ತೆ ನಡೆದದ್ದು ಔಪಚಾರಿಕ ಆಟ ಮಾತ್ರ.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಮುಕ್ತಾಯಗೊಂಡ ರಣಜಿ ಎ ಗುಂಪಿನ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ಹತ್ತು

ವಿಕೆಟ್‌ಗಳಿಂದ ಮಣಿಸಿದ ಕರ್ನಾಟಕ, ಕಳೆದ ವರ್ಷ ಇದೇ ಮೈದಾನದಲ್ಲಿ ಹರಿಯಾಣ ವಿರುದ್ಧ ಅನುಭವಿಸಿದ ‘ಹೀನಾಯ ಡ್ರಾ’ದ ಕಹಿ ನೆನಪನ್ನು ಮರೆತು ಕ್ವಾರ್ಟರ್‌ ಫೈನಲ್ ಹಾದಿಯನ್ನು ಸುಲಭಗೊಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಮನೀಶ್ ಪಾಂಡೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಕರ್ನಾಟಕದ ಸುಲಭ ಜಯದ ಕ್ಷಣವನ್ನು ಸವಿಯಲು ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರು ಅಂತಿಮ ದಿನ ನಾಲ್ಕೂವರೆ ತಾಸಿಗೂ ಹೆಚ್ಚು ಕಾಯಬೇಕಾಗಿ ಬಂತು. ಮೊದಲ ಅವಧಿಯಲ್ಲಿ ಕರ್ನಾಟಕದ ಬೌಲರ್‌ಗಳನ್ನು ಕಾಡಿದ ಬಲಗೈ ಬ್ಯಾಟ್ಸ್‌ಮನ್‌ಗಳಾದ ಗುರ್‌ಕೀರತ್‌ ಸಿಂಗ್‌ ಮಾನ್‌ ಮತ್ತು ಜಿ.ಎಚ್.ಖೇರಾ ಅಮೋಘ ಆಟ ಪ್ರದರ್ಶಿಸಿದರು. ಈ ಇಬ್ಬರೂ ಆಟಗಾರರು ಔಟಾದ ಬಳಿಕ ಕ್ಷಣಾರ್ಧದಲ್ಲಿ ಪಂಜಾಬ್‌ ಇನಿಂಗ್ಸ್‌ಗೆ ತೆರೆ ಎಳೆದ ಕರ್ನಾಟಕ ಚಹಾ ವಿರಾಮಕ್ಕೆ ಮೊದಲೇ ಗೆಲುವಿನ ನಗೆ ಸೂಸಿತು.

ಗೆಲುವಿಗೆ ಬೇಕಾದ 31 ರನ್‌ಗಳನ್ನು ಗಳಿಸಲು ಕರ್ನಾಟಕ ತೆಗೆದುಕೊಂಡದ್ದು ಕೇವಲ 4.1 ಓವರ್‌ ಮಾತ್ರ. ಮೂರನೇ ಓವರ್‌ನಲ್ಲಿ ಮಯಂಕ್‌ ಅಗರ್‌ವಾಲ್‌ ಹೆಲ್ಮೆಟ್‌ಗೆ ಬಡಿದ ಚೆಂಡು ವಿಕೆಟ್‌ ಕೀಪರ್ ಕೈ ಸೇರಿದಾಗ ಅಂಪೈರ್‌ ಸುರೇಶ್‌ ಶಾಸ್ತ್ರಿ ಔಟ್‌ ನೀಡುತ್ತಿದ್ದಂತೆ ಕರ್ನಾಟಕದ ಬೋನಸ್‌ ಪಾಯಿಂಟ್‌ ಕನಸು ಮಂಕಾಯಿತು. ಆದರೆ ಬ್ಯಾಟ್ಸ್‌ಮನ್‌ ತುದಿಯಲ್ಲಿದ್ದ ಅಂಪೈರ್‌ ಮಿಲಿಂದ್‌ ಪಾಠಕ್‌ ಜೊತೆ ಸಮಾಲೋಚನೆ ನಡೆಸಿ ಮಯಂಕ್‌ ಅವರನ್ನು ವಾಪಸ್‌ ಕರೆಸಲಾಯಿತು. ನಂತರ ಮಿಂಚಿನ ಬ್ಯಾಟಿಂಗ್‌ ಮಾಡಿದ ಕೆ.ಎಲ್‌.ರಾಹುಲ್‌ 25 (13 ಎಸೆತ, 5 ಬೌಡರಿ) ಔಪಚಾರಿಕತೆಯನ್ನು ಬೇಗ ಮುಗಿಸಿದರು.

ಆತಂಕ ಮೂಡಿಸಿದ ಜೊತೆಯಾಟ
ಸೋಮವಾರ ತಲಾ 56 ಮತ್ತು 13 ರನ್‌ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಗುರ್‌ಕೀರತ್‌ ಸಿಂಗ್‌ ಮತ್ತು ಜಿ.ಎಚ್.ಖೇರಾ ಮಂಗಳವಾರ ಆಕ್ರಮಣಕಾರಿ ಆಟವಾಡಿ ಆತಿಥೇಯರಲ್ಲಿ ಆತಂಕ ಮೂಡಿಸಿದರು. ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮವಾಗಿ ಸಹಕಾರ ನೀಡುತ್ತಿದ್ದ ಪಿಚ್‌ನಲ್ಲಿ ಮೇಲುಗೈ ಸಾಧಿಸಿದ ಇವರು 186 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಇನಿಂಗ್ಸ್‌ ಸೋಲಿನಿಂದ ಪಾರು ಮಾಡಿದರು.

ವಿನಯ್‌ ಕುಮಾರ್‌ ಮತ್ತು ಅಭಿಮನ್ಯು ಮಿಥುನ್‌ ಎಸೆದ ದಿನದ ಮೊದಲ ಎರಡು ಓವರ್‌ಗಳಲ್ಲಿ ಯಾವುದೇ ರನ್‌ ಬರಲಿಲ್ಲ. ಆದರೆ ನಿಧಾನವಾಗಿ ಆಕ್ರಮಣಕ್ಕೆ ಇಳಿದ ಇವರು ದಿನದ ಹನ್ನೆರಡನೇ ಓವರ್‌ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಶರತ್‌ ಎಸೆತವನ್ನು ಫೈನ್‌ಲೆಗ್‌ಗೆ ಹುಕ್‌ ಮಾಡಿ ಬೌಂಡರಿ ಗಳಿಸಿದ ಗುರ್‌ಕೀರತ್‌ ಸ್ಫೋಟಕ ಬ್ಯಾಟಿಂಗ್‌ನ ಸೂಚನೆ ನೀಡಿದರು; 65ನೇ ಓವರ್‌ನಲ್ಲಿ ಜೊತೆಯಾಟವನ್ನು ಶತಕಕ್ಕೆ ತಲುಪಿಸಿದರು.

ಪಿಚ್‌ನ ಮರ್ಮ ಅರಿತಿದ್ದ ನಾಯಕನ ಆತಂಕ ಅಷ್ಟರಲ್ಲಿ ಹೆಚ್ಚಾಯಿತು. ಆಗಲೇ ನಾಲ್ಕು ಬಾರಿ ಬೌಲರ್‌ಗಳನ್ನು ಬದಲಿಸಿದ ಅವರು ಎಡಗೈ ಸ್ಪಿನ್ನರ್‌ ಕೆ.ಪಿ.ಅಪ್ಪಣ್ಣ ಅವರನ್ನು ಪಂದ್ಯದಲ್ಲಿ ಮೊದಲ ಬಾರಿಗೆ ಬೆಟ್ಟದ ಕಡೆಯಿಂದ ಬೌಲಿಂಗ್‌ ಮಾಡಲು ಆಹ್ವಾನಿಸಿದರು. ಆದರೆ ಇದಕ್ಕೆ ಯಾವುದೇ ಫಲ ಸಿಗಲಿಲ್ಲ.
ಈ ಓವರ್‌ನಲ್ಲಿ ಖೇರಾ ಒಂಟಿ ರನ್‌ ಕದ್ದು ಅರ್ಧ ಶತಕ ಪೂರೈಸಿದರು. ತಂಡದ ಮೊತ್ತ 250 ದಾಟಿದ ನಂತರ ಇಬ್ಬರೂ ಇನ್ನಷ್ಟು ಆವೇಶದಿಂದ ಬ್ಯಾಟ್‌ ಬೀಸಿದರು. ಅಪ್ಪಣ್ಣ ಹಾಕಿದ 77ನೇ ಓವರ್‌ನ ಎರಡನೇ ಎಸೆತವನ್ನು ನುಗ್ಗಿ ಬಂದು ಖೇರಾ ಮಿಡ್‌ ಆನ್‌ ಮೇಲಿಂದ ಬೌಂಡರಿಗೆ ಅಟ್ಟಿದ ರೀತಿ ಮೋಹಕವಾಗಿತ್ತು. ಈ ಓವರ್‌ನ ಕೊನೆಯ ಎಸೆತವನ್ನು ಮಿಡ್‌ ಆನ್‌ಗೆ ಎತ್ತಿ  13ನೇ ಬೌಂಡರಿ ಗಳಿಸಿದ ಗುರ್‌ಕೀರತ್‌ ಸಿಂಗ್‌ ಈ ಋತುವಿನ ಮೊದಲ ವೈಯಕ್ತಿಕ ಶತಕ ಪೂರೈಸಿದರು. ಶತಕಕ್ಕೆ ಅವರು ತೆಗೆದುಕೊಂಡದ್ದು ಕೇವಲ 139 ಎಸೆತ ಮಾತ್ರ.

ಹೊಸ ಚೆಂಡು ಮಾಡಿದ ಕಮಾಲ್‌
81ನೇ ಓವರ್‌ನಲ್ಲಿ ಅಪ್ಪಣ್ಣ ಬದಲಿಗೆ ಮಿಥುನ್‌ ಅವರನ್ನು ಬೌಲಿಂಗ್‌ಗೆ ಆಹ್ವಾನಿಸಿದ ವಿನಯ್‌ ಕುಮಾರ್ ಹೊಸ ಚೆಂಡನ್ನು ಬಳಸಲು ನಿರ್ಧರಿಸಿದರು. ಇದು ಪಂದ್ಯದ ತಿರುವಿಗೂ ಕಾರಣವಾಯಿತು. ಈ ಓವರ್‌ನ ನಾಲ್ಕನೇ ಎಸೆತವನ್ನು ಖೇರಾ ಬೌಂಡರಿಗೆ ಫ್ಲಿಕ್‌ ಮಾಡಿದರು. ಇನ್ನೊಂದು ತುದಿಯಿಂದ ಸ್ವತಃ ನಾಯಕನೇ ದಾಳಿ ಮಾಡಿದರು. ಆದರೆ ಎರಡನೇ ಎಸೆತವನ್ನು ಮಿಡ್ ಆನ್‌ ಮತ್ತು ಮಿಡ್‌ವಿಕೆಟ್ ಮಧ್ಯದಲ್ಲಿ ಬೌಂಡರಿಗೆ ಅಟ್ಟಿದ ಖೇರಾ ತಂಡವನ್ನು 300ರ ಗಡಿ ದಾಟಿಸಿದರು. ವಿನಯ್‌ ಎಸೆದ ನಂತರದ ಓವರ್‌ನಲ್ಲಿ ‘ಆ’ ಜಾದೂ ನಡೆಯಿತು. ಕೆಳಹಂತದಲ್ಲಿ ನುಗ್ಗಿ ಬಂದ ಚೆಂಡು ಇನ್‌ಸ್ವಿಂಗ್ ಆಗಿ ಬಂದು ಖೇರಾ (84, 134 ಎಸೆತ, 4 ಬೌಂಡರಿ) ಪ್ಯಾಡ್‌ಗೆ ಬಡಿಯಿತು. ಕರ್ನಾಟಕದ ಪಾಳಯದಲ್ಲಿ ಸಂತಸ ತುಂಬಿತು.

ಆರನೇ ವಿಕೆಟ್‌ ಬಿದ್ದಾಗ ಕರ್ನಾಟಕದ ಸಾಲ ತೀರಿಸಲು ಪಂಜಾಬ್‌ಗೆ ಇನ್ನೂ 30 ರನ್‌ ಅಗತ್ಯವಿತ್ತು. ಸಂದೀಪ್ ಶರ್ಮಾ ಮತ್ತು ಗುರ್‌ಕೀರತ್ ಈ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸಿದರು. ನಂತರ ಐದು ಓವರ್‌ಗಳಲ್ಲಿ ಉಳಿದ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಗೋನಿ ಶಾರ್ಟ್‌ ಮಿಡ್‌ವಿಕೆಟ್‌ಗೆ ಪುಲ್‌ ಮಾಡಿದ ಚೆಂಡನ್ನು ಪಾಯಿಂಟ್‌ನಲ್ಲಿದ್ದ ಮನೀಶ್‌ ಪಾಂಡೆ ಹಿಂದಕ್ಕೆ ಓಡಿ ಹಿಡಿತಕ್ಕೆ ತೆಗೆದುಕೊಂಡ ರೀತಿ ಅದ್ಭುತವಾಗಿತ್ತು. ಮುಂದಿನ ಎಸೆತದಲ್ಲಿ ಸಂದೀಪ್ ಶರ್ಮಾ ನೀಡಿದ ಸುಲಭ ಕ್ಯಾಚ್ ಅಪ್ಪಣ್ಣ ಹಿಡಿತಕ್ಕೆ ತೆಗೆದುಕೊಂಡರು. ನಂತರದ ಓವರ್‌ನ ಮೊದಲ ಎಸೆತದಲ್ಲಿ ವಿಆರ್‌ವಿ ಸಿಂಗ್ ನೀಡಿದ ಕ್ಯಾಚ್‌ ನಾಯಕನ ಕೈ ಸೇರಿತು.

ಈ ಜಯದೊಂದಿಗೆ ಕರ್ನಾಟಕ ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಜಿಗಿಯಿತು. ಮೂರು ಗುಂಪುಗಳ ಪೈಕಿ ಅತ್ಯಧಿಕ (26) ಪಾಯಿಂಟ್‌ ಪಡೆದ ತಂಡ ಎಂಬ ಖ್ಯಾತಿಯೂ ಕರ್ನಾಟಕದ ಮುಡಿಗೆ ಸೇರಿಕೊಂಡಿತು.


ಸ್ಕೋರ್ ವಿವರ
ಪಂಜಾಬ್‌ ಮೊದಲ ಇನಿಂಗ್ಸ್‌ 54.5 ಓವರ್‌ಗಳಲ್ಲಿ 174

ಕರ್ನಾಟಕ ಮೊದಲ ಇನಿಂಗ್ಸ್‌: 156 ಓವರ್‌ಗಳಲ್ಲಿ
9 ವಿಕೆಟ್‌ಗಳಿಗೆ 505 ಡಿಕ್ಲೇರ್‌
ಪಂಜಾಬ್‌ ಎರಡನೇ ಇನಿಂಗ್ಸ್‌: 99.1 ಓವರ್‌ಗಳಲ್ಲಿ 361
(ಸೋಮವಾರ 51 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 156)
ಗುರ್‌ಕೀರತ್‌ ಸಿಂಗ್ ಮಾನ್‌ ಸಿ.ಅಗರವಾಲ್‌ ಬಿ. ಸ್ಟುವರ್ಟ್ ಬಿನ್ನಿ  157
ಜಿ.ಎಚ್‌.ಖೇರಾ ಎಲ್‌ಬಿಡ್ಬ್ಯು ವಿನಯ್‌ ಕುಮಾರ್‌  84
ಸಂದೀಪ್‌ ಶರ್ಮಾ ಸಿ. ಕೆ.ಪಿ.ಅಪ್ಪಣ್ಣ ಬಿ. ಎಚ್‌.ಎಸ್‌. ಶರತ್‌  11
ಮನ್‌ಪ್ರೀತ್‌ ಗೋನಿ ಸಿ. ಮನೀಶ್‌ ಪಾಂಡೆ ಬಿ. ಎಚ್‌.ಎಸ್‌. ಶರತ್‌  14
ವಿ.ಆರ್‌.ವಿ. ಸಿಂಗ್‌ ಸಿ. ವಿನಯ್‌ ಕುಮಾರ್‌ ಬಿ. ಸ್ಟುವರ್ಟ್‌ ಬಿನ್ನಿ  0
ವಿ.ಎಂ.ಚೌಧರಿ ಔಟಾಗದೆ  0
ಇತರೆ: (ಬೈ 6, ಲೆಗ್‌ಬೈ 4, ನೋಬಾಲ್‌ 3, ವೈಡ್‌ 1)  14
ವಿಕೆಟ್‌ ಪತನ: 6–301 (ಜಿ.ಎಚ್‌.ಖೇರಾ, 83.3), 7–338 (ಗುರ್‌ಕೀರತ್‌ ಸಿಂಗ್‌, 95.5), 8–361 (ಮನ್‌ಪ್ರೀತ್‌ ಗೋನಿ, 98.4), 9–361 (98.5, ಸಂದೀಪ್ ಶರ್ಮಾ), 10–361 (ವಿ.ಆರ್‌.ವಿ ಸಿಂಗ್‌, 99.1).
ಬೌಲಿಂಗ್‌: ವಿನಯ್‌ ಕುಮಾರ್ 21–5–62–2, ಅಭಿಮನ್ಯು ಮಿಥುನ್‌ 19–5–59–3 (1 ನೋಬಾಲ್‌), ಎಚ್‌.ಎಸ್‌.ಶರತ್‌ 22–3–75–3, ಸ್ಟುವರ್ಟ್‌ ಬಿನ್ನಿ 15.1–1–57–2, ಕೆ.ಪಿ.ಅಪ್ಪಣ್ಣ 18–3–70–0 (2 ನೋಬಾಲ್‌), ಕರುಣ್‌ ನಾಯರ್‌ 1–0–9–0, ಗಣೇಶ್‌ ಸತೀಶ್‌ 2–0–15–0, ಮನೀಶ್‌ ಪಾಂಡೆ 1–0–4–0 (1 ವೈಡ್‌)
ಕರ್ನಾಟಕ ಎರಡನೇ ಇನಿಂಗ್ಸ್‌: 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 33
ಮಯಂಕ್‌ ಅಗರವಾಲ್‌ ಔಟಾಗದೆ  8
ಕೆ.ಎಲ್‌.ರಾಹುಲ್‌ ಔಟಾಗದೆ 25
ಬೌಲಿಂಗ್: ಸಂದೀಪ್‌ ಶರ್ಮಾ 2.5–0–18–0, ಮನ್‌ಪ್ರೀತ್‌ ಗೋನಿ 2–0–15–0
ಫಲಿತಾಂಶ: ಕರ್ನಾಟಕಕ್ಕೆ 10 ವಿಕೆಟ್‌ ಗೆಲುವು
ಕರ್ನಾಟಕದ ಮುಂದಿನ ಪಂದ್ಯ–ಡಿಸೆಂಬರ್‌ 22ರಿಂದ ಬೆಂಗಳೂರಿನಲ್ಲಿ,
ಮುಂಬೈ ವಿರುದ್ಧ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT