ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅಳಿಯ ಹೀಗೆ ಯಾಕಾದರು?

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಖನೌ: `ಇದು ಮೊದಲೇ ಬರೆದಿಟ್ಟ ನಾಟಕದ ಕತೆ~ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ನೀಡಿರುವ ಹೇಳಿಕೆಯ ಹಿಂದೆ ರಾಜಕೀಯ ಉದ್ದೇಶ ಇರಬಹುದು, ಆದರೆ ಅದರಲ್ಲಿ ಖಂಡಿತ ಸತ್ಯ ಇದೆ.

ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮುಸ್ಲಿಮ್ ಮೀಸಲಾತಿ ಮತ್ತು ಬಾಟ್ಲಾ  ಪೊಲೀಸ್ ಎನ್‌ಕೌಂಟರ್ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಭಾವಾವೇಶದಿಂದ ಆಕಸ್ಮಾತ್ ನಾಲಗೆ ತಪ್ಪಿ ಹೊರಬಿದ್ದದ್ದಲ್ಲ. ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಪೂರ್ವ ಯೋಜಿತ ತಂತ್ರ ಎನ್ನುವುದಕ್ಕೆ ಆ ಪಕ್ಷದ ಹಿಂದಿನ ನಡವಳಿಕೆಗಳಲ್ಲಿ ಆಧಾರಗಳಿವೆ.

ಸಲ್ಮಾನ್ ತನ್ನನ್ನು ಸಮರ್ಥಿಸಿಕೊಳ್ಳುವುದು, ಕಾಂಗ್ರೆಸ್ ಅಧಿಕೃತವಾಗಿ ಸಲ್ಮಾನ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸುವುದು ಇವೆಲ್ಲವೂ ಮೊದಲೇ ಬರೆದು ಸಿದ್ದಪಡಿಸಿದ್ದ ನಾಟಕದ ಕತೆಯಂತೆ ಕಾಣುವುದು ಇದೇ ಕಾರಣಕ್ಕೆ.

ಕೋಮುವಾದವನ್ನು ರಾಜಕೀಯದ ಕೇಂದ್ರಸ್ಥಾನಕ್ಕೆ ತಂದದ್ದು ಬಿಜೆಪಿ ಇರಬಹುದು, ಅದರ ರಾಜಕೀಯ ಲಾಭವನ್ನು ಪಡೆದದ್ದು ಕೂಡಾ ಅದೇ ಪಕ್ಷ ಇರಬಹುದು. ಆದರೆ ಕೋಮುವಾದದ ರಾಜಕೀಯಕ್ಕೆ ಚಾಲನೆ  ನೀಡಿದ್ದು ಕಾಂಗ್ರೆಸ್ ಎನ್ನುವ ಸೆಕ್ಯುಲರ್ ಪಕ್ಷ ಎನ್ನುವುದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ.

ದಶಕಗಳಿಂದ ಮುಚ್ಚಿದ್ದ ಬಾಬ್ರಿಮಸೀದಿಯ ಬಾಗಿಲನ್ನು 1986ರಲ್ಲಿ ತೆಗೆಸಿ ರಾಮಲಲ್ಲಾನ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದು ಆಗಿನ ಪ್ರಧಾನಿ ರಾಜೀವ್‌ಗಾಂಧಿ.  ವಿಶ್ವಹಿಂದೂ ಪರಿಷತ್‌ನ ಸಾಧುಸಂತರು ಅಯೋಧ್ಯೆಯಲ್ಲಿ ಸಮಾವೇಶಗೊಂಡು ರಾಮಮಂದಿರದ ಶಿಲಾನ್ಯಾಸ ಮಾಡಲು ಹೋದಾಗ ಅದನ್ನು ತಡೆಯಲು ಹೋಗದೆ ಅದು ಸುಗಮವಾಗಿ ನಡೆಯುವಂತೆ ಮಾಡಲು ಗೃಹಸಚಿವ ಬೂಟಾಸಿಂಗ್ ಅವರನ್ನು ಕಳುಹಿಸಿಕೊಟ್ಟವರು ಕೂಡಾ ರಾಜೀವ್‌ಗಾಂಧಿ.

ಆ ಕಾಲದಲ್ಲಿ ಅರುಣ್ ನೆಹರೂ ಅವರಂತಹ ಆಪ್ತರ ಸಲಹೆಯಿಂದ ರಾಜೀವ್ ತೇಲಿ ಹೋಗಿದ್ದರು. (ಈ ಅರುಣ್ ನೆಹರೂ ನಂತರದ ದಿನಗಳಲ್ಲಿ ಬಿಜೆಪಿಗೆ ಸಲಹೆಗಾರರಾದರು.) ಅದೇ ಭ್ರಮೆಯಲ್ಲಿ 1989ರ ಲೋಕಸಭಾ ಚುನಾವಣೆಯ ಪ್ರಚಾರವನ್ನು ರಾಜೀವ್‌ಗಾಂಧಿ ಹಣೆಗೆ ತಿಲಕಹಚ್ಚಿ `ಜೈ ಸಿಯಾರಾಮ್~ ಎನ್ನುವ ಘೋಷಣೆಯೊಡನೆ ಅಯೋಧ್ಯೆಯಿಂದ ಪ್ರಾರಂಭಿಸಿದ್ದರು. ಆಗಲೇ ಬಿಜೆಪಿಗೆ ಕೋಮುವಾದಿ ರಾಜಕೀಯದ ವಾಸನೆ ಮೂಗಿಗೆ ಬಡಿದದ್ದು. ಆ ನಂತರದ್ದು ಇನ್ನೊಂದು ಇತಿಹಾಸ.

ಅಪ್ಪನ ಕತೆ ಹಾಗಾದರೆ ಮಗನದ್ದು ಇನ್ನೊಂದು. ಮೃದು ಹಿಂದುತ್ವದಿಂದ ರಾಜಕೀಯ ಲಾಭ ಆಗಿಲ್ಲ ಎನ್ನುವ ಅನುಭವದ ಹಿನ್ನೆಲೆಯಲ್ಲಿ ಅದೇ ಕಾಂಗ್ರೆಸ್‌ನ ಹೊಸ ಸಲಹೆಗಾರರು  ರಾಜೀವ್ ಮಗನಿಗೆ  ಕಡು ಜಾತ್ಯತೀತತೆಯನ್ನು ಬೋಧಿಸಿದರು. ಇದರ ಪರಿಣಾಮವೇ `ಗಾಂಧಿ ಕುಟುಂಬದ ಸದಸ್ಯರೊಬ್ಬರು ರಾಜಕೀಯವಾಗಿ ಸಕ್ರಿಯರಾಗಿ ಇದ್ದಿದ್ದರೆ ಬಾಬ್ರಿಮಸೀದಿ ಧ್ವಂಸ ಮಾಡಲು ಬಿಡುತ್ತಿರಲಿಲ್ಲ~ ಎಂದು ಉತ್ತರಪ್ರದೇಶದ ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಹುಲ್‌ಗಾಂಧಿ ಬಾಲಿಷ ಹೇಳಿಕೆ ನೀಡಿದ್ದು.
ಅವರು ಉದುರಿಸಿದ್ದ ಆಣಿಮುತ್ತುಗಳು ಅಷ್ಟಕ್ಕೆ ನಿಂತಿರಲಿಲ್ಲ. `ಮಸೀದಿ ಧ್ವಂಸವಾಗುತ್ತಿರುವಾಗ ನಾನು ಇದ್ದಿದ್ದರೆ ಅದರ ಎದುರು ನಿಲ್ಲುತ್ತಿದ್ದೆ~ ಎಂದು ತನ್ನ ಅಮ್ಮನೊಡನೆ ಅಪ್ಪ ಹೇಳಿದ್ದನ್ನು ಕೇಳಿಸಿಕೊಂಡಿದ್ದೆ~ ಎಂದು ರಾಹುಲ್ 2007ರ ಚುನಾವಣಾ ಪೂರ್ವ ರ‌್ಯಾಲಿಯಲ್ಲಿ ಕಣ್ಣೀರು ಹಾಕಿದ್ದರು.

ಈ ಬಾರಿ ರಾಹುಲ್ ಜಾಣರಾಗಿದ್ದಾರೆ, ಇಂತಹ ವಿವಾದಾತ್ಮಕ ಹೇಳಿಕೆ ನೀಡಲು ಹೋಗಿಲ್ಲ. ಕಾಂಗ್ರೆಸ್ ಹೊಸ `ಬಕರಾ~ನನ್ನು ಹುಡುಕಿದೆ. ಅವರ ಹೆಸರು ಸಲ್ಮಾನ್ ಖುರ್ಷಿದ್. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಪತ್ರಕರ್ತೆಯಾಗಿದ್ದ (`ಡೆಕ್ಕನ್ ಹೆರಾಲ್ಡ್~) ಉಡುಪಿ ಮೂಲದ ಲೂಸಿ ಫರ್ನಾಂಡಿಸ್ ಎಂಬ ಕ್ರಿಶ್ಚಿಯನ್ ಯುವತಿಯನ್ನು ಮದುವೆಯಾಗಿರುವ, ಪ್ರಜ್ಞಾಪೂರ್ವಕವಾಗಿ ಮುಸ್ಲಿಮ್ ನಾಯಕನಾಗಲು ನಿರಾಕರಿಸಿ ಹಟದಿಂದ ಜಾತ್ಯತೀತ ನಾಯಕನಾಗಿಯೇ ಉಳಿದಿದ್ದ ಮತ್ತು ಇಂತಹ ನಿಲುವಿನಿಂದಾಗಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿರುವ (ಗುಲಾಂ ನಬೀಆಜಾದ್ ಅಂತಹವರಿಗೆ ಹೋಲಿಕೆಯಲ್ಲಿ) ಸಲ್ಮಾನ್ ಖುರ್ಷಿದ್ ಇದ್ದಕ್ಕಿದ್ದ ಹಾಗೆ ಹೊಸ ವೇಷ ಧರಿಸಿ ಕುಣಿಯತೊಡಗಿದ್ದಾರೆ.

`ಚುನಾವಣಾ ಆಯೋಗ ಗಲ್ಲಿಗೇರಿಸಿದರೂ ಮುಸ್ಲಿಮರಿಗೆ ಮೀಸಲಾತಿ ನೀಡುವ ಭರವಸೆಯಿಂದ ಹಿಂದೆ ಸರಿಯಲಾರೆ..~ `..ಬಾಟ್ಲಾ ಪೊಲೀಸ್ ಎನ್‌ಕೌಂಟರ್ ಚಿತ್ರಗಳನ್ನು ನೋಡಿ ಸೋನಿಯಾಗಾಂಧಿ ಕಣ್ಣೀರು ಹಾಕಿದ್ದರು...~ ಎನ್ನುವ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದ್ದನ್ನು ಕೇಳದೆ-ನೋಡದೆ ಇದ್ದಿದ್ದರೆ ಸಲ್ಮಾನ್ ಅವರನ್ನು ಸಮೀಪದಿಂದ ಬಲ್ಲವರು ಯಾರೂ ನಂಬುತ್ತಿರಲಿಲ್ಲವೇನೋ? ಮುಸ್ಲಿಮ್ ನಾಯಕನಾಗಿ ಸಲ್ಮಾನ್ ಅವರನ್ನು ಬಿಂಬಿಸಬೇಕೆಂಬ ಉದ್ದೇಶದಿಂದಲೇ ಎರಡು ಬಾರಿ ಅವರನ್ನು ಉತ್ತರಪ್ರದೇಶ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 2002ರಿಂದ 2005ರ ವರೆಗಿನ ಯುಪಿಸಿಸಿ ಅಧ್ಯಕ್ಷತೆಯ ಎರಡನೇ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಶಕ್ತಿ ಇನ್ನಷ್ಟು ಕೆಳಕ್ಕೆ ಕುಸಿದಿತ್ತು.

ಬಾಬ್ರಿಮಸೀದಿ ಧ್ವಂಸದ ನಂತರ ಕಾಂಗ್ರೆಸ್ ಪಕ್ಷದಿಂದ ವಲಸೆಹೋಗಿದ್ದ ಮುಸ್ಲಿಮರನ್ನು ಮರಳಿ ಪಕ್ಷಕ್ಕೆ ಕರೆತರಲು ಅವರಿಂದ ಸಾಧ್ಯವಾಗಿರಲಿಲ್ಲ. ಮುಸ್ಲಿಮರು ಅಯೋಧ್ಯೆಯಲ್ಲಿ ರಾಮಭಕ್ತರ ಮೇಲೆ ಗುಂಡುಹಾರಿಸಲು ಆದೇಶ ನೀಡಿದ ನಂತರ `ಮೌಲಾನಾ ಮುಲಾಯಂ~ ಎಂದೇ ಜನಪ್ರಿಯರಾಗಿದ್ದ ಮುಲಾಯಂಸಿಂಗ್ ಜತೆಗಿದ್ದರು.
 
ಆಗಲೇ ಕಾಂಗ್ರೆಸ್‌ನಲ್ಲಿರುವ  ಮುಸ್ಲಿಮರು `ಮಾಂಗಾ ಥಾ ಮುಸಲ್ಮಾನ್ ದೇ ದಿಯಾ ಸಲ್ಮಾನ್~ (ಕೇಳಿದ್ದು ಮುಸಲ್ಮಾನ್, ಕೊಟ್ಟಿದ್ದು ಸಲ್ಮಾನ್) ಎಂದು ಸಲ್ಮಾನ್ ಅವರನ್ನು ಗೇಲಿ ಮಾಡುತ್ತಿದ್ದದ್ದು. ಇಂತಹ ಸಲ್ಮಾನ್ ಇದ್ದಕ್ಕಿದ್ದ ಹಾಗೆ ಒಬ್ಬ ಕುಟಿಲ ಧಾರ್ಮಿಕ ನಾಯಕನ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ.

ಕೋಮುವಾದದಿಂದಾಗಿ ರಕ್ತ ಹರಿಯುವುದು ಇನ್ನೂನಿಂತಿಲ್ಲ, ಮನಸ್ಸುಗಳು ಇನ್ನೂ ಒಡೆದುಹೋಗುತ್ತಲೇ ಇದೆ. ಈ ಪರಿಸ್ಥಿತಿಯಲ್ಲಿ ಕೋಮುವಾದವನ್ನೇ ಪ್ರಮುಖ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ತೋರಿಕೆಗಾದರೂ `ಶಸ್ತ್ರತ್ಯಾಗ~ ಮಾಡಿದೆ, `ಮನಪರಿವರ್ತನೆ~ಯ ನಾಟಕವನ್ನಾದರೂ ಆಡುತ್ತಿದೆ.

ಗುಜರಾತ್ ರಾಜ್ಯವೊಂದನ್ನು ಹೊರತುಪಡಿಸಿ ಕಳೆದ ಹದಿನೈದು ವರ್ಷಗಳಲ್ಲಿ ಬಿಜೆಪಿ ಬೇರೆಲ್ಲೂ ಚುನಾವಣೆಯನ್ನು `ಹಿಂದುತ್ವ~ದ ಅಜೆಂಡಾದ ಮೇಲೆ ಅದು ಎದುರಿಸಿಲ್ಲ. ಉತ್ತರಪ್ರದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆಯಲ್ಲಿಯೂ ಉಗ್ರಹಿಂದುತ್ವದ ಕೂಗುಮಾರಿಗಳಾದ ಉಮಾಭಾರತಿ, ವಿನಯ್ ಕಟಿಯಾರ್ ಮೊದಲಾದವರ ನಾಲಿಗೆ ನಿಯಂತ್ರಣದಲ್ಲಿದೆ.

ಪಕ್ಷದ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣದ ಭರವಸೆ ನೀಡಿದ್ದನ್ನು ಹೊರತುಪಡಿಸಿದರೆ ಅಯೋಧ್ಯೆಯಲ್ಲಿ ಎಲ್.ಕೆ.ಅಡ್ವಾಣಿ ಮಾಡಿದ ಕಾಟಾಚಾರದ ಭಾಷಣಕ್ಕಷ್ಟೇ `ಹಿಂದುತ್ವ~ದ ಅಜೆಂಡಾ ಸೀಮಿತವಾಗಿದೆ. ಬಾಬ್ರಿಮಸೀದಿ ಧ್ವಂಸದ ನಂತರದ ಕೆಲವು ಚುನಾವಣೆಗಳ ಕಾಲದಲ್ಲಿ ಭಿತ್ತಿಪತ್ರ, ಬ್ಯಾನರ್, ಕರಪತ್ರಗಳಲ್ಲಿ ಕಂಡುಬರುತ್ತಿದ್ದ ಹಿಂದುತ್ವ ಪರ ಘೋಷಣೆಗಳು, ನಿರ್ಮಾಣವಾಗಲಿರುವ ರಾಮಮಂದಿರದ ಚಿತ್ರಗಳು ಯಾವುದೂ ಹುಡುಕಿದರೂ ಸಿಗುವುದಿಲ್ಲ.

ಹೀಗಿರುವಾಗ ಕಾಂಗ್ರೆಸ್ ನಾಯಕರು  ಕೋಮುವಾದವನ್ನು ಬಡಿದೆಬ್ಬಿಸುವ ಮೂಲಕ ಕಳೆದುಕೊಂಡಿರುವ ಮುಸ್ಲಿಮ್ ಬೆಂಬಲವನ್ನು ಮತ್ತೆ ಪಡೆಯುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿದ ನ್ಯಾ.ರಾಜೇಂದ್ರ ಸಾಚಾರ್ ವರದಿ ನೀಡಿ ಆರುವರ್ಷಗಳಾಗಿವೆ.

ಅಲ್ಪಸಂಖ್ಯಾತರಿಗೆ ಶೇಕಡಾ ಹತ್ತರಷ್ಟು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿ ಐದು ವರ್ಷಗಳಾಗಿವೆ. ಈ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಆ ಅವಧಿಯಲ್ಲಿ ಸಲ್ಮಾನ್ ಖುರ್ಷಿದ್ ಅವರೂ ಕಾಂಗ್ರೆಸ್‌ನಲ್ಲಿದ್ದರು.
 
ಉತ್ತರಪ್ರದೇಶದ ಚುನಾವಣೆ ಹತ್ತಿರ ಬರುವವರೆಗೆ ಸುಮ್ಮನಿದ್ದು ಚುನಾವಣಾ ಘೋಷಣೆಯ ಎರಡು ದಿನಮೊದಲು ಅಲ್ಪಸಂಖ್ಯಾತರಿಗೆ ಶೇಕಡಾ 4.5ರಷ್ಟು ಹಿಂದುಳಿದ ಜಾತಿಗಳ ಕೋಟಾದೊಳಗೆ ಒಳಮೀಸಲಾತಿ ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದರೆ, ಅದನ್ನೇ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದರೆ ಮತ್ತು ಸಲ್ಮಾನ್ ಖುರ್ಷಿದ್ ಅಂತಹವರಿಗೆ ಮುಸ್ಲಿಮ್ ನಾಯಕನ ವೇಷ ತೊಡಿಸಿ ಕೂಗು ಹಾಕಿಸಿದರೆ  ಓಡಿಬಂದು  ಕಾಂಗ್ರೆಸ್‌ಪಕ್ಷಕ್ಕೆ ಮತಹಾಕುವಷ್ಟು ಉತ್ತರಪ್ರದೇಶದ ಮುಸ್ಲಿಮರು ಅಮಾಯಕರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT